ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿದ್ದರಾಮಯ್ಯ ವಿರುದ್ಧದ ರಹಸ್ಯ ಕಾರ್ಯಾಚರಣೆ ಪ್ರಕರಣ: ಸುದ್ದಿವಾಹಿನಿ ಮುಖ್ಯಸ್ಥ ಬಿಡುಗಡೆ

Siddaramaiah Sting Operation Case: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ರಹಸ್ಯ ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿ ಮುಖ್ಯಸ್ಥರೊಬ್ಬರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನ್ಯಾಯಾಲಯ ಶುಕ್ರವಾರ (ಅ. 23) ಕೈಗೆತ್ತಿಕೊಳ್ಳಲಿದೆ. ಮೈಸೂರಿನ ಹೋಟೆಲ್ ಒಂದರಿಂದ ಬುಧವಾರ (ಅ. 21) ರಾತ್ರಿ ಚಾನೆಲ್ ಮುಖ್ಯಸ್ಥರನ್ನು ವಶಕ್ಕೆ ಪಡೆಯಲಾಗಿದೆ.

ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು, ಅ.23: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ರಹಸ್ಯ ಕಾರ್ಯಾಚರಣೆ (sting operation) ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿ ಮುಖ್ಯಸ್ಥರೊಬ್ಬರನ್ನು ವಶಕ್ಕೆ ಪಡೆಯಲಾಗಿತ್ತು, ಇದೀಗ ವಿಚಾರಣೆ ನಡೆಸಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಮೈಸೂರಿನ ಹೋಟೆಲ್ ಒಂದರಿಂದ ಬುಧವಾರ ರಾತ್ರಿ ಚಾನೆಲ್ ಮುಖ್ಯಸ್ಥರನ್ನು ವಶಕ್ಕೆ ಪಡೆದು ಗುರುವಾರ (ಅ.22) ಮುಂಜಾನೆ ಬೆಂಗಳೂರಿಗೆ ವಿಚಾರಣೆಗಾಗಿ ಕರೆತರಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕು ದಿನಗಳಿಂದ ಹೋಟೆಲ್‌ನಲ್ಲಿ ತಂಗಿದ್ದ ಅವರನ್ನು ವಿಚಾರಣೆ ನಡೆಸಿ ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರು ನ್ಯಾಯಾಲಯ ಶುಕ್ರವಾರಕ್ಕೆ (ಅ.23) ಮುಂದೂಡಿತು. ಈ ಕಾರ್ಯಾಚರಣೆ ಮತ್ತು ವಿಡಿಯೊ ಪ್ರಸಾರದ ಕುರಿತು ಸಿದ್ದರಾಮಯ್ಯ ದೂರು ದಾಖಲಿಸಿದ ನಂತರ ಕರ್ನಾಟಕದ ಸೈಬರ್ ಅಪರಾಧ ವಿಭಾಗವು ಕಳೆದ ಒಂದು ವಾರದಿಂದ ಪ್ರಕರಣದ ತನಿಖೆ ನಡೆಸುತ್ತಿದೆ.

ಮೇ ತಿಂಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲು, ಅವರ ಉತ್ತರಾಧಿಕಾರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ರಹಸ್ಯ ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ನಡೆಸಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಪ್ರಕಟಿಸದಂತೆ ಹಾಗೂ ಅದಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಪ್ರಸಾರ ಮಾಡದಂತೆ ಮಾಧ್ಯಮ ಸಂಸ್ಥೆಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ಸಿದ್ದರಾಮಯ್ಯ ಈ ತಿಂಗಳು ನ್ಯಾಯಾಲಯದ ಮೊರೆ ಹೋಗಿದ್ದರು.

ಸಿದ್ದರಾಮಯ್ಯ ವರ್ಚಸ್ಸು ಹಾಳು ಮಾಡಲು ಸ್ಟಿಂಗ್‌ ಆಪರೇಷನ್‌; ಮಾಜಿ ಮುಖ್ಯಮಂತ್ರಿ ಪರ ಎಚ್‌.ಡಿ. ಕುಮಾರಸ್ವಾಮಿ ಬ್ಯಾಟಿಂಗ್‌

ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಹಲವು ತಿಂಗಳುಗಳಿಂದ ಮುಂದುವರಿದಿದ್ದ ಅನಿಶ್ಚಿತತೆ ಅಂತ್ಯಗೊಂಡಿತ್ತು. ಇದರಿಂದ ಆಗಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ದಾರಿ ಸುಗಮವಾಯಿತು.

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳನ್ನು ಹರಿಬಿಡುತ್ತಿರುವುದನ್ನು ಸಿದ್ದರಾಮಯ್ಯ ಅವರು ತಮ್ಮ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ನಡೆಸಲಾಗುತ್ತಿರುವ ಸುಳ್ಳು ಪ್ರಚಾರ ಎಂದು ಹೇಳಿದ್ದಾರೆ. ರಹಸ್ಯ ಕಾರ್ಯಾಚರಣೆಗಳು ನಡೆಯುತ್ತಿರುವ ಬಗ್ಗೆ ತಮಗೆ ಅರಿವಿದೆ ಎಂದು ಒಪ್ಪಿಕೊಂಡಿರುವ ಸಿದ್ದರಾಮಯ್ಯ, ಇದರ ಹಿಂದೆ ಇರುವವರನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.

ಮಾಧ್ಯಮ ಮುಖ್ಯಸ್ಥರನ್ನು ಬಂಧಿಸಬೇಕು ಮತ್ತು ವಿಶೇಷ ತನಿಖಾ ತಂಡದ ತನಿಖೆಗೆ ಒತ್ತಾಯಿಸಿದ ಕುಮಾರಸ್ವಾಮಿ, ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಿದರು. ಮಾಧ್ಯಮ ಮುಖ್ಯಸ್ಥರನ್ನು ರಹಸ್ಯ ಕಾರ್ಯಾಚರಣೆಯ ಹಿಂದಿನ ಪ್ರಮುಖ ವ್ಯಕ್ತಿ ಎಂದು ಅವರು ಆರೋಪಿಸಿದರು. ಅಲ್ಲದೆ, ಈ ಕಾರ್ಯಾಚರಣೆಯು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡ ಪಿತೂರಿಯ ಭಾಗವಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇನ್ನು ತಮ್ಮ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿದ ಶಿವಕುಮಾರ್, ತಾವು ಮುಖ್ಯಮಂತ್ರಿಯಾದ ನಂತರ ರಹಸ್ಯ ಕಾರ್ಯಾಚರಣೆಗಳ ಮೂಲಕ ತಮ್ಮನ್ನು ಸಿಲುಕಿಸಲು ಪ್ರಯತ್ನಗಳು ನಡೆದಿವೆ ಎಂದು ಹೇಳಿದರು. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದವರನ್ನು ಗುರುತಿಸುವ ಫೋಟೋಗಳು ಮತ್ತು ದಾಖಲೆಗಳು ತಮ್ಮ ಬಳಿ ಇವೆ ಎಂದು ಅವರು ಹೇಳಿದರು.