ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಸದ ವಿಚಾರಕ್ಕೆ ನೆರೆಹೊರೆ ಗಲಾಟೆ ಆರೋಪಪಟ್ಟಿ ರದ್ದತಿಗೆ ನಿರಾಕರಣೆ

ಪ್ರಕರಣದ ದಾಖಲೆಗಳು, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಪೀಠ, ಆರೋಪ ಪಟ್ಟಿಗಳನ್ನು ರದ್ದುಪಡಿಸಲು ಯಾವುದೇ ಕಾರಣವಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಪರಸ್ಪರ ದಾಖಲಾದ ದೂರು - ಪ್ರತಿದೂರುಗಳು ಮತ್ತು ವೈದ್ಯಕೀಯ ದಾಖಲೆಗಳು ಪ್ರಾಥಮಿಕವಾಗಿ ದೈಹಿಕ ಘರ್ಷಣೆ ನಡೆದಿರುವು ದನ್ನು ಹಾಗೂ ಇಬ್ಬರೂ ಗಾಯಗೊಂಡಿರುವುದನ್ನು ಸೂಚಿಸುತ್ತವೆ ಎಂದು ಹೇಳಿದೆ.

ಬೆಂಗಳೂರು: ನೆರೆ-ಹೊರೆಯ ವಿವಾದಗಳನ್ನು ದೈಹಿಕ ಹಿಂಸಾಚಾರದ ಮೂಲಕ ಬಗೆಹರಿಸುವುದು ಸ್ವಿಕಾರಾರ್ಹವಲ್ಲ ಎಂದು ತಿಳಿಸಿರುವ ಹೈಕೋರ್ಟ್(High Court), ಕಸ ವಿಲೇವಾರಿ(Waste Disposal) ವಿಚಾರವಾಗಿ ಇಬ್ಬರು ನೆರೆ - ಹೊರೆಯವರ ನಡುವೆ ನಡೆದ ಜಗಳ ಮತ್ತು ಹಲ್ಲೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ನಾಗಮಂಗಲ ಗ್ರಾಮದ ಬ್ರೆನ್ವುಡ್ ಅಪಾರ್ಟ್‌ಮೆಂಟ್ ನ ಎಂ.ಆರ್. ಚಂದ್ರಶೇಖರ್ ಗುಪ್ತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.

ಪ್ರಕರಣದ ದಾಖಲೆಗಳು, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಪೀಠ, ಆರೋಪ ಪಟ್ಟಿ ಗಳನ್ನು ರದ್ದುಪಡಿಸಲು ಯಾವುದೇ ಕಾರಣವಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಪರಸ್ಪರ ದಾಖಲಾದ ದೂರು - ಪ್ರತಿದೂರುಗಳು ಮತ್ತು ವೈದ್ಯಕೀಯ ದಾಖಲೆಗಳು ಪ್ರಾಥಮಿಕವಾಗಿ ದೈಹಿಕ ಘರ್ಷಣೆ ನಡೆದಿರುವುದನ್ನು ಹಾಗೂ ಇಬ್ಬರೂ ಗಾಯಗೊಂಡಿರುವುದನ್ನು ಸೂಚಿಸುತ್ತವೆ ಎಂದು ಹೇಳಿದೆ.

ಇದನ್ನೂ ಓದಿ: High Court: ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠದಿಂದ ಆದೇಶ: ಸೇವೆಯಿಂದ ಉಪನ್ಯಾಸಕರ ಮುಕ್ತಿ ತಪ್ಪಲ್ಲ: ಹೈಕೋರ್ಟ್

ಈ ಪ್ರಕರಣದಲ್ಲಿ ಇಬ್ಬರೂ ಜಗಳವನ್ನು ಆರಂಭಿಸಿದ್ದು ಹಾಗೂ ಅದು ಉಲ್ಬಣಗೊಳ್ಳಲು ಎದುರಾಳಿ ಕಾರಣ ಎಂದು ಆರೋಪಿಸಿವೆ. ಆದರೆ, ಜಗಳವನ್ನು ಮೊದಲು ಯಾರು ಆರಂಭಿಸಿದರು, ಪ್ರತಿಯೊಬ್ಬರ ಪಾತ್ರವೇನು, ಯಾವ ಸಂದರ್ಭಗಳಲ್ಲಿ ಗಾಯಗಳಾದವು ಮತ್ತು ಆರೋಪಿಗಳ ಹೊಣೆಗಾರಿಕೆ ಎಷ್ಟಿದೆ ಎಂಬುದನ್ನು ವಿಚಾರಣಾ ನ್ಯಾಯಾಲಯ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಿರ್ಧರಿಸಬೇಕಾಗಿದೆ.

ನೆರೆ - ಹೊರೆಯವರು ವ್ಯಕ್ತಿಗಳು ಮತ್ತು ಕುಟುಂಬಗಳ ದೈನಂದಿನ ಬದುಕಿನಲ್ಲಿ ವಿಶಿಷ್ಟ ಸ್ಥಾನ ಹೊಂದಿರುತ್ತಾರೆ. ಇತರ ಹಲವು ಸಂಬಂಧಗಳಂತೆ ನೆರೆ-ಹೊರೆಯವರನ್ನು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ. ಅವರು ಸಾಮಾನ್ಯ ಸ್ಥಳಗಳು ಮತ್ತು ಸೌಲಭ್ಯಗಳನ್ನು ಹಂಚಿ ಕೊಳ್ಳುವುದರ ಜೊತೆಗೆ ಒಂದೇ ವಸತಿ ಸಮುದಾಯದ ಭಾಗವಾಗಿರುತ್ತಾರೆ ಎಂದು ಪೀಠ ಇದೇ ವೇಳೆ ಸ್ಪಷ್ಟ ಪಡಿಸಿದೆ.

ಕೆಲವೇ ನಿಮಿಷಗಳ ಭಿನ್ನಾಭಿಪ್ರಾಯವನ್ನು ನಿಯಂತ್ರಿಸದೇ ಬಿಟ್ಟರೆ, ಅದು ಹಲವು ವರ್ಷಗಳ ವೈರತ್ವಕ್ಕೆ ಕಾರಣವಾಗಬಹುದು. ನಂತರ ಅದೇ ಮನೆಯಲ್ಲಿ ಅಥವಾ ವಸತಿ ಪ್ರದೇಶದಲ್ಲಿ ಅನುಮಾನ, ಅಸಮಾಧಾನ, ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಬಹುದು. ನೆರೆ-ಹೊರೆ ಯವರನ್ನು ಪ್ರಿತಿಸಿ ಎಂಬ ಮಾತು ಎಲ್ಲ ವಿಚಾರಗಳಲ್ಲೂ ಒಪ್ಪಿಕೊಳ್ಳಬೇಕು ಅಥವಾ ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಬಿಟ್ಟುಕೊಡಬೇಕು ಎಂಬುದಲ್ಲ. ಬದಲಾಗಿ, ಸೌಜನ್ಯ, ಸಹನೆ, ಪರಸ್ಪರ ಪರಿಗಣನೆ ಮತ್ತು ಅನಗತ್ಯ ಘರ್ಷಣೆ ತಪ್ಪಿಸಿ ಸಮಸ್ಯೆ ಪರಿಹರಿಸುವ ಮನೋಭಾವವನ್ನು ಸೂಚಿಸುತ್ತದೆ ಎಂದು ನ್ಯಾಯಪೀಠ ವಿವರಿಸಿದೆ.

ಪ್ರಕರಣದ ಹಿನ್ನೆಲೆ : ಕಸ ಸರಿಯಾಗಿ ವಿಲೇವಾರಿ ಮಾಡದಿರುವ ವಿಚಾರದಲ್ಲಿ ಬ್ರೆನ್ವುಡ್ ಅಪಾರ್ಟ್‌ಮೆಂಟ್‌ನ ಎಂ.ಆರ್. ಚಂದ್ರಶೇಖರ್ ಗುಪ್ತ, ಅವರ ಪತ್ನಿ ನೇಹಾ ಗುಪ್ತ ಮತ್ತು ಶ್ವಾತಿ ಶರ್ಮ ನಡುವೆ ವಾಗ್ವಾದ ಆರಂಭವಾಗಿತ್ತು. ನಂತರ ಮಾತಿನ ಚಕಮಕಿ ದೈಹಿಕ ಹಗೆ ತಿರುಗಿದ್ದು, ಇಬ್ಬರೂ ಪರಸ್ಪರರ ವಿರುದ್ಧ ದೂರು-ಪ್ರತಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಪೂರ್ಣಗೊಳಿಸಿದ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ನಂತರ ಎರಡೂ ಪ್ರಕರಣಗಳ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿ, ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದು ಮಾಡುವಂತೆ ಕೋರಿದ್ದರು.