ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಬರದ ಪರಿಸ್ಥಿತಿ ಹಾಗೂ ಇತರ ವಿಷಯಗಳ ಕುರಿತು ಚರ್ಚೆ ನಡೆಸಲು ಮೂರು ದಿನಗಳ ಕಾಲ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಸಲು ರಾಜ್ಯ ಸರಕಾರ (Special Join Assembly Session) ಮುಂದಾಗಿದೆ. ನಾಗೇಂದ್ರ ರಾಜೀನಾಮೆ ಗದ್ದಲದಿಂದ ಸದನದಲ್ಲಿ ಯಾವುದೇ ವಿಷಯ ಸರಿಯಾಗಿ ಚರ್ಚೆಯಾಗಿರಲಿಲ್ಲ. ಇದೇ ತಿಂಗಳ 21ರಿಂದ 24ರವರೆಗೆ ವಿಶೇಷ ಅಧಿವೇಶನ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಯಾವೆಲ್ಲ ವಿಷಯದ ಕುರಿತು ಚರ್ಚೆ
ಡಾ. ಕೆ. ಕಸ್ತೂರಿ ರಂಗನ್ ವರದಿಆಧರಿಸಿ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಲು ಕೇಂದ್ರ ಸರಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಕುರಿತು ರಾಜ್ಯ ಸರಕಾರದ ಆಕ್ಷೇಪ ಹಾಗೂ ನಿಲುವು ಸ್ಪಷ್ಟಪಡಿಸುವ ಮುನ್ನ, ಪಶ್ಚಿಮ ಘಟ್ಟ ಭಾಗದ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಬಹುದು ಎಂದು ಊಹಿಸಲಾಗಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯ ಎಲ್ಲ ಪಕ್ಷಗಳ ಜನಪ್ರತಿನಿಧಿಗಳನ್ನು ಈ ಅಧಿವೇಶನದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು, ಈ ಭಾಗದ ಜನರ ಬದುಕು, ಕೃಷಿ ಭೂಮಿ ಹಾಗೂ ಮೂಲಸೌಕರ್ಯಕ್ಕೆ ಧಕ್ಕೆಯಾಗದಂತೆ ರಾಜ್ಯದ ಆಕ್ಷೇಪಗಳನ್ನು ಒಟ್ಟುಗೂಡಿಸಿ, ಕೇಂದ್ರಕ್ಕೆ ಜಂಟಿ ಸದನದ ಮೂಲಕ ಒಮ್ಮತದ ಬಲವಾದ ವಿರೋಧ ನಿರ್ಣಯ ಕಳುಹಿಸಲು ಸರ್ಕಾರ ಯೋಜಿಸಿದೆ.
ಇನ್ನು ಮುಖ್ಯವಾಗಿ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯಲಿದ್ದು, ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮೇವಿನ ಕೊರತೆ ನೀಗಿಸಲು ಜಾರಿಗೆ ತರಬೇಕಾದ ತುರ್ತು ಕ್ರಮಗಳು ಹಾಗೂ ಕೇಂದ್ರದಿಂದ ಬರಬೇಕಾದ ಬರ ಪರಿಹಾರ ಅನುದಾನದ ಕುರಿತು ವಿಸ್ತೃತವಾದ ಸಂವಾದ ನಡೆಯಲಿದೆ. ಹಳ್ಳಿಗಳಲ್ಲಿ ತಲೆದೋರಿರುವ ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ತೀವ್ರ ಬಿಕ್ಕಟಿನ ಕುರಿತು ಸದನದಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ.
ಸರಕಾರಿ ಉದ್ಯಾನವನಗಳು ಹಾಗೂ ತೋಟಗಾರಿಕೆ ಫಾಮ್‌ರ್‍ಗಳ ಶೇ.5ರಷ್ಟು ಜಾಗವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಪರಭಾರೆ ಮಾಡಲು ತರಾತುರಿಯಲ್ಲಿ ತಿದ್ದುಪಡಿ ವಿಧೇಯಕವನ್ನು ಮಂಜೂರು ಮಾಡಿಸಿ ಕೊಂಡಿರುವುದಕ್ಕೆ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾಗಿದೆ.ಈ ನಿರ್ಧಾರದ ಬಗ್ಗೆ ಸದನದಲ್ಲಿ ಮತ್ತೊಮ್ಮೆ ವಿಸ್ತೃತ ಚರ್ಚೆ ನಡೆಸಿ ಸ್ಪಷ್ಟನೆ ನೀಡಲು ಸರಕಾರ ಉದ್ದೇಶಿಸಿದೆ.