ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Internal Reservation: ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ; ಯಾವ ಸಮುದಾಯಗಳಿಗೆ ಎಷ್ಟು?

Cabinet Meeting: ಏಪ್ರಿಲ್ 16ರಂದು ನಡೆದಿದ್ದ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಗೊಂದಲವನ್ನು ಬಗೆಹರಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ವೈಜ್ಞಾನಿಕವಾಗಿ ದತ್ತಾಂಶ ವಿಶ್ಲೇಷಿಸಿ, ಅಂತಿಮವಾಗಿ ಒಳಮೀಸಲು ಹಂಚಿಕೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆ; ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ಸರ್ಕಾರ

ಸಿಎಂ ಸಿದ್ದರಾಮಯ್ಯ. -

Prabhakara R
Prabhakara R Apr 24, 2026 5:38 PM

ಬೆಂಗಳೂರು: ಒಳ ಮೀಸಲಾತಿ (Internal Reservation) ಗೊಂದಲಕ್ಕೆ ಕೊನೆಗೂ ರಾಜ್ಯ ಸರ್ಕಾರ ತೆರೆ ಎಳೆದಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗಿದೆ. ಶೇ.15 ಮೀಸಲಾತಿಯಲ್ಲೇ ವರ್ಗೀಕರಣಕ್ಕೆ ಸರ್ಕಾರ ತೀರ್ಮಾನ ಮಾಡಿದ್ದು, ಅದರಂತೆ ಎಡಗೈ ಸಮುದಾಯ ಶೇ. 5.25, ಬಲಗೈ ಸಮುದಾಯ ಶೇ. 5.25 ಹಾಗೂ ಇತರ ಪರಿಶಿಷ್ಟ ಜಾತಿಗಳಿಗೆ ಶೇ. 4.5 ಒಳ ಮೀಸಲಾತಿ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಒಳಮೀಸಲಾತಿಗೆ ಸಚಿವ ಸಂಪುಟ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ. ನ್ಯಾಯಾಲಯದ ಮುಂದಿನ ಆದೇಶದವರೆಗೆ ಇದೇ ಅಂತಿಮವಾಗಿರಲಿದೆ. 56,432 ಹುದ್ದೆ ಭರ್ತಿ ಮಾಡಲು ಘೋಷಿಸಿದ್ದೆವು. ಒಳ ಮೀಸಲಾತಿಯಂತೆ ನೇಮಕಾತಿ ನಡೆಸಲು ಹುದ್ದೆಗಳಿಗೆ ಮತ್ತೊಮ್ಮೆ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.

ಖಾಲಿ ಇರುವ ಹುದ್ದೆಗಳನ್ನ ಹಂತ ಹಂತವಾಗಿ ಭರ್ತಿ ಮಾಡುತ್ತೇವೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಈಗ ಒಳಮೀಸಲಾತಿ ನಿರ್ಧಾರ ಆಗಿದೆ, ಇನ್ನು ನೇಮಕಾತಿ ಶುರು ಮಾಡುತ್ತೇವೆ. ನಮ್ಮ ಪಕ್ಷದ ನಿಲುವು ಸಮಬಾಳು-ಸಮಪಾಲು. ಯಾರಿಗೂ ಅನ್ಯಾಯವಾಗಬಾರದು ಎಂಬುವುದು ನಮ್ಮ ನಿಲುವು. ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಎಲ್ಲ ದಲಿತ ಸಂಘಟನೆಗಳು ಒಪ್ಪಿಕೊಳ್ಳುತ್ತವೆ ಎಂಬ ವಿಶ್ವಾಸವಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲ ಸಮುದಾಯಗಳು ಭಾಗಿಯಾಗಿದ್ದು, ಒಳ ಮೀಸಲಾತಿ ಜಾರಿಗೆ ಸಮಾವೇಶದಲ್ಲಿ ಎಲ್ಲರೂ ಒಪ್ಪಿಕೊಂಡಿದ್ದೆವು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಭರವಸೆ ನೀಡಲಾಗಿತ್ತು. ಒಳ ಮೀಸಲಾತಿ ನೀಡಬಹುದು ಎಂದು ಸುಪ್ರೀಂಕೋರ್ಟ್​ನ 7 ನ್ಯಾಯಮೂರ್ತಿಗಳ ಪೀಠ ಆದೇಶ ನೀಡಿತ್ತು. ಆ ತೀರ್ಪು ಬಂದ ನಂತರ ನಾವು ನಿವೃತ್ತ ನ್ಯಾ.ನಾಗಮೋಹನ ದಾಸ್ ಸಮಿತಿ ರಚನೆ ಮಾಡಿದ್ದೆವು. ವರದಿಯನ್ನು ಸಂಪುಟದಲ್ಲಿಟ್ಟು ಸರ್ವಾನುಮತದಿಂದ ಅಂಗೀಕರಿಸಿದ್ದು, ಎ, ಬಿ, ಸಿ, ಡಿ ಎಂದು ವರ್ಗೀಕರಿಸಿ ಒಳಮೀಸಲಾತಿ ನಿಗದಿ ಮಾಡಿದ್ದೆವು.

Women Reservation Bill: ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ಸದಾ ಬೆಂಬಲಿಸುತ್ತದೆ: ಸಿಎಂ ಸಿದ್ದರಾಮಯ್ಯ

ಈ ಮೊದಲು ಒಳಮೀಸಲಾತಿ ಪ್ರಮಾಣ 6, 6, 5 ಎಂದು ವರ್ಗೀಕರಣ ಮಾಡಿದ್ದೆವು. ನಂತರ ರೋಸ್ಟರ್ ಬಿಂದುವಿನಲ್ಲಿ ಗೊಂದಲ ಉಂಟಾಯಿತು. ನಂತರ ಅಲೆಮಾರಿ ಸಮುದಾಯ ನ್ಯಾಯಾಲಯದ ಮೊರೆ ಹೋದರು. ಮೀಸಲಾತಿ ಪ್ರಮಾಣ ಶೇ.50 ಮೀರಬಾರದೆಂದು ಕೋರ್ಟ್ ಆದೇಶಿಸಿತ್ತು. ಇಂದ್ರ ಸಾಹ್ನಿ ಕೇಸ್​ನಲ್ಲಿ ಮೀಸಲಾತಿ ಪ್ರಮಾಣ ಶೇ. 50 ಆದೇಶವಿತ್ತು. ಎಸ್‌ಸಿ ಮೀಸಲಾತಿ ಪ್ರಮಾಣ ಶೇ.17 ಅನ್ವಯ ನಾವು ಪ್ರವರ್ಗ ಎಡಗೈ-6, ಬಲಗೈ-6, ಇತರೆ-5 ಎಂದು ವರ್ಗೀಕರಣ ಮಾಡಿದ್ದೆವು. ಆದರೆ ಕೋರ್ಟ್ ಮೀಸಲಾತಿ ಪ್ರಮಾಣ ಶೇ.50 ಮೀರುವಂತಿಲ್ಲ. ಈಗ ಒಳಮೀಸಲಾತಿ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.