ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೀರಶೈವ-ಲಿಂಗಾಯತ ಒಂದೇ ಎನ್ನುವುದಕ್ಕೆ ಸಾಕ್ಷಿ ಇದೆ: ಲೇಖಕ ರವಿ ಹಂಜ್‌

Ravi Hanj: ''ವೀರಶೈವ, ಲಿಂಗಾಯತ ಒಂದೇ ಎನ್ನುವುದು ಸಂಶೋಧನೆ ಮೂಲಕ ತಿಳಿದುಕೊಂಡೆ. ಇದಕ್ಕೆ ಸಾಕಷ್ಟು ಸಾಕ್ಷಿಗಳನ್ನು ಕ್ರೂಢೀಕರಿಸಿದೆ. ನಾನು ಬರೆದಿರುವ ಪ್ರತಿಯೊಂದು ವಾಕ್ಯಕ್ಕೆ ಸಾಕ್ಷಿ ಇದೆ, ಪುರಾವೆ ಇದೆ. ಸಾಕ್ಷಿ, ಪುರಾವೆ ಇಲ್ಲದ ಒಂದೇ ಒಂದು ವಾಕ್ಯ ನಾನು ಬರೆದ ʼಬಸವ ಮಂಟಪʼ ಪುಸ್ತಕದಲ್ಲಿಲ್ಲʼʼ ಎಂದು ಲೇಖಕ ರವಿ ಹಂಜ್‌ ತಿಳಿಸಿದರು.

ಬೆಂಗಳೂರು, ನ. 15: ʼʼನಾನು ಬರೆದ ಪ್ರತಿ ವಾಕ್ಯಕ್ಕೂ ದಾಖಲೆಗಳಿವೆʼʼ ಎಂದು ʼಬಸವ ಮಂಟಪʼ ಕೃತಿಯ ಲೇಖಕ ರವಿ ಹಂಜ್‌ ತಿಳಿಸಿದರು. ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಭಾನುವಾರ (ನವೆಂಬರ್‌ 15) ನಡೆದ ʼವಿಶ್ವವಾಣಿʼ ಪುಸ್ತಕ ಪ್ರಕಾಶನ ಪ್ರಕಟಿಸಿರುವ ʼಬಸವ ಮಂಟಪʼ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ʼʼನಾನು ಬರೆದಿರುವ ಪ್ರತಿಯೊಂದು ವಾಕ್ಯಕ್ಕೆ ಸಾಕ್ಷಿ ಇದೆ, ಪುರಾವೆ ಇದೆ. ಸಾಕ್ಷಿ, ಪುರಾವೆ ಇಲ್ಲದ ಒಂದೇ ಒಂದು ವಾಕ್ಯ ಇದರಲ್ಲಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ಹೇರಿಕೆಯೂ ಇದರಲ್ಲಿಲ್ಲ. ತಟಸ್ಥ ನಿಲುವಿನಿಂದ ಬರೆದಿದ್ದೇನೆʼʼ ಎಂದು ಅವರು ಸ್ಪಷ್ಟಪಡಿಸಿದರು.

ʼʼಒಬ್ಬ ಮನುಷ್ಯ ಮಗುವಾಗಿದ್ದಾಲೇ ಅವನಲ್ಲಿ ಕುತೂಹಲ ಇರುತ್ತದೆ. ಆ ಕುತೂಹಲವನ್ನು ಎಲ್ಲಿಯ ತನಕ ಕಾಪಾಡುತ್ತಾನೋ ಅಲ್ಲಿನ ತನಕ ವಿಶೇಷ ಜ್ಞಾನ ಪಡೆಯುತ್ತ ಹೋಗುತ್ತಾನೆ. ಓರ್ವ ಕೆಲಸ ಕಲಿತು ಶಿಕ್ಷಣವನ್ನು ನಿಲ್ಲಿಸಿದರೆ ಆತ ಶೂದ್ರನಾಗುತ್ತಾನೆ. ತನ್ನ ವಿದ್ಯಾಭ್ಯಾಸ ಮುಂದುವರಿಸಿದರೆ ವೈಶ್ಯನಾಗುತ್ತಾನೆ. ಮತ್ತೂ ಶಿಕ್ಷಣ ಮುಂದುವರಿಸಿ ಶಸ್ತ್ರ ವಿದ್ಯೆ ಕಲಿತರೆ ಕ್ಷತ್ರೀಯ ಎನಿಸಿಕೊಳ್ಳುತ್ತಾನೆ. ಈ ಎಲ್ಲ ವಿದ್ಯೆ ಕಲಿತು ಬೋಧಿಸಿದರೆ ಬ್ರಾಹ್ಮಣನಾಗುತ್ತಾನೆ ಹೊರತು ಇವ್ಯಾವುವೂ ಜಾತಿ, ವರ್ಣ ಇವುಗಳ ಆಧಾರದಲ್ಲಿ ನಿರ್ಣಯವಾಗುವುದಿಲ್ಲ. ನಿಮ್ಮ ನಿಮ್ಮ ಕುತೂಹಲದ ಮಟ್ಟದ ಆಧಾರವಾಗಿಟ್ಟುಕೊಂಡು ನೀವು ಯಾವ ವರ್ಣವನ್ನು ಆರಿಸಿಕೊಳ್ಳುತ್ತೀರಿ ಎನ್ನುವುದು ಮುಖ್ಯವಾಗುತ್ತದೆ ಎಂದು ಭಾರತದ ಸಂಸ್ಕೃತಿ ಹೇಳಿದೆ ಎಂಬುದಾಗಿ ಇತಿಹಾಸ ಓದಿದಾಗ ತಿಳಿಯುತ್ತದೆʼʼ ಎಂದರು.

ಲೇಖಕ ರವಿ ಹಂಜ್‌ ಅವರ ಮಾತು:



ʼʼನಾನೊಬ್ಬ ಕುತೂಹಲಿ. ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಹ್ಯುಯೆನ್ ತ್ಸಾಂಗ್ ಬಗ್ಗೆ ತಿಳಿಯಿತು. ಹೀಗಾಗಿ ʼಹ್ಯುಯೆನ್ ತ್ಸಾಂಗ್ ಮಹಾಪಯಾಣʼ ಎನ್ನುವ ಪ್ರಥಮ ಕೃತಿ ಬರೆದೆ. ಆ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನ ಬಹುಮಾನವೂ ಲಭಿಸಿತು. ಅದರ ನಂತರ ʼಭಾರತ ಮರು ಸಂಶೋಧನೆʼ ಎನ್ನುವ ಪುಸ್ತಕವನ್ನೂ ಬರೆದೆ. ನನ್ನಲ್ಲಿ ಕುತೂಹಲ ಮೂಡಿದ್ದರಿಂದಲೇ ಪುಸ್ತಕ ರಸಚಿಸಲು ಸಾಧ್ಯವಾಯಿತುʼʼ ಎಂದು ವಿವರಿಸಿದರು.

ಪುಸ್ತಕ ಸುಡುವ ಮೂಲಕ ವಿಚಾರ ಹತ್ತಿಕ್ಕಲು ಸಾಧ್ಯವಿಲ್ಲ: ಬಸವ ಮಂಟಪ ಕೃತಿ ಬಗ್ಗೆ ವಿಶ್ವೇಶ್ವರ್‌ ಭಟ್‌ ಮಾತು

ಸಾಮಾಜಿಕ ವಿಪ್ಲವ

ʼʼ2018ರಲ್ಲಿ ಕರ್ನಾಟಕದಲ್ಲಿ ರಾಜಕೀಯ ಪಕ್ಷವೊಂದು ಹೊಸ ಸೃಷ್ಟಿಯನ್ನು ಮಾಡಿತು. ಅದೇನೆಂದರೆ ಸಾಮಾಜಿಕ ವಿಪ್ಲವ. ಅದನ್ನು ಕಂಡು ನಾನು ಬೆರಗಾದೆ. ಅದಕ್ಕೆ ಕಾರಣ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದು ಪ್ರತಿಪಾದಿಸಿದ್ದು. ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎನ್ನುವ ಈ ಸಾಮಾಜಿಕ ವಿಪ್ಲವ ಸೃಷ್ಟಿಯಾದಾಗ ನಾನು ಮಾತ್ರವಲ್ಲ ಪ್ರತಿಯೊಬ್ಬರೂ ಅಚ್ಚರಿಗೆ ಒಳಗಾಗಿದ್ದರು. ಅದುವರೆಗೆ ನಾವು ವೀರಶೈವ ಎಂದರೆ ಗ್ರಾಂಥಿಕ ಮತ್ತು ಲಿಂಗಾಯತ ಎಂದರೆ ಆಡು ಪದ ಎಂದುಕೊಂಡಿದ್ದೆವು. ಇದನ್ನು ಸಿದ್ದಗಂಗಾ ಮಠಾಧೀಶರೂ ಹೇಳಿದ್ದರು. ಆದರೂ ಬೇರೆ ಬೇರೆ ಎನ್ನುವುದನ್ನು ಸೃಷ್ಟಿ ಮಾಡಿ ಹೇಳಿದರು. ಸಂಶೋಧಕ ಪ್ರೊ. ಎಂ.ಎಂ. ಕಲಬುರ್ಗಿ ಅವರ ಬಗ್ಗೆ ಮೊದಲು ಅಪಾರ ಗೌರವವಿತ್ತು. ವೀರಶೈವ ಬೇರೆ ಲಿಂಗಾಯತ ಬೇರೆ ಎಂದ ಆರಂಭವಾದ ಚಿಕ್ಕ ಅಭಿಪ್ರಾಯ ದೊಡ್ಡದಾಗುತ್ತ ಹೋಯಿತು. ಸಂಶೋಧನೆಯಲ್ಲಿ ತಪ್ಪಿದೆಯೇ ಎನ್ನುವುದು ಪ್ರಶ್ನಿಸುತ್ತ ಈ ಪುಸ್ತಕದಲ್ಲಿರುವ ವಿಚಾರ ಕಂಡುಕೊಂಡೆ. ನಾಡಿನ ಸಾಕ್ಷಿಪ್ರಜ್ಞೆ ಎನಿಸಿಕೊಂಡವರಾದ ಕಲಬುರ್ಗಿ, ಎಸ್‌.ಜಿ. ಸಿದ್ದರಾಮಯ್ಯ, ರಂಜಾನ್‌ ದರ್ಗಾ, ಜಸ್ಟಿಸ್‌ ನಾಗಮೋಹನ್‌ ದಾಸ್‌, ಪುರುಷೋತ್ತಮ್‌ ಬಿಳಿಮಲೆ, ಚೊಕ್ಕ ದ್ವಾರಕನಾಥ್‌ ಇರಬಹುದು ಇವರೆಲ್ಲರೂ ಸತ್ಯ ಶೋಧನಾ ಸಮಿತಿಯ ಸದಸ್ಯರಾಗಿದ್ದರು ಮತ್ತು ಇವರೆಲ್ಲ ವೀರಶೈವರಾಗಿರಲಿಲ್ಲ, ಲಿಂಗಾಯತರಾಗಿರಲಿಲ್ಲ. ಹೀಗಾಗಿ ಇವರಿಗೆ ಬಾಲ್ಯದಲ್ಲಿ ಇಂತಹ ಸಾಂಸ್ಕೃತಿಕ ವಾತಾವರಣ ಇರಲಿಲ್ಲ. ಈ ಹಿನ್ನೆಲೆ ಇರುವವರಿಗೆ ಇದೆಲ್ಲ ಅರ್ಥವಾಗುತ್ತದೆಯೇ ಹೊರತು ಉಳಿದವರಿಗಲ್ಲ. ಅದು ಅಲ್ಲದವರು ಎಷ್ಟೇ ಪಾಂಡಿತ್ಯ ಹೊಂದಿದ್ದರೂ ಅವರಿಗೆ ಅರ್ಥವಾಗುವುದು ಕಡಿಮೆ ಎನ್ನುವುದು ನನ್ನ ಅಭಿಪ್ರಾಯ. ಇದು ನನ್ನೊಳಗಿದ್ದ ಬುದ್ಧಿಜೀವಿಗಳ ಪ್ರಭಾವ ಅಲುಗಾಡಿಸಲು ಆರಂಭಿಸಿತು. ಇದರಿಂದ ನನ್ನ ಕುತೂಹಲ ಹೆಚ್ಚಾಯಿತುʼʼ ಎಂದು ಹೇಳಿದರು.

ʼʼಇದರಿಂದ ನಾಸ್ತಿಕನಾಗಿದ್ದ ನಾನು ಮೊದಲ ಬಾರಿ ಧಾರ್ಮಿಕ ವಿಚಾರದತ್ತ ಆಕರ್ಷಿತನಾದೆ. ವೀರಶೈವ, ಲಿಂಗಾಯತ ಧರ್ಮದ ಉಗಮ, ವಿಕಾಸದ ಸತ್ಯವನ್ನು ಕಂಡುಕೊಳ್ಳಲಿಕ್ಕೆ ಮುಂದಾದೆ. ಕೊನೆಗೆ ವೀರಶೈವ, ಲಿಂಗಾಯತ ಒಂದೇ ಎನ್ನುವುದು ಸಂಶೋಧನೆ ಮೂಲಕ ತಿಳಿದುಕೊಂಡೆ. ಇದಕ್ಕೆ ಸಾಕಷ್ಟು ಸಾಕ್ಷಿಗಳನ್ನು ಕ್ರೂಢೀಕರಿಸಿದೆ. ಸಂಶೋಧನೆಯಿಂದ ಕಂಡುಕೊಂಡ ವಿಚಾರವನ್ನು ಹೇಗಾದರೂ ಜನರಿಗೆ ತಲುಪಿಸಬೇಕೆಂದು ಯೋಚನೆಯಲ್ಲಿ ತೊಡಗಿದೆ. ಫೇಸ್‌ಬುಕ್‌, ಬ್ಲಾಗ್‌ನಲ್ಲಿ ಪ್ರಯತ್ನಿಸಿದರೂ ಅದು ಸೀಮಿತ ಎನಿಸಿತು. ಆಗ ವಿಶ್ವೇಶ್ವರ ಭಟ್‌ ನನ್ನನ್ನು ಗುರುತಿಸಿ ʼವಿಶ್ವವಾಣಿʼಯಲ್ಲಿ ನನಗೆ ಲೇಖನ ಬರೆಯಲು ಅವಕಾಶ ಕೊಟ್ಟರು. ಇದೀಗ ಆ ಅವಕಾಶವೇ 600 ಪುಟಗಳ ʼಬಸವ ಮಂಟಪʼ ಪುಸ್ತಕವಾಗಿ ನಿಮ್ಮ ಮುಂದಿದೆʼʼ ಎಂದರು.

ವೀರಶೈವ–ಲಿಂಗಾಯತರು ಒಂದೇ, ನಿಮಗೆ ಬೇಕಾದ ಹಾಗೆ ಜಗದ್ಗುರುಗಳನ್ನು ಸೃಷ್ಟಿಸಬೇಡಿ; ಶಂಕರ್ ಬಿದರಿ ಕಿವಿಮಾತು

ʼʼಹಿಂದೂ ಎಂದರೆ ಒಂದು ಸಂಸ್ಕೃತಿ. ಹಿಂದೂ ಧರ್ಮದ ಪ್ರಕಾರಗಳಾದ ದ್ವೈತ, ವಿಶಿಷ್ಟ ಅದ್ವೈತ, ಶಕ್ತಿ ವಿಶಿಷ್ಟ ಅದ್ವೈತಗಳು ಭಾರತ-ಪಾಕಿಸ್ತಾನ ವಿಭಜನೆಯಾದಾಗ ಧರ್ಮಗಳಾಗಿ ಮಾನ್ಯತೆ ಪಡೆಯಬಹುದಿತ್ತು. ದೇಶಗಳು ವಿಭಜನೆಯಾದದ್ದು ಹಿಂದೂ-ಮುಸ್ಲಿಂ ಎಂದಲ್ಲ. ಪಾಕಿಸ್ತಾನ ಮುಸ್ಲಿಂ ದೇಶವಾದರೆ, ಭಾರತ ಮುಸ್ಲಿಂಯೇತರ ರಾಷ್ಟ್ರ ಎನಿಸಿಕೊಂಡಿತು. ಒಂದು ಧರ್ಮದ ರಾಷ್ಟ್ರವಾಗಿ ಭಾರತ ವಿಭಜನೆಯಾಗಿರಲಿಲ್ಲ. ಹೀಗಾಗಿ ಭಾರತದಲ್ಲಿ ವಿವಿಧ ಧರ್ಮದವರಿದ್ದಾರೆ. ಸಾಗರೋತ್ತರ ನಾಗರಿಕನಾಗಿರುವುದರಿಂದ ನನ್ನಲ್ಲಿ ಭಾರತೀಯ ಪ್ರಜ್ಞೆ ಜಾಗೃತವಾಗಿರುವುದರಿಂದ ಸತ್ಯವನ್ನು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲʼʼ ಎಂದು ಹೇಳಿದರು.

Ramesh Ballamoole

View all posts by this author