ಬೆಂಗಳೂರು, ನ. 3: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಗಡಾಯಿಸಿರುವ ಕಸದ ಸಮಸ್ಯೆ ನಿವಾರಣೆಗೆ ಮುಂದಾಗಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಕಠಿಣ ಕ್ರಮ ಕೈಗೊಂಡಿದೆ. ಕಸ ಸುರಿಯುವ ಹಬ್ಬ (Kasa Suriyuva Habba) ಎನ್ನುವ ವಿಶಿಷ್ಟ ಯೋಜನೆಯನ್ನು ಜಾರಿಗೊಳಿಸಿದೆ. ಅದರ ಮೂಲಕ ಎಲ್ಲೆಂದರಲ್ಲಿ ಕಸ ಎಸೆಯುವವರ ಮನೆಗಳ ಮುಂದೆ ಕಸ ಸುರಿದು, ದಂಡ ವಿಧಿಸುತ್ತಿದೆ (Bengaluru News). ಇದೀಗ ಈ ಅಭಿಯಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ದೃಶ್ಯವನ್ನು ಚಿತ್ರೀಕರಿಸಿ ಕಳುಹಿಸಿ ಕೊಟ್ಟವರಿಗೆ 250 ರೂ. ನೀಡುವುದಾಗಿ ಘೋಷಿಸಿದೆ.
ಇಂತಹ ದೃಶ್ಯವನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವ್ಯಾಟ್ಸ್‌ಆ್ಯಪ್ ಸಂಖ್ಯೆ-9448197197ಕ್ಕೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Bengaluru Jala Mandali: ಶುದ್ಧ ನೀರಿನ ಘಟಕದಲ್ಲಿ ಏಕರೂಪ ದರ ಜಾರಿಗೆ ಜಲ ಮಂಡಳಿ ಚಿಂತನೆ
ಕಸ ಸಮಸ್ಯೆ ನಿವಾರಣೆಗೆ ಕ್ರಮ
ʼʼಮುಂದಿನ 30ರಿಂದ 40 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ನಗರದ ಅಗತ್ಯಗಳಿಗೆ ತಕ್ಕಂತೆ ಮೂಲ ಸೌಕರ್ಯವನ್ನು ಪುನರ್‌ರಚಿಸಲು ಸಿದ್ಧತೆ ನಡೆಸಲಾಗಿದೆ. ಕಸ ಸಮಸ್ಯೆಯನ್ನು ಪರಿಹರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಂದಾಗಿದೆʼʼ ಎಂದು ಬಿಎಸ್‌ಡಬ್ಲ್ಯುಎಂಎಲ್ ವ್ಯವಸ್ಥಾಪಕ ನಿರ್ದೇಶಕ ಕರೀ ಗೌಡ ಹೇಳಿದ್ದಾರೆ.
"ಸರ್ಕಾರದ ಒಪ್ಪಿಗೆ ಮೇರೆಗೆ ನಗರ ಮತ್ತು ಅದರ ಸೌಂದರ್ಯವನ್ನು ಕೆಡಿಸುವ ಕಿಡಿಗೇಡಿಗಳ ಮನೆ ಬಾಗಿಲಿಗೆ ತ್ಯಾಜ್ಯವನ್ನು ಸುರಿಯುವುದು ಸೇರಿದಂತೆ ಬಿಎಸ್‌ಡಬ್ಲ್ಯುಎಂಎಲ್ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಅಭಿಯಾನವನ್ನು ಬಲಪಡಿಸಲು ನಾವು ವಿಡಿಯೊ ಕಳುಹಿಸುವಂತೆ ಸೂಚಿಸಿದ್ದೇವೆ. ವಿಡಿಯೊವನ್ನು ಚಿತ್ರೀಕರಿಸುವವರು ಸ್ಥಳ ಮತ್ತು ಸಾಧ್ಯವಾದರೆ ಉಲ್ಲಂಘಿಸುವವರ ವಿವರಗಳನ್ನು ಹಂಚಿಕೊಳ್ಳಬೇಕು" ಎಂದು ಅವರು ವಿವರಿಸಿದ್ದಾರೆ.
"ಜನರು ಇನ್ನೂ ರಸ್ತೆ ಬದಿ, ಎಲ್ಲೆಂದರಲ್ಲಿ ಕಸವನ್ನು ಎಸೆಯುವ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ಮನೆ ಬಾಗಿಲಿಗೆ ಕಸ ಸಂಗ್ರಹಿಸುವ ವಾಹನ ಕಳುಹಿಸಿದರೂ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆʼʼ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ವಿಡಿಯೊ ಕಳುಹಿಸುವವರಿಗೆ ಯುಪಿಐ ಮೂಲಕ ಹಣ ಕಳುಹಿಸಲಾಗುತ್ತದೆ. ಅವರ ವಿವರಗಳನ್ನು ರಹಸ್ಯವಾಗಿಡಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕ್ರಮದಿಂದಾಗಿ ಜಿಬಿಎ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತ ಎನ್ನುವ ಪ್ರಶ್ನೆಗೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ʼʼಇದರಿಂದಾಗಿ ಜಿಬಿಎ ನಷ್ಟ ಅನುಭವಿಸುವುದಿಲ್ಲ. ಕಸ ಸುರಿದವರಿಂದ ಸಂಗ್ರಹಿಸಲಾದ ದಂಡದಿಂದ ಬಹುಮಾನವನ್ನು ನೀಡಲಾಗುತ್ತದೆʼʼ ಎಂದು ಅವರು ವಿವರಿಸಿದ್ದಾರೆ. "ಬೇಜವಾಬ್ದಾರಿಯಿಂದ ಎಸೆಯುವ ತ್ಯಾಜ್ಯದ ಪ್ರಮಾಣವನ್ನು ಅವಲಂಬಿಸಿ 1,000 ರೂ.ಯಿಂದ 10,000 ರೂ. ಸಂಗ್ರಹಿಸುತ್ತೇವೆ. ಹೀಗಾಗಿ 250 ರೂ. ಬಹುಮಾನವಾಗಿ ನೀಡುವುದು ಹೊರೆ ಎನಿಸುವುದಿಲ್ಲ. ಜತೆಗೆ ನಗರವನ್ನು ಸ್ವಚ್ಛವಾಗಿಡಲು ಜನರನ್ನು ಪ್ರೋತ್ಸಾಹಿಸುತ್ತದೆ" ಎಂದು ಹೇಳಿದ್ದಾರೆ.
ಭಾನುವಾರ (ನವೆಂಬರ್ 2) ಬೆಳಗ್ಗೆ ಕರೀ ಗೌಡ ಸರ್ಜಾಪುರದಿಂದ ಹೊರ ವರ್ತುಲ ರಸ್ತೆಯ ಮಾರತ್ತಹಳ್ಳಿ ಮತ್ತು ಕೆ.ಆರ್. ಪುರಂವರೆಗೆ ಪ್ರಯಾಣ ಬೆಳೆಸಿ ವಿವಿಧ ಸ್ಥಳಗಳಲ್ಲಿ ಸುರಿಯಲಾಗಿದ್ದ ಕಸವನ್ನು ಗಮನಿಸಿದರು. ಈ ಕಸವನ್ನು ತೆರವುಗೊಳಿಸಿ ವರದಿ ಸಲ್ಲಿಸಲು 15 ದಿನಗಳ ಗಡುವನ್ನು ನಿಗದಿಪಡಿಸಿದ್ದಾರೆ.