ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ತನ್ನ ಪ್ರಮುಖ ಶಾಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವಾದ ಟಿಸಿಎಸ್ ಇನ್‌ಕ್ವಿಜಿಟಿವ್ 2026ರ ಬೆಂಗಳೂರು ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಅತ್ಯಂತ ರೋಚಕವಾಗಿ ನಡೆದ ಈ ಸ್ಪರ್ಧೆಯಲ್ಲಿ, ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಶಾಲೆಯ ಸಿ.ಕೆ. ಪ್ರಣಕ್ ಮತ್ತು ವಿಜಯ್ ಮೋಹನ್ ಬೆಂಗಳೂರು ಆವೃತ್ತಿಯ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಬೆಂಗಳೂರಿನ ಹೊಸ ಆವಿಷ್ಕಾರ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹರಿಸುವ ಉತ್ಸಾಹ ಪ್ರದರ್ಶಿಸಿದ ವಿದ್ಯಾರ್ಥಿಗಳು, ತಮ್ಮ ಅತ್ಯುತ್ತಮ ತಂಡದ ಕೆಲಸ ಹಾಗೂ ಚುರುಕಾದ ಜ್ಞಾನದ ಮೂಲಕ ಸೆಮಿಫೈನಲ್ಸ್ ನಲ್ಲಿ ಭಾಹವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ. ಇಲ್ಲಿ ಅವರು ದೇಶದ ವಿವಿಧ ಭಾಗಗಳಿಂದ ಆಗಮಿಸುವ ವಿಜೇತ ತಂಡಗಳೊಂದಿಗೆ ಸ್ಪರ್ಧಿಸಲಿದ್ದಾರೆ.
ಬೆಂಗಳೂರು ಆವೃತ್ತಿಯ ಈ ಸ್ಪರ್ಧೆಯಲ್ಲಿ 503 ಶಾಲೆಗಳನ್ನು ಪ್ರತಿನಿಧಿಸುವ 102 ತಂಡಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ, ಬೆಂಗಳೂರು) ಪ್ರೊ.ಗೋಪಾಲಕೃಷ್ಣ ಹೆಗ್ಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರೊಂದಿಗೆ ಟಿಸಿಎಸ್ ಬೆಂಗಳೂರು ಪ್ರಾದೇಶಿಕ ಮುಖ್ಯಸ್ಥರಾದ ಸುನಿಲ್ ದೇಶಪಾಂಡೆ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದ ಈ ಸ್ಪರ್ಧೆಯು ಶಿಕ್ಷಣ, ಮನರಂಜನೆ, ಕ್ರೀಡೆ, ಉದ್ಯಮದ ಟ್ರೆಂಡ್ ಗಳು, ಜಾಹೀರಾತು ಮತ್ತು ಸಾಮಾಜಿಕ ಮಾಧ್ಯಮಗಳಂತಹ ವಿವಿಧ ವಿಷಯಗಳನ್ನು ಒಳಗೊಂಡಿತ್ತು. ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎಐ, ಕ್ಲೌಡ್ ಕಂಪ್ಯೂಟಿಂಗ್, ಆಟೊಮೇಷನ್, ಬಯೋಮೆಟ್ರಿಕ್ಸ್ ಮತ್ತು ರೊಬೊಟಿಕ್ಸ್ ನಂತಹ ಅತ್ಯಾಧುನಿಕ ಕ್ಷೇತ್ರಗಳ ಕುರಿತಾದ ಪ್ರಶ್ನೆಗಳು ಸ್ಪರ್ಧೆಯಲ್ಲಿದ್ದವು.
ಈ ಕುರಿತು ಟಿಸಿಎಸ್ ಬೆಂಗಳೂರು ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ ಮಾತನಾಡಿ, "ಬೆಂಗಳೂರು ಯಾವಾಗಲೂ ಹೊಸ ಆವಿಷ್ಕಾರ, ಜಿಜ್ಞಾಸೆ ಮತ್ತು ಕಲಿಕೆಯನ್ನು ಪ್ರೋತ್ಸಾಹಿಸುವ ನಗರವಾಗಿದೆ. ಈ ವರ್ಷದ ಟಿಸಿಎಸ್ ಇನ್‌ಕ್ವಿಜಿಟಿವ್ ಸ್ಪರ್ಧಿಗಳಲ್ಲಿ ಈ ಗುಣಗಳು ಎದ್ದು ಕಾಣುತ್ತಿರು ವುದು ಸಂತಸ ತಂದಿದೆ. ಕಡಿಮೆ ತಿಳಿದಿರುವ ವಿಷಯಗಳನ್ನು ಅನ್ವೇಷಿಸಲು, ಹೊಸ ದೃಷ್ಟಿಕೋನ ಗಳನ್ನು ಬೆಳೆಸಿಕೊಳ್ಳಲು ಮತ್ತು ವಿವಿಧ ವಿಷಯಗಳನ್ನು ಪರಸ್ಪರ ಜೋಡಿಸಿ ಯೋಚಿಸಲು ಈ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಸವಾಲು ನೀಡುತ್ತದೆ.
ವಿಜೇತರು ಪ್ರದರ್ಶಿಸಿದ ತಕ್ಷಣದ ಸಮಯಪ್ರಜ್ಞೆ, ಸತತ ಪ್ರಯತ್ನ ಹಾಗೂ ಜ್ಞಾನದ ಸರಿಯಾದ ಬಳಕೆ ನಿಜಕ್ಕೂ ಸ್ಫೂರ್ತಿದಾಯಕವಾಗಿತ್ತು. ರಾಷ್ಟ್ರೀಯ ಮಟ್ಟದಲ್ಲಿ ನಗರವನ್ನು ಪ್ರತಿನಿಧಿಸು ತ್ತಿರುವ ಅವರಿಗೆ ನಮ್ಮ ಶುಭ ಹಾರೈಕೆಗಳು" ಎಂದು ಹೇಳಿದರು.
ಪ್ರಸ್ತುತ 28ನೇ ವರ್ಷಕ್ಕೆ ಕಾಲಿಟ್ಟಿರುವ ಟಿಸಿಎಸ್ ಇನ್‌ಕ್ವಿಜಿಟಿವ್, ಭಾರತದ ಅತ್ಯಂತ ಗೌರವಾನ್ವಿತ ಶಾಲಾ ಮಟ್ಟದ ರಸಪ್ರಶ್ನೆ ವೇದಿಕೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಯುವ ಪೀಳಿಗೆಗೆ ಹೊಸ ಆಲೋಚನೆಗಳನ್ನು ಅನ್ವೇಷಿಸಲು, ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಲು ಮತ್ತು ಜಾಗತಿಕ ವಿದ್ಯಮಾನಗಳನ್ನು ಆಳವಾಗಿ ಅರ್ಥೈಸಿಕೊಳ್ಳಲು ಇದು ನಿರಂತರ ಸ್ಪೂರ್ತಿ ನೀಡುತ್ತಿದೆ.
2026 ರ ಆವೃತ್ತಿಯು ಪುಣೆ, ಇಂದೋರ್, ಬೆಂಗಳೂರು, ಅಹಮದಾಬಾದ್, ನಾಗ್ಪುರ, ಹೈದರಾಬಾದ್, ಚೆನ್ನೈ, ದೆಹಲಿ, ಭುವನೇಶ್ವರ, ಕೊಚ್ಚಿ, ಕೋಲ್ಕತ್ತಾ ಮತ್ತು ಮುಂಬೈ ನಗರಗಳಲ್ಲಿ ನಡೆಯುತ್ತಿದ್ದು, ಅಂತಿಮವಾಗಿ ರಾಷ್ಟ್ರೀಯ ಹಂತದ ಸ್ಪರ್ಧೆಯಲ್ಲಿ ದೇಶದ ಅತ್ಯಂತ ಚುರುಕಿನ ಯುವ ಸ್ಪರ್ಧಿಗಳು ಟಿಸಿಎಸ್ ಇನ್‌ಕ್ವಿಜಿಟಿವ್ ನ್ಯಾಷನಲ್ ಚಾಂಪಿಯನ್ಸ್ 2026 ಕಿರೀಟಕ್ಕಾಗಿ ಸೆಣಸಾಡಲಿದ್ದಾರೆ.