ಬೆಂಗಳೂರು, ಜೂ.8: ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ (Suraj Hegde) ಅವರ ನಿಧನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. “ಸೂರಜ್ ಹೆಗ್ಡೆ ಅವರ ಅಗಲಿಕೆ ಸುದ್ದಿ ಕೇಳಿ ನನ್ನ ಮನಸ್ಸಿಗೆ ಆಘಾತವಾಗಿದೆ. ಚಿಕ್ಕ ವಯಸ್ಸಿಗೆ ಅವರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ನಂಬಲೇ ಆಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೂರಜ್ ಅವರು ಎಐಸಿಸಿ ಕಾರ್ಯದರ್ಶಿಯಾಗಿ ತಮಿಳುನಾಡು ಹಾಗೂ ಪುದುಚೆರಿ ರಾಜ್ಯದ ಉಸ್ತುವಾರಿಯಾಗಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಸೂರಜ್ ಹೆಗ್ಡೆ ಅವರು ತಮ್ಮ ತಾತ ದೇವರಾಜ ಅರಸು ಅವರಂತೆ ಹಿಂದುಳಿದ ವರ್ಗಗಳು, ಕಾರ್ಮಿಕರ ಹಕ್ಕು, ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿದ್ದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿಗಳಾಗಿ ಪಕ್ಷದ ಸಂಘಟನೆ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಈಗ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸೂರಜ್ ಹೆಗ್ಡೆ ಅವರು ಹಠಾತ್ ಹೃದಯಘಾತದಿಂದ ನಿಧನರಾಗಿದ್ದಾರೆ. ಭಾನುವಾರ (ಜೂ.7) 55 ವರ್ಷದ ಸೂರಜ್ ಅವರಿಗೆ ಹಠಾತ್ ಹೃದಯ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ತಿಳಿದು ಬಂದಿದೆ. ಮೃತರು ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಮೊಮ್ಮಗನಾಗಿದ್ದು, ಪಕ್ಷದ ಸಂಘಟನೆಯಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಸೂರಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಜೀರೋ ಟ್ರಾಫಿಕ್‌ನಿಂದ ಜನರಿಗೆ ತೊಂದ್ರೆ ತಪ್ಪಿಸಲು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಸಿಎಂ ಡಿಕೆಶಿ
ಹಾರೋಹಳ್ಳಿ, ಕನಕಪುರ ಕೃತಜ್ಞತೆ ಸಮರ್ಪಣಾ ಪ್ರವಾಸ ಸಂದರ್ಭದಲ್ಲಿ ಜೀರೋ ಟ್ರಾಫಿಕ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧ ಬಳಿಯ ಡಾ. ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣದ ಬಳಿಯಿಂದ ಕನಕಪುರ ರಸ್ತೆಯ ಕೊನೆ ನಿಲ್ದಾಣ ಸಿಲ್ಕ್ ಇನ್ಸ್ಟಿಟ್ಯೂಟ್‌ವರೆಗೆ ಮೆಟ್ರೋ ರೈಲಿನಲ್ಲಿ ಭಾನುವಾರ (ಜೂ.7) ಪ್ರಯಾಣ ಮಾಡಿದರು.
ಪ್ರಯಾಣದ ವೇಳೆ ಸಾರ್ವಜನಿಕರ ಕುಶಲ ವಿಚಾರಿಸಿದರು. ಯುವಕ, ಯುವತಿಯರು ಸೇರಿದಂತೆ ಪ್ರಯಾಣಿಕರು ಸಿಎಂ ಜತೆ ಸೆಲ್ಫಿ ತೆಗೆದುಕೊಂಡರು. ಸಿಎಂ ಅವರು ಪ್ರಯಾಣಿಕರ ಮೆಟ್ರೊ ಪ್ರಯಾಣದ ಅನುಭವ ಆಲಿಸಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ಅವರು, ಇಂದು ನನ್ನೂರು ಕನಕಪುರಕ್ಕೆ ಹೋಗುವಾಗ, ನಮ್ಮ ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸುವ ಅವಕಾಶ ಸಿಕ್ಕಿತು. ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ಬೆಂಗಳೂರಿನ ನಾಗರಿಕರ ಮುಖದಲ್ಲಿನ ನೆಮ್ಮದಿಯನ್ನು ಕಂಡಾಗ, ಸುರಕ್ಷಿತ, ಜನಸ್ನೇಹಿ ಹಾಗೂ ಕೈಗೆಟುಕುವ ಸಾರ್ವಜನಿಕ ಸಾರಿಗೆ ನಮ್ಮ ಕರ್ನಾಟಕದ ಜನತೆಗೆ ಎಷ್ಟು ಮುಖ್ಯ ಎಂಬುದು ಮತ್ತೊಮ್ಮೆ ಮನವರಿಕೆಯಾಯಿತು ಎಂದು ಹೇಳಿದ್ದಾರೆ.