ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಂಧನವಾಗಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್, ವಿನಯ್ ಗೌಡಗೆ (Rajath and Vinay Gowda) ಜಾಮೀನು ಮಂಜೂರಾಗಿದೆ. ನಗರದ 24ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನಿಗಾಗಿ 10 ಸಾವಿರ ರೂ. ಶ್ಯೂರಿಟಿ ಸಲ್ಲಿಸಲು ಆರೋಪಿಗಳಿಗೆ ಕೋರ್ಟ್ ಸೂಚನೆ ನೀಡಿದೆ. ಜಾಮೀನು ಆದೇಶ ತಲುಪಿದ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ರಜತ್ ಮತ್ತು ವಿನಯ್ ಗೌಡ ರಿಲೀಸ್ ಆಗಲಿದ್ದಾರೆ.
ಸಾರ್ವಜನಿಕವಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಬಿಗ್‌ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು.
ಮಾರ್ಚ್ 24ರಂದು ವಿನಯ್ ಮತ್ತು ರಜತ್‌ಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆಯ ಪೊಲೀಸರು ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಇಬ್ಬರೂ ರೀಲ್ಸ್‌ನಲ್ಲಿ ತಾವು ಬಳಸಿದ್ದು ಫೈಬರ್‌ನಿಂದ ಮಾಡಲಾದ ಮಚ್ಚು ಎಂದು ವಿವರಣೆ ನೀಡಿದ್ದರು. ಇದರಿಂದ ಇಬ್ಬರನ್ನೂ ಪೊಲೀಸರು ಮನೆಗೆ ಕಳುಹಿಸಿದ್ದರು.
ನಂತರ ರಜತ್ ಪತ್ನಿ ಅಕ್ಷತಾ ಅವರು ಫೈಬರ್ ಮಚ್ಚನ್ನು ಪೊಲೀಸರಿಗೆ ತಂದು ನೀಡಿದ್ದರು. ಇದು ನಕಲಿ ಎಂದು ತಿಳಿದ ಪೊಲೀಸರು ಆಕೆಯನ್ನೂ ವಿಚಾರಣೆಗೆ ಒಳಪಡಿಸಿದ್ದರು. ತದನಂತರ ರೀಲ್ಸ್‌ನಲ್ಲಿರುವ ಮಚ್ಚು ಹಾಗೂ ಠಾಣೆಗೆ ಹಾಜರುಪಡಿಸಲಾದ ಮಚ್ಚು ಬೇರೆಬೇರೆಯಾಗಿರುವುದನ್ನು ಮನಗಂಡು ಸಾಕ್ಷ್ಯ ನಾಶದ ಆರೋಪವನ್ನು ವಿನಯ್ ಹಾಗೂ ರಜತ್ ವಿರುದ್ಧ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನ.25 ಮಂಗಳವಾರ ಈ ಇಬ್ಬರನ್ನೂ ಮತ್ತೊಮ್ಮೆ ವಿಚಾರಣೆಗೆ ಕರೆದಿದ್ದ ಪೊಲೀಸರು ಅವರನ್ನು ವಶಕ್ಕೆ ಪಡೆದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ಇಬ್ಬರಿಗೂ ಜಾಮೀನು ಮಂಜೂರು ಆಗಿದೆ.
ಈ ಸುದ್ದಿಯನ್ನೂ ಓದಿ | Rakshak Bullet: ವಿನಯ್ ಗೌಡ, ರಜತ್ ನಂತರ ಇನ್ನೊಬ್ಬ ಬಿಗ್ ಬಾಸ್ ಸ್ಪರ್ಧಿಗೂ ಕಾನೂನು ಸಂಕಷ್ಟ, ನಾಡದೇವಿಗೆ ಅವಹೇಳನ ದೂರು
ಒತ್ತುವರಿ ತೆರವಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ, ಎಚ್‌ಡಿ ಕುಮಾರಸ್ವಾಮಿಗೆ ಹಿನ್ನಡೆ
ಬೆಂಗಳೂರು: ರಾಮನಗರ (Ramangara news) ತಾಲೂಕಿನ ಬಿಡದಿ ಹೋಬಳಿ ವ್ಯಾಪ್ತಿಯ ಕೇತಗಾನಹಳ್ಳಿಯಲ್ಲಿ ಒತ್ತುವರಿ (encroachment) ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (supreme court) ನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರಿಗೆ ಹಿನ್ನಡೆಯಾಗಿದೆ. ಕೇತಗಾನಹಳ್ಳಿ ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಒತ್ತುವರಿ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ನ್ಯಾಯಮೂರ್ತಿ ಪಂಕಜ್ ಮಿತ್ತಲ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿದೆ.
2014ರಿಂದಲೇ ಕೇತಗಾನಹಳ್ಳಿಯಲ್ಲಿ ಎಂಟು ಸರ್ವೆ ನಂಬರ್‌ಗಳ ಒತ್ತುವರಿ ಆರೋಪ ಕೇಳಿಬಂದಿತ್ತು. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು 14 ಎಕರೆ ಭೂಮಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದಾರೆಂದು ಸಾಮಾಜಿಕ ಹೋರಾಟಗಾರರು ದೂರು ನೀಡಿದ್ದರು. ಇದರ ಬೆನ್ನಲ್ಲೇ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದ್ದರು. ವರದಿ ನೀಡಲು ವಿಳಂಬದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಆಯುಕ್ತರಿಗೆ ಶೀಘ್ರ ವರದಿ ನೀಡುವಂತೆ ಹೈಕೋರ್ಟ್ ತಾಕೀತು ಮಾಡಿತ್ತು. ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ಆರಂಭಿಸಿದ್ದಾರೆ. ಕುಮಾರಸ್ವಾಮಿ ಭೂ ಒತ್ತುವರಿ ಬಗ್ಗೆ ತನಿಖೆಗೆ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು.
ಇದನ್ನೂ ಓದಿ: HD Kumaraswamy: 135 ಸೀಟು ಕೊಟ್ಟಿರುವುದು ನಟ್ಟು ಬೋಲ್ಟ್ ರಿಪೇರಿ ಮಾಡೋಕೆ ಅಲ್ಲ; ಡಿಕೆಶಿಗೆ ಎಚ್‌ಡಿಕೆ ಟಾಂಗ್
ತೆರವಿಗೆ ಲೋಕಾಯುಕ್ತ ಅಧಿಕಾರಿಗಳು ಸೂಚನೆ ನೀಡಿದ್ದರು. ಲೋಕಾಯುಕ್ತ ಸೂಚನೆ ಬಳಿಕವೂ ಅಧಿಕಾರಿಗಳು ತೆರವು ಮಾಡಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಒತ್ತುವರಿ ತೆರವು ಮಾಡಲು ಸೂಚನೆ ನೀಡಿತ್ತು. ಆದರೆ ಹೆಚ್.ಡಿ.ಕುಮಾರಸ್ವಾಮಿ ಅವರು ತೆರವು ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಕೂಡ ತೆರವಿಗೆ ತಡೆ ನೀಡಲು ನಿರಾಕರಿಸುವ ಮೂಲಕ, ಎಚ್‌ಡಿಕೆ ಅವರಿಗೆ ಹಿನ್ನಡೆಯಾಗಿದೆ.