ಸಿಎಂ ಶಿವಕುಮಾರ್‌ಗೆ ಪತ್ರ ಬರೆದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರ ಅಂಕಣ ಪ್ರಸ್ತಾಪಿಸಿ ಸಲಹೆ
ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಸದ ಸಮಸ್ಯೆಗೆ ಪರಿಹಾರ ವಾಗಿ ಟ್ರ್ಯಾಶ್ ಪೊಲೀಸರನ್ನುನೇಮಿಸುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಗುರುವಾರ (ಜೂ.18) ತಮ್ಮ ನೂರೆಂಟು ವಿಶ್ವ ಅಂಕಣದಲ್ಲಿ, ಬೆಂಗಳೂರು ಸೌಂದರ್ಯವನ್ನು ಕಾಪಾಡಲು ಟ್ರ್ಯಾಶ್ ಪೊಲೀಸರನ್ನು ನೇಮಿಸ ಬೇಕೆಂಬ ಸಲಹೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ್ದರು. ಈ ಅಂಕಣ ವನ್ನು ಪ್ರಸ್ತಾಪಿಸಿರುವ ಬಸವರಾಜ ಹೊರಟ್ಟಿ ಅವರು, ಬೆಂಗಳೂರಿನ ಸೌಂದರ್ಯ ಹಾಗೂ ಸ್ವಚ್ಛತೆ ಯನ್ನು ಕಾಪಾಡಲು ವಿಶ್ವೇಶ್ವರ ಭಟ್ ಅವರ ಅಂಕಣದಲ್ಲಿರುವ ಟ್ರ್ಯಾಶ್ ಪೊಲೀಸ್ ಎನ್ನುವ ಕಲ್ಪನೆ ಉತ್ತಮ ಸಲಹೆಯಾಗಿದೆ.
ಬೆಂಗಳೂರಿನ ಬಗ್ಗೆ ಬಗೆಬಗೆಯ ಕನಸನ್ನು ಕಂಡಿರುವ ಡಿ.ಕೆ.ಶಿವಕುಮಾರ್ ಈ ಸಲಹೆಯನ್ನು ಅವರು ಸಕಾರಾತ್ಮಕವಾಗಿ ಪರಿಗಣಿಸಿ, ಪ್ರಾಯೋಗಿಕವಾಗಿ ಕೆಲ ವಾರ್ಡ್ಗಳಲ್ಲಿ ಟ್ರ್ಯಾಶ್ ಪೊಲೀಸ ರನ್ನು ನೇಮಿಸಬೇಕು. ಭವಿಷ್ಯದಲ್ಲಿ ಕೇವಲ ಬೆಂಗಳೂರಿಗೆ ಈ ಪರಿಕಲ್ಪನೆಯನ್ನು ಸೀಮಿತ ಗೊಳಿಸದೇ ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Vishweshwar Bhat Column: ಡಿಕೆಶಿಯವರಿಗೆ ನಾನು ಕೊಡುವ ಆ ಒಂದು ಪುಟ್ಟ ಸಲಹೆ!
ಒಂದು ವೇಳೆ ಡಿ.ಕೆ.ಶಿವಕುಮಾರ್ ಅವರು ಈ ಸಲಹೆಯನ್ನು ಸ್ವೀಕರಿಸಿ ಟ್ರ್ಯಾಶ್ ಪೊಲೀಸಿಂಗ್ ಅನ್ನು ಗಂಭೀರವಾಗಿ ಪರಿಗಣಿಸಿದರೆ, ಇಡೀ ದೇಶಕ್ಕೆ ಇದೊಂದು ಮಾದರಿ ನಡೆಯಾಗಲಿದೆ. ಕ್ರಾಂತಿಕಾರಿ ನೈರ್ಮಲ್ಯ ನಿಗಾ ವ್ಯವಸ್ಥೆ ಜಾರಿಗೆ ತಂದ ಮೊದಲ ನಗರ ಎಂಬ ಐತಿಹಾಸಿಕ ಕೀರ್ತಿ ಬೆಂಗಳೂರಿಗೆ ಹಾಗೂ ನಿಮ್ಮ ನೇತೃತ್ವದ ಜನಪರ ಮತ್ತು ಕ್ರಿಯಾಶೀಲ ಸರಕಾರಕ್ಕೆ ಸಲ್ಲುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪತ್ರದಲ್ಲಿ ಏನಿದೆ?
’ ದಿನಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ಜನಪ್ರಿಯ ಅಂಕಣವಾದ ಸಂಪುಟ ದಲ್ಲಿ ದಿನಾಂಕ: 18.06.2026ರಂದು ಪ್ರಸ್ತಾಪಿಸಲಾಗಿರುವ ‘ಟ್ರ್ಯಾಶ್ ಪೊಲೀಸ್’ ಕಲ್ಪನೆಯು ಅತ್ಯಂತ ಶ್ಲಾಘನೀಯ ಹಾಗೂ ಸಮಯೋಚಿತವಾಗಿದೆ. ಸದಾ ಜನಪರ ಚಿಂತನೆ ಹಾಗೂ ತೀವ್ರ ಕ್ರಿಯಾಶೀಲ ನಾಯಕತ್ವದ ಮೂಲಕ ರಾಜ್ಯವನ್ನು ಪ್ರಗತಿಪಥದಲ್ಲಿ ಮುನ್ನಡೆಸುತ್ತಿರುವ ತಮಗೆ, ನಮ್ಮ ಹೆಮ್ಮೆಯ ರಾಜಧಾನಿಯ ಹಿತದೃಷ್ಟಿಯಿಂದ ಈ ಪತ್ರವನ್ನು ಅತ್ಯಂತ ಗೌರವಪೂರ್ವಕವಾಗಿ ಬರೆಯುತ್ತಿದ್ದೇನೆ. ಜಾಗತಿಕ ತಂತ್ರಜ್ಞಾನ ನಗರಿ ಹಾಗೂ ಒಂದು ಕಾಲದ ಗಾರ್ಡನ್ ಸಿಟಿ ಬೆಂಗಳೂರನ್ನು ಸಂಪೂರ್ಣ ಕಸಮುಕ್ತಗೊಳಿಸಲು ಕೋಟ್ಯಂತರ ರುಪಾಯಿಗಳ ಬಜೆಟ್ ಅಥವಾ ಬೃಹತ್ ಯಂತ್ರೋಪಕರಣಗಳ ಅಗತ್ಯವಿಲ್ಲ. ರಾಜ್ಯದ ಬೊಕ್ಕಸಕ್ಕೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗದಂತೆ, ಕೇವಲ ಕಟ್ಟುನಿಟ್ಟಾದ ನಿಗಾ ಮತ್ತು ತಳಮಟ್ಟದ ಶಿಸ್ತಿನಿಂದ ಇದನ್ನು ಸಾಧಿಸಬಹುದು ಎಂಬುದನ್ನು ಈ ಲೇಖನವು ಅತ್ಯಂತ ಮನವರಿಕೆಯಾಗುವಂತೆ ವಿವರಿಸಿದೆ.
ಜಗತ್ತಿನ ಬಹುತೇಕ ಪ್ರಮುಖ ಪ್ರವಾಸಿ ನಗರಗಳು ಸ್ವಚ್ಛತೆಗೆ ಹೆಸರಾಗಲು ಅಲ್ಲಿನ ಕಠಿಣ ನಿಗಾ ಮತ್ತು ಕಾವಲು ವ್ಯವಸ್ಥೆಯೇ ಮೂಲ ಕಾರಣವಾಗಿದೆ. ನಮ್ಮ ನಗರದಲ್ಲೂ ಕಸ ಎಸೆಯುವುದನ್ನು ಒಂದು ಗಂಭೀರ ಅಪರಾಧ ಎಂದು ಪರಿಗಣಿಸುವಂತಹ ಜಾಗೃತಿ ಹಾಗೂ ಶಿಸ್ತು ಮೂಡಿಸಲು ‘ಟ್ರ್ಯಾಶ್ ಪೊಲೀಸ್’ ವ್ಯವಸ್ಥೆ ಅತ್ಯಗತ್ಯವಾಗಿದೆ. ಇದು ಕೇವಲ ಒಂದು ಪಡೆಯಲ್ಲ, ಬದಲಿಗೆ ತಮ್ಮ ಮಹತ್ವಾಕಾಂಕ್ಷೆಯ ‘ಬ್ಯಾಂಡ್ ಬೆಂಗಳೂರು’ ಕನಸಿಗೆ ಸಿಗುವ ಅತ್ಯಂತ ಶಕ್ತಿಶಾಲಿ ಆಸ್ತ್ರ ವಾಗಬಲ್ಲದು ಎಂಬ ಭಾವನೆ ನನ್ನದು.
ಬೆಂಗಳೂರಿನ ಕೆಲವು ಆಯ್ದ ವಾರ್ಡ್‌ಗಳಲ್ಲಿ ಟ್ರ್ಯಾಶ್ ಪೊಲೀಸ್ ಪಡೆಯನ್ನು ಪ್ರಾಯೋಗಿಕವಾಗಿ ತಕ್ಷಣವೇ ಜಾರಿಗೆ ತರಲು ಕ್ರಮ ಕೈಗೊಳ್ಳಬಹುದು. ಈ ಮಹತ್ತರ ಪ್ರಯೋಗ ಯಶಸ್ವಿಯಾದ ನಂತರ, ಇದನ್ನು ಹಂತಹಂತವಾಗಿ ರಾಜ್ಯದ ಇತರ ಪ್ರಮುಖ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಬಹುದು. ಈ ಶಿಸ್ತಿನ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ, ಇಡೀ ದೇಶದ ಇಂತಹ ಕ್ರಾಂತಿಕಾರಿ ನೈರ್ಮಲ್ಯ ನಿಗಾ ವ್ಯವಸ್ಥೆ ಜಾರಿಗೆ ತಂದ ಮೊದಲ ನಗರ ಎಂಬ ಐತಿಹಾಸಿಕ ಕೀರ್ತಿ ಬೆಂಗಳೂರಿಗೆ ಹಾಗೂ ನಿಮ್ಮ ನೇತೃತ್ವದ ಜನಪರ ಮತ್ತು ಕ್ರಿಯಾಶೀಲ ಸರಕಾರಕ್ಕೆ ಸಲ್ಲುತ್ತದೆ.
ಸಾರ್ವಜನಿಕ ಹಿತದೃಷ್ಟಿ ಹಾಗೂ ನಗರದ ಸೌಂದರ್ಯವನ್ನು ಜಾಗತಿಕ ಮಟ್ಟಕ್ಕೇರಿಸುವ ಈ ನೂತನ ಪ್ರಯೋಗವನ್ನು ತಾವು ಗಂಭೀರವಾಗಿ ಪರಿಗಣಿಸಿ, ಅನುಷ್ಠಾನಕ್ಕೆ ತರುವ ಕುರಿತಂತೆ ಈ ಹಿಂದೆಯು ಉಪ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಗಂಭೀರವಾಗಿ ಪರಿಗಣಿಸಿದ್ದು, ಪ್ರಸ್ತುತ ಬೆಂಗಳೂರು ನಗರದ ಕಸ ವಿಲೇವಾರಿ ವಿಷಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವಿರೆಂದು ನಂಬಿರುವೆ.
ಭಟ್ಟರ ಅಂಕಣದಲ್ಲಿ ಏನಿತ್ತು?
ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರ ಗುರುವಾರದ ‘ನೂರೆಂಟು ವಿಶ್ವ’ ಅಂಕಣದಲ್ಲಿ ‘ಡಿಕೆಶಿಯವರಿಗೆ ನಾನು ಕೊಡುವ ಆ ಒಂದು ಪುಟ್ಟ ಸಲಹೆ!’ ಎನ್ನುವ ಶೀರ್ಷಿಕೆಯಲ್ಲಿ ಬೆಂಗಳೂರಿನ ಕಸದ ಸಮಸ್ಯೆ, ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗರದ ಇಮೇಜ್‌ಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಸುವಿಸ್ತಾರವಾಗಿ ಬರೆದು, ಇದನ್ನು ನಿಯಂತ್ರಿಸಲು ಟ್ರ್ಯಾಶ್ ಪೊಲೀಸರನ್ನು ನೇಮಿಸಿ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಇzರೆ. ಆದರೆ ನಗರದ ಸೌಂದರ್ಯ, ನೈರ್ಮಲ್ಯ, ಸ್ವಚ್ಛತೆ ಕಾಪಾಡಲು ಟ್ರ್ಯಾಶ್ ಪೋಲಿಸರನ್ನು ನೇಮಿಸಿ ಎಂದು ಸಲಹೆ ನೀಡಿದ್ದರು. ಏಕೆಂದರೆ, ಒಂದು ನಗರದ ನಾಗರಿಕ ಪ್ರಜ್ಞೆ ಎನ್ನುವುದು ಅಲ್ಲಿನ ರಸ್ತೆಗಳ ವಿಸ್ತಾರದಲ್ಲಿಲ್ಲ, ಬದಲಿಗೆ ಆ ರಸ್ತೆಯ ಮೂಲೆಯಲ್ಲಿ ಬಿದ್ದಿರುವ ಕಸದ ವಿಲೇವಾರಿಯಲ್ಲಿ ಅಡಗಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ತಕ್ಷಣ ಒಂದು ದಿಟ್ಟ ಹೆಜ್ಜೆ ಇಡಲು ಮುಂದಾದರೆ, ಅವರಿಗೆ ನೀಡಬಹುದಾದ ಅತ್ಯಂತ ಪ್ರಾಯೋಗಿಕ ಮತ್ತು ಕ್ರಾಂತಿಕಾರಿ ಸಲಹೆ ಎಂದರೆ ‘ಬೆಂಗಳೂರು ಟ್ರ್ಯಾಶ್ ಪೊಲೀಸ್’ ಎಂದು ಬರೆದಿದ್ದಾರೆ. ‘ಒಂದು ವೇಳೆ ಇಂಥ ವ್ಯವಸ್ಥೆಯನ್ನು ಅವರು ಜಾರಿಗೆ ತಂದಿದ್ದೇ ಆದರೆ, ಬೆಂಗಳೂರು ನಮ್ಮ ದೇಶದಲ್ಲಿಯೇ ಇಂಥ ವ್ಯವಸ್ಥೆ ಜಾರಿಗೆ ತಂದ ಮೊದಲ ನಗರ ವಾಗುತ್ತದೆ. ಆ ಕೀರ್ತಿ ಡಿ.ಕೆ.ಶಿವಕುಮಾರ ಅವರಿಗೆ ಸಲ್ಲುತ್ತದೆ. ಹಾಂ.. ಈ ಐಡಿಯಾವನ್ನು ಕೊಟ್ಟಿದ್ದಕ್ಕೆ ನನಗೇನೂ ಫೀಸು ಕೊಡಬೇಕಿಲ್ಲ. ಬಿಟಿಪಿ - ಬೆಂಗಳೂರು ಟ್ರ್ಯಾಶ್ ಪೊಲೀಸ್ ಜಾರಿಗೆ ಬಂದ ಆರು ತಿಂಗಳೊಳಗೆ ಬೆಂಗಳೂರಿನ ಖದರು ತನ್ನಷ್ಟಕ್ಕೇ ಬದಲಾಗದಿದ್ದರೆ ಕೇಳಿ. ಡಿಕೆಶಿ ಗಟ್ಟಿ ಮನಸ್ಸು ಮಾಡಬೇಕು’ ಎನ್ನುವ ಅಶಯ ಅಂಕಣದಲ್ಲಿತ್ತು.
*
ಜೂ.18ರ ನೂರೆಂಟು ವಿಶ್ವ ಅಂಕಣದಲ್ಲಿ ಭಟ್ಟರಿಂದ ಸಲಹೆ
ಬೆಂಗಳೂರು ನಗರವನ್ನು ಸಿಂಗಾಪುರದಷ್ಟೇ ಸ್ವಚ್ಛ, ಸುಂದರಗೊಳಿಸುವುದಕ್ಕೆ ಜನರನ್ನು ಸಜ್ಜುಗೊಳಿಸಿ
ಜನರಿಗೇ ಎಲ್ಲೆಂದರಲ್ಲಿ ಕಸ ಎಸೆಯಬಾರದೆಂಬ ಅರಿವು ಹುಟ್ಟಬೇಕು: ಲೇಖನದ ಆಶಯ