ಅಲ್ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮಾನ್ಯತೆ ರದ್ಧತಿ ಆದೇಶ ಎತ್ತಿ ಹಿಡಿದ ಶಾಲಾ ಶಿಕ್ಷಣ ಇಲಾಖೆಯ ಮೇಲ್ಮನವಿ ಪ್ರಾಧಿಕಾರ
ಶಾಲಾ ಮಾನ್ಯತೆ ರದ್ದುಪಡಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಹಿಂದಿನ ಆದೇಶ ಪ್ರಶ್ನಿಸಿ ಅಲ್ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಸಲ್ಲಿಸಿದ್ದ ಮೇಲ್ಮನವಿ ಬಗ್ಗೆ ಸುದೀರ್ಘ ವಾದ ವಾದ ಪ್ರತಿವಾದ ಆಲಿಸಿದ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು 36 ಪುಟಗಳ ಸಮಗ್ರ ಹಾಗೂ ವಿಶೇಷವಾದ ಆದೇಶ ಹೊರಡಿಸಿದ್ದಾರೆ.
-
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ನಕಲಿ ದಾಖಲೆ ಸಲ್ಲಿಸಿ ಪಡೆದ ಐದು ಲಕ್ಷ ರೂ ವಸೂಲಿಗೆ ನಿರ್ದೇಶನ
ಬೆಂಗಳೂರು: ಥಣಿ ಸಂದ್ರದ ಅಲ್ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ, ಮುಂಬಯಿ ಇದರ ಆಡಳಿತದಲ್ಲಿ, ಜಾಮಿಯಾ ಮೊಹ್ಮದಿಯಾ ಮನ್ಸೂರ, ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ, ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆ, ಥಣಿಸಂದ್ರ, ಬೆಂಗಳೂರು ಎಂಬ ಹೆಸರಿನ ವಿದ್ಯಾಸಂಸ್ಥೆಗಳನ್ನು ಬೆಂಗಳೂರಿನಲ್ಲಿ ತೆರೆದು ಅನಧಿಕೃತವಾಗಿ ಶಾಲೆಗಳನ್ನು ನಡೆಸುತ್ತಿರುವುದನ್ನು ಶಾಲಾ ಶಿಕ್ಷಣ ಇಲಾಖೆ ಎತ್ತಿ ಹಿಡಿದಿದೆ.
ಶಾಲಾ ಮಾನ್ಯತೆ ರದ್ದುಪಡಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಹಿಂದಿನ ಆದೇಶ ಪ್ರಶ್ನಿಸಿ ಅಲ್ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಸಲ್ಲಿಸಿದ್ದ ಮೇಲ್ಮನವಿ ಬಗ್ಗೆ ಸುದೀರ್ಘವಾದ ವಾದ ಪ್ರತಿವಾದ ಆಲಿಸಿದ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು 36 ಪುಟ ಗಳ ಸಮಗ್ರ ಹಾಗೂ ವಿಶೇಷವಾದ ಆದೇಶ ಹೊರಡಿಸಿದ್ದಾರೆ.
ಶಾಲೆಯ ಪರವಾನಗಿ ರದ್ದುಪಡಿಸಿರುವುದು ಕ್ರಮಬದ್ಧವಾಗಿದೆ. ಅಲ್ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಹೆಜ್ಜೆ ಹೆಜ್ಜೆಗೂ ಲೋಪಗಳನ್ನು ಎಸಗಿದ್ದು, ಪ್ರತಿಯೊಂದು ಅಂಶವನ್ನು ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ಪರಿಶೀಲಿಸಿ ಆದೇಶ ಜಾರಿ ಮಾಡಿದ್ದಾರೆ.
ಇದನ್ನೂ ಓದಿ: Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ
ಹಮ್ಮದಿಯಾ ಮನ್ಸೂರ(ರಿ) ಹೆಸರಿನಲ್ಲಿ ನಕಲಿ ರಶೀದಿಗಳು, ನಕಲಿ ಪ್ರಮಾಣ ಪತ್ರಗಳು, ನಕಲಿ ನಾಮ ಫಲಕಗಳನ್ನು ಅಳವಡಿಸಿ ಶಿಕ್ಷಣ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದೆ. “ಯಾವ ಆಡಳಿತ ಮಂಡಳಿಗೆ ಶಾಲೆಯನ್ನು ನಡೆಸಲು ಅನುಮತಿ ನೀಡಲಾಗಿದೆಯೋ ಅದೇ ಆಡಳಿತ ಮಂಡಳಿಯು ಅದೇ ಸ್ಥಳದಲ್ಲಿಯೇ ಮತ್ತು ಅದೇ ಹೆಸರಿನಲ್ಲಿ ಶಾಲೆ ನಡೆಸ ತಕ್ಕದ್ದು” ಎಂದು ಆದೇಶ ಸ್ಪಷ್ಟಪಡಿಸಿದೆ. ಸದರಿ ಸಂಸ್ಥೆಯು ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್ 31 ಮತ್ತು 36[6] ರಂತೆ ಸ್ಪಷ್ಟ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ 2025 ರ ಮೇ 30 ರಂದು ಶಿಕ್ಷಣ ಇಲಾಖೆ ಮಾನ್ಯತೆ ರದ್ದುಪಡಿಸಿರುವ ತೀರ್ಮಾನ ಸರಿಯಾಗಿದೆ ಎಂದು ಹೇಳಿದೆ.
ಹೀಗೆ ಶಿಕ್ಷಣ ಸಂಸ್ಥೆ ಬೇರೆ ಬೇರೆ ರೂಪದಲ್ಲಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ. ಶಾಲೆಯ ಜಾಗದ ಬಗ್ಗೆ ಸುಳ್ಳು ದಾಖಲೆಗಳನ್ನು ನೀಡಿ 1-10ನೇ ತರಗತಿ ಪ್ರಾರಂಭಿಸಲು ಅನುಮತಿ ಪಡೆದುಕೊಂಡಿರುವುದನ್ನು ಆದೇಶದಲ್ಲಿ ನಮೂದಿಸಲಾಗಿದೆ. ತಪ್ಪು ಮಾಹಿತಿ ನೀಡಿರುವುದು ಕ್ರಿಮಿನಲ್ ಕಾನೂನು ಕ್ರಮಕ್ಕೆ ಒಳಪಡುತ್ತದೆ ಎಂಬ ನ್ಯಾಯಾಲಯದ ಆದೇಶವನ್ನು ಇಲ್ಲಿ ನಮೂದಿಸಲಾಗಿದೆ.
2013 ರಿಂದ 2022 ರ ವರೆಗಿನ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದಾಗ ಕರ್ನಾಟಕ ಶಿಕ್ಷಣ ಕಾಯ್ದೆ 1983 ರಲ್ಲಿನ ಅಂಶಗಳಿಗೆ ವ್ಯತಿರಿಕ್ತವಾಗಿ ಆಡಳಿತ ಮಂಡಳಿಯ ಹೆಸರುಗಳನ್ನು ನಿರಂತರವಾಗಿ, ನಿಯಮಬಾಹಿರವಾಗಿ ಬದಲಾಯಿಸಿರುವುದು ಸಾಬೀತಾಗಿದೆ. ಆಡಳಿತ ಮಂಡಳಿಯು ಅಧಿಕಾರಿಗಳನ್ನು ದಾರಿ ತಪ್ಪಿಸುವ ಉದ್ದೇಶ ಪೂರ್ವಕ ಪ್ರಯತ್ನ ನಡೆಸಿದೆ. ಮೇಲ್ಮನವಿ ಸಲ್ಲಿಸಿ ತಮ್ಮ ಅಕ್ರಮಗಳನ್ನು ಸಕ್ರಮಗೊಳಿಸಲು ಪ್ರಯತ್ನ ನಡೆಸಿದ್ದು, ಇದನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಆದೇಶ ತಿಳಿಸಿದೆ.
ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ರದ್ದುಪಡಿಸಿದ್ದು, ಶಾಲೆ ನಡೆಸುತ್ತಿರುವ ಮದರಸಾಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನೀಡಿರುವ ಐದು ಲಕ್ಷ ರೂಪಾಯಿ ಅನುದಾನ ವಾಪಸ್ ಪಡೆಯುವುದು ಸೇರಿದಂತೆ ಎಲ್ಲಾ ಅಂಶಗಳನ್ನು ಕಾನೂನಿನನ್ವಯ ಪರಿಶೀಲಿಸುವಂತೆ ರಾಜ್ಯ ಹೈಕೋರ್ಟ್ ಆದೇಶಿ ಸಿದೆ.
ಮುಖ್ಯನ್ಯಾಯಮೂರ್ತಿ ವಿಭು ಭಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ನೇತೃತ್ವದ ವಿಭಾಗೀಯಪೀಠ ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ನಡೆಸುತ್ತಿರುವ ಮದರಸಾಗೆ ನೀಡಿರುವ ಹಣದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಯವರಿಗೆ ಆದೇಶಿಸಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ನಕಲಿ ದಾಖಲೆ ಸಲ್ಲಿಸಿ ಪಡೆದ ಐದು ಲಕ್ಷ ರೂ ವಸೂಲಿಗೆ ಕ್ರಮ ತೆಗೆದುಕೊಳ್ಳುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.