ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉರಿ ಬಿಸಿಲಿಗೆ ಕಮರುತ್ತಿದೆ ರಾಜ್ಯದ ಯುವಜನರ ಭವಿಷ್ಯ! ಕರುನಾಡಿನ 'ತಾಪ'ದ ಬಗ್ಗೆ ತಜ್ಞರ ಕಳವಳ

"ಕರ್ನಾಟಕದಲ್ಲಿ ಬಿಸಿಲು, ಆರೋಗ್ಯ ಮತ್ತು ಯುವಜನತೆ: ಯುವ-ಸ್ನೇಹಿ ಮತ್ತು ತಾಪಮಾನ-ನಿರೋಧಕ ನೀತಿ ವ್ಯವಸ್ಥೆಯ ನಿರ್ಮಾಣ" (Heat, Health and Young People in Karnataka) ಹೆಸರಿನ ಈ ವರದಿಯನ್ನು ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್‌ನಲ್ಲಿ ಬಿಡುಗಡೆ ಮಾಡಲಾಯಿತು.

ಬೆಂಗಳೂರು: ತಾಪಮಾನ ಏರಿಕೆ(Rise in temperature) ಎನ್ನುವುದು ಈಗ ಕೇವಲ ಪರಿಸರಕ್ಕೆ ಸೀಮಿತವಾದ ಸಮಸ್ಯೆಯಾಗಿ ಉಳಿದಿಲ್ಲ. ಇದು ಕರ್ನಾಟಕದಾದ್ಯಂತ ಯುವಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೊಸ ಅಧ್ಯಯನ ಎಚ್ಚರಿಸಿದೆ.

ದಿನೇ ದಿನೇ ಹೆಚ್ಚುತ್ತಿರುವ ತಾಪಮಾನವು ಕರ್ನಾಟಕದ ಯುವಜನರ ಬದುಕು ಮತ್ತು ಭವಿಷ್ಯದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತಿದೆ ಎಂಬುದರ ಕುರಿತು 'ರೆಸ್ಟ್‌ಲೆಸ್ ಡೆವಲಪ್‌ಮೆಂಟ್' ಮತ್ತು 'ಸ್ವಸ್ತಿ' ಸಂಸ್ಥೆಗಳು ಜಂಟಿಯಾಗಿ ಮಹತ್ವದ ಸಂಶೋಧನೆ ನಡೆಸಿದ್ದು, ಈ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿವೆ.

"ಕರ್ನಾಟಕದಲ್ಲಿ ಬಿಸಿಲು, ಆರೋಗ್ಯ ಮತ್ತು ಯುವಜನತೆ: ಯುವ-ಸ್ನೇಹಿ ಮತ್ತು ತಾಪಮಾನ-ನಿರೋಧಕ ನೀತಿ ವ್ಯವಸ್ಥೆಯ ನಿರ್ಮಾಣ" (Heat, Health and Young People in Karnataka) ಹೆಸರಿನ ಈ ವರದಿಯನ್ನು ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್‌ನಲ್ಲಿ ಬಿಡುಗಡೆ ಮಾಡಲಾಯಿತು.

ಹವಾಮಾನ ವೈಪರೀತ್ಯ ಮತ್ತು ಸಾರ್ವಜನಿಕ ಆರೋಗ್ಯ ನೀತಿಗಳನ್ನು ರೂಪಿಸುವಾಗ ಯುವ ಜನರನ್ನು ಕೇವಲ ಸಂತ್ರಸ್ತರಂತೆ ನೋಡದೆ, ಅವರನ್ನು ನೀತಿ ನಿರೂಪಣೆಯಲ್ಲಿ ಪ್ರಮುಖ ಪಾಲು ದಾರರನ್ನಾಗಿ ಸೇರಿಸಿಕೊಳ್ಳಬೇಕು ಎಂದು ಈ ವರದಿ ಪ್ರಮುಖವಾಗಿ ಪ್ರತಿಪಾದಿಸಿದೆ.

ಇದನ್ನೂ ಓದಿ: Bangalore News: ಮತ್ತೊಮ್ಮೆ ಎಲ್‌ಪಿಜಿ ಬೆಲೆ ಏರಿಕೆ: ಉಜ್ವಲ ಸಿಲೆಂಡರ್ 4ಕ್ಕೆ ಇಳಿಸಿ ಅಡುಗೆ ಮನೆಗೆ ಕೊಳ್ಳಿ ಇಟ್ಟ ಪ್ರಧಾನಿ ಮೋದಿ: ಡಾ.ಆನಂದ ಕುಮಾರ್

ಅಲ್ಲದೆ, ವಸತಿ, ಕುಡಿಯುವ ನೀರು, ಮೂಲಸೌಕರ್ಯ ಮತ್ತು ಭೌಗೋಳಿಕ ಪರಿಸ್ಥಿತಿಗಳಿಗೆ ಸಂಬಂಧಿ ಸಿದ ಅಸಮಾನತೆಗಳನ್ನು ಈ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಿಸುತ್ತಿದೆ. ಬಿಸಿಲಿನ ಬೇಗೆಯಿಂದ ಯುವಜನರೇ ಅತಿ ಹೆಚ್ಚು ಸಂಕಷ್ಟ ಎದುರಿಸುತ್ತಿದ್ದರೂ, ಹವಾಮಾನಕ್ಕೆ ಸಂಬಂಧಿಸಿದ ನಿರ್ಧಾರ ಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರ ಪಾಲ್ಗೊಳ್ಳುವಿಕೆ ತೀರಾ ವಿರಳವಾಗಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

4 ಭೌಗೋಳಿಕ ಪ್ರದೇಶಗಳಲ್ಲಿ ಅಧ್ಯಯನ

ಈ ಸಂಶೋಧನಾ ವರದಿಯನ್ನು ಸಿದ್ಧಪಡಿಸಲು ಕರ್ನಾಟಕದ 4 ವಿಭಿನ್ನ ಪರಿಸರ ವ್ಯವಸ್ಥೆಗಳನ್ನು (ನಗರ, ಕರಾವಳಿ, ಬುಡಕಟ್ಟು ಮತ್ತು ಶುಷ್ಕ ಕೃಷಿ ಪ್ರದೇಶಗಳು) ಆಯ್ಕೆ ಮಾಡಿಕೊಳ್ಳಲಾಗಿತ್ತು. ಅಲ್ಲಿನ ಯುವಜನರ ಸಮಸ್ಯೆಗಳನ್ನು ಆಲಿಸಿ, ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ. ಯುವಜನರನ್ನು ಕೇವಲ 'ದುರ್ಬಲರು' ಎಂದು ಪರಿಗಣಿಸದೆ, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ 'ಜ್ಞಾನವುಳ್ಳ ಸಮುದಾಯದ ರಕ್ಷಕರು' ಎಂದು ವರದಿ ಬಣ್ಣಿಸಿದೆ.

ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ 'ರೆಸ್ಟ್‌ಲೆಸ್ ಡೆವಲಪ್‌ಮೆಂಟ್' ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ನಳಿನಿ ನೂಪುರ್ ಪಾಲ್, "ತಾಪಮಾನ ಏರಿಕೆಯ ಬಿಸಿ ಯುವಜನರಿಗೆ ಅತಿ ಹೆಚ್ಚು ತಟ್ಟುತ್ತಿದೆ. ಆದರೂ ಹವಾಮಾನ ಬದಲಾವಣೆಯ ಚರ್ಚೆಗಳಲ್ಲಿ ಅವರ ಧ್ವನಿಗಳೇ ಕೇಳಿಸು ತ್ತಿಲ್ಲ. ಯುವಜನರು ಕೇವಲ ಸಮಸ್ಯೆಗಳನ್ನು ಎದುರಿಸುತ್ತಿಲ್ಲ, ಬದಲಾಗಿ ತಮ್ಮ ಅನುಭವದ ಮೂಲಕ ಪರಿಹಾರಗಳನ್ನೂ ಸೂಚಿಸುತ್ತಿದ್ದಾರೆ. ಯುವ ನಾಯಕತ್ವದ ಮೇಲೆ ಹೂಡಿಕೆ ಮಾಡುವ ಅವಶ್ಯಕತೆ ಇದೆ," ಎಂದು ಅಭಿಪ್ರಾಯಪಟ್ಟರು.

'ಸ್ವಸ್ತಿ' ಸಂಸ್ಥೆಯ ಸಿಇಒ ಶ್ರೀರೂಪ ಸೇನ್‌ಗುಪ್ತ ಮಾತನಾಡಿ, "ಬಿಸಿಲು ಎನ್ನುವುದು ಸಾರ್ವಜನಿಕ ಆರೋಗ್ಯ ಮತ್ತು ಅಭಿವೃದ್ಧಿಗೆ ದೊಡ್ಡ ಸವಾಲಾಗಿದೆ. ಇದು ಯುವಜನರ ಕಲಿಕೆ, ಕೆಲಸ ಮತ್ತು ಪ್ರಯಾಣದ ಮೇಲೆ ಪ್ರಭಾವ ಬೀರುತ್ತಿದೆ. ಸ್ಥಳೀಯ ವಾಸ್ತವಗಳಿಗೆ ಸ್ಪಂದಿಸಬೇಕಾದ ಹಾಗೂ ಯುವಜನರ ದೃಷ್ಟಿಕೋನಗಳನ್ನು ಒಳಗೊಂಡ ವ್ಯವಸ್ಥೆ ಮತ್ತು ನೀತಿಗಳನ್ನು ರೂಪಿಸಬೇಕಾದ ಅಗತ್ಯವನ್ನು ಈ ವರದಿ ಒತ್ತಿಹೇಳುತ್ತದೆ. ಸುಭದ್ರ ಭವಿಷ್ಯಕ್ಕಾಗಿ ಎಲ್ಲ ವಲಯಗಳ ನಡುವೆ ಬಲವಾದ ಸಹಯೋಗ ಅಗತ್ಯವಿದೆ," ಎಂದರು.

ಈ ವರದಿ ಬಿಡುಗಡೆ ಸಮಾರಂಭದಲ್ಲಿ ಸರ್ಕಾರ, ಶಿಕ್ಷಣ, ನಾಗರಿಕ ಸಮಾಜ ಮತ್ತು ಯುವ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. 'ಹೀಟ್ ಎಕ್ಸ್‌ಪೀರಿಯೆನ್ಸ್ ಸೆಂಟರ್' ವೀಕ್ಷಣೆ, ಸಂಶೋಧನಾ ಪಯಣವನ್ನು ವಿವರಿಸುವ ಕಿರುಚಿತ್ರ ಪ್ರದರ್ಶನ ಹಾಗೂ ಯುವಜನರ ಧ್ವನಿ ಯನ್ನು ಒಳಗೊಂಡ ಪ್ಯಾನೆಲ್ ಚರ್ಚೆ ಎಲ್ಲರ ಗಮನ ಸೆಳೆಯಿತು.

ಮುಂದಿನ ದಿನಗಳಲ್ಲಿ ಈ ವರದಿಯನ್ನು ಸರ್ಕಾರದ ನೀತಿ ನಿರೂಪಕರು ಮತ್ತು ಶೈಕ್ಷಣಿಕ ವಲಯಕ್ಕೆ ತಲುಪಿಸಿ, ತಾಪಮಾನವನ್ನು ಸಮರ್ಥವಾಗಿ ಎದುರಿಸಬಲ್ಲ ಕರ್ನಾಟಕವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.