ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Lamborghini case: ಲ್ಯಾಂಬೊರ್ಗಿನಿ ಕಾರಿನಲ್ಲಿಯೇ ಹೋಗಿ ರಸ್ತೆ ಕಸ ಗುಡಿಸಿ ಬನ್ನಿ: ಆರೋಪಿಗೆ ಹೈಕೋರ್ಟ್‌ ಸೂಚನೆ

ಮನುಷ್ಯನ ಪ್ರಾಣಕ್ಕೆ ಹಾನಿಯಾಗುವಂಥ ಸೈಲೆನ್ಸರ್‌ ಅಳವಡಿಸಿಕೊಂಡಿರುವ ಲ್ಯಾಂಬೊರ್ಗಿನಿ ಕಾರನ್ನು ಮೈಸೂರು ರಸ್ತೆ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಕುರಿತು ಬೆಂಗಳೂರಿನ ಕೆಂಗೇರಿ ಸಂಚಾರಿ ಠಾಣೆಯಲ್ಲಿ ಚಿರಂತನ್‌ ಎಂಬವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಲ್ಯಾಂಬೊರ್ಗಿನಿ ಕಾರಲ್ಲಿಯೇ ಹೋಗಿ ರಸ್ತೆ ಕಸ ಗುಡಿಸಿ: ಆರೋಪಿಗೆ ಹೈಕೋರ್ಟ್‌

ಲ್ಯಾಂಬೊರ್ಗಿನಿಯಲ್ಲಿ ನಿರ್ಲಕ್ಷ್ಯದ ಚಾಲನೆ -

ಹರೀಶ್‌ ಕೇರ
ಹರೀಶ್‌ ಕೇರ Apr 11, 2026 8:12 AM

ಬೆಂಗಳೂರು, ಏ.11: ಮೈಸೂರು ರಸ್ತೆಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಕಾರು ಓಡಿಸಿದ (Lamborghini case) ಆರೋಪಕ್ಕೆ ಗುರಿಯಾಗಿರುವ ಬೆಂಗಳೂರಿನ ವ್ಯಕ್ತಿಯು ಸಮುದಾಯ ಸೇವೆ ಮಾಡುವುದಾಗಿ ಹೇಳಿರುವುದನ್ನು ಪರಿಗಣಿಸಿರುವ ಹೈಕೋರ್ಟ್‌ (Karnataka high court) 'ಹಸಿರು ಲ್ಯಾಂಬೊರ್ಗಿನಿ ಕಾರಿನಲ್ಲಿ ಹೋಗಿ ರಸ್ತೆ ಕಸ ಗುಡಿಸಿ, ಮತ್ತೆ ಲ್ಯಾಂಬೊರ್ಗಿನಿಯಲ್ಲಿ ಬನ್ನಿ' ಎಂದು ಮೌಖಿಕವಾಗಿ ಹೇಳಿದೆ.

ಸಿ.ವಿ.ರಾಮನ್‌ ನಗರದ ಬಿ.ಆರ್‌.ಚಿರಂತನ್‌ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಯಾವ ರೀತಿಯ ಸಮುದಾಯ ಸೇವೆ ಮಾಡಬೇಕು ಎಂಬುದನ್ನು ಮೌಖಿಕವಾಗಿ ಹೇಳುವ ಜತೆಗೆ, ಅರ್ಜಿಯನ್ನು ಇತ್ಯರ್ಥಪಡಿಸಿದೆ.

''ಬಿಎನ್‌ಎಸ್‌ಎಸ್‌ನಲ್ಲಿ 10 ಬಗೆಯ ಸಮುದಾಯ ಸೇವೆಗಳಿವೆ. ಲ್ಯಾಂಬೊರ್ಗಿನಿಯಲ್ಲಿ ಹೋಗಿ ರಸ್ತೆ ಕಸ ಗುಡಿಸಿ, ಮತ್ತೆ ಲ್ಯಾಂಬೊರ್ಗಿನಿಯಲ್ಲಿ ಬನ್ನಿ. ಸಂಚಾರ ನಿಯಮ ಉಲ್ಲಂಘಿಸಿರುವುದರಿಂದ ಸಂಚಾರ ನಿಯಮದ ಪಾಠ ಮಾಡುವಂತಿಲ್ಲ. ಯಾವ ಸೇವೆ ಮಾಡಬೇಕು ಎಂದು ಬರೆಯುತ್ತೇವೆ, ಅದನ್ನು ಮಾಡಬೇಕು,'' ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರ ಪರ ವಕೀಲರು, ''ಚಿರಂತನ್‌ನ್ನು ಅಫೆಂಡರ್‌ ಎಂದು ತೋರಿಸಲಾಗಿದೆ. ಚಿರಂತನ್‌ ಯಾವುದೇ ಅಪರಾಧ ಮಾಡಿಲ್ಲ. ಆದರೂ, ಅವರು ಸಮುದಾಯ ಸೇವೆ ಮಾಡುವ ಇಚ್ಛೆ ಹೊಂದಿದ್ದಾರೆ. ಸಂಚಾರ ನಿಯಮಗಳ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಾರೆ. ಸಂಚಾರ ನಿಯಮ ಉಲ್ಲಂಘಿಸದಂತೆ ಮಕ್ಕಳಿಗೆ ತಿಳಿಸುತ್ತಾರೆ. ಬೇರೊಂದು ಪ್ರಕರಣದಲ್ಲಿ ವೈದ್ಯರೊಬ್ಬರಿಗೆ ಸರಕಾರಿ ಶಾಲೆಯಲ್ಲಿ ಪ್ರತಿ ಭಾನುವಾರ ಆರು ತಿಂಗಳ ಕಾಲ ಸಮುದಾಯ ಸೇವೆ ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಇಡೀ ದೇಶದಲ್ಲೇ ಇದು ಮೊದಲ ಪ್ರಕರಣವಾಗಲಿದೆ. ಹಾಗಾಗಿ, ವಿನಾಯಿತಿ ತೋರಬೇಕು,'' ಎಂದು ಕೋರಿದರು.

Lamborghini stunt in Bengaluru: ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್ ಕೇಸ್‌ನಲ್ಲಿ ರಿಕ್ಕಿ ರೈಗೆ ರಿಲೀಫ್‌; ಕೋರ್ಟ್‌ನಿಂದ ಜಾಮೀನು ಮಂಜೂರು

ಹೆಚ್ಚುವರಿ ಸರಕಾರಿ ಅಭಿಯೋಜಕ ಬಿಎನ್‌.ಜಗದೀಶ್‌, ''ಲ್ಯಾಂಬೊರ್ಗಿನಿ ಕಾರನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ವ್ಯಕ್ತಿ ಶಾಲೆಯಲ್ಲಿ ಸಂಚಾರ ನಿಯಮದ ಪಾಠ ಮಾಡುವುದು ಸರಿಯಲ್ಲ, ಗಿಡಗಳನ್ನು ನೆಡುವುದು ಸೂಕ್ತ" ಎಂದರು. ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿದ್ದು, ವಿಸ್ತೃತ ಆದೇಶ ಮಾಡುವುದಾಗಿ ಹೇಳಿದೆ.

ಪ್ರಕರಣದ ಹಿನ್ನೆಲೆ ಏನು?

ಮನುಷ್ಯನ ಪ್ರಾಣಕ್ಕೆ ಹಾನಿಯಾಗುವಂಥ ಸೈಲೆನ್ಸರ್‌ ಅಳವಡಿಸಿಕೊಂಡಿರುವ ಲ್ಯಾಂಬೊರ್ಗಿನಿ ಕಾರನ್ನು ಮೈಸೂರು ರಸ್ತೆ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿರುವ ವಿಡಿಯೊವನ್ನು 'ಸನಾತನ' ಎಂಬ ಎಕ್ಸ್‌ ಖಾತೆಯಲ್ಲಿ ವೀಕ್ಷಿಸಿರುವುದಾಗಿ ಕರ್ತವ್ಯನಿರತ ಪಿಎಸ್‌ಐ ಆರ್‌.ರಾಮಸ್ವಾಮಿ ದೂರು ನೀಡಿದ್ದರು. ಅದರನ್ವಯ ಬೆಂಗಳೂರಿನ ಕೆಂಗೇರಿ ಸಂಚಾರಿ ಠಾಣೆಯಲ್ಲಿ ಜನವರಿ 20ರಂದು ಸೆಕ್ಷನ್‌ 281 ಮತ್ತು ಭಾರತೀಯ ಮೋಟಾರು ವಾಹನಗಳ ಕಾಯಿದೆ 120 ಮತ್ತು 177ರರಡಿ ಚಿರಂತನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.