ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೊಮ್ಮೆ ಭಾರಿ ಭದ್ರತಾ ಲೋಪ ಬೆಳಕಿಗೆ ಬಂದಿದೆ. ಜೈಲು ಅಧಿಕಾರಿಗಳು ನಡೆಸಿದ (Parappana Agrahara Jail) ಜಂಟಿ ಅನಿರೀಕ್ಷಿತ ತಪಾಸಣೆಯ ವೇಳೆ ಕೈದಿಗಳ ಬಳಿ ಇದ್ದ ಒಂದು ಮೊಬೈಲ್ ಹಾಗೂ ಮೂರು ಸಿಮ್ ಕಾರ್ಡ್‌ಗಳು ಹಾಗೂ ರೂ. 8,500 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಜೈಲು ಅಧೀಕ್ಷಕ ಬಿ.ಎಂ. ಕೋಟ್ರೇಶ್ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ.
ಟವರ್-2, ಸಿ-ಬ್ಯಾರಕ್‌ನ ಕೊಠಡಿ ಸಂಖ್ಯೆ 4ರಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಲತೇಶ ಎಂಬ ಕೈದಿಯ ಬ್ಯಾಗ್‌ನಲ್ಲಿ ಕೀಪ್ಯಾಡ್ ಮೊಬೈಲ್ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಕೊಠಡಿ ಸಂಖ್ಯೆ 5ರಲ್ಲಿದ್ದ ಮೊಹಮ್ಮದ್ ನವಾಜ್ ಎಂಬ ಕೈದಿಯ ಟೋಪಿಯ ಒಳಗೆ ರಹಸ್ಯವಾಗಿ ಬಾಂಚಿಡಲಾಗಿದ್ದ ಮೂರು ಸಿಮ್ ಕಾರ್ಡ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಡುಗೆ ಮನೆಯ ಶೌಚಾಲಯದ ಕೊಠಡಿಯಲ್ಲಿ ಇಡಲಾಗಿದ್ದ ಬ್ಯಾಗ್ ಒಂದರಲ್ಲಿ ಒಟ್ಟು 8,500 ರೂಪಾಯಿ ನಗದು ಹಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅತ್ಯಾಚಾರ ಪ್ರಕರಣದ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್ ಮತ್ತು ಪೆನ್ ಡ್ರೈವ್ ಪತ್ತೆಯಾಗಿತ್ತು. ಆಗಸ್ಟ್ 11, 2026 ರಂದು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಭದ್ರತಾ ವಿಭಾಗದ ಬ್ಯಾರಕ್‌ಗಳ ಮೇಲೆ 4 ರಿಂದ 5 ಗಂಟೆಗಳ ಕಾಲ ದಿಢೀರ್ ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಬಟ್ಟೆಗಳ ನಡುವೆ ಅಡಗಿಸಿಡಲಾಗಿದ್ದ ನೀಲಿ ಬಣ್ಣದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್, ಸಿಮ್ ಕಾರ್ಡ್, ಚಾರ್ಜರ್ ಹಾಗೂ ನೋಟ್‌ಬುಕ್ ಪತ್ತೆಯಾಗಿತ್ತು.
ಜಪ್ತಿ ಮಾಡಲಾದ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿತ್ತು. ಎಫ್‌ಎಸ್‌ಎಲ್ ವರದಿಯ ಪ್ರಕಾರ, ಆ ಫೋನ್‌ನಲ್ಲಿ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ನೆಟ್‌ಫ್ಲಿಕ್ಸ್ ಮತ್ತು ಪ್ರೈಮ್ ವಿಡಿಯೋ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಅದರಲ್ಲಿ 80 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದವು. ಪೊಲೀಸರ ತನಿಖೆಯ ಪ್ರಕಾರ, ಜೈಲಿನ ವಾರ್ಡರ್ (ರಕ್ಷಕ) ಒಬ್ಬರ ಮೂಲಕ ಮೊಬೈಲ್ ಫೋನ್ ಅನ್ನು ಒಳಗಡೆ ಸಾಗಿಸಲಾಗಿತ್ತು ಮತ್ತು ವಿಚಾರಣಾಧೀನ ಕೈದಿಯೊಬ್ಬನ ಮೂಲಕ ಸಿಮ್ ಕಾರ್ಡ್ ಅನ್ನು ಜೈಲಿನೊಳಗೆ ತರಲಾಗಿತ್ತು. ಒಂದು ಮೊಬೈಲ್ ತಲುಪಿಸಲು ಲಕ್ಷಾಂತರ ರೂಪಾಯಿ ಹಣದ ಆಮಿಷ ಒಡ್ಡಲಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.