ಬೆಂಗಳೂರು: ಕನ್ನಡ ಮಾತನಾಡಲು ಹೆದ್ದಾರಿ ಟೋಲ್‌ಗೇಟ್ ಮ್ಯಾನೇಜರ್ ನಿರಾಕರಿಸಿರುವ ಘಟನೆ ರಾಜಧಾನಿ ಬೆಂಗಳೂರಿನ ಹೊರವಲಯದ ದೇವನಹಳ್ಳಿ ತಾಲೂಕಿನ ನಲ್ಲೂರಿನ ಟೋಲ್‌ಗೇಟ್‌ನಲ್ಲಿ (Devanahalli toll plaza) ನಡೆದಿದ್ದು, ಇದಕ್ಕೆ ಸ್ಥಳೀಯ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. "ಕನ್ನಡ ಕಲಿಯಲ್ಲ, ಇದು ನ್ಯಾಷನಲ್ ಹೈವೇ, ನಾನು ಕನ್ನಡ ಯಾಕೆ ಮಾತನಾಡಬೇಕು ಎಂದು ದರ್ಪದಿಂದ ಮಾತನಾಡುವ ಮೂಲಕ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದಾರೆ.
ಟೋಲ್‌ಗೇಟ್ ಮ್ಯಾನೇಜರ್ ಕನ್ನಡ ಮಾತನಾಡಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮ್ಯಾನೇಜರ್ ತೆಲುಗು ಭಾಷಿಕನಾಗಿದ್ದು, ಟೋಲ್‌ಗೇಟ್‌ನಲ್ಲಿ ಕೆಲಸಕ್ಕೆ ಬಂದು ಒಂದು ವರ್ಷವಾದರೂ ಮ್ಯಾನೇಜರ್ ಕನ್ನಡ ಕಲಿಯಲು ಸಹ ಆಸಕ್ತಿ ತೋರಿಲ್ಲ. ಇವರುಗಳನ್ನು ಕರ್ನಾಟಕದ ತುಂಬಾ ಬಿಟ್ಟುಕೊಂಡು, ಇವರ ಸಿನಿಮಾಗಳನ್ನು ನಮ್ಮಲ್ಲಿ ಬಿಡುಗಡೆ ಮಾಡುತ್ತೇವೆ. ಇವರು ಕನ್ನಡ ಕಲಿಯಲು ಪ್ರಯತ್ನಿಸುವುದೂ ಇಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳೀಯರ ಪ್ರಕಾರ, ಮ್ಯಾನೇಜರ್ ಪ್ರತಿದಿನ ಸ್ಥಳೀಯ ಸಿಬ್ಬಂದಿ ಜತೆ ಕೆಲಸ ಮಾಡುತ್ತಿದ್ದರೂ ಕನ್ನಡ ಭಾಷೆ ಕಲಿಯುವ ಬದಲು ತಮಿಳು-ತೆಲುಗು ಭಾಷೆಗಳಲ್ಲಿ ಮಾತ್ರ ಸಂವಹನ ಮಾಡುತ್ತಿದ್ದಾರೆ. ಈ ಮ್ಯಾನೇಜರ್‌ನ ಈ ಸ್ಥಳೀಯ ಭಾಷಾ ವಿರೋಧಿ ಧೋರಣೆ ಸ್ಥಳೀಯ ಕನ್ನಡಿಗರ ಗೌರವಕ್ಕೆ ಧಕ್ಕೆ ತಂದಂತಾಗಿದೆ ಎಂದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಕನ್ನಡ ಭಾಷೆಯ ಗೌರವ ಕಾಪಾಡಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು. 'ಕನ್ನಡ ಕಲಿಯದವರಿಗೆ ಸರ್ಕಾರದ ಅನುಮತಿ ಮತ್ತು ಸೌಲಭ್ಯ ನೀಡಬಾರದು. ರಾಜ್ಯಕ್ಕೆ ಬರುವ ಪ್ರತಿಯೊಬ್ಬರೂ ಕನಿಷ್ಠ ಮಟ್ಟದ ಕನ್ನಡ ಕಲಿಯಬೇಕು ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಬೇಕು' ಎಂದು ಒತ್ತಾಯಿಸಿವೆ.
ಈ ಸುದ್ದಿಯನ್ನೂ ಓದಿ | Viral Video: ಪೊಲೀಸರ ಮುಂದೆಯೇ ರಿಕ್ಷಾ ಚಾಲಕನಿಂದ ಪ್ರಯಾಣಿಕನಿಗೆ ಕಪಾಳಮೋಕ್ಷ; ವಿಡಿಯೋ ವೈರಲ್