ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಒಬಿಸಿ ಸರ್ಕಾರಿ ನೌಕರರ ಮಕ್ಕಳ ಮೀಸಲಾತಿ ಪ್ರಮಾಣ ಪತ್ರಕ್ಕೆ ವೇತನದ ಆದಾಯ ಪರಿಗಣಿಸಬೇಡಿ: ಸರ್ಕಾರಕ್ಕೆ ಸಿ.ಎಸ್‌ .ಷಡಾಕ್ಷರಿ ಪತ್ರ

ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಗೆ ಸರ್ಕಾರಿ ನೌಕರರ ಒಟ್ಟು ವಾರ್ಷಿಕ ಆದಾಯದ ಲೆಕ್ಕಾಚಾರದಲ್ಲಿ ವೇತನದ ಆದಾಯವನ್ನು ಪರಿಗಣಿಸುತ್ತಿರುವುದರಿಂದ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಅಧಿಕಾರಿ, ನೌಕರರ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಒಬಿಸಿ ಆದಾಯ ಕೆನೆಪದರ ಮಿತಿಯನ್ನು 8 ಲಕ್ಷದಿಂದ 15 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌ .ಷಡಾಕ್ಷರಿ ಕೋರಿದ್ದಾರೆ.

ಸಿ.ಎಸ್‌.ಷಡಾಕ್ಷರಿ (ಸಂಗ್ರಹ ಚಿತ್ರ)

ಬೆಂಗಳೂರು: ಹಿಂದುಳಿದ ವರ್ಗಗಳ ಮೀಸಲಾತಿ (obc reservation) ಸಂಬಂಧ ಕೆನೆಪದರ ವಾರ್ಷಿಕ ಆದಾಯ ಮಿತಿಯನ್ನು 8 ಲಕ್ಷದಿಂದ 15 ಲಕ್ಷ ರೂ.ಗೆ ಹೆಚ್ಚಿಸುವುದು ಹಾಗೂ ಸರ್ಕಾರಿ ನೌಕರರ ಮಕ್ಕಳ ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಒಬಿಸಿ ಮೀಸಲಾತಿ ಪ್ರಮಾಣ ಪತ್ರ ನೀಡುವಾಗ ವೇತನದ ಆದಾಯವನ್ನು ಪರಿಗಣಿಸದಂತೆ ಕೋರಿ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌ .ಷಡಾಕ್ಷರಿ ಮನವಿ ಪತ್ರ ಸಲ್ಲಿಸಿದ್ದಾರೆ.

ಸಾಮಾಜಿಕವಾಗಿ ಮುಂದುವರಿದ ವ್ಯಕ್ತಿಗಳು ಹಾಗೂ ವರ್ಗಗಳನ್ನು (ಕೆನೆಪದರ) ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರತುಪಡಿಸಲು ಸರ್ಕಾರದ ಆದೇಶದನ್ವಯ ಕೆನೆಪದರ ನೀತಿಯ ವಾರ್ಷಿಕ ಆದಾಯದ ಮಿತಿಯನ್ನು 8 ಲಕ್ಷ ರೂ. ನಿಗದಿಪಡಿಸಿದೆ. ರಾಜ್ಯ 7ನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನದಿಂದಾಗಿ ಸರ್ಕಾರಿ ನೌಕರರ ವಾರ್ಷಿಕ ಆದಾಯ ಮಿತಿ ಹೆಚ್ಚಾಗಿರುವುದರಿಂದ, ರಾಜ್ಯ ಸರ್ಕಾರಿ ನೌಕರರು ತಮ್ಮ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೆನೆಪದರ ನೀತಿಗೆ ಅನುಗುಣವಾಗಿ ಮೀಸಲಾತಿಯನ್ನು ಪಡೆಯಲು ಅನರ್ಹರಾಗುತ್ತಿರುವುದರಿಂದ ಕೆನೆಪದರ ಮಿತಿಯನ್ನು ಪರಿಷ್ಕರಿಸಿ ವಾರ್ಷಿಕ ಆದಾಯ ಮಿತಿಯನ್ನು 8 ಲಕ್ಷದಿಂದ 15 ಲಕ್ಷ ರೂ.ಗೆ ಹೆಚ್ಚಿಸಲು ಮನವಿ ಮಾಡಲಾಗಿತ್ತು.

ಮುಂದುವರಿದು ಭಾರತ ಸರ್ಕಾರವು ಹಿಂದುಳಿದ ವರ್ಗಗಳಿಗೆ ಕೆನೆಪದರ ನೀತಿಯನ್ನು ಅಳವಡಿಸುವ ಸಂಬಂಧ ಮಾರ್ಗಸೂಚಿ ಹೊರಡಿಸಿದ್ದು, ಆ ಮಾರ್ಗಸೂಚಿಯಂತೆ ರಾಷ್ಟ್ರದ ಬಹುತೇಕೆ ಎಲ್ಲಾ ರಾಜ್ಯಗಳು ಈಗಾಗಲೇ ಕೇಂದ್ರದ ಮಾರ್ಗಸೂಚಿಯಲ್ಲಿನ ನಿಯಮಗಳಿಗೆ ಯಾವುದೇ ಬದಲಾವಣೆ ಮಾಡಿಕೊಳ್ಳದೇ, ಯಥಾಸ್ಥಿತಿಯನ್ನು ಕಾಯ್ದುಕೊಂಡು ಕೇಂದ್ರ ಸರ್ಕಾರದ ಅಧೀನ ಇಲಾಖೆಗಳು ಹಾಗೂ ಆಯಾ ರಾಜ್ಯಗಳ ಅಧೀನ ಇಲಾಖೆಗಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಸರ್ಕಾರಿ ನೌಕರರ ವೇತನವನ್ನು ಕುಟುಂಬ ಆದಾಯಕ್ಕೆ ಪರಿಗಣಿಸದೆ ಮೀಸಲಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿವೆ ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರವು ತನ್ನ ಅಧೀನ ಸಂಸ್ಥೆಗಳಲ್ಲಿ ಶೈಕ್ಷಣಿಕ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಕೆನೆಪದರ ಮೀಸಲಾತಿಗೆ ಸಂಬಂಧಿಸಿದಂತೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡುವಾಗ ಸರ್ಕಾರಿ ನೌಕರರ ವೇತನ ಆದಾಯವನ್ನು ಪರಿಗಣಿಸಿ, ಕುಟುಂಬದ ಒಟ್ಟು ವಾರ್ಷಿಕ ಆದಾಯಕ್ಕೆ ಸೇರಿಸಿ ಸಂಪತ್ತಿನ ಲೆಕ್ಕಚಾರ ಮಾಡಿ ರೂ. 8 ಲಕ್ಷಕ್ಕೂ ಹೆಚ್ಚಿನ ಆದಾಯವಿರುವವರಿಗೆ ಮೀಸಲಾತಿ ನಮೂನೆ-ಎಫ್ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಅಧೀನ ಇಲಾಖೆಗಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ರಾಜ್ಯದ ಕೆಲವು ತಾಲ್ಲೂಕು ಕಚೇರಿಯಿಂದ ನಮೂನೆ-ಎಫ್ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ಸರ್ಕಾರದ ಅಧೀನ ಇಲಾಖೆಗಳಿಗೆ ಉದ್ಯೋಗ ಮತ್ತು ಶಿಕ್ಷಣಕ್ಕೆ ನೌಕರರು ಒಟ್ಟು ವಾರ್ಷಿಕ ಆದಾಯದ ಲೆಕ್ಕಾಚಾರದಲ್ಲಿ ಮಾತ್ರ ವೇತನದ ಆದಾಯವನ್ನು ಪರಿಗಣಿಸುತ್ತಿರುವುದರಿಂದ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಅಧಿಕಾರಿ, ನೌಕರರ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರು, ಕುಟುಂಬ ವರ್ಗದವರು ಮತ್ತು ಮಕ್ಕಳು ಶೈಕ್ಷಣಿಕ ಹಾಗೂ ಉದ್ಯೋಗ ಮತ್ತಿತರ ಮೀಸಲಾತಿ ಅವಕಾಶಗಳಿಂದ ವಂಚಿತರಾಗುತ್ತಿರುವುದಾಗಿ ರಾಜ್ಯ ಸರ್ಕಾರಿ ನೌಕರರು ಮತ್ತು ವಿವಿಧ ವೃಂದ ಸಂಘಗಳಿಂದ ರಾಜ್ಯ ಸಂಘಕ್ಕೆ ಮನವಿಗಳು ಸಲ್ಲಿಕೆಯಾಗಿರುತ್ತವೆ.

24,300 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ; ಕ್ರೀಡಾಪಟುಗಳಿಗೆ ಶೇ.2 ಮೀಸಲಾತಿ

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಇತರೆ ರಾಜ್ಯಗಳಲ್ಲಿರುವಂತೆ ಕರ್ನಾಟಕ ರಾಜ್ಯದಲ್ಲೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ Creamy Layer/ Non Creamy Layer ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನಮೂನೆ-ಎಫ್‌ನಲ್ಲಿ ವಿತರಿಸುವಾಗ ಅಧಿಕಾರಿ/ನೌಕರರ ವೇತನ ಆದಾಯವನ್ನು (Salary Income) ಪರಿಗಣಿಸದೇ, ವ್ಯಾಪಾರ (Business) ಕೈಗಾರಿಕೆ (Industries) ಇತರೆ ಮೂಲಗಳಿಂದ ಬರುವ ಆದಾಯದ ಸಂಪತ್ತು ಪರೀಕ್ಷೆ (Wealth test) ಮಾಡಿಸಿ ಒಟ್ಟು ವಾರ್ಷಿಕ ಆದಾಯದ ಲೆಕ್ಕಾಚಾರವನ್ನು ಮಾಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ವಿತರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿ ಆದೇಶ ಹೊರಡಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌ .ಷಡಾಕ್ಷರಿ ಕೋರಿದ್ದಾರೆ.