ಬೆಂಗಳೂರು, ಮೇ 13: ರಾಜ್ಯ ಸರ್ಕಾರದ ನನ್ನ ಖಾತೆ ನನ್ನ ಹಕ್ಕು ಎಂಬ ಆರನೇ ಭೂ ಗ್ಯಾರಂಟಿಯಲ್ಲಿ ಅಚ್ಚರಿ ಏನಿಲ್ಲ; ವಿಶೇಷತೆಯೂ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು, ಇದು ಬೆಂಗಳೂರಿನ ಜನರಿಗೆ ಯಾವುದೇ ಉಡುಗೊರೆ ಅಲ್ಲ. 33 ಲಕ್ಷ ಆಸ್ತಿಗಳಿವೆ ಎಂದಿದ್ದಾರೆ. ಈ ಆಸ್ತಿಗಳ ಒಡೆತನ ಯಾರಿಗೂ ಇರಲಿಲ್ಲವೇ? ಹೊಸದಾಗಿ ಒಡೆತನ ಕೊಡುತ್ತಿದ್ದೀರಾ ಎಂದು ಕೇಳಿದರು. ಇದು ಭ್ರಷ್ಟಾಚಾರಕ್ಕೆ ದಾರಿಯೇ ಹೊರತು ಬೇರೇನೂ ಅಲ್ಲ. ಕಾಂಗ್ರೆಸ್ಸಲ್ಲಿ ಕಿಕ್‍ಬ್ಯಾಕ್ ಇಲ್ಲದೇ ಕಥೆಯೇ ಇಲ್ಲ ಎಂದು ಆರೋಪಿಸಿದರು.
ಬೆಂಗಳೂರಲ್ಲಿ ರಸ್ತೆ ಗುಂಡಿಗಳು ಹಾಗೇ ಇವೆ. ಜನರ ಕೋಪ ಎದುರಿಸಲಾಗದೇ ಕಾಂಗ್ರೆಸ್ ಸರ್ಕಾರ ಜಿಬಿಎ ಚುನಾವಣೆಯನ್ನು ನವೆಂಬರ್ ತಿಂಗಳಿಗೆ ಮುಂದಕ್ಕೆ ಹಾಕಲು ಕೋರ್ಟಿಗೆ ಅರ್ಜಿ ಹಾಕಿದೆ. ಕಾಂಗ್ರೆಸ್ ಪಕ್ಷ ಚುನಾವಣಾ ಭೀತಿ ಹೊಂದಿದೆ ಎಂದು ದೂರಿದರು.
ಸನಾತನ ಧರ್ಮ ಅಳಿಸುವುದಾಗಿ ಹಲವಾರು ಬಾರಿ ಉದಯನಿದಿ ಸ್ಟಾಲಿನ್ ಹೇಳಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಇರುವಂತೆ ಕಾಣುತ್ತದೆ. ಸ್ಟಾಲಿನ್ ಅವರು ತಮ್ಮ ಪುತ್ರನನ್ನು ಯಾವುದಾದರೂ ಒಳ್ಳೆಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಮಾಡಿಸುವುದು ಒಳ್ಳೆಯದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಕಾಂಗ್ರೆಸ್ ಸರ್ಕಾರದಿಂದ ಎಸ್‍ಟಿ ಸಮುದಾಯಕ್ಕೆ ದೊಡ್ಡ ಅನ್ಯಾಯ: ಆರ್. ಅಶೋಕ್ ಆರೋಪ
ಕಾಂಗ್ರೆಸ್‍ನವರು ಏಕಾಏಕಿ ಕುತಂತ್ರ, ಷಡ್ಯಂತ್ರ ಮಾಡಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಮೀಸಲಾತಿ ಪ್ರಮಾಣ ಇಳಿಸುವ ಮೂಲಕ ವಂಚನೆ, ದ್ರೋಹವೆಸಗಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಆರೋಪಿಸಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರವು ಎಸ್‍ಸಿ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಏರಿಸಿತ್ತು. ಎಸ್‍ಟಿ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸಿತ್ತು. ಎಸ್‍ಟಿ ಸಮುದಾಯಕ್ಕೆ ನ್ಯಾಯಯುತ ಬೇಡಿಕೆಯನ್ನು ನಾವು ಈಡೇರಿಸಿದ್ದೆವು. ಮಾಧುಸ್ವಾಮಿ ವರದಿ, ಸದಾಶಿವ ಆಯೋಗವನ್ನು ಗಮನದಲ್ಲಿ ಇಟ್ಟುಕೊಂಡು ನಾವು ಮೀಸಲಾತಿಯನ್ನು ಹೆಚ್ಚಿಸಿದ್ದೆವು. ಇದು ಸುಮಾರು 30 ವರ್ಷಗಳ ಹೋರಾಟದ ಪ್ರತಿಫಲ ಎಂದು ವಿವರಿಸಿದರು.
ಕಾಂಗ್ರೆಸ್ ಸರ್ಕಾರದ ಕ್ರಮದಿಂದ ಎಸ್‍ಟಿ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ. ಮೀಸಲಾತಿ ಕಡಿಮೆ ಮಾಡಲು ಮತ್ತು ಘನಂದಾರಿ ಕೆಲಸಕ್ಕೆ ಸಿದ್ದರಾಮಯ್ಯ ಅವರ ಸರ್ಕಾರವೇ ಬೇಕಿತ್ತೇ? ಇದೇನಾ ನಿಮ್ಮ ದಲಿತಪರ ನೀತಿ ಎಂದು ಪ್ರಶ್ನಿಸಿದರು. ಹಿಂದೆ 10 ವರ್ಷ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಮೀಸಲಾತಿ ಪ್ರಮಾಣ ಹೆಚ್ಚಿಸಿಲ್ಲವೇಕೆ ಎಂದು ಕೇಳಿದರು. ಎಸ್‍ಟಿ ಸಮುದಾಯ ನ್ಯಾಯ ಕೇಳುತ್ತಿದೆ. ಅದಕ್ಕೆ ನಿಮ್ಮ ಉತ್ತರವೇನು ಎಂದು ಪ್ರಶ್ನೆಯನ್ನು ಮುಂದಿಟ್ಟರು. 7 ರಿಂದ ಶೇ. 3ಕ್ಕೆ ಇಳಿಸಲಾಗಿದೆ. ಇನ್ನೆಷ್ಟು ವರ್ಷ ಹೋರಾಟ ಮಾಡಬೇಕಾದೀತು ಎಂದರು.
ಮೀಸಲಾತಿ ಪ್ರಮಾಣ ಕಡಿತ ಮಾಡಿ ಎಸ್‍ಟಿಗಳಿಗೆ ಅವಮಾನ ಮಾಡಿದ್ದಾರೆ. ದಲಿತರ ಬೆನ್ನಿಗೆ ಇವರು ಚೂರಿ ಹಾಕಿದ್ದಾರೆ. ಇದು ಇವರ ದ್ವಂದ್ವ ನೀತಿ ಎಂದು ಆರೋಪಿಸಿದರು. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದ ಅವರು, ಇದನ್ನು ಸರಿಪಡಿಸದೇ ಇದ್ದರೆ ಹೋರಾಟವು ದೊಡ್ಡ ಜ್ವಾಲೆಯಾಗಿ ರಾಜ್ಯ ಸರ್ಕಾರವನ್ನು ಕಿತ್ತೆಸೆಯುವಂಥ ತೀರ್ಮಾನವನ್ನು ಆ ಸಮುದಾಯದವರು ಮಾಡಲಿದ್ದಾರೆ. ನಾವು ಕೂಡ ಅವರ ಹೋರಾಟಕ್ಕೆ ಬೆಂಬಲ ಕೊಡುತ್ತೇವೆ ಎಂದು ತಿಳಿಸಿದರು.
ದಲಿತರ ಕಣ್ಣಿಗೆ ಮಣ್ಣೆರಚುವ ಕೆಲಸ ಸರಿಯೇ- ರಾಜುಗೌಡ ನಾಯಕ್
ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜುಗೌಡ ನಾಯಕ್ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಕೋರ್ಟಿಗೆ ಸಮರ್ಪಕ ಮಾಹಿತಿ ಕೊಟ್ಟಿಲ್ಲ. ಒಳ್ಳೆಯ ವಕೀಲರನ್ನು ನೇಮಿಸಿಲ್ಲ. ವಕೀಲರು ಕೋರ್ಟಿಗೆ ಹಾಜರಾಗಿಲ್ಲ. ಇದರಿಂದ ಕೋರ್ಟಿನಲ್ಲಿ ತಡೆಯಾಜ್ಞೆ ಸಿಗುವಂತಾಗಿದೆ ಎಂದು ಆರೋಪಿಸಿದರು. ಸ್ಟೇ ತೆರವು ಮಾಡಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರೇ, ದಲಿತರ ಕಣ್ಣಿಗೆ ಮಣ್ಣೆರಚುವ ಕೆಲಸ ಸರಿಯೇ ಎಂದು ಕೇಳಿದರು.
ಆರ್ಥಿಕ ತಜ್ಞರಾಗಿ ರಾಜ್ಯವನ್ನು ಸಿದ್ದರಾಮಯ್ಯ ಅಧೋಗತಿಗೆ ತಳ್ಳಿದ್ದಾರೆ: ಜೋಶಿ ಕಿಡಿ
ಛತ್ತೀಸಗಡದಲ್ಲಿ ಎಸ್‍ಟಿಗೆ ಶೇ.32, ಎಸ್‍ಸಿ 10, ಒಬಿಸಿ 16 ಸೇರಿ ಒಟ್ಟು ಶೇ.58 ಮೀಸಲಾತಿ ಕೊಡಲಾಗಿದೆ. ಅಲ್ಲಿ ಎಸ್‍ಸಿ, ಎಸ್‍ಟಿಗೆ ಜನಸಂಖ್ಯೆ ಆಧಾರದಲ್ಲಿ ಶೇ. 50ಕ್ಕಿಂತ ಹೆಚ್ಚಾದರೂ ಕೊಡಿ ಎಂದಿದ್ದಾರೆ. ಹಾಗಿದ್ದರೆ ಕರ್ನಾಟಕದಲ್ಲಿ ಯಾಕೆ ಕೊಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜುಗೌಡ ನಾಯಕ್, ಎಸ್‍ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸದಾಸ ಕರಿಯಪ್ಪ ಉಪಸ್ಥಿತರಿದ್ದರು.