ಬೆಂಗಳೂರು: ರಾಜ್ಯದ ವಸತಿ ರಹಿತ ಮತ್ತು ಭೂರಹಿತ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯಾದ್ಯಂತ 15 ಲಕ್ಷ ಉಚಿತ ವಸತಿ ನಿವೇಶನಗಳನ್ನು ಹಂಚಿಕೆ ಮಾಡಲು ಹಾಗೂ 2026-27ನೇ ಸಾಲಿನಲ್ಲಿ 2241 ಕೋಟಿ ರು. ವೆಚ್ಚದಲ್ಲಿ ಒಂದು ಲಕ್ಷ ಹೊಸ ಮನೆಗಳನ್ನು ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಸ್ತಾವಿತ ಭೂ ಗ್ಯಾರಂಟಿ ಯೋಜನೆಯಡಿ ಮೊದಲ ಹಂತದಲ್ಲಿ ಐದು ಲಕ್ಷ ನಿವೇಶನಗಳನ್ನು ಅಭಿವೃದ್ಧಿಪಡಿಸಲು 1000 ಕೋಟಿ ರು. ಮೀಸಲಿಡಲಾಗಿದ್ದು, ಭೂರಹಿತ ಬಡ ಕುಟುಂಬಗಳು, ಮಾಜಿ ಸೈನಿಕರು ಹಾಗೂ ದುರ್ಬಲ ವರ್ಗಗಳಿಗೆ ಆದ್ಯತೆ ನೀಡಲಾಗುತ್ತದೆ.
ಗ್ರಾಮೀಣ ಭಾಗಕ್ಕೆ 9 ಲಕ್ಷ ನಿವೇಶನ: ರಾಜ್ಯದ ಅಂದಾಜು 7.2 ಕೋಟಿ ಜನಸಂಖ್ಯೆಯಲ್ಲಿ ಸುಮಾರು 14.4 ಲಕ್ಷ ಜನರಿಗೆ ಸ್ವಂತ ವಸತಿ ನಿವೇಶನಗಳಿಲ್ಲ ಎಂದು ಸರಕಾರ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 9 ಲಕ್ಷ ನಿವೇಶನಗಳನ್ನು ಅಭಿವೃದ್ಧಿಪಡಿಸಲು ಸುಮಾರು 45 ಸಾವಿರ ಎಕರೆ ಭೂಮಿ ಮೀಸಲಿ ಡಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ: Bangalore News: ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ಅಲ್ಲ, ಸಿದ್ಧಾಂತವಾಗಿ ನೋಡಬೇಕು: ಕೋಡಿ ರಂಗಪ್ಪ ಕರೆ
ನಗರ ಪ್ರದೇಶದಲ್ಲಿ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಜಿ+3 ಮಾದರಿಯಲ್ಲಿ ಐದು ಲಕ್ಷ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ರಾಜ್ಯದ 31 ಜಿಲ್ಲೆ ಗಳಲ್ಲಿ ಸುಮಾರು 23500 ಎಕರೆ ಸರಕಾರಿ ಭೂಮಿ ಗುರುತಿಸಲಾಗಿದ್ದು, ಇದರಲ್ಲಿ 4.70 ಲಕ್ಷ ನಿವೇಶನ ಅಭಿವೃದ್ಧಿಪಡಿಸಬಹುದು ಎಂದು ಅಂದಾಜಿಸಲಾಗಿದೆ. ಮೊದಲ ಹಂತದಲ್ಲಿ 25 ಸಾವಿರ ಎಕರೆ ಪ್ರದೇಶದಲ್ಲಿ ಐದು ಲಕ್ಷ ನಿವೇಶನಗಳನ್ನು ಅಭಿವೃದ್ಧಿಪಡಿಸ ಲಾಗುತ್ತದೆ. ಪ್ರತಿ ನಿವೇಶನಕ್ಕೆ 20 ಸಾವಿರ ರು.ದಂತೆ ಒಟ್ಟು 1000 ಕೋಟಿ ರು. ವೆಚ್ಚವಾಗಲಿದೆ.
ಮಾಜಿ ಸೈನಿಕರು, ದುರ್ಬಲ ವರ್ಗಗಳಿಗೆ ಆದ್ಯತೆ: ಸೈನಿಕ ಸಮ್ಮಾನ್ ಯೋಜನೆ(Sainik Samman Scheme)ಯಡಿ ಮಾಜಿ ಸೈನಿಕರಿಗೆ ಶೇ.3ರಷ್ಟು ಮೀಸಲಾತಿ ಕಲ್ಪಿಸಲು ಪ್ರಸ್ತಾಪಿಸಲಾಗಿದೆ. ಪರಿಶಿಷ್ಟ ಜಾತಿಗೆ ಶೇ.19.5 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುವ ಉದ್ದೇಶ ವಿದೆ. ಹಿರಿಯ ನಾಗರಿಕರು, ವಿಧವೆಯರು, ವಿಧುರರು, ವಿಚ್ಛೇದಿತರು, ಒಂಟಿ ತಾಯಂದಿರು, ಅಂಗವಿಕಲರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೂ ಆದ್ಯತೆ ನೀಡಲಾಗುತ್ತದೆ. ಜತೆಗೆ ಬಸವ ವಸತಿ, ಡಾ. ಬಿ.ಆರ್. ಅಂಬೇ ಡ್ಕರ್ ನಿವಾಸ, ದೇವರಾಜ ಅರಸು ಹಾಗೂ ವಾಜ ಪೇಯಿ ನಗರ ವಸತಿ ಯೋಜನೆಗಳಡಿ ಒಂದು ಲಕ್ಷ ಹೊಸ ಮನೆ ನಿರ್ಮಿಸಲಾಗುತ್ತದೆ.
ಫಲಾನುಭವಿಗಳು ತಮ್ಮ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಿಕೊಳ್ಳುವ ಫಲಾನುಭವಿ ಆಧಾರಿತ ನಿರ್ಮಾಣ ಮಾದರಿಯಲ್ಲಿ ಯೋಜನೆ ಜಾರಿಯಾಗಲಿದೆ. ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಪರಿಗಣಿಸಿ ಮನೆ ನಿರ್ಮಾಣದ ಸಹಾಯ ಧನ ಹೆಚ್ಚಿಸಲಾಗಿದೆ. ಸಾಮಾನ್ಯ ವರ್ಗದ ಫಲಾನುಭವಿ ಗಳಿಗೆ ಈ ಹಿಂದೆ ನೀಡುತ್ತಿದ್ದ 1.20 ಲಕ್ಷ ರು.ವನ್ನು 2 ಲಕ್ಷಕ್ಕೆ ಹಾಗೂ ಎಸ್ಸಿ/ ಎಸ್ಟಿ ಫಲಾನುಭವಿಗಳಿಗೆ ನೀಡುತ್ತಿದ್ದ 2 ಲಕ್ಷ ರು. ವನ್ನು 3 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಇದರಿಂದ ಸಾಮಾನ್ಯ ವರ್ಗಕ್ಕೆ ಹೆಚ್ಚುವರಿಯಾಗಿ 80 ಸಾವಿರ ಹಾಗೂ ಎಸ್ಸಿ/ಎಸ್ಟಿ ಫಲಾನುಭವಿ ಗಳಿಗೆ ಒಂದು ಲಕ್ಷ ರೂ. ಹೆಚ್ಚುವರಿ ನೆರವು ದೊರೆಯಲಿದೆ. ಒಂದು ಲಕ್ಷ ಮನೆಗಳ ಪೈಕಿ ಗ್ರಾಮೀಣ ಪ್ರದೇಶಕ್ಕೆ 68 ಸಾವಿರ ಹಾಗೂ ನಗರ ಪ್ರದೇಶಕ್ಕೆ 32 ಸಾವಿರ ಮನೆ ಹಂಚಿಕೆ ಮಾಡಲಾಗುತ್ತದೆ. ವರ್ಗವಾರು ಹಂಚಿಕೆಯಲ್ಲಿ ಪರಿಶಿಷ್ಟ ಜಾತಿಗೆ 17,150, ಪರಿಶಿಷ್ಟ ಪಂಗಡಕ್ಕೆ 6950, ಅಲ್ಪಸಂಖ್ಯಾತ ರಿಗೆ 15 ಸಾವಿರ ಹಾಗೂ ಸಾಮಾನ್ಯ ವರ್ಗಕ್ಕೆ 60900 ಮನೆ ಮೀಸಲಿಡಲಾಗಿದೆ.
ಒಟ್ಟು 2241 ಕೋಟಿ ವೆಚ್ಚದ ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಲಭ್ಯವಿರುವ 987.50 ಕೋಟಿ ರು. ಅನುದಾನ ಬಳಸಲಾಗುತ್ತದೆ. ಉಳಿದ 1253.50 ಕೋಟಿ ರು.ಮುಂದಿನ ವರ್ಷಗಳಲ್ಲಿ ವಸತಿ ಇಲಾಖೆಯ ಬಜೆಟ್ ಮೂಲಕ ಹಂತ ಹಂತವಾಗಿ ಹೊಂದಿಸಿಕೊಳ್ಳಲು ಉದ್ದೇಶಿಸಲಾಗಿದೆ
ಅರ್ಹರು ಯಾರು?
ಆದ್ಯತಾ ಕುಟುಂಬ ಅಥವಾ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರು. ಹಾಗೂ ನಗರ ಪ್ರದೇಶದಲ್ಲಿ 2 ಲಕ್ಷ ರು. ಮೀರಿರಬಾರದು. ಗಂಡ-ಹೆಂಡತಿ ಇಬ್ಬರೂ ಜೀವಂತವಾಗಿದ್ದರೆ ಜಂಟಿಯಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ನಾಡಕಚೇರಿ, ಬಾಪೂಜಿ ಸೇವಾ ಕೇಂದ್ರ(Bapuji Seva kendra), ಗ್ರಾಮ ಒನ್(Grama One) ಮತ್ತು ಕರ್ನಾಟಕ ಒನ್(Karnataka One) ಕೇಂದ್ರಗಳ ಮೂಲಕ ಆನ್ಲೈನ್ ಅರ್ಜಿ ಆಹ್ವಾನಿಸಲು ಉದ್ದೇಶಿಸಲಾಗಿದೆ. ಆಧಾರ್ ಆಧಾರಿತ ಇ-ಕೆವೈಸಿ ಮೂ ಲಕ ಅರ್ಜಿ ಪರಿಶೀಲನೆ ನಡೆಸಿ ನಕಲಿ ಹಾಗೂ ಪುನರಾವರ್ತಿತ ಅರ್ಜಿ ತಡೆಯಲಾಗುತ್ತದೆ. ಹಳೆಯ ಪಟ್ಟಿಯಲ್ಲಿ ಹೆಸರು ಹೊಂದಿರುವ ಅರ್ಹರನ್ನು ಹೊಸದಾಗಿ ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಕೈಬಿಡಲ್ಲ ಎಂದು ಸರಕಾರ ಸ್ಪಷ್ಟ ಪಡಿಸಿದೆ. ಜತೆಗೆ ನಿವೇಶನಗಳಿಗೆ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿ, ಡಿಜಿಟಲ್ ಮಾಲೀಕತ್ವದ ದಾಖಲೆ ನೀಡಲಾಗುತ್ತದೆ. ಫಲಾನುಭವಿಗಳಿಗೆ ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.