ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

NEET UG 2026 Re-Exam: ಬೆಂಗಳೂರಿನಲ್ಲಿ ತಡವಾಗಿ ಬಂದ ಮೂವರಿಗೆ ನೀಟ್‌ ಪರೀಕ್ಷೆ ಮಿಸ್‌; ಕಣ್ಣೀರಿಟ್ಟ ವಿದ್ಯಾರ್ಥಿನಿಯರು, ಗೇಟ್‌ ಹಾರಿ ಹೋಗಲು ಯತ್ನ!

Bengaluru News: ಬೆಂಗಳೂರು ನಗರದ ಆರ್‌ಸಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ ತಡವಾಗಿ ಬಂದ ಮೂವರು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯುವ ಅವಕಾಶ ಕೈತಪ್ಪಿದೆ. ಇದರಿಂದ ವಿದ್ಯಾರ್ಥಿನಿಯರು ಕಣ್ಣೀರಿಟ್ಟಿದ್ದಾರೆ. ಗೇಟ್‌ ಹಾರಿ ಪರೀಕ್ಷಾ ಕೇಂದ್ರಗೊಳಗೆ ಹೋಗುವ ಪ್ರಯತ್ನವನ್ನು ವಿದ್ಯಾರ್ತಿನಿಯರು ಮಾಡಿದ್ದಾರೆ. ಆದರೆ, ಸಿಬ್ಬಂದಿ ಅವರನ್ನು ಒಳಗೆ ಬಿಟ್ಟಿಲ್ಲ.

ಬೆಂಗಳೂರಿನಲ್ಲಿ ಮೂವರಿಗೆ ನೀಟ್‌ ಪರೀಕ್ಷೆ ಮಿಸ್‌; ವಿದ್ಯಾರ್ಥಿನಿಯರ ಕಣ್ಣೀರು

ಬೆಂಗಳೂರಿನಲ್ಲಿ ನೀಟ್‌ ಪರೀಕ್ಷಾ ಕೇಂದ್ರದ ಬಳಿ ಕಣ್ಣೀರು ಹಾಕಿದ ವಿದ್ಯಾರ್ಥಿನಿಯರು. -

Prabhakara R
Prabhakara R Jun 21, 2026 5:54 PM

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ತಡವಾಗಿ ಬಂದ ಹಿನ್ನೆಲೆಯಲ್ಲಿ ಹಲವು ವಿದ್ಯಾರ್ಥಿನಿಯರಿಗೆ ನೀಟ್‌ ಮರು ಪರೀಕ್ಷೆ ಬರೆಯುವ ಅವಕಾಶ ಕೈತಪ್ಪಿರುವುದು ಕಂಡುಬಂದಿದೆ. ಕೊನೆ ಕ್ಷಣದಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರಿಂದ ಎಕ್ಸಾಂ ಬರೆಯಲು ಸಿಬ್ಬಂದಿ ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು, ಪೋಷಕರು ಆಕ್ರೊಶ ಹೊರಹಾಕಿದ್ದಾರೆ.

ನಗರದ ಆರ್‌ಸಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ ತಡವಾಗಿ ಬಂದ ಮೂವರು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯುವ ಅವಕಾಶ ಕೈತಪ್ಪಿದೆ. ಇದರಿಂದ ವಿದ್ಯಾರ್ಥಿನಿಯರು ಕಣ್ಣೀರಿಟ್ಟಿದ್ದಾರೆ.



ಗೇಟ್ ಹಾರಿ ಪರೀಕ್ಷಾ ಕೇಂದ್ರಕ್ಕೆ ನುಗ್ಗಲು ಯತ್ನ

ಪರೀಕ್ಷಾ ಕೇಂದ್ರಕ್ಕೆ ಕೊನೆಯ ಕ್ಷಣದಲ್ಲಿ ಬಂದ ಓರ್ವ ವಿದ್ಯಾರ್ಥಿನಿಗೆ, ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ. ಗೇಟ್ ಓಪನ್ ಮಾಡಲು ಸಿಬ್ಬಂದಿ ನಿರಾಕರಿಸಿದಾಗ ಕಂಗಾಲಾದ ವಿದ್ಯಾರ್ಥಿನಿ, ಗೇಟ್ ಹಾರಿ ಒಳಗೆ ಹೋಗಲು ಸಾಹಸ ನಡೆಸಿದಳು. ಆದರೆ, ಭದ್ರತಾ ಸಿಬ್ಬಂದಿ ವಿದ್ಯಾರ್ಥಿ ಒಳಗೆ ಹೋಗಲು ಒಪ್ಪಲಿಲ್ಲ.



ಹಳೆಯ ಹಾಲ್ ಟಿಕೆಟ್ ತಂದು ಎಡವಟ್ಟು

ಎರಡನೆಯ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರಕ್ಕೆ ಬರಲು ಸಕಾಲಕ್ಕೆ ಬಸ್ ಸಿಗದೆ ಅರ್ಧ ಗಂಟೆ ತಡವಾಗಿ ಬಂದಿದ್ದಳು. ಗೇಟ್ ಮುಂದೆ ನಿಂತು ಒಳಗೆ ಬಿಡುವಂತೆ ಎಷ್ಟೇ ಮನವಿ ಮಾಡಿದರೂ ಒಳಗೆ ಹೋಗಲು ಅನುಮತಿ ನೀಡದ ಹಿನ್ನೆಲೆ ಅನಿವಾರ್ಯವಾಗಿ ಮನೆಗೆ ವಾಪಸ್ ಹೋಗಿದ್ದಾಳೆ.

ಮೂರನೆಯ ವಿದ್ಯಾರ್ಥಿನಿ (ಮಾಗಡಿ ಮೂಲ) ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಳಾದರೂ, ಹೊಸ ಹಾಲ್ ಟಿಕೆಟ್ ತರುವ ಬದಲಾಗಿ ಕಳೆದ ಬಾರಿ ನಡೆದಿದ್ದ ಪರೀಕ್ಷೆಯ ಹಳೆಯ ಹಾಲ್ ಟಿಕೆಟ್ ತಂದು ಭಾರಿ ಯಡವಟ್ಟು ಮಾಡಿಕೊಂಡಿದ್ದಳು. ದಾಖಲೆ ಸರಿಯಿಲ್ಲದ ಕಾರಣ ಆಕೆಗೂ ಪ್ರವೇಶ ನಿರಾಕರಿಸಲಾಯಿತು.

ವಿದ್ಯಾರ್ಥಿನಿಯರು ಮತ್ತು ಪೋಷಕರು ಎಷ್ಟೇ ಕಣ್ಣೀರು ಹಾಕಿ ಗೋಗರೆದರೂ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಕಟ್ಟುನಿಟ್ಟಿನ ನಿಯಮಗಳ ಪ್ರಕಾರ ಪ್ರವೇಶ ಸಮಯ ಮೀರಿದ್ದರಿಂದ ಸಿಬ್ಬಂದಿ ಗೇಟ್ ತೆರೆಯಲಿಲ್ಲ. ಇದರ ಬೆನ್ನಲ್ಲೇ ಪರೀಕ್ಷೆ ಮಿಸ್ ಮಾಡಿಕೊಂಡ ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತಾ ಪೋಷಕರೊಂದಿಗೆ ವಾಪಸ್ ಮನೆಗೆ ಹೆಜ್ಜೆ ಇಟ್ಟಿದ್ದಾರೆ.

NEET Re-Exam: ನೀಟ್‌ ಅಭ್ಯರ್ಥಿಗಳಿಗೆ ತೊಂದರೆಯಾಗದಿರಲು 45 ನಿಮಿಷ ವಿಮಾನ ನಿಲ್ದಾಣದಲ್ಲೇ ಕಾದ ನರೇಂದ್ರ ಮೋದಿ; ಪ್ರಧಾನಿ ನಡೆಗೆ ವ್ಯಾಪಕ ಮೆಚ್ಚುಗೆ

ಹತ್ತೇ ನಿಮಿಷ ತಡವಾಗಿ ಬಂದ ವಿದ್ಯಾರ್ಥಿನಿ: ಪರೀಕ್ಷೆಗೆ ನಿರಾಕರಣೆ

ಇನ್ನು ಕೊಪ್ಪಳದಲ್ಲೂ ತಡವಾಗಿ ಬಂದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಲಾಗಿದೆ. ನಗರದ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಘಟನೆ ನಡೆದಿದೆ. ಫಾತಿಮಾ ಎಂಬ ವಿದ್ಯಾರ್ಥಿನಿ ಗಂಗಾವತಿಯಿಂದ ಪರೀಕ್ಷೆ ಬರೆಯಲು 1:50ಕ್ಕೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಳು. 2 ಗಂಟೆಯವರೆಗೆ ಅವಕಾಶವಿದ್ದರೂ ಪರೀಕ್ಷೆಗೆ ನಿರಾಕರಿಸಲಾಗಿದೆ. ಹೀಗಾಗಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಗೇಟ್ ಎದುರು ನಿಂತ ಬೇಡಿಕೊಂಡಿದ್ದಾಳೆ. ಆದರೆ ಸಿಬ್ಬಂದಿ ಮಾತ್ರ ಗೇಟ್ ತೆರೆದಿಲ್ಲ. ಈ ವೇಳೆ ವಿದ್ಯಾರ್ಥಿನಿ ಪೋಷಕರು ಮತ್ತು ಸಿಬ್ಬಂದಿ ಮಧ್ಯೆ ವಾಗ್ವಾದ ಕೂಡ ಉಂಟಾಗಿದೆ. ಕಣ್ಣೀರು ಹಾಕುತ್ತಲೇ ವಿದ್ಯಾರ್ಥಿನಿ ವಾಪಸ್ ತೆರಳಿದ್ದಾಳೆ.