ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪುಸ್ತಕ ಪ್ರಕಾಶನ ಕ್ಷೇತ್ರಕ್ಕೂ ಕಾಲಿಟ್ಟ 'ಹ್ಯಾಪಿಯೆಸ್ಟ್ ಹೆಲ್ತ್', ಜ್ಞಾನ ವಿಭಾಗದ ನೂತನ ಸಿಇಒ ಆಗಿ ರಘು ಕೃಷ್ಣನ್ ನೇಮಕ

ವೈದ್ಯಕೀಯ ಮಾಹಿತಿ ಒದಗಿಸಲು ಶ್ರಮಿಸುತ್ತಿರುವ 'ಹ್ಯಾಪಿಯೆಸ್ಟ್ ಹೆಲ್ತ್' ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ತನ್ನ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ 'ನಾಲೆಡ್ಜ್‌ ಬಿಸಿನೆಸ್‌' (ಜ್ಞಾನ) ವಿಭಾಗದ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಮಾಡಿರುವ ಸಂಸ್ಥೆಯು, ಪುಸ್ತಕ ಪ್ರಕಾಶನ ಕ್ಷೇತ್ರಕ್ಕೂ ಅಧಿಕೃತವಾಗಿ ಕಾಲಿಟ್ಟಿದೆ.

ಬೆಂಗಳೂರು: ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಮತ್ತು ವೈದ್ಯಕೀಯ ಮಾಹಿತಿ ಒದಗಿಸಲು ಶ್ರಮಿಸುತ್ತಿರುವ 'ಹ್ಯಾಪಿಯೆಸ್ಟ್ ಹೆಲ್ತ್' ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ತನ್ನ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ 'ನಾಲೆಡ್ಜ್‌ ಬಿಸಿನೆಸ್‌' (ಜ್ಞಾನ) ವಿಭಾಗದ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಮಾಡಿರುವ ಸಂಸ್ಥೆಯು, ಪುಸ್ತಕ ಪ್ರಕಾಶನ ಕ್ಷೇತ್ರಕ್ಕೂ ಅಧಿಕೃತವಾಗಿ ಕಾಲಿಟ್ಟಿದೆ.

ಜ್ಞಾನ ವಿಭಾಗವನ್ನು ಮುನ್ನಡೆಸುವ ಹಾಗೂ ನೂತನ ಉಪಕ್ರಮಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಹಿರಿಯ ಪತ್ರಕರ್ತ ರಘು ಕೃಷ್ಣನ್ ಅವರಿಗೆ ವಹಿಸಲಾಗಿದ್ದು, ಅವರ ನ್ನು ಈ ವಿಭಾಗದ ಸಿಇಒ ಹಾಗೂ ಮುಖ್ಯ ಸಂಪಾದಕರನ್ನಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: Bangalore News: ಹೊಸೂರಿನಲ್ಲಿ ಬೃಹತ್ 'ಏರೋಸ್ಪೇಸ್-ಡಿಫೆನ್ಸ್' ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಬೆಂಗಳೂರಿನ 'ಹಿಕಲ್ ಟೆಕ್ನಾಲಜೀಸ್'

2022ರಲ್ಲಿ ಆರಂಭವಾದ ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯ ಜ್ಞಾನ ವಿಭಾಗವು, ತನ್ನ ವೆಬ್‌ ಸೈಟ್, ದೈನಂದಿನ ಹೆಲ್ತ್‌ಜೀನ್ ಇ-ಮೇಲ್, ಮಾಸಿಕ ಮುದ್ರಿತ ಮ್ಯಾಗಜೀನ್‌ ಮತ್ತು ಆರೋಗ್ಯ ಶೃಂಗಸಭೆಗಳ ಮೂಲಕ ಅತ್ಯುತ್ತಮ ಗುಣಮಟ್ಟದ ಹೆಲ್ತ್ ಆ್ಯಂಡ್ ವೆಲ್ನೆಸ್ ಮಾಹಿತಿಯನ್ನು ನೀಡುತ್ತಾ ಬಂದಿದೆ.

ಪ್ರಸ್ತುತ ಹ್ಯಾಪಿಯೆಸ್ಟ್ ಹೆಲ್ತ್ ಮ್ಯಾಗಜೀನ್ ಓದುಗರ ನೆಚ್ಚಿನ ಪತ್ರಿಕೆಯಾಗಿ ಹೊರ ಹೊಮ್ಮಿದ್ದು, ದೇಶ-ವಿದೇಶಗಳಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಈ ಮಹತ್ವದ ಬೆಳವಣಿಗೆಯ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯ ಚೇರ್ಮನ್ ಮತ್ತು ಚೀಫ್ ಸ್ಟ್ರಾಟೆಜಿ ಆಫೀಸರ್ ಅಶೋಕ್ ಸೂಟಾ, "ಹ್ಯಾಪಿಯೆಸ್ಟ್‌ ಹೆಲ್ತ್‌ ಮ್ಯಾಗಜೀನ್ ಅನ್ನು ಅತ್ಯಂತ ವಿಶ್ವಾಸಾರ್ಹ ಮತ್ತು ಜನಪ್ರಿಯ ಪತ್ರಿಕೆಯನ್ನಾಗಿ ರೂಪಿಸುವಲ್ಲಿ ರಘು ಕೃಷ್ಣನ್‌ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದೀಗ ಅವರ ಜವಾಬ್ದಾರಿಯನ್ನು ವಿಸ್ತರಿಸಲಾಗಿದ್ದು, ಮ್ಯಾಗಜೀನ್ ಹಾಗೂ ದೈನಂದಿನ ಇ-ಜ಼ೀನ್ ಎರಡಕ್ಕೂ ಅವರು ಮುಖ್ಯ ಸಂಪಾದಕರಾಗಿರಲಿದ್ದಾರೆ. ಇಡೀ ಡಿಜಿಟಲ್ ಮತ್ತು ಜ್ಞಾನ ವಿಭಾಗವನ್ನು ಅವರ ನಾಯಕತ್ವದ ಅಡಿಯಲ್ಲೇ ಏಕೀಕರಿಸಲಾಗಿದ್ದು, ನಾವು ಹೊಸದಾಗಿ ಕಾಲಿಡುತ್ತಿರುವ ಪುಸ್ತಕ ಪ್ರಕಾಶನ ವಿಭಾಗವನ್ನೂ ಅವರೇ ಮುನ್ನಡೆಸ ಲಿದ್ದಾರೆ. ರಘು ಅವರ ಈ ನೇಮಕಾತಿಯು ನಮ್ಮ ಜ್ಞಾನ ವಿಭಾಗವನ್ನು ಉತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ," ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ʼವೈಜ್ಞಾನಿಕ ಆಧಾರಿತ ಆರೋಗ್ಯ ಜ್ಞಾನ ನಮ್ಮ ಗುರಿʼ

ತಮ್ಮ ನೂತನ ಜವಾಬ್ದಾರಿಯ ಕುರಿತು ಮಾತನಾಡಿದ ನಾಲೆಡ್ಜ್ ಬಿಸಿನೆಸ್‌ನ ನೂತನ ಸಿಇಒ ಮತ್ತು ಮುಖ್ಯ ಸಂಪಾದಕ ರಘು ಕೃಷ್ಣನ್, "ಜನರಿಗೆ ಯಾವುದೇ ಗೊಂದಲಗಳಿಲ್ಲದ, ಸಂಪೂರ್ಣ ವಿಶ್ವಾಸಾರ್ಹ ಹಾಗೂ ವೈಜ್ಞಾನಿಕ ಆಧಾರಿತ ಆರೋಗ್ಯ ಮಾಹಿತಿಯನ್ನು ನೀಡಿ ಅವರ ಬದುಕನ್ನು ಸಬಲೀಕರಿಸುವುದೇ ಹ್ಯಾಪಿಯೆಸ್ಟ್ ಹೆಲ್ತ್‌ನ ಮೂಲ ಉದ್ದೇಶ ವಾಗಿದೆ. ನಮ್ಮ ಸಂಪಾದಕೀಯ ವೇದಿಕೆಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಸಂಸ್ಥೆಯ ಮುಂದಿನ ಹಂತದ ಬೆಳವಣಿಗೆಯನ್ನು ಮುನ್ನಡೆಸಲು ನಾನು ಅತ್ಯಂತ ಉತ್ಸುಕನಾಗಿದ್ದೇನೆ," ಎಂದಿದ್ದಾರೆ.

"ನಾವು ಇದೀಗ ಸೆಲ್ಫ್-ಪಬ್ಲಿಷಿಂಗ್ ಪ್ಲಾಟ್‌ಫಾರ್ಮ್ ಮೂಲಕ ಪುಸ್ತಕ ಪ್ರಕಾಶನದಂತಹ ಹೊಸ ಮಜಲಿಗೆ ಕಾಲಿಟ್ಟಿದ್ದು, ಈಗಾಗಲೇ ಕೆಲವು ಅತ್ಯುತ್ತಮ ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗಿವೆ. ಸಾಮಾನ್ಯ ಓದುಗರಿಗೆ ಮತ್ತು ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ಸಮಾನವಾಗಿ ಉಪಯುಕ್ತವಾಗುವಂತಹ ಒಂದು ಅತ್ಯುತ್ತಮ, ವಿಶ್ವಾಸಾರ್ಹ ಜ್ಞಾನದ ವ್ಯವಸ್ಥೆಯನ್ನು ಕಟ್ಟುವ ನಮ್ಮ ಪ್ರಯತ್ನ ಸತತವಾಗಿ ಮುಂದುವರಿಯಲಿದೆ," ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ, ಆರೋಗ್ಯದ ಬಗ್ಗೆ ಅಂತರ್ಜಾಲದಲ್ಲಿ ಹರಿದಾಡುವ ತಪ್ಪು ಮಾಹಿತಿಗಳಿಗೆ ಕಡಿವಾಣ ಹಾಕಿ, ನಿಖರವಾದ ಮತ್ತು ತಜ್ಞರಿಂದ ದೃಢೀಕರಿಸಲ್ಪಟ್ಟ ಆರೋಗ್ಯ ವಿಚಾರ ಗಳನ್ನು ಮ್ಯಾಗಜೀನ್, ಡಿಜಿಟಲ್ ವೇದಿಕೆಗಳು ಹಾಗೂ ಇದೀಗ ಪುಸ್ತಕಗಳ ಮೂಲಕವೂ ಜನರಿಗೆ ತಲುಪಿಸಲು 'ಹ್ಯಾಪಿಯೆಸ್ಟ್ ಹೆಲ್ತ್' ತೀರ್ಮಾನಿಸಿದೆ.