ಬೆಂಗಳೂರು, ನ. 23: ಎಟಿಎಂಗೆ ಹಣ ತುಂಬಲು ಹೋಗುತ್ತಿದ್ದ ವಾಹನದಿಂದ 7.11 ಕೋಟಿ ದರೋಡೆ ನಡೆಸಿದ್ದ ಪ್ರಕರಣದ (Bengaluru Robbery Case) ಹಿಂದಿನ ಅಸಲಿ ಕಾರಣ ಇದೀಗ ಬಹಿರಂಗಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಎಸ್ ಸಂಸ್ಥೆ ಮಾಜಿ ನೌಕರ ಕ್ಸೇವಿಯರ್, ಗೋವಿಂದಪುರ ಪೊಲೀಸ್ ಠಾಣಾ ಕಾನ್‌ಸ್ಟೆಬಲ್ ಅಣ್ಣಪ್ಪನಾಯ್ಕ್, ಹಾಲಿ ಸಿಎಂಎಸ್ ಸಂಸ್ಥೆ ಸಿಬ್ಬಂದಿ ಗೋಪಿ, ರವಿ, ಜಿತೇಶ್ ಸೇರಿ ಒಟ್ಟು ಏಳು ದರೋಡೆಕೋರರನ್ನು ಬಂಧಿಸಲಾಗಿದ್ದು, ಇವರಿಂದ 5.76 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ದರೋಡೆಗೆ ಕಾರಣವೇನು ಎಂಬುದರ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ.
ನವೆಂಬರ್ 19ರಂದು ನಡೆದಿದ್ದ ನಗದು ವಾಹನ ದರೋಡೆ ಪ್ರಕರಣವನ್ನು ಕೇವಲ 60 ಗಂಟೆಗಳಲ್ಲೇ ಭೇದಿಸಿ, ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಹೈದರಾಬಾದ್‌ನ ಲಾಡ್ಜ್‌ನಲ್ಲಿ ಮತ್ತೆ ಮೂವರನ್ನು ಶನಿವಾರ ಅರೆಸ್ಟ್ ಮಾಡಲಾಗಿತ್ತು. ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಸಿಎಂಎಸ್ ಸಂಸ್ಥೆ ಒಳಗಿನವರ ಸಹಕಾರ, ಸಿಸಿಟಿವಿ ಕವರೇಜ್ ಇಲ್ಲದ ಪ್ರದೇಶಗಳು, ಬದಲಿ ವಾಹನಗಳು ಮತ್ತು ಬಿಟ್ಟುಹೋಗಿದ್ದ ನಗದು ಪೆಟ್ಟಿಗೆಗಳನ್ನು ಬಳಸಿಕೊಂಡು ತಪ್ಪಿಸಿಕೊಳ್ಳಲು ಗ್ಯಾಂಗ್ ಯತ್ನಿಸಿದ್ದರೂ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಮೂವರು ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ
ಕಾನ್ಸ್‌ಟೇಬಲ್ ಅಣ್ಣಪ್ಪ ಸೇರಿ ಮೂವರು ಆರೋಪಿಗಳನ್ನು ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯಕ್ಕೆ ಶನಿವಾರ ರಾತ್ರಿ ಹಾಜರುಪಡಿಸಲಾಗಿತ್ತು. ಎ1 ಕ್ಸೇವಿಯಕ್, ಎ2 ಅಣ್ಣಪ್ಪ ಹಾಗೂ ಎ3 ಗೋಪಿ ಎಂಬುವರನ್ನು ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದರು. ವಿಚಾರಣೆ ಬಳಿಕ ಆರೋಪಿಗಳನ್ನು ಕೋರ್ಟ್ 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಡಿಸೆಂಬರ್ 1 ರಂದು ಮುಂದಿನ ವಿಚಾರಣೆಗೆ ಹಾಜರು ಪಡಿಸುವಂತೆ ಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ : Bengaluru Robbery Case: ಬೆಂಗಳೂರು ದರೋಡೆ ಪ್ರಕರಣದ ಬಹುತೇಕ ಎಲ್ಲ ಆರೋಪಿಗಳು ಸೆರೆ
ಬೆಂಗಳೂರು ಪೊಲೀಸ್ ಆಯುಕ್ತರ ಸುದ್ದಿಗೋಷ್ಠಿ ವಿಡಿಯೋ
ಆರೋಪಿಗಳಲ್ಲಿ ಬಹುತೇಕರಿಗೆ ಮೈತುಂಬಾ ಸಾಲ ಇತ್ತು
ಬಂಧಿತರ ಪೈಕಿ ಮಾಜಿ ಸೈನಿಕನ ಮಗನಾದ ರವಿ ಎಂಬಾತ ಇಡೀ ಪ್ರಕರಣದ ಸೂತ್ರಧಾರ ಎಂಬುದು ಗೊತ್ತಾಗಿದೆ. ಮಾಜಿ ಸೈನಿಕನ ಮಗನಾದ ರವಿ, ಎಂಎಸ್‌ಸಿ ವ್ಯಾಸಂಗ ಮಾಡಿದ್ದು, ನಗರದಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ. ಆದರೆ ನಷ್ಟವಾಗಿದ್ದರಿಂದ ಏಜೆನ್ಸಿ ಮುಚ್ಚಿ ಮನೆಯಲ್ಲಿದ್ದ. ಆಗ ದರೋಡೆಗೆ ಸಂಚು ರೂಪಿಸಿದ್ದ ಎಂಬುದು ತಿಳಿದುಬಂದಿದೆ.
ನಗರದಲ್ಲಿ ವಾಸವಿರುವ ರವಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ತನ್ನ ಪತಿ ದರೋಡೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಕೃತ್ಯದಲ್ಲಿ ರವಿಯ ಸಹೋದರ ಹಾಗೂ ಅವರ ತಂದೆಯ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಡಿಜಿಟಲ್ ಅರೆಸ್ಟ್; ಮಹಿಳಾ ಟೆಕ್ಕಿಗೆ ಬರೋಬ್ಬರಿ 31.83 ಕೋಟಿ ರೂ. ವಂಚನೆ!
ಗ್ಯಾಂಗ್‌ನಲ್ಲಿದ್ದ ಬಹುತೇಕರಿಗೆ ಮೈತುಂಬಾ ಸಾಲ ಇತ್ತು. ದರೋಡೆ ಮಾಡಿ ಬಂದ ಹಣದಲ್ಲಿ ಮಾಡಿರುವಂತಹ ಸಾಲ ತೀರಿಸಿ ಮಿಕ್ಕ ಹಣದಲ್ಲಿ ವಿಲಾಸಿ ಜೀವನ ನಡೆಸಬಹುದೆಂದು ಆರೋಪಿಗಳು ದೊಡ್ಡಮಟ್ಟದ ದರೋಡೆ ಮಾಡಿದ್ದರೆಂಬ ಮಾಹಿತಿ ಪೊಲೀಸರ ತನಿಖೆಯಿಂದ ಬಯಲಾಗಿದೆ.