ಬೆಂಗಳೂರು: ಹೊಸ ಸರ್ಕಾರ ರಚನೆಯಾಗಿ ಕೇವಲ 48 ಗಂಟೆಗಳಲ್ಲೇ ಅಸಮಾಧಾನದ ಬಾಂಬ್ ಸ್ಫೋಟಗೊಂಡಿದೆ. ರಾಮಲಿಂಗಾರೆಡ್ಡಿ ಅವರು ತಮಗೆ ನೀಡಲಾದ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. “ನಿಮ್ಮ ಕೊಟ್ಟ ಸ್ಥಾನ ನನಗೆ ಬೇಡ, ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲಾಗುವುದಿಲ್ಲ” ಎಂದು ಹೇಳಿ ಅವರು ಸಚಿವ ಸ್ಥಾನ ತೊರೆದಿದ್ದಾರೆ. ರಾಜೀನಾಮೆ ಬಳಿಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸಲು ತೀವ್ರ ಕಸರತ್ತು ನಡೆಸಿದ್ದಾರೆ. ಮಾತುಕತೆ ಮೂಲಕ ಅವರನ್ನು ಸಮಾಧಾನಪಡಿಸುವಂತೆ ಹೈಕಮಾಂಡ್ ಸಿಎಂಗೆ ಸೂಚನೆ ನೀಡಿದೆ. ಆದರೆ ಹೈಕಮಾಂಡ್ ಸ್ವತಃ ಒಂದು ಸ್ಪಷ್ಟ ನಿಲುವನ್ನು ತಳೆದಿದೆ.
ಹೈಕಮಾಂಡ್ ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ಅವರ ಖಾತೆ ಬದಲಾವಣೆ ಮಾಡಲು ನಿರಾಕರಿಸಿದೆ. ಬೆಂಗಳೂರು ಅಭಿವೃದ್ಧಿ ಖಾತೆ ನೀಡುವ ಸಾಧ್ಯತೆಯನ್ನು ಸಂಪೂರ್ಣ ತಳ್ಳಿಹಾಕಲಾಗಿದೆ. ಹಾಗೆಯೇ ರಾಮಲಿಂಗಾರೆಡ್ಡಿ ಅವರ ಖಾತೆ ಬದಲಾಯಿಸಲೂ ಹೈಕಮಾಂಡ್ ಒಪ್ಪುತ್ತಿಲ್ಲ. ಹೈಕಮಾಂಡ್ ಕಡ್ಡಿ ಮುರಿದಂತೆ ಈ ನಿಲುವನ್ನು ಪ್ರಕಟಿಸಿದೆ. ಒಬ್ಬರ ಬೇಡಿಕೆಗೆ ಸ್ಪಂದಿಸಿದರೆ ಇತರ ಸಚಿವರು ಕೂಡ ತಮ್ಮ ಖಾತೆ ಬದಲಾಯಿಸುವಂತೆ ಒತ್ತಡ ಹೇರಬಹುದು. ಇದೀಗ ಮಾತ್ರವಲ್ಲದೆ ಮುಂದಿನ ಸಂಪುಟ ವಿಸ್ತರಣೆಯ ವೇಳೆಯೂ ಬೇಡಿಕೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿಯೇ ಹೈಕಮಾಂಡ್ ರಾಮಲಿಂಗಾರೆಡ್ಡಿ ಅವರ ಖಾತೆ ಬದಲಾವಣೆಗೆ ಒಪ್ಪಿಗೆ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.
ರೆಡ್ಡಿ ಹೇಳಿದ್ದೇನು?
ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಮಲಿಂಗಾ ರೆಡ್ಡಿ ನಾನು ಸತತ 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವನಾಗಿದ್ದೆ. ಆ ಬಳಿಕ ಸಿದ್ದರಾಮಯ್ಯ ಅವರ ಸಂಪುಟದಲ್ಲಿ 2 ಬಾರಿ ಸಚಿವರಾಗಿ ಕೆಲಸ ಮಾಡಿದ್ದೇನೆ. ಈ ಹಿಂದೆ ನನಗೆ ನೀಡಲಾಗಿದ್ದ ಎಲ್ಲಾ ಇಲಾಖೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಇತಿಹಾಸ ನನಗಿದೆ.
ರಾಮಲಿಂಗಾರೆಡ್ಡಿಗೆ ನಾನು ಮಾತು ಕೊಟ್ಟಿದ್ದು ನಿಜ: ಖಾತೆ ಹಂಚಿಕೆ ಬಗ್ಗೆ ಸಿಎಂ ಡಿಕೆಶಿ ಪ್ರತಿಕ್ರಿಯೆ
ನಾನು ಯಾವತ್ತೂ ಯಾವುದೇ ಮುಖ್ಯಮಂತ್ರಿಗಳ ಬಳಿ ಹೋಗಿ ಮಂತ್ರಿ ಮಾಡಿ ಎಂದಾಗಲಿ ಅಥವಾ ಇಂತಹದ್ದೇ ಇಲಾಖೆ ಬೇಕು ಎಂದಾಗಲಿ ಕೇಳಿರಲಿಲ್ಲ. ಈ ಬಾರಿಯೂ ನಾನು ಶಿವಕುಮಾರ್ ಅವರ ಬಳಿಯಾಗಲಿ ಅಥವಾ ಹೈಕಮಾಂಡ್ ಬಳಿಯಾಗಲಿ ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ. ಆದರೆ, ಹಿಂದೆ ಡಿಕೆ ಶಿವಕುಮಾರ್, ‘ನಾನು ಎರಡೂವರೆ ವರ್ಷಗಳ ಆದ ಮೇಲೆ ಮುಖ್ಯಮಂತ್ರಿಯಾಗುತ್ತೇನೆ, ಆ ಸಂದರ್ಭದಲ್ಲಿ ನನ್ನ ಬಳಿ ಇರುವ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಿಮಗೇ ಕೊಡುತ್ತೇನೆ’ ಎಂದು ಮಾತು ಕೊಟ್ಟಿದ್ದರು ಎಂದು ಹೇಳಿದ್ದಾರೆ.