ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾರ್ಕಿಂಗ್‌ ನೀತಿಗೆ ಸಾರ್ವಜನಿಕರ ವಿರೋಧ

ಗುರುವಾರ ಜಿಬಿಎ ಹೊರಡಿಸಿದ ಕರಡು ಅಧಿಸೂಚನೆಯ ಹೊಸ ಪಾರ್ಕಿಂಗ್ ನೀತಿ ಜಾರಿಗೆ ಬಂದರೆ ಮನೆಗಳ ಮುಂದೆ ಅಥವಾ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲ್ಲಿಸುವವರ ಮೇಲೂ ಶುಲ್ಕದ ಹೊರೆ ಬೀಳುವ ಸಾಧ್ಯತೆಯಿದೆ. ಈಗಾಗಲೇ ದಿನನಿತ್ಯದ ಜೀವನ ನಿರ್ವಹಣೆಯ ವೆಚ್ಚ ಹೆಚ್ಚಾಗಿರುವ ಸಂದರ್ಭ ದಲ್ಲಿ ವಾಹನ ನಿಲುಗಡೆಗೂ ಪ್ರತ್ಯೇಕ ಶುಲ್ಕ ವಿಧಿಸುವ ಪ್ರಸ್ತಾಪ ಮಧ್ಯಮ ವರ್ಗದ ಕುಟುಂಬಗಳಲ್ಲಿ ಆತಂಕ ಮೂಡಿಸಿದೆ.

ರಸ್ತೆ ಬದಿ ಪಾರ್ಕಿಂಗ್‌ಗೆ ಶುಲ್ಕ ವಿಧಿಸುವುದಕ್ಕೆ ಆಕ್ಷೇಪ

ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹ

ಬೆಂಗಳೂರು ರಸ್ತೆ ಒತ್ತುವರಿ ತೆರವು, ಕಸ ನಿರ್ವಹಣೆ, ನೀರಿನ ಮಿತ ಬಳಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಗಮನ ಸೆಳೆದಿರುವ ಸರಕಾರ ಇದೀಗ ಬೆಂಗಳೂರಿನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಮತ್ತೊಂದು ಮಹತ್ವದ ಬದಲಾ ವಣೆಗೆ ಮುಂದಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸುವ ಹಾಗೂ ಪಾರ್ಕಿಂಗ್ ಅನ್ನು ನಿಯಂತ್ರಿಸುವ ಹೊಸ ಪ್ರಸ್ತಾವನೆ ಸಾರ್ವಜನಿಕ ವಲಯದಲ್ಲಿ ಪರ- ವಿರೋಧದ ಚರ್ಚೆಗೆ ಕಾರಣವಾಗಿದೆ.

ಗುರುವಾರ ಜಿಬಿಎ ಹೊರಡಿಸಿದ ಕರಡು ಅಧಿಸೂಚನೆಯ ಹೊಸ ಪಾರ್ಕಿಂಗ್ ನೀತಿ ಜಾರಿಗೆ ಬಂದರೆ ಮನೆಗಳ ಮುಂದೆ ಅಥವಾ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲ್ಲಿಸುವವರ ಮೇಲೂ ಶುಲ್ಕದ ಹೊರೆ ಬೀಳುವ ಸಾಧ್ಯತೆಯಿದೆ. ಈಗಾಗಲೇ ದಿನನಿತ್ಯದ ಜೀವನ ನಿರ್ವಹಣೆಯ ವೆಚ್ಚ ಹೆಚ್ಚಾಗಿರುವ ಸಂದರ್ಭದಲ್ಲಿ ವಾಹನ ನಿಲುಗಡೆಗೂ ಪ್ರತ್ಯೇಕ ಶುಲ್ಕ ವಿಧಿಸುವ ಪ್ರಸ್ತಾಪ ಮಧ್ಯಮ ವರ್ಗದ ಕುಟುಂಬಗಳಲ್ಲಿ ಆತಂಕ ಮೂಡಿಸಿದೆ.

ಸರಕಾರದ ಉದ್ದೇಶ ನಗರದಲ್ಲಿ ರಸ್ತೆಗಳನ್ನು ಶಾಶ್ವತ ಪಾರ್ಕಿಂಗ್ ಸ್ಥಳಗಳನ್ನಾಗಿ ಬಳಸುವುದನ್ನು ತಡೆಯುವುದು, ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮತ್ತು ಪಾದಚಾರಿಗಳಿಗೆ ಹೆಚ್ಚಿನ ಸ್ಥಳ ಒದಗಿ ಸುವುದಾಗಿದೆ. ಆದರೆ, ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆ ಶುಲ್ಕ ವಿಧಿಸುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣವಾಗಬಹುದು ಎಂಬ ಸಾರ್ವಜನಿಕರಿಂದ ಆಕ್ಷೇಪವೂ ಕೇಳಿ ಬರುತ್ತಿದೆ.

ಇದನ್ನೂ ಓದಿ: Bengaluru Parking Rules 2026: ಬೆಂಗಳೂರಿನ ವಾಹನ ಸವಾರರಿಗೆ ಜಿಬಿಎ ಶಾಕ್; ಮನೆ ಮುಂದೆ ಗಾಡಿ ನಿಲ್ಲಿಸೋದಕ್ಕೂ ಕಟ್ಟಬೇಕು ಪಾರ್ಕಿಂಗ್‌ ಫೀಸ್‌!

ವರ್ಷಕ್ಕೆ 15 ಸಾವಿರದಿಂದ 25 ರು. ಸಾವಿರದವರೆಗೆ ಹೊರೆ?: ಪ್ರಸ್ತಾವಿತ ವ್ಯವಸ್ಥೆಯಡಿ ಸಣ್ಣ ಕಾರಿಗೆ ವರ್ಷಕ್ಕೆ ಕನಿಷ್ಠ 15000 ರು., ಸೆಡಾನ್ ಕಾರಿಗೆ 20000 ರು. ಹಾಗೂ ಎಸ್ಯುವಿಗೆ 25000 ರು. ದವರೆಗೆ ಪಾರ್ಕಿಂಗ್ ಶುಲ್ಕ ವಿಧಿಸುವ ಚರ್ಚೆ ನಡೆಯುತ್ತಿದೆ. ಈ ಮೊತ್ತ ಜಾರಿಗೆ ಬಂದರೆ ಕಾರು ಮಾಲೀಕರಿಗೆ ಇಂಧನ, ವಿಮೆ, ನಿರ್ವಹಣೆ, ತೆರಿಗೆ ಸೇರಿದಂತೆ ಈಗಾಗಲೇ ಇರುವ ವೆಚ್ಚದ ಜತೆಗೆ ಮತ್ತೊಂದು ವಾರ್ಷಿಕ ಹೊರೆ ಸೇರ್ಪಡೆಯಾಗಲಿದೆ. ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬ ಗಳಿಗೆ ಇದು ದೊಡ್ಡ ಆರ್ಥಿಕ ಒತ್ತಡವಾಗಬಹುದು. ತಿಂಗಳ ಆದಾಯದಲ್ಲಿ ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ವಿದ್ಯುತ್, ಆಹಾರ, ಆರೋಗ್ಯ ಹಾಗೂ ಪ್ರಯಾಣ ವೆಚ್ಚಗಳನ್ನು ನಿರ್ವಹಿಸಿದ ಬಳಿಕ ವಾಹನ ಪಾರ್ಕಿಂಗ್‌ಗೆ ಹೆಚ್ಚುವರಿ ಹಣ ಮೀಸಲಿಡು ವುದು ಕಷ್ಟವಾಗಬಹುದು ಎಂದು ಕಾರು ಚಾಲಕ ರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ವಂತ ಪಾರ್ಕಿಂಗ್ ಇಲ್ಲದವರಿಗೆ ಸಂಕಷ್ಟ: ಬೆಂಗಳೂರಿನ ಹಳೆಯ ಬಡಾವಣೆಗಳು, ಕಿರಿದಾದ ರಸ್ತೆಗಳು ಹಾಗೂ ಕೆಲವು ಅಪಾಟ್‌ಮೆಂಟ್ ಪ್ರದೇಶಗಳಲ್ಲಿ ಪ್ರತಿಯೊಂದು ಮನೆಗೂ ಪ್ರತ್ಯೇಕ ಪಾರ್ಕಿಂಗ್ ಸೌಲಭ್ಯವಿಲ್ಲ. ಇಂತಹ ಪ್ರದೇಶಗಳಲ್ಲಿ ನಿವಾಸಿಗಳು ಅನಿವಾರ್ಯವಾಗಿ ಸಾರ್ವಜನಿಕ ರಸ್ತೆ ಅಥವಾ ರಸ್ತೆಬದಿ ವಾಹನ ನಿಲುಗಡೆಗೆ ಬಳಸುತ್ತಾರೆ. ಇವರಿಗೆ ಶುಲ್ಕ ವಿಧಿಸುವುದರಿಂದ ಪಾರ್ಕಿಂಗ್ ಆಯ್ಕೆಗಿಂತ ಶುಲ್ಕ ಪಾವತಿಸುವ ಅನಿವಾರ್ಯತೆ ಎದುರಾಗಬಹುದು. ಮೊದಲು ಸಾಕಷ್ಟು ಸಾರ್ವಜನಿಕ ಪಾರ್ಕಿಂಗ್ ಸ್ಥಳಗಳನ್ನು ನಿರ್ಮಿಸಿ, ನಂತರ ಶುಲ್ಕ ಜಾರಿಗೊಳಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಸರಕಾರ ಮತ್ತೊಮ್ಮೆ ವಿಮರ್ಶಿಸಬೇಕು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ರಾಜ್ಯ ಸರಕಾರವು ಪಾರ್ಕಿಂಗ್ ಪಾಲಿಸಿಯನ್ನು ಆದಾಯ ಸಂಗ್ರಹದ ಕ್ರಮವಾಗಿ ನೋಡಬಾರದು ಅದನ್ನು ಟ್ರಾಫಿಕ್ ಸುಧಾರಣೆ ಮತ್ತು ನಾಗರಿಕರ ಅನುಕೂಲಕ್ಕೆ ಆದ್ಯತೆ ನೀಡುವ ಪಾಲಿಸಿಯಾಗಿ ಮಾಡಬೇಕು. ಆಟ್ರಿರಿಯಲ್ ಹಾಗೂ ಸಬ್ ಆಟ್ರಿರಿಯಲ್ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವುದಕ್ಕೆ ಶುಲ್ಕ ವಿಧಿಸಿರು ವುದು ಸ್ವಾಗತಾರ್ಹ ಆದರೆ ಮನೆ ಮುಂದೆ ನಿಲ್ಲಿಸಿರುವ ಕಾರ್‌ಗಳಿಗೆ 15000 ರುಪಾಯಿಯಿಂದ 25000 ರುಪಾಯಿಗಳ ವರೆಗೆ ಪಾರ್ಕಿಂಗ್ ಶುಲ್ಕ ವಿಧಿಸುತ್ತಿರುವ ಬಗ್ಗೆ ಸರಕಾರ ಮತ್ತೊಮ್ಮೆ ವಿಮರ್ಶಿಸಬೇಕು ಬಿ.ಪ್ಯಾಕ್‌ನ ರಾಘವೇಂದ್ರ ಪೂಜಾರಿ ಎಚ್.ಎಸ್. ತಿಳಿಸಿದರು.

ಇಲ್ಲಿ ಆಕ್ಷೇಪಣೆ ಸಲ್ಲಿಸಿ ಸಾರ್ವಜನಿಕರು ಕರಡು ಅಧಿಸೂಚನೆ ಸಂಬಂಧ ಯಾವುದೇ ಸಲಹೆ, ಆಕ್ಷೇಪಣೆ ಇದ್ದಲ್ಲಿ ಅವುಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ವಿಕಾಸಸೌಧ, 4ನೇ ಮಹಡಿ, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಬೆಂ- ಗೆ ತಮ್ಮ ಆಕ್ಷೇಪಣೆ ಕಳುಹಿಸಬಹುದು.

image

ಪಾರ್ಕಿಂಗ್ ವೆಚ್ಚ ಹೆಚ್ಚಾದರೆ ಖಾಸಗಿ ವಾಹನಗಳ ಬಳಕೆ ಕಡಿಮೆಯಾಗಿ ಮೆಟ್ರೋ, ಬಿಎಂಟಿಸಿ ಬಸ್ ಸೇರಿದಂತೆ ಸಾರ್ವಜನಿಕ ಸಾರಿಗೆ ಬಳಸುವವರ ಸಂಖ್ಯೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಿದೆ. ಆದರೆ ಸಾರ್ವಜನಿಕ ಸಾರಿಗೆಯ ಸಂಪರ್ಕ, ಸಮಯಪಾಲನೆ, ಕೊನೆಯ ಮೈಲಿ ಸಂಪರ್ಕ ಮತ್ತು ಸುರಕ್ಷತೆ ಮತ್ತಷ್ಟು ಸುಧಾರಿಸಿದಾಗ ಮಾತ್ರ ಜನರು ಖಾಸಗಿ ವಾಹನದಿಂದ ಸಾರ್ವಜನಿಕ ಸಾರಿಗೆಗೆ ದೊಡ್ಡ ಪ್ರಮಾಣದಲ್ಲಿ ಬದಲಾಗುವ ಸಾಧ್ಯತೆ ಇದೆ.

- ರವಿ, ನಿವೃತ್ತ ಸರಕಾರಿ ನೌಕರ
image

ಬೆಂಗಳೂರಿನ ಬೀದಿಗಳಲ್ಲಿ, ನಾಗರಿಕರ ಮನೆ ಮುಂದೆ ತಮ್ಮ ತಮ್ಮ ಬೈಕ್ ಮತ್ತು ಕಾರುಗಳನ್ನು ನಿಲ್ಲಿಸಲು ತಿಂಗಳಿಗೆ ಸಾವಿರಾರು ರುಪಾಯಿ ತೆರಿಗೆ ವಿಧಿಸುವ ಮೂಲಕ ಸಿಎಂ ಡಿಕೆ ಶಿವಕುಮಾರ್ ತಮ್ಮ ಕೊತ್ವಾಲ್ ರಾಮಚಂದ್ರನ ಯುಗದ ತೆರಿಗೆಯನ್ನು ಮುಗ್ಧ ನಾಗರಿಕರ ಮೇಲೆ ಹೇರಲು ಆರಂಭಿಸಿದ್ದಾರೆ. ಚದುರಡಿ ಕಟ್ಟಡ ನಿರ್ಮಾಣಕ್ಕೆ 30 ರು. ಇದ್ದ ಲಂಚದ ಪ್ರಮಾಣ 100 ರು.ಗೆ ಹೆಚ್ಚಿಸಿದ್ದಲ್ಲವೇ ಖಾಲಿ ನಿವೇಶನದ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ವಸೂಲಿ.

- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
image

ಬೆಂಗಳೂರಿನಲ್ಲಿ ಸಂಚಾರ ಹೆಚ್ಚಾದ ಹಿನ್ನೆಲೆ ಹಾಗೂ ವ್ಯವಸ್ಥಿತ ವಾಹನ ನಿಲುಗಡೆಗಾಗಿ ನೂತನ ಪಾರ್ಕಿಂಗ್ ನೀತಿಯ ಕರಡು ಅಧಿಸೂಚನೆ ಸರಕಾರ ಹೊರಡಿಸಿದೆ. ಇದು ವಸತಿ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ. ಪ್ರಮುಖ ರಸ್ತೆಗಳು ಹಾಗೂ ವಾಣಿಜ್ಯ, ಅರೆ ವಾಣಿಜ್ಯ ಪ್ರದೇಶಗಳಲ್ಲಿ ಶಿಸ್ತಿನ ಪಾರ್ಕಿಂಗ್ ಕಲ್ಪಿಸಬೇಕಿದೆ. ನಾಗರಿಕರು ತಮ್ಮ ಸಲಹೆ ಅಥವಾ ಆಕ್ಷೇಪಣೆ ಇದ್ದಲ್ಲಿ ನಗರಾಭಿವೃದ್ಧಿ ಇಲಾಖೆಯ ವಿಳಾಸಕ್ಕೆ ಸಲ್ಲಿಸಬಹುದು. ಉತ್ತಮ ಸಲಹೆ ಇದ್ದಲ್ಲಿ ಖಂಡಿತ ಅಳವಡಿಸಿಕೊಳ್ಳ ಲಾಗುವುದು.

- ಮಹೇಶ್ವರ ರಾವ್, ಜಿಬಿಎ ಮುಖ್ಯ ಆಯುಕ್ತ
image

ಕರಡು ಪಾರ್ಕಿಂಗ್ ನಿಯಮಗಳನ್ನು ಈಗಿನ ಸ್ವರೂಪದ ಜಾರಿಗೊಳಿಸದೆ, ಸಾರ್ವಜನಿಕರು ಮತ್ತು ಉದ್ಯಮದ ಹಿತದೃಷ್ಟಿಯಿಂದ ಮರುಪರಿ ಶೀಲಿಸಿ ಅಗತ್ಯ ತಿದ್ದುಪಡಿಗಳ ನಂತರವೇ ಅಂತಿಮ ಅಧಿಸೂಚನೆ ಹೊರಡಿಸಬೇಕು.

- ಕೆ. ರಾಧಾಕೃಷ್ಣ ಹೊಳ್ಳ, ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್
image

ರಸ್ತೆಬದಿಯಲ್ಲಿ ವಾಹನಗಳನ್ನು ದಿನವಿಡೀ ನಿಲ್ಲಿಸುವುದರಿಂದ ಬೆಂಗಳೂರಿನ ಸಂಚಾರ ಸಮಸ್ಯೆ ಹೆಚ್ಚುತ್ತಿದೆ. ಪಾರ್ಕಿಂಗ್ ಶುಲ್ಕದಿಂದ ಅನಗತ್ಯ ಪಾರ್ಕಿಂಗ್ ಕಡಿಮೆಯಾದರೆ ಅದು ಉತ್ತಮ ಕ್ರಮ. ಆದರೆ ಸಂಗ್ರಹವಾಗುವ ಹಣವನ್ನು ರಸ್ತೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಸುಧಾರಣೆಗೆ ಬಳಸಬೇಕು.

ಶಿಲ್ಪಾ, ಐಟಿ ಉದ್ಯೋಗಿ