ಪುಸ್ತಕ ಸುಡುವ ಮೂಲಕ ವಿಚಾರ ಹತ್ತಿಕ್ಕಲು ಸಾಧ್ಯವಿಲ್ಲ: ಬಸವ ಮಂಟಪ ಕೃತಿ ಬಗ್ಗೆ ವಿಶ್ವೇಶ್ವರ್ ಭಟ್ ಮಾತು
ಲೇಖಕ, ಅಂಕಣಕಾರ ರವಿ ಹಂಜ್ ಅವರು ಬರೆದಿ 'ಬಸವ ಮಂಟಪ; ವೀರಶೈವ ಲಿಂಗಾಯತ ಸತ್ಯದರ್ಶನ' ಪುಸ್ತಕ ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಶ್ವವಾಣಿ ಸಮೂಹ ಸಂಸ್ಥೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಪುಸ್ತಕಗಳನ್ನು ಸುಡುವುದರಿಂದ, ಪತ್ರಿಕೆಗಳನ್ನು ನಾಶಪಡಿಸುವುದರಿಂದ ವಿಚಾರಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಗ್ರಹ ಚಿತ್ರ -
ಬೆಂಗಳೂರು: ಲೇಖಕ, ಅಂಕಣಕಾರ ರವಿ ಹಂಜ್ ಅವರು ಬರೆದಿ 'ಬಸವ ಮಂಟಪ; ವೀರಶೈವ ಲಿಂಗಾಯತ ಸತ್ಯದರ್ಶನ' ಪುಸ್ತಕ ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಶ್ವವಾಣಿ ಸಮೂಹ ಸಂಸ್ಥೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಪುಸ್ತಕಗಳನ್ನು ಸುಡುವುದರಿಂದ, ಪತ್ರಿಕೆಗಳನ್ನು ನಾಶಪಡಿಸುವುದರಿಂದ ವಿಚಾರಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಯಾವುದೇ ವಿಚಾರದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ದಾಖಲೆ ಮತ್ತು ಆಧಾರಗಳೊಂದಿಗೆ ಚರ್ಚೆಗೆ ಒಳಪಡಿಸಬೇಕು. ಟೀಕೆ ಹಾಗೂ ವಿಮರ್ಶೆಯ ಮೂಲಕ ಸತ್ಯವನ್ನು ಅರಿಯುವ ಪ್ರಯತ್ನ ನಡೆಯಬೇಕೇ ಹೊರತು, ವಿರೋಧದ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು ಎಂದು ಹೇಳಿದರು.
ಲೇಖಕ ರವಿ ಹಂಜ ಅವರು ವೀರಶೈವ–ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ನಡೆಸಿರುವ ಅಧ್ಯಯನ ಮತ್ತು ಸಂಶೋಧನಾ ಕಾರ್ಯವನ್ನು ಶ್ಲಾಘಿಸಿದರು. ರವಿ ಹಂಜ ಅವರ ಲೇಖನಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಆರಂಭಿಸಿದಾಗಿನಿಂದಲೂ ಹಲವು ರೀತಿಯ ವಿರೋಧಗಳು ವ್ಯಕ್ತವಾಗಿದ್ದವು. ಆರಂಭದಲ್ಲಿ ಕೆಲವು ಲೇಖನಗಳು ಪ್ರಕಟವಾದಾಗ ಯಾವುದೇ ಆಕ್ಷೇಪಣೆಗಳು ವ್ಯಕ್ತವಾಗಿರಲಿಲ್ಲ. ಆದರೆ, ಸರಣಿ ಲೇಖನಗಳು ಮುಂದುವರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಕರೆ ಮಾಡಿ ಲೇಖನಗಳನ್ನು ಪ್ರಕಟಿಸದಂತೆ ಒತ್ತಡ ಹೇರಿದ್ದರು. ಲೇಖನಗಳಲ್ಲಿ ತಪ್ಪುಗಳಿದ್ದರೆ ದಾಖಲೆಗಳೊಂದಿಗೆ ಪ್ರತಿಕ್ರಿಯೆ ನೀಡುವಂತೆ ತಿಳಿಸಿದ್ದೆ. ಸತ್ಯಕ್ಕೆ ಪರ್ಯಾಯವಾದ ಮತ್ತೊಂದು ದೃಷ್ಟಿಕೋನವನ್ನು ಮಂಡಿಸಲು ಪತ್ರಿಕೆಯಲ್ಲಿ ಅವಕಾಶ ನೀಡುವುದಾಗಿಯೂ ಸ್ಪಷ್ಟಪಡಿಸಿದ್ದೆ ಎಂದು ಹೇಳಿದರು.
ಕೆಲವರು ಲೇಖನಗಳನ್ನು ನಿಲ್ಲಿಸದಿದ್ದರೆ ಪತ್ರಿಕೆಯನ್ನು ಸುಡುವುದಾಗಿ ಎಚ್ಚರಿಕೆ ನೀಡಿದ್ದರು. ಕೆಲವೆಡೆ ಪತ್ರಿಕೆಗಳನ್ನು ಸುಟ್ಟ ಘಟನೆಗಳೂ ನಡೆದಿದ್ದವು. ಸುಮಾರು 15 ಜನರೊಂದಿಗೆ ಕಚೇರಿಗೆ ಬಂದಿದ್ದ ಕೆಲವರು ಸಿಸಿಟಿವಿ ಕ್ಯಾಮೆರಾಗಳ ಕುರಿತು ವಿಚಾರಿಸಿ ಬೆದರಿಕೆ ಹಾಕಿದ್ದರು. ಇಂತಹ ಒತ್ತಡಗಳ ನಡುವೆಯೂ ಲೇಖನಗಳ ಪ್ರಕಟಣೆಯನ್ನು ನಿಲ್ಲಿಸಲಿಲ್ಲ. ಲೇಖಕರ ಬರವಣಿಗೆಯ ಸ್ವಾತಂತ್ರ್ಯ ಮತ್ತು ಅವರ ಅಭಿಪ್ರಾಯಗಳನ್ನು ಗೌರವಿಸುವುದು ಸಂಪಾದಕರ ಕರ್ತವ್ಯ ಎಂದು ತಿಳಿಸಿದರು.
ಲೇಖನಗಳ ಪ್ರಕಟಣೆಗೆ ವಿರೋಧ ವ್ಯಕ್ತವಾದ ಬಳಿಕ ರಾಜಕಾರಣಿಗಳಿಂದಲೂ ಕರೆಗಳು ಬಂದಿದ್ದವು. ಸಮಾಜದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ ಎಂಬ ಆರೋಪಗಳನ್ನೂ ಎದುರಿಸಬೇಕಾಯಿತು. ಆದರೆ, ಯಾವುದೇ ಜಾತಿ ಅಥವಾ ಧರ್ಮವನ್ನು ವಿರೋಧಿಸುವ ಉದ್ದೇಶ ಈ ಲೇಖನಗಳದ್ದಲ್ಲ. ದಾಖಲೆಗಳು ಮತ್ತು ಪುರಾವೆಗಳ ಆಧಾರದಲ್ಲಿ ಗಹನವಾದ ಚರ್ಚೆ ನಡೆಸುವುದು ಮಾತ್ರ ಇದರ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು
ಲೇಖಕ ಬರೆದಿರುವ ಪ್ರತಿಯೊಂದು ವಿಚಾರವನ್ನೂ ಓದುಗರು ಅಂತಿಮ ಸತ್ಯವೆಂದು ಒಪ್ಪಿಕೊಳ್ಳಬೇಕೆಂದಿಲ್ಲ. ಆದರೆ, ಆ ವಿಚಾರ ಸತ್ಯವೋ ಅಥವಾ ಅಸತ್ಯವೋ ಎಂಬುದನ್ನು ಪರಿಶೀಲಿಸುವ, ಸಂಶೋಧಿಸುವ ಮತ್ತು ಹೊಸ ಚಿಂತನೆಗಳನ್ನು ಬೆಳೆಸಿಕೊಳ್ಳುವ ಪ್ರೇರಣೆಯನ್ನು ಕೃತಿ ನೀಡಬೇಕು. ಆ ದೃಷ್ಟಿಯಿಂದ ರವಿ ಹಂಜ ಅವರ ಕೃತಿ ಯಶಸ್ವಿಯಾಗಿದೆ. ಈ ಕೃತಿ ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಅಧ್ಯಯನಪೂರ್ಣ ಕೃತಿಗಳ ರಚನೆಗೆ ದಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮೆರಿಕದ ಚಿಕಾಗೋದಲ್ಲಿ ನೆಲೆಸಿರುವ ರವಿ ಹಂಜ ಅವರು ಅಲ್ಲಿಯೇ ಇದ್ದುಕೊಂಡು ಕನ್ನಡ ಭಾಷೆಯಲ್ಲಿ ವೀರಶೈವ–ಲಿಂಗಾಯತ ಧರ್ಮದ ಕುರಿತು ಸುಮಾರು 600 ಪುಟಗಳಷ್ಟು ಅಧ್ಯಯನಪೂರ್ಣ ಕೃತಿ ರಚಿಸಿರುವುದು ವಿಶೇಷ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಂಶೋಧಕರು ಅಥವಾ ಧರ್ಮದ ವಿದ್ವಾಂಸರು ಮಾಡಬೇಕಾದ ಕಾರ್ಯವನ್ನು ಅವರು ಏಕಾಂಗಿಯಾಗಿ ಕೈಗೊಂಡಿದ್ದಾರೆ. ಪ್ರತಿಯೊಂದು ಲೇಖನದ ಹಿಂದೆಯೂ ಅನೇಕ ಗ್ರಂಥಗಳ ಅಧ್ಯಯನ, ದಾಖಲೆಗಳ ಪರಿಶೀಲನೆ ಹಾಗೂ ಸಂಶೋಧನೆ ನಡೆಸಿದ್ದಾರೆ. ಇಷ್ಟೆಲ್ಲ ವಿರೋಧ ಮತ್ತು ಟೀಕೆಗಳ ನಡುವೆಯೂ ತಮ್ಮ ಬರವಣಿಗೆಯ ಬದ್ಧತೆಯನ್ನು ಉಳಿಸಿಕೊಂಡಿರುವುದು ಮೆಚ್ಚುವಂತಹದ್ದು ಎಂದರು.
ನ.15ರಂದು ‘ಬಸವ ಮಂಟಪ’ ಕೃತಿ ಲೋಕಾರ್ಪಣೆ
ಕಾರ್ಯಕ್ರಮಕ್ಕೆ ಆಗಮಿಸದಂತೆ ಕೆಲವರಿಗೆ ಒತ್ತಡ ಹೇರಲಾಗಿತ್ತು. ಸುಮಾರು 20 ಮಂದಿ ಸ್ನೇಹಿತರು ದೂರವಾಣಿ ಕರೆ ಮಾಡಿ, ಕಾರ್ಯಕ್ರಮಕ್ಕೆ ಬರಲು ಇಚ್ಛೆಯಿದ್ದರೂ ಒತ್ತಡದ ಕಾರಣದಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ಆದರೂ ಸಭಾಂಗಣ ತುಂಬಿ ತುಳುಕಿರುವುದು ವಿಚಾರಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಪುಸ್ತಕಗಳನ್ನು ಸುಡುವುದರಿಂದ ವಿಚಾರಗಳನ್ನು ನಾಶಪಡಿಸಲು ಸಾಧ್ಯವಾಗಿದ್ದರೆ ಇತಿಹಾಸದಲ್ಲಿ ಅನೇಕ ಗ್ರಂಥಾಲಯಗಳನ್ನು ನಾಶಪಡಿಸಿದ ಸಂದರ್ಭದಲ್ಲೇ ಜ್ಞಾನವೂ ನಾಶವಾಗಬೇಕಿತ್ತು. ಆದರೆ ವಿಚಾರಗಳು ಸದಾ ಜೀವಂತವಾಗಿರುತ್ತವೆ ಎಂದು ಹೇಳಿದರು.