ಬೆಂಗಳೂರು: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಲೇ ಇದೆ. ಏಪ್ರಿಲ್ ತಿಂಗಳ ಆರಂಭದಲ್ಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜನರು ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿದ್ದಾರೆ. ಪ್ರಮುಖವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ಅಕ್ಷರಶಃ ಕೆಂಡದಂತಾಗಿದ್ದು, ರಾಜಧಾನಿ ಬೆಂಗಳೂರಿನಲ್ಲೂ ಸೆಖೆಯ ತೀವ್ರತೆ ಹೆಚ್ಚಾಗಿದೆ. ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲಿನ ಧಗೆ ಹೆಚ್ಚಾಗಿದೆ.
ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶವು 42°C ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗಾವಿ ಮತ್ತು ಬಾಗಲಕೋಟೆಯಲ್ಲೂ ತಾಪಮಾನ 39°C ನಿಂದ 42°C ವರೆಗೆ ಏರಿಕೆಯಾಗುವ ಸಂಭವವಿದೆ. ಮಧ್ಯಾಹ್ನದ ವೇಳೆ ಈ ಭಾಗಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಇರುವುದರಿಂದ, ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸಾರ್ವಜನಿಕರು ಮನೆಯಿಂದ ಹೊರಬರದಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶವು 35°C ನಿಂದ 37°C ವರೆಗೆ ದಾಖಲಾಗುತ್ತಿದೆ. ಸಂಜೆಯ ವೇಳೆ ಆಕಾಶ ಭಾಗಶಃ ಮೋಡದಿಂದ ಕೂಡಿದ್ದರೂ, ಮಳೆಯಾಗುವ ಮುನ್ಸೂಚನೆ ತೀರಾ ಕಡಿಮೆ ಇರುವುದರಿಂದ ಒಣ ಹವಾಮಾನವೇ ಮುಂದುವರಿಯಲಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ಬಿಸಿಲು ಹೆಚ್ಚಿದೆ.
ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಜನರಿಗೆ ಹವಾಮಾನ ಇಲಾಖೆ ಕೆಲ ಸೂಚನೆಗಳನ್ನು ನೀಡಿದೆ. ನಿರ್ಜಲೀಕರಣದಿಂದ ಪಾರಾಗಲು ಹೆಚ್ಚಿನ ಪ್ರಮಾಣದಲ್ಲಿ ನೀರು, ಮಜ್ಜಿಗೆ ಮತ್ತು ಎಳನೀರನ್ನು ಸೇವಿಸಿ ಎಂದು ಹೇಳಲಾಗಿದೆ. ನೇರ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ, ಅನಿವಾರ್ಯವಿದ್ದಲ್ಲಿ ಛತ್ರಿ ಅಥವಾ ಟೋಪಿ ಬಳಸಿ. ಹಿರಿಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.
ಕರಾವಳಿಯಲ್ಲಿ ಮಳೆ ಎಚ್ಚರಿಕೆ
ನಿನ್ನೆ ದಕ್ಷಿಣ ಕನ್ನಡದ ಸುಳ್ಯ ಮತ್ತು ಕಡಬ ಭಾಗಗಳಲ್ಲಿ ಭರ್ಜರಿ ಮಳೆಯಾಗಿದ್ದು, ಇಂದು ಕೂಡ ರಾಜ್ಯದ ಹಲವೆಡೆ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಧರ್ಮಸ್ಥಳ ಹಾಗೂ ಉಡುಪಿಯ ಕಾರ್ಕಳ, ಹೆಬ್ರಿ ಸುತ್ತಮುತ್ತ ಇಂದು ಸಂಜೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಸಂಜೆ ಮಳೆರಾಯ ಅಬ್ಬರಿಸಲಿದ್ದಾನೆ. ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಒಂದೆರಡು ಕಡೆ ತುಂತುರು ಮಳೆಯಾಗಬಹುದು. ಈ ಮಳೆಯ ಆಟ ಏಪ್ರಿಲ್ 4 ರವರೆಗೆ ಇರಲಿದೆ.