ಬೆಂಗಳೂರು, ಆ. 17: ಬೆಂಗಳೂರಿನ ಚಿಕ್ಕಬಾಣಾವರ (Chikkabanavara) ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಬಸವಪುರದಲ್ಲಿರುವ ನಿವಾಸದಲ್ಲಿ ಖಾಸಗಿ ಕಂಪನಿ ಉದ್ಯೋಗಿ ಹಾಗೂ ಅವರ ಐದು ವರ್ಷದ ಪುತ್ರ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇಡೀ ಪ್ರದೇಶದಲ್ಲಿ ತೀವ್ರ ಆತಂಕ ಮೂಡಿಸಿದೆ. ಮೃತರನ್ನು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ಮೂಲದವರಾದ 35 ವರ್ಷದ ಅಭಿನಂದನ್ ಮತ್ತು ಅವರ ಮುದ್ದಿನ ಪುತ್ರ 5 ವರ್ಷದ ಯದುವೀರ್ ಎಂದು ಗುರುತಿಸಲಾಗಿದೆ. ಅಭಿನಂದನ್ ಪತ್ನಿ ಹರಿಣಿ ಹಾಗೂ ಪುತ್ರನೊಂದಿಗೆ ಈ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು.
ಸೋಮವಾರ ಮುಂಜಾನೆ ಪತ್ನಿ ಹರಿಣಿ ಸ್ವತಃ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ ಬಳಿಕ ಈ ದುರಂತ ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ಸಂಜೆ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಆಗಿದ್ದೆವು, ಮುಂಜಾನೆ ಎದ್ದು ನೋಡಿದಾಗ ಪತಿ ಮತ್ತು ಮಗ ಯಾವುದೇ ಪ್ರತಿಕ್ರಿಯೆ ನೀಡದೆ ನಿಶ್ಚೇಷ್ಟಿತ ಸ್ಥಿತಿಯಲ್ಲಿ ಮಲಗಿದ್ದರು ಎಂದು ಹರಿಣಿ ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇಬ್ಬರ ದೇಹದ ಮೇಲೂ ಯಾವುದೇ ಪ್ರಮುಖ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲವಾದರೂ, ಸಣ್ಣಪುಟ್ಟ ಗಾಯಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪಿಸ್ತೂಲ್ ಪ್ರದರ್ಶಿಸಿದ ಟ್ಯಾಕ್ಸಿ ಚಾಲಕನ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದು 3 ಕೋಟಿ ರುಪಾಯಿ ನಗದು
ಕೊಲೆ ದೂರು ದಾಖಲು
ಅಭಿನಂದನ್ ಅವರ ತಾಯಿ ಪೊಲೀಸರನ್ನು ಸಂಪರ್ಕಿಸಿ, ತನ್ನ ಮಗ ಮತ್ತು ಮೊಮ್ಮಗನನ್ನು ಯೋಜಿತವಾಗಿ ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿ ಲಿಖಿತ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಉತ್ತರ-ಪಶ್ಚಿಮ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್., ಘಟನಾ ಸ್ಥಳದಲ್ಲಿ ಹಲವು ಅನುಮಾನಾಸ್ಪದ ಅಂಶಗಳು ಕಂಡುಬಂದಿವೆ ಎಂದಿದ್ದಾರೆ. ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳು ಸರಿಯಾಗಿ ಸೇವ್ ಆಗದಿರುವುದು ಬೆಳಕಿಗೆ ಬಂದಿದ್ದು, ಸಿಸಿಟಿವಿಯನ್ನು ಉದ್ದೇಶಪೂರ್ವಕವಾಗಿ ಆಫ್ ಮಾಡಲಾಗಿತ್ತೇ ಅಥವಾ ತಾಂತ್ರಿಕ ದೋಷದಿಂದ ರೆಕಾರ್ಡ್ ಆಗಿಲ್ಲವೇ ಎಂಬುದರ ಕುರಿತು ವಿಶೇಷ ತಾಂತ್ರಿಕ ತಜ್ಞರಿಂದ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್ ಫೋನ್‌ಗಳು, ಕರೆ ವಿವರಗಳು ಮತ್ತು ಸಂದೇಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಮೃತರ ಪತ್ನಿ ಹರಿಣಿ ಸೇರಿದಂತೆ ಕುಟುಂಬಸ್ಥರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಘಟನೆಯ ಸಮಯದಲ್ಲಿ ಯಾರಾದರೂ ಹೊರಗಿನವರು ಮನೆಗೆ ಬಂದು ಹೋಗಿದ್ದರೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.