ವಿಧಾನಸಭೆ/ವಿಧಾನಪರಿಷತ್: ಆಡಳಿತ-ಪ್ರತಿಪಕ್ಷ ನಡುವೆ ಪ್ರತಿಷ್ಠೆಯ ವೇದಿಕೆಯಾಗಿದ್ದ ವಿಧಾನ ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಲೀಂ ಅಹಮದ್ ಅವರು ಬಿಜೆಪಿ, ಜೆಡಿಎಸ್ ಬೆಂಬಲಿತ ಪಿ.ಎಚ್.ಪೂಜಾರ ವಿರುದ್ಧ ಎಂಟು ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಶುಕ್ರವಾರ ಬೆಳಗ್ಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಸಭಾಧ್ಯಕ್ಷ, ಸಭಾಪತಿ ಗಳ ಚುನಾವಣೆ ನಡೆಯಿತು.
ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಶಾಸಕರ ಗೈರಿನ ನಡುವೆಯೇ ಜಿ.ಎಸ್. ಪಾಟೀಲ್ ಅವರು ಸಭಾಧ್ಯಕ್ಷರಾಗಿ ಆಯ್ಕೆಯಾದರು. ಇನ್ನು ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್‌ನ ಹಿರಿಯ ಸದಸ್ಯ ಸಲೀಂ ಅಹ್ಮದ್ ಅವರು ಬಿಜೆಪಿಯ ಪಿ.ಎಚ್. ಪೂಜಾರ್ ಅವ ರನ್ನು ಎಂಟು ಮತಗಳ ಅಂತರದಿಂದ ಸೋಲಿಸಿ ಮೇಲ್ಮ ನೆಯ ನೂತನ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಸಲೀಂ ಅಹ್ಮದ್ ಪರ 38 ಮತಗಳು ಚಲಾವಣೆಯಾದರೆ, ಪೂಜಾರ್ ಪರ 30 ಮತಗಳು ಬಂದವು.
ಬಹುಮತ ಪಡೆದ ಸಲೀಂ ಅಹ್ಮದ್ ಅವರನ್ನು ನೂತನ ಸಭಾಪತಿಯಾಗಿ ಪೀಠದಲ್ಲಿದ್ದ ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಅಧಿಕೃತವಾಗಿ ಘೋಷಿಸಿದರು. ಚುನಾವಣಾ ಪ್ರಕ್ರಿಯೆ ಆರಂಭಿಸಿದ ಪುಟ್ಟಣ್ಣ ಅವರ ಸೂಚನೆಯಂತೆ, ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್, ಎನ್. ಎಸ್. ಬೋಸರಾಜು, ಮಂಜುನಾಥ್ ಭಂಡಾರಿ, ಐವಾನ್ ಡಿಸೋಜಾ, ನಾಗರಾಜ ಯಾದವ್, ಸೇರಿದಂತೆ ಇತರ ಸದಸ್ಯರೂ ಸಲೀಂ ಅಹ್ಮದ್ ಅವರ ಪರವಾಗಿ ಪ್ರಸ್ತಾವನೆಗಳನ್ನು ಮಂಡಿಸಿದರು.
ಇದನ್ನೂ ಓದಿ: Pro-tem Speaker: ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ
ಇನ್ನೊಂದೆಡೆ, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿ ಅಭ್ಯರ್ಥಿ ಪಿ.ಎಚ್. ಪೂಜಾರ್ ಅವರನ್ನು ಸಭಾಪತಿಯಾಗಿ ಆಯ್ಕೆ ಮಾಡುವಂತೆ ಪ್ರಸ್ತಾವ ಮಂಡಿಸಿ ದರು. ಜೆಡಿಎಸ್ ಸದಸ್ಯ ಎಸ್.ಎಲ. ಭೋಜೇಗೌಡ ಅವರು ಅನುಮೋದಿಸಿದರು. ಸಭಾಪತಿ ಸ್ಥಾನಕ್ಕೆ ಒಟ್ಟು ಏಳು ಪ್ರಸ್ತಾವಗಳು ಬಂದಿದ್ದು, ಈ ಪೈಕಿ ಐದು ಸಲೀಂ ಅಹ್ಮದ್ ಅವರ ಪರವಾಗಿದ್ದವು. ಬಳಿಕ ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಪ್ರಸ್ತಾವವನ್ನು ಮತಕ್ಕೆ ಹಾಕಿದರು.
ಧ್ವನಿಮತದ ಮೂಲಕ ನಡೆದ ಮತದಾನದಲ್ಲಿ ಸಲೀಂ ಅಹ್ಮದ್ ಪರ 38 ಹಾಗೂ ವಿರುದ್ಧವಾಗಿ 30 ಮತಗಳು ಚಲಾವಣೆಯಾದವು. ಸಲೀಂ ಅಹ್ಮದ್ ಅವರು ಸಭಾಪತಿ ಯಾಗಿ ಆಯ್ಕೆ ಯಾದ ಬಳಿಕ ಸಭಾನಾಯಕ ಡಾ.ಯತೀಂದ್ರ ಸಿದ್ದ ರಾಮಯ್ಯ, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್‌ನ ಬಿ.ಕೆ.ಹರಿ ಪ್ರಸಾದ್, ಜೆಡಿಎಸ್‌ನ ಎಸ್.ಎಲ್.ಭೋಜೇಗೌಡ ಸೇರಿ ದಂತೆ ಹಲವು ಸದಸ್ಯರು ನೂತನ ಸಭಾಪತಿಯನ್ನು ಪೀಠಕ್ಕೆ ಕರೆತಂದು ಅಭಿನಂದಿಸಿದರು. ಪೀಠದ ಮೇಲೆ ಆಸೀನರಾದ ಸಲೀಂ ಅಹ್ಮದ್ ಅವರಿಗೆ ಸದಸ್ಯರು ಶುಭಾಶಯ ಕೋರಿದರು.
ಜಿ.ಎಸ್. ಪಾಟೀಲ್ ಆಯ್ಕೆ: ಬಿಜೆಪಿ, ಜೆಡಿಎಸ್ ಸದಸ್ಯರ ಗೈರುಹಾಜರಿ ನಡುವೆಯೇ ಕಾಂಗ್ರೆಸ್‌ನ ಗುರುಪಾದಪ್ಪ ಸಂಗನಗೌಡ ಪಾಟೀಲ್ ವಿಧಾನಸಭೆಯ ನೂತನ ಸಭಾಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆಯಾದರು.
ವಿಧಾನಸಭೆಯಲ್ಲಿ ಹಂಗಾಮಿ ಸಭಾಧ್ಯಕ್ಷರಾಗಿದ್ದ ಟಿ.ಬಿ.ಜಯಚಂದ್ರ ಅವರು ನೂತನ ಸಭಾಧ್ಯಕ್ಷರ ಚುನಾವಣೆಯ ಪ್ರಸ್ತಾವನೆ ಕೈಗೆತ್ತಿಕೊಂಡರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುಪಾದಪ್ಪ ಸಂಗನಗೌಡ ಪಾಟೀಲ್ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಪ್ರಸ್ತಾಪಿಸಿದರು. ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪ್ರಸ್ತಾವನೆ ಯನ್ನು ಅನುಮೋದಿಸಿದರು. ಆಡಳಿತ ಪಕ್ಷದ ಎಲ್ಲ ಸದಸ್ಯರು ಧ್ವನಿಮತದ ಮೂಲಕ ಹೌದು ಎಂದು ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಸ್ತಾವನೆ ಅಂಗೀಕಾರಗೊಂಡಿತು. ಜಿ.ಎಸ್. ಪಾಟೀಲ್ ಅವರು ಸರ್ವಾನುಮತದಿಂದ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಹಂಗಾಮಿ ಸಭಾಧ್ಯಕ್ಷ ಟಿ.ಬಿ.ಜಯಚಂದ್ರ ಘೋಷಿಸಿದರು.
ಸಭಾಧ್ಯಕ್ಷರ ಚುನಾವಣೆಯನ್ನು ಬಹಿಷ್ಕರಿಸಿ ಸದನದಿಂದ ಹೊರಗುಳಿದಿದ್ದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಸದನಕ್ಕೆ ಪ್ರವೇಶಿಸಿದರು. ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಮಾಜಿ ಸಭಾಧ್ಯಕ್ಷ ಮತ್ತು ಸಚಿವ ಯು.ಟಿ.ಖಾದರ್ ಅವರು ಜಿ.ಎಸ್ .ಪಾಟೀಲ್ ಅವರನ್ನು ಅಭಿನಂದಿಸಿ, ಕೈಹಿಡಿದು ಸಭಾಧ್ಯಕ್ಷರ ಪೀಠದತ್ತ ಕರೆತಂದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಕೂಡ ಅವರೊಂದಿಗೆ ಸೇರಿಕೊಂಡರು. ಟಿ.ಬಿ. ಜಯಚಂದ್ರ ಅವರು ಪೀಠ ತೆರವು ಮಾಡಿದ ಬಳಿಕ ಜಿಎಸ್ ಪಾಟೀಲ್ ಅವರು ಸಭಾಧ್ಯ ಕ್ಷರ ಆಸನದಲ್ಲಿ ಕುಳಿತರು. ಅವರನ್ನು ಅಭಿನಂದಿಸಿದ ಆರ್. ಅಶೋಕ, ಸಭಾಧ್ಯಕ್ಷರು ವಿರೋಧ ಪಕ್ಷಗಳತ್ತಲೂ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಉಪಸಭಾಧ್ಯಕ್ಷ ಸ್ಥಾನಕ್ಕೆ ಮಂಕಾಳ ಆಯ್ಕೆ ಖಚಿತ
ವಿಧಾನಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಸಲು ವಿಧಾನಸಭಾ ಸಚಿವಾಲಯ ಲಘು ಪ್ರಕಟಣೆ ಹೊರಡಿಸಿದೆ. ಆ.17ರ ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸು ವಂತೆ ವಿಧಾನಸಭಾ ಕಾರ್ಯದರ್ಶಿ ವಿಶಾ ಲಾಕ್ಷಿ ಪ್ರಕಟಣೆ ಹೊರಡಿಸಿದ್ದಾರೆ. ಕಾಂಗ್ರೆಸ್ ನಿಂದ ಮಂಕಾಳ ವೈದ್ಯ ಅವರು ಸ್ಪರ್ಧಿಸಲಿದ್ದು, ಪ್ರತಿಪಕ್ಷಗಳು ಅಭ್ಯರ್ಥಿಯನ್ನು ನಿಲ್ಲಿಸುವುದು ಬಹುತೇಕ ಅನುಮಾನ ಎನ್ನಲಾಗಿದೆ. ಆದ್ದರಿಂದ ವಿಧಾನಸಭಾ ಉಪಸಭಾಧ್ಯಕ್ಷ ಆಯ್ಕೆಯೂ ಅವಿರೋಧ ವಾಗಿ ನಡೆಯಲಿದೆ ಎನ್ನಲಾಗಿದೆ.
![]()
ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಲವಂತವಾಗಿ ನನ್ನಿಂದ ರಾಜೀನಾಮೆ ಪಡೆದುಕೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸರಕಾರ ಅಥವಾ ಹೊರಟ್ಟಿ ಅವರೇ ಸ್ಪಷ್ಟನೆ ನೀಡಬೇಕು. ಸದನಕ್ಕೆ ನನ್ನ ಅಭಿಪ್ರಾಯ ತಿಳಿಸಿ ರಾಜೀನಾಮೆ ಕೊಡುವುದಾಗಿ ಹೊರಟ್ಟಿ ಅವರು ಹೇಳಿದ್ದರು. ಆದರೆ ಒತ್ತಾಯಪೂರ್ವಕವಾಗಿ ಸಹಿ ಮಾಡಿಸಿ ರಾಜೀನಾಮೆ ಕೊಡಿಸಿದರು ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಇದಕ್ಕೆ ಸರಕಾರದ ಸ್ಪಷ್ಟನೆ ಏನು?
-ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಪ್ರತಿಪಕ್ಷ ನಾಯಕ
![]()
ಸಭಾಪತಿ ಸ್ಥಾನದಿಂದ ಕೆಳಗಿಳಿದ ಸಂದರ್ಭದಲ್ಲಿ ನೋವಾಗಿತ್ತು. ಆದರೆ ಇದೀಗ ನಮ್ಮ ಜಿಲ್ಲೆಯ ವರೇ ಸಭಾಪತಿ ಸ್ಥಾನ ಅಲಂಕರಿಸಿರುವುದು ಸಂತಸ ಹಾಗೂ ಹೆಮ್ಮೆಯ ವಿಚಾರವಾಗಿದೆ. ಇತ್ತೀಚಿನ ದಿನಗಳಲ್ಲಿ ವಿಧಾನ ಪರಿಷತ್ತಿನ ಚರ್ಚೆಗಳ ಗುಣಮಟ್ಟ ಕಡಿಮೆಯಾಗುತ್ತಿರುವುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಹಿಂದೆ ಹಿರಿಯ ಸದಸ್ಯರು ಜನರ ಸಮಸ್ಯೆಗಳ ಕುರಿತು ಗಂಭೀರವಾಗಿ ಚರ್ಚಿಸುತ್ತಿದ್ದರು. ಅಂತಹ ಉತ್ತಮ ಸಂಸದೀಯ ಪರಂಪರೆಯನ್ನು ಮತ್ತೆ ಮುಂದುವರಿಸಬೇಕಿದೆ.
- ಬಸವರಾಜ ಹೊರಟ್ಟಿ, ವಿಧಾನಪರಿಷತ್ ಮಾಜಿ ಸಭಾಪತಿ