ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಮ ಮಂದಿರ ಕಳ್ಳತನ ಪ್ರಕರಣ; ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎನ್. ಭಟ್ ವಿಶ್ವವಾಣಿಗೆ ಹೇಳಿದ್ದೇನು?

ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿ ಹಣ ಕಳವು ಆರೋಪ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಶ್ರೀರಾಮ ಜನ್ಮಭೂಮಿ ಪ್ರಕರಣದಲ್ಲಿ ಶ್ರೀರಾಮನ ಪರ ವಕೀಲರಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎನ್. ಭಟ್ ಅವರು ಈ ಬೆಳವಣಿಗೆಯ ಕುರಿತು ವಿಶ್ವವಾಣಿಯ ಹಿರಿಯ ಪ್ರತಿನಿಧಿ ರಾಘವ್‌ ಶರ್ಮಾ ನಿಡ್ಲೆ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರದ (Rama Mandira) ಹುಂಡಿ ಹಣ ಕಳವು ಆರೋಪ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಶ್ರೀರಾಮ ಜನ್ಮಭೂಮಿ ಪ್ರಕರಣದಲ್ಲಿ ಶ್ರೀರಾಮನ ಪರ ವಕೀಲರಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎನ್. ಭಟ್ ಅವರು ಈ ಬೆಳವಣಿಗೆಯ ಕುರಿತು ವಿಶ್ವವಾಣಿಯ (Vishwavani) ಹಿರಿಯ ಪ್ರತಿನಿಧಿ ರಾಘವ್‌ ಶರ್ಮಾ ನಿಡ್ಲೆ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅಯೋಧ್ಯ ಜಮೀನು ಪ್ರಕರಣದಲ್ಲಿ ಹಿಂದೆ ಅಲಹಾಬಾದ್ ಹೈಕೋರ್ಟ್ನಲ್ಲಿ ಕೇಸ್ ಇದ್ದಾಗ ಆಗ ಶ್ರೀರಾಮನ ಪ್ರತಿನಿಧಿಯ ವಕೀಲರಾಗಿ ಕೆ ಎನ್ ಭಟ್ ಅವರು ಕಾರ್ಯ ನಿರ್ವಹಿಸಿದ್ದರು.

WhatsApp Image 2026-07-04 at 7.15.09 PM

ರಾಘವ್‌ ಶರ್ಮ ನಿಡ್ಲೆ

ಚಂಪತ್‌ರಾಯ್‌ ಜೊತೆ ಸಾಕಷ್ಟು ಬಾರಿ ಒಟ್ಟಿಗೆ ಕೆಲಸ ಮಾಡಿದ್ದ ಇವರು, ಇದೀಗ ಕಳ್ಳತನ ಪ್ರಕರಣದ ಕುರಿತು ಮಾತನಾಡಿದ್ದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ರಾಮ ಮಂದಿರದಂತಹ ರಾಷ್ಟ್ರಪ್ರಾಮುಖ್ಯತೆಯ ಧಾರ್ಮಿಕ ಸಂಸ್ಥೆಯಲ್ಲಿ ವ್ಯಕ್ತಿ ಆಧಾರಿತ ಆಡಳಿತಕ್ಕಿಂತ ವ್ಯವಸ್ಥೆ ಆಧಾರಿತ ಆಡಳಿತವೇ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು, 2003ರಿಂದ ಹಲವು ವರ್ಷಗಳ ಕಾಲ ಅಯೋಧ್ಯೆ ಪ್ರಕರಣದ ಕಾನೂನು ಹೋರಾಟದಲ್ಲಿ ಭಾಗಿಯಾಗಿದ್ದ ಅನುಭವವನ್ನು ನೆನಪಿಸಿಕೊಂಡರು. ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದು, ಅವರ ವ್ಯಕ್ತಿತ್ವ ಹಾಗೂ ಕಾರ್ಯವೈಖರಿಯನ್ನು ಹತ್ತಿರದಿಂದ ಕಂಡಿದ್ದೇನೆ. ಅವರ ಪ್ರಾಮಾಣಿಕತೆಯ ಬಗ್ಗೆ ವೈಯಕ್ತಿಕವಾಗಿ ಯಾವುದೇ ಅನುಮಾನ ಇಲ್ಲ. ಆದರೆ ಇಷ್ಟೊಂದು ದೊಡ್ಡ ಧಾರ್ಮಿಕ ಸಂಸ್ಥೆಯ ಸಂಪೂರ್ಣ ಅಧಿಕಾರವನ್ನು ಒಬ್ಬ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕರಿಸುವುದು ಆಡಳಿತಾತ್ಮಕವಾಗಿ ಸರಿಯಾದ ಕ್ರಮವಲ್ಲ ಎಂದು ಹೇಳಿದರು.

WhatsApp Image 2026-07-04 at 7.15.09 PM (1)

ಕೆ. ಎನ್‌ ಭಟ್‌

ವಿಡಿಯೋ ನೋಡಿ

ರಾಮ ಮಂದಿರಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹಣಕಾಸು ನಿರ್ವಹಣೆ, ಲೆಕ್ಕಪತ್ರ, ಭದ್ರತೆ ಹಾಗೂ ಮೇಲ್ವಿಚಾರಣೆಗೆ ಪ್ರತ್ಯೇಕ ಮತ್ತು ಪಾರದರ್ಶಕ ವ್ಯವಸ್ಥೆ ಇರಬೇಕು ಎಂದು ಅವರು ಒತ್ತಾಯಿಸಿದರು. ತಿರುಪತಿ ಸೇರಿದಂತೆ ದೇಶದ ಪ್ರಮುಖ ದೇವಾಲಯಗಳಲ್ಲಿ ಅನುಸರಿಸುತ್ತಿರುವ ಆಡಳಿತ ಮಾದರಿಯನ್ನು ರಾಮ ಮಂದಿರದಲ್ಲಿಯೂ ಅಳವಡಿಸಬೇಕೆಂದು ಸಲಹೆ ನೀಡಿದರು.

ಟ್ರಸ್ಟ್‌ನಲ್ಲಿ ನಿವೃತ್ತ ಅಥವಾ ಸೇವೆಯಲ್ಲಿರುವ ಐಎಎಸ್ ಅಧಿಕಾರಿಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಆಡಳಿತ ತಜ್ಞರು ಹಾಗೂ ಹಣಕಾಸು ಪರಿಣಿತರನ್ನು ಒಳಗೊಂಡ ಬಲಿಷ್ಠ ವ್ಯವಸ್ಥೆ ರೂಪಿಸಿದರೆ ಇಂತಹ ಆರೋಪಗಳಿಗೆ ಅವಕಾಶವೇ ಇರುವುದಿಲ್ಲ ಎಂದು ಕೆ.ಎನ್. ಭಟ್ ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿರುವುದರಿಂದ ಆರೋಪಗಳ ಆಧಾರದ ಮೇಲೆ ಯಾರನ್ನೂ ತಪ್ಪಿತಸ್ಥರೆಂದು ಘೋಷಿಸುವುದು ಸರಿಯಲ್ಲ. ತನಿಖೆಯ ನಂತರವೇ ಸತ್ಯಾಂಶ ಬಹಿರಂಗವಾಗಲಿದೆ ಎಂದು ಅವರು ಹೇಳಿದರು. ಕೆಲ ದಾನಿಗಳು ತಾವು ನೀಡಿದ ಕಾಣಿಕೆಗಳಿಗೆ ರಸೀದಿ ಸಿಕ್ಕಿಲ್ಲ ಎಂದು ಹೇಳುತ್ತಿರುವ ವಿಷಯವೂ ತನಿಖೆಯಲ್ಲಿ ಪರಿಶೀಲನೆಗೆ ಒಳಪಡಬೇಕಾಗಿದೆ ಎಂದರು.

ರಾಮ ಮಂದಿರ ನಿರ್ಮಾಣದ ನಂತರ ಅಯೋಧ್ಯೆಯಲ್ಲಿ ಗಮನಾರ್ಹ ಅಭಿವೃದ್ಧಿ ಕಂಡುಬಂದಿದೆ ಎಂದು ಅವರು ತಿಳಿಸಿದರು. ಹೊಸ ರಸ್ತೆಗಳು, ಹೋಟೆಲ್‌ಗಳು, ವ್ಯಾಪಾರ ಕೇಂದ್ರಗಳು ಹಾಗೂ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದ್ದು, ಸಾವಿರಾರು ಜನರಿಗೆ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಹಿಂದೆ ಸೀಮಿತ ಸೌಲಭ್ಯಗಳಿದ್ದ ಅಯೋಧ್ಯೆ ಇಂದು ಆಧುನಿಕ ಧಾರ್ಮಿಕ ಮತ್ತು ಪ್ರವಾಸಿ ನಗರವಾಗಿ ರೂಪಾಂತರಗೊಂಡಿದೆ ಎಂದು ಹೇಳಿದರು. ಈ ವಿವಾದವನ್ನು ಕೆಲವರು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಸಾಧ್ಯತೆಯನ್ನೂ ಅವರು ಉಲ್ಲೇಖಿಸಿದರು. ಆದಾಗ್ಯೂ, ಈ ಘಟನೆಗಳಿಂದ ಶ್ರೀರಾಮನ ಮೇಲಿನ ಭಕ್ತರ ನಂಬಿಕೆ ಕುಗ್ಗುವುದಿಲ್ಲ. ದೇಶದ ಅನೇಕ ದೇವಾಲಯಗಳಲ್ಲಿ ಈ ಹಿಂದೆ ಇಂತಹ ಘಟನೆಗಳು ನಡೆದಿದ್ದರೂ, ಭಕ್ತಿಭಾವಕ್ಕೆ ಧಕ್ಕೆಯಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳವು ಪ್ರಕರಣ: ಕದ್ದ ಚಿನ್ನವನ್ನು ಆರೋಪಿಗಳು ಬಿಸ್ಕತ್ತು ಮಾಡಿದ್ರಾ?

ಪ್ರಕರಣದ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸುವುದರ ಜೊತೆಗೆ, ರಾಮ ಮಂದಿರ ಟ್ರಸ್ಟ್‌ನ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿಸುವುದು ಕಾಲದ ಅಗತ್ಯವಾಗಿದೆ ಎಂದು ಕೆ.ಎನ್. ಭಟ್ ಹೇಳಿದರು.

Vishakha Bhat Heggar

View all posts by this author