ಬೆಂಗಳೂರು, ಡಿ.30: “ಕೇರಳ ಸಿಎಂ, ಕೇರಳ ಸರಕಾರ ಕರ್ನಾಟಕ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದೇನೆಯೇ ಹೊರತು, ಕೇರಳಿಗರ ಬಗ್ಗೆ ನಾನು ಮಾತನಾಡಿಲ್ಲ. ನನ್ನ ಹೇಳಿಕೆ ತಿರುಚಿ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.
ರಾಜೀವ್ ಚಂದ್ರಶೇಖರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕೇರಳದ ಜನರು ಹಾಗೂ ನನ್ನ ನಡುವೆ ಉತ್ತಮ ಬಾಂಧವ್ಯವಿದೆ. ಕೇರಳ ಜನ ನನ್ನನ್ನು ಬಹಳ ಪ್ರೀತಿಸುತ್ತಾರೆ. ನನಗೂ ಅವರ ಮೇಲೆ ಗೌರವವಿದೆ. ಕೇರಳ ಚುನಾವಣೆ ಪ್ರಚಾರಕ್ಕೆ ನಾನು ಹೋಗುತ್ತೇನೆ. ಅಲ್ಲಿ ನಮ್ಮ ಸರ್ಕಾರ ಬರಲಿದೆ. ಹೀಗಾಗಿ ಬಿಜೆಪಿಯವರು ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಅವರು ಈ ರೀತಿ ಹುಳಿ ಹಿಂಡುವುದು ಬೇಡ. ನಮ್ಮ ಪಕ್ಷದ ನಾಯಕರು ನಮಗೆ ಸಲಹೆ ನೀಡಿದ್ದು, ನಾವು ಅದನ್ನು ಸ್ವೀಕರಿಸುತ್ತೇವೆ” ಎಂದು ತಿಳಿಸಿದರು.
5 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿ ತೆಗೆದುಕೊಳ್ಳುತ್ತಿದ್ದೇವೆ
ವಿಧಾನಸೌಧದಲ್ಲಿ ನಡೆದ ಸಭೆ ಬಗ್ಗೆ ಮಾತನಾಡಿ, “ಇಂದು ಕರ್ನಾಟಕ ನೀರಾವರಿ ನಿಗಮ ಹಾಗೂ ಕೃಷ್ಣ ಭಾಗ್ಯ ಜಲ ನಿಗಮದ ನಿರ್ದೇಶಕರ ಮಂಡಳಿ ಸಭೆ ಮಾಡಿದೆವು. ಈ ನಿಗಮಗಳಲ್ಲಿ 5 ಸಾವಿರ ಕೋಟಿ ರೂಪಾಯಿಯಷ್ಟು ಕಾಮಗಾರಿ ತೆಗೆದುಕೊಳ್ಳುತ್ತಿದ್ದೇವೆ. ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ನಾವು ಯುಕೆಪಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಇದಕ್ಕೆ 70 ಸಾವಿರ ಕೋಟಿ ಹಣ ನೀಡಬೇಕಾಗಿದೆ. ಹೀಗಾಗಿ ಇತರೆ ಕೆಲಸಗಳನ್ನು ಮುಂದಿನ ಹಂತದಲ್ಲಿ ಕೈಗೊಳ್ಳಲಾಗುವುದು” ಎಂದು ಮಾಹಿತಿ ನೀಡಿದರು.
ಕೋಗಿಲು ಲೇಔಟ್ ನಿರಾಶ್ರಿತರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ: ಸಿಎಂ
ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡುವುದೇ ನಮ್ಮ ಗುರಿ
2026ರ ಹೊಸ ವರ್ಷದಲ್ಲಿ ಡಿ.ಕೆ. ಶಿವಕುಮಾರ್ ಅವರ ನಿರ್ಣಯಗಳೇನು ಎಂದು ಕೇಳಿದಾಗ, “ನಿಮ್ಮನ್ನೆಲ್ಲಾ ಸಂತೋಷವಾಗಿಡುವುದು, ರಾಜ್ಯಕ್ಕೆ ಉತ್ತಮ ಆಡಳಿತ ನೀಡುವುದು ನಮ್ಮ ಗುರಿ. ಈ ವರ್ಷ ಉತ್ತಮ ಮಳೆಯಾದ ರೀತಿ ಮುಂದಿನ ವರ್ಷವೂ ಉತ್ತಮ ಮಳೆಯಾಗಿ, ಕೆರೆ ಕಟ್ಟೆಗಳು ತುಂಬಿ ರೈತರ ಬದುಕು ಹಸನಾಗಲಿ. ನಮ್ಮ ಗ್ಯಾರಂಟಿ ಯೋಜನೆಗಳು ಮುಂದುವರಿದು ಜನರಿಗೆ ಶಕ್ತಿ ತುಂಬಲಿದೆ. ಮುಂದಿನ ವರ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ” ಎಂದು ತಿಳಿಸಿದರು.
2026ರಲ್ಲಿ ನಿಮ್ಮ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡಲಾಗುವುದೇ ಎಂದು ಕೇಳಿದಾಗ, “ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ಉತ್ತಮ ಆಡಳಿತ ಮುಂದುವರಿಯಲಿದೆ. ಮುಂದಿನ ಏಳೂವರೆ ವರ್ಷ ಈ ಆಡಳಿತ ಮುಂದುವರಿಯಲಿದೆ” ಎಂದರು.
ಚುನಾವಣೆ ಸೋಲಿನ ಭಯದಿಂದ ಕೇರಳ ಸಿಎಂ ಸಲ್ಲದ ರಾಜಕೀಯ: ಡಿ.ಕೆ.ಶಿವಕುಮಾರ್
ಇಕ್ಬಾಲ್ ಹುಸೇನ್ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳಬೇಡಿ” ಎಂದರು. 2026ರಲ್ಲಿ ನಿಮ್ಮ ನೇತೃತ್ವ ನಿರೀಕ್ಷೆ ಮಾಡಬಹುದೇ ಎಂದು ಕೇಳಿದಾಗ, “ಈ ಬಗ್ಗೆ 2026 ರಲ್ಲೇ ಮಾತನಾಡುತ್ತೇನೆ” ಎಂದರು.