ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಪರಿಷ್ಕರಣೆಯಲ್ಲಿನ ದೋಷ ಸರಿಪಡಿಸಲು ಬಿಎಂಆರ್‌ಎಸಿಎಲ್‌ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಬಿಎಂಆರ್‌ಸಿಎಲ್ ಎಂಡಿ ಜೆ.ರವಿಶಂಕರ್ ಅವರಿಗೆ ಸಂಸದರು ಪತ್ರ ಬರೆದಿದ್ದಾರೆ. ಹೈಸ್ಕೂಲ್ ವಿದ್ಯಾರ್ಥಿಗಳೂ ಕೂಡ ಬಿಎಂಆರ್‌ಸಿಎಲ್‌ಗಿಂತ ಚೆನ್ನಾಗಿ ಲೆಕ್ಕಾಚಾರ ಮಾಡುತ್ತಾರೆ. ದರ ನಿಗದಿ ಸಮಿತಿ (FFC) ಶಿಫಾರಸುಗಳ ಪ್ರಕಾರ ದರ ಪರಿಷ್ಕರಣೆ ಮಾಡದೆ, ಅಸಮಂಜಸವಾಗಿ ಏರಿಕೆ ಮಾಡಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೇಜಸ್ವಿ ಸೂರ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಮೆಟ್ರೋ ಟಿಕೆಟ್ ದರ ಪರಿಷ್ಕರಣೆಯಲ್ಲಿನ ದೋಷ ಸರಿಪಡಿಸಲು ಬಿಎಂಆರ್‌ಸಿಎಲ್ ಎಂಡಿಗೆ ಪತ್ರ ಬರೆದಿದ್ದೇನೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ಸುದೀರ್ಘ ವಿಳಂಬದ ನಂತರ ಬಿಎಂಆರ್‌ಸಿಎಲ್ ಎಫ್‌ಎಫ್‌ಸಿ ವರದಿ ಬಿಡುಗಡೆ ಮಾಡಿತ್ತು. ಆದರೆ, ದರ ಪರಿಷ್ಕರಣೆಯಲ್ಲಿ ಹಲವು ದೋಷಗಳಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರ ಎಕ್ಸ್ ಪೋಸ್ಟ್
ಸರಳವಾಗಿ ಲೆಕ್ಕಾಚಾರ ಮಾಡಬೇಕಿರುವ ಕಡೆಯೂ ಹಲವು ತಪ್ಪುಗಳು ಇವೆ. FFC ಶಿಫಾರಸುಗಳ ಪ್ರಕಾರ ಪರಿಷ್ಕರಣೆ ಮಾಡದೆ, ಬಿಎಂಆರ್‌ಸಿಎಲ್ ಅಸಮಂಜಸವಾಗಿ ಶೇ.105ರಷ್ಟು ದರ ಏರಿಕೆ ಮಾಡಿದೆ. ಸರಿಯಾದ ಲೆಕ್ಕಾಚಾರದಂತೆ ಟಿಕೆಟ್ ದರ ಏರಿಕೆ ಸುಮಾರು ಶೇ.50-55ರವರೆಗೆ ಇರಬೇಕು.
ಈ ಸುದ್ದಿಯನ್ನೂ ಓದಿ | Basava Samskruti Abhiyana: ನಮ್ಮ ಮೆಟ್ರೋಗೆ ʼಬಸವ ಮೆಟ್ರೋʼ ಎಂದು ಹೆಸರಿಡಲು ಕೇಂದ್ರಕ್ಕೆ ಶಿಫಾರಸು: ಸಿಎಂ
ಇನ್ನು ನಿರ್ವಹಣೆ ಮತ್ತು ಆಡಳಿತ ವೆಚ್ಚವು 118.5% ಇರಬೇಕು. ಆದರೆ, ಬರೋಬ್ಬರಿ ಶೇ. 366 ಏರಿಕೆಯಾಗಿದೆ. ಸಾರಿಗೆ ಪ್ರಯಾಣಿಕರಿಗೆ ಈಗಾಗಲೇ ಫೆಬ್ರವರಿಯಲ್ಲಿ ಮಾಡಲಾದ ದರ ಪರಿಷ್ಕರಣೆಯಿಂದ ಹೆಚ್ಚಿನ ಹೊರೆಯಾಗಿದೆ. ಹೀಗಾಗಿ ಮೆಟ್ರೋ ಪ್ರಯಾಣಿಕರ ಮೇಲಿನ ಅನವಶ್ಯಕ ಹೊರೆಯನ್ನು ಇಳಿಸಲು ಬಿಎಂಆರ್‌ಸಿಎಲ್ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.