ಬೆಂಗಳೂರು: ನಂದಿನಿ (ಬಮುಲ್) ಉತ್ಪನ್ನಗಳ ರಾಯಭಾರಿಯಾಗಿ ಹಿರಿಯ ನಟಿ ಸುಧಾ ರಾಣಿ ಅವರು ನೇಮಕವಾಗಿದ್ದಾರೆ. ಈ ಬಗ್ಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮುಲ್) ಅಧ್ಯಕ್ಷ ಡಿ.ಕೆ.ಸುರೇಶ್ ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನಂದಿನಿ (Nandini BAMUL) ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಸುಧಾ ರಾಣಿ ಅವರು ಆಯ್ಕೆಯಾಗಿದ್ದು, ಬಮುಲ್ ಕುಟುಂಬಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
ಡಿ.ಕೆ. ಸುರೇಶ್ ಭೇಟಿಯಾದ ನಟಿ ಸುಧಾರಾಣಿ
ಕನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿ ಅವರು ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಸುರೇಶ್ ಅವರನ್ನು ಔಪಚಾರಿಕವಾಗಿ ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರನ್ನು ಗೌರವಿಸಿ ಸತ್ಕರಿಸಲಾಯಿತು.
ಈ ವೇಳೆ ಮಾತನಾಡಿದ ಡಿ.ಕೆ.ಸುರೇಶ್ ಅವರು, ರೈತರ ಏಳಿಗೆಗೆ ನಿರ್ಮಿತವಾದ ಮತ್ತು ಲಕ್ಷಾಂತರ ಗ್ರಾಹಕರ ನಂಬಿಕೆಗೆ ಪಾತ್ರವಾದ ಬಮುಲ್ ನಂದಿನಿಯ ಬ್ರಾಂಡ್ ಅಂಬಾಸಿಡರ್ ಆಗಿ ಶ್ರೀಮತಿ ಸುಧಾ ರಾಣಿ ಅವರನ್ನು ಸ್ವಾಗತಿಸುತ್ತಿರುವುದು ಸಂತೋಷದ ವಿಷಯ. ಡಾ. ರಾಜ್‌ಕುಮಾರ್, ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರು ಮುಂದುವರಿಸಿದ ಪರಂಪರೆಯ ಹಾದಿಯಲ್ಲಿ, ಈ ಸಹಕಾರವು ಕರ್ನಾಟಕದ ಜನರೊಂದಿಗೆ ನಂದಿನಿಯ ಭಾವನಾತ್ಮಕ ಬಾಂಧವ್ಯವನ್ನು ಹಾಗೂ ರೈತರ ಮೇಲಿನ ನಮ್ಮ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ದೇಸಿ ಹಸುಗಳ ಹಾಲಿನಿಂದ ತಯಾರಿಸಲಾದ ದೇಸಿ ಹಸುವಿನ ತುಪ್ಪ, ದೇಸಿ ಹಸುವಿನ ಹಾಲು ಸೇರಿದಂತೆ ಹೊಸ ಉತ್ಪನ್ನಗಳ ಮೂಲಕ ನಂದಿನಿ ಮತ್ತಷ್ಟು ಬಲಗೊಳ್ಳಲಿದೆ. ದೇಸಿ ಹಸುಗಳ ಸಂರಕ್ಷಣೆ, ರೈತರಿಗೆ ನ್ಯಾಯಸಮ್ಮತ ಬೆಲೆ ಮತ್ತು ಗ್ರಾಹಕರಿಗೆ ಶುದ್ಧ, ಗುಣಮಟ್ಟದ ಉತ್ಪನ್ನಗಳು — ಈ ದಿಕ್ಕಿನಲ್ಲಿ ಒಂದು ಹೊಸ ಕ್ರಾಂತಿ ಆರಂಭವಾಗಿದೆ.
ಕೆಎಂಎಫ್‌ನಿಂದ ಗುಡ್ ನ್ಯೂಸ್; 10ರೂ. ಸಿಗುತ್ತೆ, ನಂದಿನಿ ಹಾಲು, ಮೊಸರು
ಬಮುಲ್ ನಂದಿನಿಯ ಮುಂದಿನ ಹಂತದ ಬೆಳವಣಿಗೆಗಾಗಿ ಹೊಸ ಉತ್ಪನ್ನಗಳು, ಮತ್ತು ಮಾರ್ಕೆಟಿಂಗ್‌ನ್ನು ಮುನ್ನಡೆಸುತ್ತಿರುವ ಸಂಪೂರ್ಣ ಬಮುಲ್ ತಂಡದ ಶ್ರಮ ಶ್ಲಾಘನೀಯ. ನಂಬಿಕೆ, ಪರಂಪರೆ ಮತ್ತು ರೈತ ಕಲ್ಯಾಣದ ಮೇಲೆ ನಿರ್ಮಿತವಾದ ಈ ಸಹಕಾರ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸೋಣ ಎಂದು ತಿಳಿಸಿದ್ದಾರೆ.
ಬಮುಲ್ ಜತೆ ಒಡಗೂಡುವ ಅವಕಾಶ ಅತ್ಯಂತ ಗೌರವದ ವಿಷಯ: ನಟಿ ಸುಧಾರಾಣಿ
ನಂದಿನಿ ಬಮುಲ್ ಉತ್ಪನ್ನಗಳ ರಾಯಭಾರಿಯಾರಿಯಾಗಿ ತಮ್ಮನ್ನು ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟಕ್ಕೆ ನಟಿ ಸುಧಾರಾಣಿ ಧನ್ಯವಾದ ತಿಳಿಸಿದ್ದಾರೆ. ತಲೆಮಾರುಗಳಿಂದ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಪ್ರತೀಕ ನಂದಿನಿ. ರೈತರ ಸಹಕಾರಿ ಸಂಸ್ಥೆಯಾದ ಬಮುಲ್ ನಂದಿನಿ (BAMUL Nandini) ಜತೆ ಒಡಗೂಡುವ ಅವಕಾಶ ನನಗೆ ಅತ್ಯಂತ ಗೌರವದ ವಿಷಯ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಡಾ. ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕೇವಲ ಅನುಕರಣೆಯಲ್ಲ ಧನ್ಯತೆ ಮತ್ತು ಹೆಮ್ಮೆಯ ಜವಾಬ್ದಾರಿ.
ಬಮುಲ್ ಅಧ್ಯಕ್ಷರಾದ ಡಿ. ಕೆ. ಸುರೇಶ್ ಅವರೊಂದಿಗೆ ಹಾಗೂ ಬಮುಲ್‌ನ ಹೊಸ ಉತ್ಪನ್ನಗಳು, ತಂತ್ರಯೋಜನೆ ಮತ್ತು ಮಾರುಕಟ್ಟೆ ಕಾರ್ಯತಂತ್ರವನ್ನು ಮುನ್ನಡೆಸುತ್ತಿರುವ ಮನೋಹರ್ ಐಯ್ಯರ್ ಅವರೊಂದಿಗೆ ಆತ್ಮೀಯ ಹಾಗೂ ಅರ್ಥಪೂರ್ಣ ಸಂವಾದ ನಡೆಯಿತು. ಬರುವ ಹೊಸ ಉತ್ಪನ್ನಗಳ ಬಿಡುಗಡೆಯ ಹಿಂದೆ ಇರುವ ದೃಷ್ಟಿಕೋನ ನಿಜಕ್ಕೂ ಪ್ರೇರಣಾದಾಯಕವಾಗಿತ್ತು.
ನಮ್ಮ ದೇಸಿ ಹಸುಗಳನ್ನು ಸಂರಕ್ಷಿಸುವುದು, ರೈತರಿಗೆ ನ್ಯಾಯಸಮ್ಮತ ಬೆಲೆ ಖಚಿತಪಡಿಸುವುದು ಹಾಗೂ ಗ್ರಾಹಕರಿಗೆ ಗುಣಮಟ್ಟದ, ವಿಶ್ವಾಸಾರ್ಹ ಉತ್ಪನ್ನಗಳನ್ನು ತಲುಪಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಈ ಹೊಸ ಅಧ್ಯಾಯದಲ್ಲಿ ದೇಸಿ ಹಸುಗಳಿಂದ ತಯಾರಿಸಿದ A2 ತುಪ್ಪ, A2 ಹಾಲು ಸೇರಿದಂತೆ ಹಲವು ಉತ್ಪನ್ನಗಳು ಸೇರಿದೆ.
Chikkaballapur News: ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ರೆಡ್ಡಿ ಆಯ್ಕೆ
ಸಂಪ್ರದಾಯ, ಶುದ್ಧತೆ ಮತ್ತು ರೈತರ ಕಲ್ಯಾಣದ ಮೌಲ್ಯಗಳು ಅಡಕವಾಗಿರುವ, ರೈತರನ್ನು ಮನ್ನೆಲೆಗೆ ತರುವ, ನಮ್ಮ ಬೇರುಗಳನ್ನು ಗೌರವಿಸುವ ಮತ್ತು ಕರ್ನಾಟಕದ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಸಾಗಿಸುವ ಈ ಚಳವಳಿಗೆ ಬೆಂಬಲ ನೀಡಲು ನನಗೆ ಅಪಾರ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.