ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿ(Kannada Sahithya Parishad)ನ 111 ವರ್ಷಗಳ ಇತಿಹಾಸದಲ್ಲಿ ಈವರೆಗೆ ಒಬ್ಬ ಮಹಿಳೆ ಯೂ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿಲ್ಲ ಎಂಬ ಕೊರಗನ್ನು ನೀಗಿಸುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿದ್ದೇನೆ. ಕನ್ನಡ ಭಾಷೆ, ಕನ್ನಡ ಶಾಲೆ ಮತ್ತು ಕನ್ನಡಿಗರ ಸಂಘಟನೆ ಕೇಂದ್ರವಾಗಿಟ್ಟು ಕೊಂಡು ಹಲವು ಕಾರ್ಯಕ್ರಮ ಜಾರಿಗೊಳಿಸುವುದು ಎಂದು ಅಭ್ಯರ್ಥಿ ವಿಜಯಲಕ್ಷ್ಮೀ ಬಾಳೇಕುಂದ್ರಿ (Vijayalakshmi Balekundri) ತಿಳಿಸಿದರು.
ಇದನ್ನೂ ಓದಿ: Kannada Sahitya Parishad: ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಉಳಿಸಬೇಕಾದರೆ ಕೇವಲ ಕನ್ನಡದ ಬಗ್ಗೆ ಮಾತನಾಡಿದರೆ ಸಾಲದು. ಕನ್ನಡ ಮಾತನಾಡುವ ಮಕ್ಕಳನ್ನು ಬೆಳೆಸಬೇಕು. ಅದಕ್ಕಾಗಿ ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಿ, ಬಲಪಡಿಸುವುದು ನಮ್ಮ ಮೊದಲ ಆದ್ಯತೆ. ಕರ್ನಾಟಕದಲ್ಲಿ ಸುಮಾರು 48 ಸಾವಿರ ಸರಕಾರಿ ಶಾಲೆಗಳಿದ್ದು, ಕಳೆದ ಕೆಲವು ವರ್ಷಗಳಲ್ಲಿ ಸುಮಾರು 6 ಸಾವಿರ ಶಾಲೆಗಳು ಮುಚ್ಚಿರುವುದು ಆತಂಕಕಾರಿ ಬೆಳವಣಿಗೆ. ಸರಕಾರಿ ಶಾಲೆಗಳಲ್ಲಿ ಸುಮಾರು 38 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದ ದಾಖಲಾತಿ ಪ್ರಮಾಣವೂ ಕುಸಿಯುತ್ತಿದೆ. ಹೀಗಾಗಿ ಕನ್ನಡ ಶಾಲೆಗಳ ಉಳಿವಿಗಾಗಿ ಸರಕಾರದ ಜತೆಗೆ ಸಮಾಜವೂ ಕೈಜೋಡಿಸ ಬೇಕಾದ ಅಗತ್ಯವಿದೆ ಎಂದರು.
ಆರು ಕೋಟಿ ಕನ್ನಡಿಗರ ಚಳವಳಿ: ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರೆ ಆರು ಕೋಟಿ ಕನ್ನಡಿಗರ ಚಳವಳಿ ರೂಪಿಸಿ ರಾಜ್ಯದ ಸರಕಾರಿ ಕನ್ನಡ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಯೋಜನೆ ಜಾರಿಗೆ ತರಲಾಗುವುದು. ಶಾಲೆಗಳ ಮೂಲಸೌಕರ್ಯ, ಗ್ರಂಥಾಲಯ, ಕಲಿಕಾ ವಾತಾ ವರಣ ಹಾಗೂ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸಾರ್ವಜನಿಕರ ಸಹಭಾಗಿತ್ವ ಪಡೆಯ ಲಾಗುವುದು. ಇದಕ್ಕಾಗಿ ಈಗಾಗಲೇ ಬ್ಲೂಪ್ರಿಂಟ್ ಸಿದ್ಧಪಡಿಸಲಾಗಿದೆ ಎಂದು ವಿಜಯಲಕ್ಷ್ಮೀ ಬಾಳೇಕುಂದ್ರಿ ತಿಳಿಸಿದರು.