MLC Ivan D'Souza: ರಾಜ್ಯಪಾಲರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ; ಎಂಎಲ್‌ಸಿ ಸ್ಥಾನದಿಂದ ಐವನ್ ಡಿಸೋಜಾರನ್ನು ವಜಾಗೊಳಿಸಲು ಬಿಜೆಪಿ-ಜೆಡಿಎಸ್ ಮನವಿ
MLC Ivan D'Souza: ರಾಜ್ಯಪಾಲರ ಕುರಿತು ಸಾರ್ವಜನಿಕವಾಗಿ ಸಂವಿಧಾನ ವಿರೋಧಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಅವರನ್ನು ವಜಾಗೊಳಿಸಬೇಕೆಂದು ವಿಧಾನ ಪರಿಷತ್ತಿನ ಸಭಾಪತಿಗೆ ಬಿಜೆಪಿ-ಜೆಡಿಎಸ್ ಸದಸ್ಯರು ಮನವಿ ಸಲ್ಲಿಸಿದ್ದಾರೆ.


ಬೆಂಗಳೂರು: ದೇಶದ ಸಮಗ್ರತೆಗೆ ಧಕ್ಕೆಯಾಗುವ ರೀತಿಯಲ್ಲಿ, ರಾಜ್ಯದ ಘನತವೆತ್ತ ರಾಜ್ಯಪಾಲರ ಕುರಿತು ಸಾರ್ವಜನಿಕವಾಗಿ ಸಂವಿಧಾನ ವಿರೋಧಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ (MLC Ivan D'Souza) ಅವರನ್ನು ವಜಾಗೊಳಿಸಬೇಕೆಂದು ವಿಧಾನ ಪರಿಷತ್ತಿನ ಸಭಾಪತಿಗೆ ಬಿಜೆಪಿ-ಜೆಡಿಎಸ್ ಸದಸ್ಯರು ಮನವಿ ಸಲ್ಲಿಸಿದ್ದಾರೆ.
ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ದಿನಾಂಕ 2024ರ ಸೆ.19ರಂದು ಮಂಗಳೂರಿನ ಮಹಾನಗರ ಪಾಲಿಕೆ ಮುಂಭಾಗದಲ್ಲಿ ನಡೆದಿದ್ದ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿರುವುದನ್ನು ಖಂಡಿಸಿದ್ದರು. ಈ ವೇಳೆ ರಾಷ್ಟ್ರಪತಿಗಳು ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು, ಇಲ್ಲವಾದಲ್ಲಿ "ಬಾಂಗ್ಲಾ ಅಧ್ಯಕ್ಷರು ರಾತ್ರೋರಾತ್ರಿ ಓಡಿಹೋದಂತೆ ಇಲ್ಲಿಯೂ ಕೂಡ ರಾಜ್ಯಪಾಲರು ರಾತ್ರೋರಾತ್ರಿ ಓಡಿಹೋಗುವಂತೆ ಮಾಡುತ್ತೇವೆ" ಎಂದು ಉದ್ರೇಕಕಾರಿ ಭಾಷಣ ಮಾಡಿದ್ದರು.
ಈ ಹೇಳಿಕೆಯ ಪ್ರೇರಣೆಯಿಂದ, ಸಾವಿರಾರು ಬೆಂಬಲಿಗರು ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ನಾಶಗೊಳಿಸಿ, ಕಲ್ಲುತೂರಾಟ ನಡೆಸಿ, ಬಸ್‌ಗಳನ್ನು ಹಾನಿಗೊಳಪಡಿಸಿ, ದಾಂಧಲೆ ನಡೆಸಿ ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿದ್ದರು. ವಿಶೇಷವಾಗಿ, ದಲಿತ ಪಂಗಡಕ್ಕೆ ಸೇರಿದ ಘನತವೆತ್ತ ರಾಜ್ಯಪಾಲರ ವಿರುದ್ಧ ನಿಂದನಾತ್ಮಕ, ಸಂವಿಧಾನ ವಿರೋಧಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ.
ಈ ರೀತಿಯ ಹೇಳಿಕೆಗಳು ರಾಷ್ಟ್ರದ ಏಕತೆ, ಭದ್ರತೆ ಹಾಗೂ ಸಾಮಾಜಿಕ ಸೌಹಾರ್ದತೆಗೆ ಗಂಭೀರ ಅಪಾಯಕಾರಿಯಾಗಿದ್ದು, ಸಮಾಜಘಾತುಕ ಶಕ್ತಿಗಳಿಗೆ ಪ್ರೋತ್ಸಾಹ ನೀಡುವಂತಿವೆ. ಆದ್ದರಿಂದ, ದೇಶದ ಏಕತೆ ಮತ್ತು ಸಂವಿಧಾನದ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಐವನ್ ಡಿಸೋಜಾ ಅವರನ್ನು ವಿಧಾನ ಪರಿಷತ್ ಸದಸ್ಯತ್ವದಿಂದ ವಜಾ ಮಾಡುವಂತೆ ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು.
ಜನಪ್ರತಿನಿಧಿಗಳಾಗಿ ರಾಜ್ಯಪಾಲರ ಗೌರವವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಸಂವಿಧಾನದ ಪ್ರಕಾರ ರಾಜ್ಯಪಾಲರು ರಾಜ್ಯದ ಶ್ರೇಷ್ಠ ಸ್ಥಾನದಲ್ಲಿದ್ದು, ಅವರ ವಿರುದ್ಧ ಅವಮಾನಕರ ಹೇಳಿಕೆಗಳು ಪ್ರಜಾಪ್ರಭುತ್ವದ ಆತ್ಮಕ್ಕೆ ಧಕ್ಕೆಯಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪರಿಷತ್ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಮಾನ್ಯ ಸಭಾಪತಿಗಳು ತಕ್ಷಣ ಕ್ರಮ ಜರುಗಿಸಬೇಕೆಂದು ಒತ್ತಾಯ ಮಾಡಲಾಯಿತು.
ಈ ಸುದ್ದಿಯನ್ನೂ ಓದಿ | KN Rajanna: ಕೆ.ಎನ್. ರಾಜಣ್ಣ ರಾಜೀನಾಮೆ ಅಂಗೀಕಾರ; ಸಂಪುಟದಿಂದ ಕೈಬಿಡಲು ರಾಜಭವನದಿಂದ ಪತ್ರ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಎನ್. ರವಿಕುಮಾರ್, ಎಂಎಲ್‌ಸಿಗಳಾದ ಟಿ.ಎ.ಶರವಣ, ಎಸ್.ವಿ. ಸಂಕನೂರ್, ಹನುಮಂತ ನಿರಾಣಿ, ಎಂ.ಜಿ. ಮುಳೆ, ಪ್ರತಾಪ್ ಸಿಂಹ ನಾಯಕ್ , ಗೋವಿಂದರಾಜು , ಶಾಂತರಾಮ್ ಸಿದ್ದಿ, ಡಿ.ಎಸ್ ಅರುಣ್, ಕೆ.ಎಸ್ ನವೀನ, ಡಾ. ಸಾಬಣ್ಣ ತಳವಾರ್, ಡಾ.ಧನಂಜಯ್ ಸರ್ಜಿ ಉಪಸ್ಥಿತರಿದ್ದರು.