ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಈಶ ಗ್ರಾಮೋತ್ಸವದಲ್ಲಿ ಕರ್ನಾಟಕ ತಂಡಗಳ ಪ್ರಾಬಲ್ಯ; ಮಹಿಳೆಯರ ಥ್ರೋಬಾಲ್‌ನಲ್ಲಿ ಬಡಗನ್ನೂರು ತಂಡ ಚಾಂಪಿಯನ್‌

Isha Gramotsavam 2025: ಮಹಿಳೆಯರ ಥ್ರೋಬಾಲ್‌ನಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು ತಂಡವು ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ದೇವರಾಯಪುರಂ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಜೇತರು 5 ಲಕ್ಷ ರೂ. ಬಹುಮಾನ ಪಡೆದರೆ, ರನ್ನರ್-ಅಪ್ ತಂಡ 3 ಲಕ್ಷ ರೂ. ಬಹುಮಾನ ಪಡೆದರು.

ಈಶ ಗ್ರಾಮೋತ್ಸವದಲ್ಲಿ ಕರ್ನಾಟಕ ತಂಡಗಳ ಪ್ರಾಬಲ್ಯ

-

Prabhakara R Prabhakara R Sep 22, 2025 4:37 PM

ಕೊಯಂಬತ್ತೂರು: ಈಶ ಗ್ರಾಮೋತ್ಸವ-2025ರಲ್ಲಿ ಕರ್ನಾಟಕದ ತಂಡಗಳು ಪ್ರಾಬಲ್ಯ ಮೆರೆದಿವೆ. ಮಹಿಳೆಯರ ಥ್ರೋಬಾಲ್‌ನಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು ತಂಡವು ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ದೇವರಾಯಪುರಂ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಪುರುಷರ ವಾಲಿಬಾಲ್‌ನಲ್ಲಿ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಗ್ಗಡಿಹಳ್ಳಿ ತಂಡವು ರನ್ನರ್‌ ಅಪ್ ಆಗಿ ಹೊರಹೊಮ್ಮುವ ಮೂಲಕ ಕರ್ನಾಟಕದ ಗ್ರಾಮೀಣ ಆಟಗಾರರ ಶಕ್ತಿ ಹಾಗೂ ಚೈತನ್ಯವನ್ನು ತೋರ್ಪಡಿಸಿದೆ. 

ವಿಜೇತರು 5 ಲಕ್ಷ ರೂ. ಬಹುಮಾನ ಪಡೆದರೆ, ರನ್ನರ್-ಅಪ್ ತಂಡ 3 ಲಕ್ಷ ರೂ. ಬಹುಮಾನ ಪಡೆದರು. ಗ್ರ್ಯಾಂಡ್‌ ಫಿನಾಲೆ ಮೂಲಕ ಈಶ ಗ್ರಾಮೋತ್ಸವದ ಎರಡು ತಿಂಗಳುಗಳ ಸರಣಿ ಪಂದ್ಯಾವಳಿಗಳಿಗೆ ವಿಜೃಂಭಣೆಯಿಂದ ತೆರೆ ಎಳೆಯಲಾಯಿತು.

Isha Gramotsavam 2025 (4)

“ಇಷ್ಟೊಂದು ಭಾರೀ ಮಟ್ಟದ ಕಾರ್ಯಕ್ರಮವನ್ನು ಸದ್ಗುರುಗಳು ಹೇಗೆ ಆಯೋಜಿಸಿದ್ದಾರೆ ಎಂಬುದನ್ನು ತಿಳಿಯಲು ನಾನು ಈಶ ಗ್ರಾಮೋತ್ಸವಕ್ಕೆ ಬಂದಿದ್ದೇನೆ” ಎಂದು 2025ರ ಈಶ ಗ್ರಾಮೋತ್ಸವದ ಅಪಾರ ವ್ಯಾಪ್ತಿ ಮತ್ತು ಭವ್ಯತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತ, ಭಾರತದ ಕಾರ್ಮಿಕ ಹಾಗೂ ಉದ್ಯೋಗ ಸಚಿವರು ಹಾಗೂ ಯುವಜನಾಂಗ ಮತ್ತು ಕ್ರೀಡಾ ಸಚಿವರಾದ ಮನ್ಸುಖ್ ಮಾಂಡವಿಯಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. 

Isha Gramotsavam 2025 (1)

ಎರಡು ತಿಂಗಳ ಅವಧಿಯಲ್ಲಿ ನಡೆದ ಈಶ ಗ್ರಾಮೋತ್ಸವದ 2025ರ ಆವೃತ್ತಿಯು ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ಆರು ರಾಜ್ಯಗಳಲ್ಲಿ ಮತ್ತು ಮೊದಲ ಬಾರಿಗೆ ಒಡಿಶಾದಲ್ಲಿ ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಿತು. ಈ ಬಾರಿಯ ಉತ್ಸವವು 183 ಸ್ಥಳಗಳು, 5,472 ತಂಡಗಳು, 12,000 ಕ್ಕೂ ಹೆಚ್ಚು ಮಹಿಳೆಯರನ್ನು ಒಳಗೊಂಡಂತೆ ಒಟ್ಟು 63,220 ಸ್ಪರ್ಧಿಗಳು, ಮತ್ತು 35,000ಕ್ಕೂ ಹೆಚ್ಚು ಹಳ್ಳಿಗಳ ಪ್ರಾತಿನಿಧ್ಯಕ್ಕೆ ಸಾಕ್ಷಿಯಾಯಿತು.

Isha Gramotsavam 2025 (5)

“2028ರ ವೇಳೆಗೆ ಈಶ ಗ್ರಾಮೋತ್ಸವವು ದೇಶದ 28 ರಾಜ್ಯಗಳಲ್ಲೂ ನಡೆಯಬೇಕಾಗಿದೆ, ಇದು ನನ್ನ ಬದ್ಧತೆ. ಇದು ಕೇವಲ ಕ್ರೀಡೆಯ ವಿಷಯವಲ್ಲದೆ, ಗ್ರಾಮೀಣ ಭಾರತದಲ್ಲಿ ವಿಭಿನ್ನ ಸ್ತರದ ಜೀವನವನ್ನು ಪುನರ್ಜ್ವಲಿಸುವುದು ಮತ್ತು ಮರುಜಾಗೃತಗೊಳಿಸುವುದೇ ಇದರ ಉದ್ದೇಶ” ಎಂದು ಸಭಿಕರನ್ನುದ್ದೇಶಿಸಿ ಸದ್ಗುರುಗಳು ಹೇಳಿದರು.

Isha Gramotsavam 2025 (2)

2004ರಲ್ಲಿ ಸದ್ಗುರುಗಳು ಚಾಲನೆ ನೀಡಿದ ಈಶ ಗ್ರಾಮೋತ್ಸವವು ಸಾಮಾಜಿಕ ಪರಿವರ್ತನೆಗೆ ಪ್ರಬಲ ಸಾಧನವಾಗಿದೆ, ಇದರಿಂದಾಗಿ ಗ್ರಾಮೀಣ ಜನರು ವ್ಯಸನಗಳಿಂದ ಮುಕ್ತರಾಗಲು, ಜಾತಿ ವಿಭಜನೆಗಳನ್ನು ಮೀರಿ ನಿಲ್ಲಲು, ಮಹಿಳಾ ಸಬಲೀಕರಣ ಮತ್ತು ಗ್ರಾಮೀಣ ಭಾಗಗಳಲ್ಲಿ ಉತ್ಸಾಹಪೂರ್ಣ ಆಟದ ಮನೋಭಾವವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ತಂಡವನ್ನು ಗ್ರಾಮ ಪಂಚಾಯಿತಿಯ ಮಿತಿಯೊಳಗಿನ ಆಟಗಾರರೊಂದಿಗೆ ಮಾತ್ರ ರಚಿಸಬಹುದಾಗಿದ್ದು, ಇದು ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ  ಸ್ಥಳೀಯ ಹೆಮ್ಮೆಯನ್ನು ಆಚರಿಸುತ್ತದೆ.

ವೃತ್ತಿಪರ ಆಟಗಾರರಿಗಲ್ಲದೆ, ಈಶ ಗ್ರಾಮೋತ್ಸವವು ಗ್ರಾಮೀಣ ಚೈತನ್ಯದ ಸಂಭ್ರಮಾಚರಣೆಯಾಗಿದೆ. ಇದು ರೈತರು, ದಿನಗೂಲಿ ಕಾರ್ಮಿಕರು ಮತ್ತು ಗೃಹಿಣಿಯರು ಸೇರಿದಂತೆ ಜನಸಾಮಾನ್ಯ ಗ್ರಾಮೀಣ ಜನರಿಗೆ ತಮ್ಮ ದೈನಂದಿನ ಕಾರ್ಯಗಳಿಂದ ಹೊರಬಂದು ಕ್ರೀಡೆಯ ಸಂಭ್ರಮ ಮತ್ತು ಐಕ್ಯತೆಯ ಶಕ್ತಿಯನ್ನು ಆನಂದಿಸಲು ಅವಕಾಶ ನೀಡುತ್ತದೆ.

ಈ ಸುದ್ದಿಯನ್ನೂ ಓದಿ | Asia Cup 2025: ಪಾಕಿಸ್ತಾನ ತಂಡದ ವೈಫಲ್ಯಕ್ಕೆ ಸಲ್ಮಾನ್‌ ಆಘಾ ಕಾರಣ ಎಂದ ಶೋಯೆಬ್‌ ಅಖ್ತರ್‌!

ಈಶ ಗ್ರಾಮೋತ್ಸವವನ್ನು ಆಯೋಜಿಸುವ ಈಶ ಔಟ್‌ರೀಚ್ಅನ್ನು ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದಿಂದ ‘ನ್ಯಾಷನಲ್ ಸ್ಪೋರ್ಟ್ಸ್ ಪ್ರಮೋಷನ್ ಆರ್ಗನೈಸೇಷನ್’(NSPO) ಎಂದು ಗುರುತಿಸಲಾಗಿದೆ. 2018ರಲ್ಲಿ, ಈ ಉಪಕ್ರಮವು ಬೇರುಮಟ್ಟದ ಕ್ರೀಡೆಗಳಿಗೆ ನೀಡಿದ ಅಸಾಧಾರಣ ಕೊಡುಗೆಗಾಗಿ ಪ್ರತಿಷ್ಠಿತ ರಾಷ್ಟ್ರೀಯ ಖೇಲ್ ಪ್ರೋತ್ಸಾಹ ಪುರಸ್ಕಾರವನ್ನು ಪಡೆಯಿತು.