ಕರ್ನಾಟಕ ಮೂಲದ ಅಮೆರಿಕದ ಖ್ಯಾತ ಉದ್ಯಮಿ ಸಿ ವಿ ಶಶಿಕುಮಾರ್ ಅವರು ಅತ್ಯಂತ ಕಠಿಣ ಯಾನ ಕೈಗೊಂಡು ದಕ್ಷಿಣ ಧ್ರುವ ತಲುಪಲು ಹೊರಟಿದ್ದಾರೆ. ಉತ್ತರ ಧ್ರುವ, ದಕ್ಷಿಣ ಧ್ರುವ, ಬಾಹ್ಯಾಕಾಶ ಕೈಗೊಂಡ ಅಪರೂಪದ ದಾಖಲೆಯ ಗುರಿ ಹೊಂದಿದ್ದಾರೆ.
ಬೆಂಗಳೂರು: ಕರ್ನಾಟಕ ಮೂಲದ ಅಮೆರಿಕದ ಖ್ಯಾತ ಉದ್ಯಮಿ ಸಿ ವಿ ಶಶಿಕುಮಾರ್ ಅವರು ಅತ್ಯಂತ ಕಠಿಣ ಯಾನ ಕೈಗೊಂಡು ದಕ್ಷಿಣ ಧ್ರುವ ತಲುಪಲು ಹೊರಟಿದ್ದಾರೆ. ಈಗಾಗಲೇ ಇವರು ಅಂಟಾರ್ಟಿಕ ಮತ್ತು ಉತ್ತರ ಧ್ರುವಕ್ಕೆ ಭೇಟಿ ನೀಡಿದ್ದು, ಸದ್ಯದಲ್ಲೇ ಬಾಹ್ಯಾಕಾಶ ಯಾನವನ್ನೂ ಕೈಗೊಳ್ಳಲಿದ್ದಾರೆ. ಈ ಮೂಲಕ ಉತ್ತರ ಧ್ರುವ, ದಕ್ಷಿಣ ಧ್ರುವ ಮತ್ತು ಬಾಹ್ಯಾಕಾಶ ತಲುಪಿದ ಮೊದಲ ಭಾರತೀಯ ಎಂಬ ಅಪರೂಪದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಈ ಮೂರೂ ಕಡೆ ವಿಶ್ವದ ಇಬ್ಬರಷ್ಟೇ ಈವರೆಗೆ ಭೇಟಿ ನೀಡಿದ್ದಾರೆ.
ದಕ್ಷಿಣ ಧ್ರುವ ಯಾನದಲ್ಲಿ ಪತ್ನಿ ಸುಷ್ಮಾ ಅವರೂ ಶಶಿಕುಮಾರ್ ಅವರಿಗೆ ಸಾಥ್ ನೀಡಿದ್ದಾರೆ.
''ಪತ್ನಿ ಸುಷ್ಮಾ ಅವರೊಂದಿಗೆ ಅಮೆರಿಕದಿಂದ ಬೊಗೊಟಾ, ಸ್ಯಾಂಟಿಯಾಗೊ, ಪುಂಟ್ ಅರೆನಾಸ್ ನಿಂದ ಯುನಿಯನ್ ಗ್ಲೇಸಿಯರ್ ತಲುಪುತ್ತೇವೆ. ಅಲ್ಲಿ ಆರು ದಿನಗಳ ನಿಲುಗಡೆ ಬಳಿಕ ಪೂರಕ ವಾತಾವರಣ ನೋಡಿಕೊಂಡು ದಕ್ಷಿಣ ಧ್ರುವದತ್ತ ಹೊರಡುತ್ತೇವೆ. 60 ಪ್ಲಸ್ ವಯಸ್ಸು ಮತ್ತು ಡಯಾಬಿಟಿಕ್ ಸವಾಲಿನ ನಡುವೆಯೂ ನಾವು ಈ ಸಾಹಸ ಕೈಗೊಂಡಿದ್ದೇವೆ. ನಮ್ಮ ಈ ಸಾಹಸಕ್ಕೆ ಕನ್ನಡಿಗರ ಶುಭ ಹಾರೈಕೆ ಬಯಸುತ್ತೇವೆ'' ಎಂದು ಸಿ ವಿ ಶಶಿಕುಮಾರ್ ಅವರು ಈ ಪ್ರವಾಸಕ್ಕೆ ಹೊರಡುವ ಕೆಲವೇ ಕ್ಷಣಗಳ ಮೊದಲು 'ವಿಶ್ವವಾಣಿ'ಯೊಂದಿಗೆ ಮಾತನಾಡುತ್ತ ತಿಳಿಸಿದರು.
ಇದನ್ನೂ ಓದಿ: Guinness Record: ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್! ಗಿನ್ನಿಸ್ ದಾಖಲೆ ಬರೆದ ಯುವಕ
ಈಗಾಗಲೇ 52 ದೇಶಗಳಿಗೆ ಭೇಟಿ ನೀಡಿರುವ ಸಾಹಸಿ ಪ್ರವಾಸಿ ಶಶಿಕುಮಾರ್ ಅವರು, 2010ರಲ್ಲಿ ಅಂಟಾರ್ಟಿಕಾಗೆ ಭೇಟಿ ನೀಡಿದ್ದರು. 2015ರಲ್ಲಿ ಉತ್ತರ ಧ್ರುವ ತಲುಪಿದ್ದರು. ದಕ್ಷಿಣ ಧ್ರುವ ತಲುಪುವುದು ಸುಲಭದ ಮಾತಲ್ಲ. ಉತ್ತರ ಧ್ರುವಕ್ಕಿಂತ ಇಲ್ಲಿಯ ವಾತಾವರಣ ಅತ್ಯಂತ ಕಠಿಣ. ಏಕೆಂದರೆ ಅಲ್ಲಿಯ ಸರಾಸರಿ ತಾಪಮಾನ ಮೈನಸ್ 49 ಡಿ. ಸೆಲ್ಸಿಯಸ್. ಅಲ್ಲಿಯ ಗರಿಷ್ಠ ತಾಪಮಾನವೇ ಮೈನಸ್ 12 ಡಿ. ಸೆಲ್ಸಿಯಸ್. ಕನಿಷ್ಠ ತಾಪಮಾನ ಮೈನಸ್ 82 ಡಿಗ್ರಿ ಸೆಲ್ಸಿಯಸ್!
ದಕ್ಷಿಣ ಧ್ರುವಕ್ಕೆ ಭೇಟಿ ನೀಡುವವರು ಏಳು ಲೇಯರ್‌ಗಳ ಉಡುಪು ಧರಿಸಬೇಕಾಗುತ್ತದೆ. ವಿಶೇಷ ವಿನ್ಯಾಸದ ಬೂಟುಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ವಿಶೇಷವಾಗಿ ವಿನ್ಯಾಸ ಮಾಡಲಾದ ಬಾಟಲಿಯಲ್ಲೇ ಮೂತ್ರ ವಿಸರ್ಜಿಸಬೇಕಾಗುತ್ತದೆ. ಈ ಯಾನದ ಸಂದರ್ಭದಲ್ಲಿ ಮೂರು ದಿನಕ್ಕೊಮ್ಮೆ ಮಾತ್ರ ಸ್ನಾನದ ಶಾಸ್ತ್ರ ಮಾಡಲು ಸಾಧ್ಯ!
ಕರ್ನಾಟಕ ಮೂಲದ ಸಿ ವಿ ಶಶಿಕುಮಾರ್ ಅವರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಎಂಇ ಮಾಡಿದ ಬಳಿಕ ಅಮೆರಿಕದಲ್ಲಿ ವೃತ್ತಿ ಜೀವನ ಆರಂಭಿಸಿದರು. ಅಲ್ಲಿ ತಮ್ಮದೇ ಸಿ ವಿ ಅಸೋಸಿಯೇಟ್ಸ್ ಸಂಸ್ಥೆ ಆರಂಭಿಸಿದರು. ಅಮೆರಿಕದಲ್ಲಿನ ಪ್ರಮುಖ ಸೇತುವೆ ವಿನ್ಯಾಸ, ಹೆದ್ದಾರಿ ವಿನ್ಯಾಸ, ಸಮೀಕ್ಷೆ, ನಿರ್ಮಾಣ ತಪಾಸಣೆ ಮತ್ತು ನಿರ್ವಹಣೆ ಸೇವೆಗಳನ್ನು ಇವರ ಸಂಸ್ಥೆ ಒದಗಿಸುತ್ತಿದೆ. ಅಮೆರಿಕದ ನ್ಯೂಯಾರ್ಕ್, ನ್ಯೂಜೆರ್ಸಿ, ಟೆಕ್ಸಾಸ್, ಪೆನ್ಸ್‌ಲ್ವೆನಿಯಾಗಳಲ್ಲಿ ಇವರ ಸಂಸ್ಥೆ ವೃತ್ತಿ ಪರವಾನಗಿ ಹೊಂದಿದೆ.
2006ರಲ್ಲಿ ಅಂದಿನ ಯುಎಸ್ ಸೆನೆಟರ್ ಹಿಲರಿ ಕ್ಲಿಂಟನ್ ಭಾಗವಹಿಸಿದ್ದ ಸಮಾರಂಭದಲ್ಲಿ ಶಶಿಕುಮಾರ್ ಅವರು 'ಅತ್ಯುತ್ತಮ ಏಷ್ಯನ್ ಅಮೆರಿಕನ್ ಇನ್ ಬ್ಯುಸಿನೆಸ್' ಪ್ರಶಸ್ತಿ ಪಡೆದಿದ್ದಾರೆ.
ಶಶಿಕುಮಾರ್ ಅವರು ತಾವು ಓದಿದ ಮೈಸೂರಿನ ಭಗಿನಿ ಸೇವಾ ಸಮಾಜ ವಿದ್ಯಾ ಸಂಸ್ಥೆಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಿಂದೂ ಸಂರಕ್ಷಣಾ ಸಮಿತಿ, ನ್ಯೂಯಾರ್ಕ್‌ನ ಕನ್ನಡ ಕೂಟ, ನಾವಿಕ, ಬೃಂದಾವನ ಕನ್ನಡ ಸಂಸ್ಥೆ ಇತ್ಯಾದಿ ಸಂಘಟನೆಗಳಿಗೆ ಬೆಂಬಲ ನೀಡಿದ್ದಾರೆ. ಅಮೆರಿಕದ ರಾಜಕೀಯ ಚಟುವಟಿಕೆಗಳಲ್ಲೂ ಶಶಿಕುಮಾರ್ ಅವರು ಸಕ್ರಿಯರಾಗಿದ್ದಾರೆ.
ಶಶಿಕುಮಾರ್ ಅವರ ಈ ಪ್ರವಾಸ ಸಾಹಸಕ್ಕೆ ಶುಭ ಹಾರೈಸೋಣ.