ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: ʼಸ್ಪಿರಿಟ್‌ʼ, ʼಕಲ್ಕಿ 2' ಚಿತ್ರಗಳಿಂದ ಹೊರಬಿದ್ದ ಬೆನ್ನಲ್ಲೇ ಹಾಲಿವುಡ್‌ಗೆ ಹಾರಿದ್ರಾ ದೀಪಿಕಾ ಪಡುಕೋಣೆ?

2017ರಲ್ಲಿ ತೆರೆಕಂಡ ʼXXX: ರಿಟರ್ನ್‌ ಆಫ್‌ ಕ್ಸಂಡರ್‌ ಕೇಜ್‌ʼ ಇಂಗ್ಲಿಷ್‌ ಚಿತ್ರದ ಮೂಲಕ ಹಾಲಿವುಡ್‌ಗೆ ಕಾಲಿಟ್ಟ ದೀಪಿಕಾ ಪಡುಕೋಣೆ ಇದೀಗ ಮತ್ತೊಂದು ಇಂಗ್ಲಿಷ್‌ ಚಿತ್ರ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. 'ಸ್ಪಿರಿಟ್‌' ಮತ್ತು 'ಕಲ್ಕಿ 2' ಚಿತ್ರಗಳಿಂದ ಅವರು ಹೊರ ನಡೆದ ಬೆನ್ನಲ್ಲೇ ಈ ಸುದ್ದಿ ವೈರಲ್‌ ಆಗಿದೆ.

ಹಾಲಿವುಡ್‌ ಚಿತ್ರ ಒಪ್ಪಿಕೊಂಡ ದೀಪಿಕಾ ಪಡುಕೋಣೆ?

-

Ramesh B Ramesh B Sep 22, 2025 5:34 PM

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌, ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಗೆ ಭಾರಿ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಗಳು ದುವಾಗೆ ಜನ್ಮ ನೀಡಿದ ಅವರು ಚಿಕ್ಕ ಬ್ರೇಕ್‌ ನಂತರ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲು ಅರ್ಜುನ್‌-ಅಟ್ಲಿ ಕಾಂಬಿನೇಷನ್‌ ಬಹು ನಿರೀಕ್ಷಿತ ತೆಲುಗು ಚಿತ್ರವನ್ನು ಒಪ್ಪಿಕೊಂಡ ಅವರು ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಖಾನ್‌ ಅವರ ಕಿಂಗ್‌ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರ ಜತೆಗೆ ಟಾಲಿವುಡ್‌ ಸ್ಟಾರ್‌ ಪ್ರಭಾಸ್‌ (Prabhas) ಅಭಿನಯದ 'ಸ್ಪಿರಿಟ್‌' ಮತ್ತು 'ಕಲ್ಕಿ 2' ಚಿತ್ರಗಳಿಂದ ಹೊರ ನಡೆದಿದ್ದಾರೆ. ಅತಿಯಾದ ಸಂಭಾವನೆ ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟ ಕಾರಣ ಅವರನ್ನು ಈ ಚಿತ್ರಗಳಿಂದ ಕೈಬಿಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಚರ್ಚೆ ಹುಟ್ಟು ಹಾಕಿದೆ. ಇದೆಲ್ಲದರ ಮಧ್ಯೆ ಅವರು ತಮ್ಮ 2ನೇ ಹಾಲಿವುಡ್‌ ಚಿತ್ರ ಒಪ್ಪಿಕೊಂಡಿದ್ದಾರೆ ಎನ್ನುವ ವರದಿಯೂ ಹೊರಬಿದ್ದಿದೆ.

2006ರಲ್ಲಿ ತೆರೆಕಂಡ ಉಪೇಂದ್ರ ಅವರ ಕನ್ನಡದ ʼಐಶ್ವರ್ಯʼ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾ 2007ರಲ್ಲಿ ರಿಲೀಸ್‌ ಆದ ʼಓಂ ಶಾಂತಿ ಓಂʼ ಮೂಲಕ ಬಾಲಿವುಡ್‌ ಪ್ರವೇಶಿಸಿದರು. ಮೊದಲ ಚಿತ್ರದಲ್ಲೇ ಶಾರುಖ್‌ ಖಾನ್‌ಗೆ ಜೋಡಿಯಾಗಿ ನಟಿಸಿ ಗಮನ ಸೆಳೆದರು. ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಿಂದಿ ಸಿನಿಮಾಗಳಲ್ಲಿ ನಟಿಸಿ ಬಾಲಿವುಡ್‌ನ ಟಾಪ್‌ ನಾಯಕಿಯಲ್ಲಿ ಒಬ್ಬರೆನಿಸಿಕೊಂಡರು. ಅದಾದ ಬಳಿಕ 2017ರಲ್ಲಿ ʼXXX: ರಿಟರ್ನ್‌ ಆಫ್‌ ಕ್ಸಂಡರ್‌ ಕೇಜ್‌ʼ (XXX: Return of Xander Cage) ಇಂಗ್ಲಿಷ್‌ ಚಿತ್ರದ ಮೂಲಕ ಹಾಲಿವುಡ್‌ಗೂ ಹಾರಿದರು. ಮೊದಲ ಹಾಲಿವುಡ್‌ ಚಿತ್ರದಲ್ಲೇ ಜಾಗತಿಕ ಸಿನಿ ಪ್ರೇಕ್ಷಕರ ಗಮನ ಸೆಳೆದ ಅವರು ಇದೀಗ ಮತ್ತೊಂದು ಇಂಗ್ಲಿಷ್‌ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Deepika Padukone: ಕ್ರಿಸ್ಟಿಯಾನೊ ರೊನಾಲ್ಡೊ ಹಿಂದಿಕ್ಕಿ ಹೊಸ ದಾಖಲೆ ಬರೆದ ದೀಪಿಕಾ ಪಡುಕೋಣೆ; ರೀಲ್‌ 190 ಕೋಟಿ ವೀಕ್ಷಣೆ

ʼXXX: ರಿಟರ್ನ್‌ ಆಫ್‌ ಕ್ಸಂಡರ್‌ ಕೇಜ್‌ʼ ನಾಯಕ ವಿನ್‌ ಡೀಸೆಲ್‌ ಚಿತ್ರದ ಮುಂದಿನ ಭಾಗವನ್ನು ಘೋಷಿಸಿದ್ದಾರೆ. ಈ ಭಾಗದ ಕಥೆ ಮುಂಬೈಯಲ್ಲಿ ನಡೆಯಲಿದೆ. ಹೀಗಾಗಿ ನಾಯಕಿಯಾಗಿ ದೀಪಿಕಾ ನಟಿಸಲಿದ್ದಾರೆ ಎನ್ನಲಾಗಿದ್ದು, ಇನ್ನೂ ಅಧಿಕೃತ ಪ್ರಕಟಣೆ ಹೊರ ಬಿದ್ದಲ್ಲ.

ʼಕಲ್ಕಿ 2ʼ ಚಿತ್ರದಿಂದ ಹೊರ ಬಿದ್ದಿದ್ದೇಕೆ?

ಇತ್ತೀಚೆಗೆ ʼಕಲ್ಕಿ 2ʼ ಚಿತ್ರತಂಡ ಅಧಿಕೃತ ಪ್ರಕಟಣೆ ಹೊರಡಿಸಿ ದೀಪಿಕಾ ನಾಯಕಿ ಪಾತ್ರದಿಂದ ಹೊರ ನಡೆದಿದ್ದಾರೆ ಎಂದು ತಿಳಿಸಿತ್ತು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೂ ಮೊದಲು ಅವರನ್ನು ʼಸ್ಪಿರಿಟ್‌ʼ ಸಿನಿಮಾದಿಂದ ಹೊರಗಿಡಲಾಗಿತ್ತು. ದೀಪಿಕಾ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಷರತ್ತು ವಿಧಿಸಿದ್ದರಿಂದ ಅವರನ್ನು ಈ ಚಿತ್ರಗಳಿಂದ ತೆಗೆದು ಹಾಕಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಕಳೆದ ವರ್ಷ ತೆರೆಕಂಡ ʼಕಲ್ಕಿ 2898 ಎಡಿʼ ಸಿನಿಮಾದ ನಾಯಕಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದರು. 2 ಭಾಗಗಳಲ್ಲಿ ಚಿತ್ರ ಮೂಡಿ ಬರಲಿದೆ ಎಂದು ನಿರ್ದೇಶಕ ನಾಗ್‌ ಅಶ್ವಿನ್‌ ಮೊದಲೇ ಘೋಷಿಸಿದ್ದರು. ಇನ್ನೇನು ಅದರ ಸೀಕ್ವೆಲ್‌ನ ಶೂಟಿಂಗ್‌ ಆರಂಭಿಸಲು ಮುಂದಾಗಿದ್ದರು. ಆದರೆ ಇದೀಗ ದೀಪಿಕಾ ನಾಯಕಿ ಪಾತ್ರದಿಂದ ಹೊರ ನಡೆದಿರುವುದು ಅನುಮಾನ ಮೂಡಿಸಿದೆ. ಚಿತ್ರದಲ್ಲಿ ದೀಪಿಕಾ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ. 2ನೇ ಭಾಗದ ಕಥೆ ಅವರ ಸುಮತಿ ಪಾತ್ರದ ಸುತ್ತವೇ ಸುತ್ತುವ ಸೂಚನೆ ಮೊದಲ ಭಾಗದಲ್ಲಿ ಸಿಕ್ಕಿದೆ. ಅದಾಗ್ಯೂ ಅವರ ನಿರ್ಗಮನ ಪರ-ವಿರೋಧ ಚರ್ಚೆ ಹುಟ್ಟು ಹಾಕಿದೆ.