ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೆಟ್ರೋ ನಗರಗಳನ್ನು ಹಿಂದಿಕ್ಕಿ ಬೆಳೆಯುತ್ತಿವೆ ಸಣ್ಣ ನಗರಗಳು: 'ಡನ್ & ಬ್ರಾಡ್‌ಸ್ಟ್ರೀಟ್' ವರದಿಯಲ್ಲಿ ಅಚ್ಚರಿಯ ಮಾಹಿತಿ!

ಭಾರತದ ಆರ್ಥಿಕ ಬೆಳವಣಿಗೆ ಎಂದರೆ ಕೇವಲ ಮುಂಬೈ, ದೆಹಲಿ, ಬೆಂಗಳೂರಿ ನಂತಹ ದೊಡ್ಡ ಮೆಟ್ರೋ ನಗರಗಳು ಮಾತ್ರ ಅಂತ ನೀವು ಅಂದುಕೊಂಡಿದ್ದರೆ, ಆ ಲೆಕ್ಕಾಚಾರ ಬದಲಿಸಿಕೊಳ್ಳುವ ಸಮಯ ಬಂದಿದೆ. ದೇಶದ ಸಣ್ಣ ಮತ್ತು ಉದಯೋನ್ಮುಖ ನಗರಗಳೂ ಇದೀಗ ಆರ್ಥಿಕತೆಯಲ್ಲಿ ದೊಡ್ಡ ಕೊಡುಗೆ ನೀಡುತ್ತಿವೆ ಅಂತ ವರದಿಯೊಂದು ಹೇಳಿದೆ.

ಬೆಂಗಳೂರು: ಭಾರತದ ಆರ್ಥಿಕ ಬೆಳವಣಿಗೆ ಎಂದರೆ ಕೇವಲ ಮುಂಬೈ, ದೆಹಲಿ, ಬೆಂಗಳೂರಿ ನಂತಹ ದೊಡ್ಡ ಮೆಟ್ರೋ ನಗರಗಳು ಮಾತ್ರ ಅಂತ ನೀವು ಅಂದುಕೊಂಡಿದ್ದರೆ, ಆ ಲೆಕ್ಕಾಚಾರ ಬದಲಿಸಿಕೊಳ್ಳುವ ಸಮಯ ಬಂದಿದೆ. ದೇಶದ ಸಣ್ಣ ಮತ್ತು ಉದಯೋನ್ಮುಖ ನಗರಗಳೂ ಇದೀಗ ಆರ್ಥಿಕತೆಯಲ್ಲಿ ದೊಡ್ಡ ಕೊಡುಗೆ ನೀಡುತ್ತಿವೆ ಅಂತ ವರದಿಯೊಂದು ಹೇಳಿದೆ.

ಜಾಗತಿಕ ಡೇಟಾ ಮತ್ತು ವಿಶ್ಲೇಷಣಾ ಸಂಸ್ಥೆಯಾದ 'ಡನ್ ಅಂಡ್ ಬ್ರಾಡ್‌ಸ್ಟ್ರೀಟ್' ತನ್ನ 2026ರ ಏಪ್ರಿಲ್-ಜೂನ್ ತ್ರೈಮಾಸಿಕದ 'ಸಿಟಿ ವಿಟಾಲಿಟಿ ಇಂಡೆಕ್ಸ್ CVIʼ ವರದಿಯನ್ನು ಪ್ರಕಟಿಸಿದೆ. ಉಪಗ್ರಹದ ದತ್ತಾಂಶಗಳು ಹಾಗೂ ಆರ್ಥಿಕ ಸೂಚಕಗಳನ್ನು ಬಳಸಿ ದೇಶದ 800 ಕ್ಕೂ ಹೆಚ್ಚು ಜಿಲ್ಲೆಗಳ ಆರ್ಥಿಕ ಚಟುವಟಿಕೆಗಳನ್ನು ಅಳೆದು ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಪುಣೆಗೆ ಅಗ್ರಸ್ಥಾನ, ಭರ್ಜರಿ ವೇಗದಲ್ಲಿ ಮುನ್ನುಗ್ಗುತ್ತಿದೆ ಕೋಲ್ಕತ್ತಾ!

ಭಾರತದ ಅತ್ಯಂತ ಪ್ರಭಾವಶಾಲಿ ಮೆಟ್ರೋಪಾಲಿಟನ್ ನಗರವಾಗಿ ಪುಣೆ ತನ್ನ ಮೊದಲ ಸ್ಥಾನ ವನ್ನು ಕಾಯ್ದುಕೊಂಡಿದೆ. ಐಟಿ ಸೇವೆಗಳು, ಆಟೋಮೊಬೈಲ್ ಉತ್ಪಾದನೆ, ಶಿಕ್ಷಣ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಪುಣೆ ಮುಂದಿದೆ. ಈ ಪಟ್ಟಿಯಲ್ಲಿ ಅಹಮದಾಬಾದ್ ಎರಡನೇ ಸ್ಥಾನ ದಲ್ಲಿದೆ. ಮೆಟ್ರೋ ನಗರಗಳ ಪೈಕಿ ಕೋಲ್ಕತ್ತಾ ಅತಿ ವೇಗದ ಬೆಳವಣಿಗೆಯನ್ನು ದಾಖಲಿಸಿದ್ದು, ಹೂಡಿಕೆಗೆ ಅತ್ಯುತ್ತಮ ತಾಣವಾಗಿ ಹೊರಹೊಮ್ಮುತ್ತಿದೆ.

ಇದನ್ನೂ ಓದಿ: Bangalore News: ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ

ಉದಯೋನ್ಮುಖ ನಗರಗಳದ್ದೇ ದರ್ಬಾರ್

ಕೇವಲ ದೊಡ್ಡ ನಗರಗಳು ಮಾತ್ರವಲ್ಲದೆ, ಜಿಲ್ಲಾಮಟ್ಟದ ಸಣ್ಣ ನಗರಗಳಲ್ಲೂ ಉದ್ಯಮ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ವೇಗವಾಗಿ ನಡೆಯುತ್ತಿದೆ ಎಂದು ವರದಿ ಹೇಳಿದೆ.

ಪಶ್ಚಿಮ ಬಂಗಾಳದ ಸೌತ್ 24 ಪರಗಣ ಉದಯೋನ್ಮುಖ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ನಾರ್ತ್ 24 ಪರಗಣ ಮತ್ತು ಮಹಾರಾಷ್ಟ್ರದ ಥಾಣೆ ನಂತರದ ಸ್ಥಾನಗಳಲ್ಲಿವೆ.

ಜೈಪುರ, ನಾಸಿಕ್, ಸೂರತ್, ಮುರ್ಷಿದಾಬಾದ್ ಮತ್ತು ರಂಗಾರೆಡ್ಡಿ ಜಿಲ್ಲೆಗಳು ಪ್ರಾದೇಶಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ವರದಿಯು ತಿಳಿಸಿದೆ.

ಕಳೆದ ಒಂದು ದಶಕದಲ್ಲಿ (2012 ರಿಂದ) ಆನಂದ್, ಅಯೋಧ್ಯೆ, ರಾಂಪುರ, ಔರಂಗಾಬಾದ್ ಸೇರಿದಂತೆ ಹಲವು ಜಿಲ್ಲೆಗಳು ಸತತವಾಗಿ ಅತ್ಯುತ್ತಮ ಆರ್ಥಿಕ ಪ್ರಗತಿ ಸಾಧಿಸಿವೆ ಎಂದೂ ಸಿಟಿ ವಿಟಾಲಿಟಿ ಇಂಡೆಕ್ಸ್ ವರದಿಯು ವಿವರ ನೀಡಿದೆ.

ತಜ್ಞರು ಏನಂತಾರೆ?

ಈ ಬಗ್ಗೆ ಮಾತನಾಡಿರುವ ಡನ್ & ಬ್ರಾಡ್‌ಸ್ಟ್ರೀಟ್ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಡಾ. ಅರುಣ್ ಸಿಂಗ್, "ಭಾರತದ ಆರ್ಥಿಕತೆಯ ದಿಕ್ಕು ಬದಲಾಗುತ್ತಿರುವುದನ್ನು ಈ ವರದಿ ಸ್ಪಷ್ಟವಾಗಿ ತೋರಿಸುತ್ತಿದೆ. ಪುಣೆಯಂತಹ ದೊಡ್ಡ ನಗರಗಳ ಜೊತೆಗೆ, ಸೌತ್ 24 ಪರಗಣದಂತಹ ಸಣ್ಣ ಜಿಲ್ಲೆಗಳು ಕೂಡ ಉದ್ಯೋಗ ಮತ್ತು ಹೂಡಿಕೆಯಲ್ಲಿ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿವೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಮೂಲಸೌಕರ್ಯ, ಉದ್ಯೋಗಾವಕಾಶ ಮತ್ತು ಹೂಡಿಕೆಯ ಹರಿವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ" ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ಭಾರತದ ನಗರೀಕರಣವು ಈಗ ಕೇವಲ ಮೆಟ್ರೋ ಸಿಟಿಗಳಿಗೆ ಸೀಮಿತವಾಗಿರದೆ, ದೇಶದ ಮೂಲೆ ಮೂಲೆಗೂ ವಿಸ್ತರಿಸುತ್ತಿರುವುದು ಉದ್ಯಮಿಗಳಿಗೆ ಹಾಗೂ ಹೂಡಿಕೆದಾರರಿಗೆ ಹೊಸ ಭರವಸೆ ಮೂಡಿಸಿದೆ.