ವಿಶ್ವವಾಣಿ ಪುರವಣಿ ವಿಭಾಗದ ಮುಖ್ಯಸ್ಥ ಶಶಿಧರ ಹಾಲಾಡಿ ಅವರಿಗೆ ದ್ವಾರನಕುಂಟೆ ಪಾತಣ್ಣ ಕಾದಂಬರಿ ಪ್ರಶಸ್ತಿ ಪುರಸ್ಕಾರ
ಬೆಂಗಳೂರು: ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆ ಗಳನ್ನು ವಿಶ್ಲೇಷಿಸುವ ಮಹತ್ವದ ಕೃತಿಯಾಗಿ ಗುರುತಿಸಿಕೊಂಡಿರುವ ‘ನದಿ ದಾಟಿ ಬಂದವರು’ ಕಾದಂಬರಿಯು ಭಾರತದ ಇತಿಹಾಸದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಾಲಘಟ್ಟವನ್ನು ಗಂಭೀರವಾಗಿ ವಿಶ್ಲೇಷಿಸುವ ಕೃತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ತಿಳಿಸಿದರು.
ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ ವತಿಯಿಂದ ಶನಿವಾರ ಆಯೋಜಿಸಿದ್ದ ದ್ವಾರನಕುಂಟೆ ಪಾತಣ್ಣ ಕಾದಂಬರಿ ಪ್ರಶಸ್ತಿಯನ್ನು ವಿಶ್ವವಾಣಿ ಪುರವಣಿ ವಿಭಾಗದ ಮುಖ್ಯಸ್ಥ ಶಶಿಧರ ಹಾಲಾಡಿ (Shashidhar Haladi, Head of Vishwavani Supplement Department) ಅವರಿಗೆ ಪ್ರದಾನ ಮಾಡಿ ಬಳಿಕ ಮಾತನಾಡಿದ ಅವರು, ಕಾದಂಬರಿಯು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಗೊಳ್ಳುವ ಹೋರಾಟದ ಕಾಲಘಟ್ಟವನ್ನು ಹಾಗೂ ಅದರ ನಂತರದ ಸಾಮಾಜಿಕ-ರಾಜಕೀಯ ಬೆಳವಣಿಗೆಗಳನ್ನು ಸಾಹಿತ್ಯದ ಮೂಲಕ ವಿಶ್ಲೇಷಿಸುತ್ತದೆ.
ಸ್ವಾತಂತ್ರ್ಯಕ್ಕೂ ಮುನ್ನ ಬ್ರಿಟಿಷರ ವಿರುದ್ಧ ಹೋರಾಟ ನಡೆಸುವ ಸಂದರ್ಭದಲ್ಲಿ ದೇಶದ ವಿವಿಧ ವರ್ಗಗಳ ಜನರು ರಾಷ್ಟ್ರೀಯ ಚಳವಳಿಗೆ ಬೆಂಬಲ ನೀಡಿದ್ದರು. ಆ ಸಮಯದಲ್ಲಿ ಭೂಮಾಲೀಕ ವರ್ಗಗಳು ಹಾಗೂ ಮೇಲಜಾತಿ ಪ್ರಭುತ್ವವಿದ್ದ ಸಮಾಜದ ವರ್ಗಗಳು ಕೂಡ ರಾಷ್ಟ್ರೀಯ ಚಳವಳಿಗೆ ಬೆಂಬಲ ನೀಡಿ, ಬ್ರಿಟಿಷರನ್ನು ದೇಶದಿಂದ ಹೊರ ಹಾಕುವ ಹೋರಾಟದಲ್ಲಿ ಭಾಗಿಯಾಗಿದ್ದವು ಎಂದರು.
ಈ ಹೋರಾಟದಲ್ಲಿ ಮಹಾತ್ಮ ಗಾಂಧಿ ಪ್ರಮುಖ ನಾಯಕತ್ವ ವಹಿಸಿಕೊಂಡಿದ್ದರು. ಗಾಂಧೀಜಿಯ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ಸಮಾಜದ ಅನೇಕ ವರ್ಗ ಗಳು ಬೆಂಬಲ ನೀಡಿದ್ದವು. ಆದರೆ ನಂತರದ ಅವಧಿಯಲ್ಲಿ ಗಾಂಧೀಜಿ ದಲಿತರು, ಶೂದ್ರರು ಮತ್ತು ಮಹಿಳೆಯರ ಹಕ್ಕುಗಳ ಪರವಾಗಿ ಮಾತನಾಡಲು ಆರಂಭಿಸಿದಾಗ ಸಮಾಜದ ಕೆಲವು ಪ್ರಭುತ್ವ ವರ್ಗಗಳಲ್ಲಿ ವಿರೋಧವೂ ವ್ಯಕ್ತವಾಗಲು ಆರಂಭವಾಯಿತು ಎಂಬ ಇತಿಹಾಸದ ವಾಸ್ತವವನ್ನು ಕಾದಂಬರಿ ಸೂಕ್ಷ್ಮವಾಗಿ ತೆರೆದಿಡುತ್ತದೆ.
ಕಾದಂಬರಿಯು ಸ್ವಾತಂತ್ರ್ಯ ನಂತರ ದೇಶದಲ್ಲಿ ನಡೆದ ಬದಲಾವಣೆಗಳನ್ನೂ ಸಮಗ್ರವಾಗಿ ಚಿತ್ರಿಸುತ್ತದೆ. ಸ್ವಾತಂತ್ರ್ಯ ನಂತರ ಭಾರತದಲ್ಲಿ ಶಿಕ್ಷಣದ ವಿಸ್ತರಣೆ, ಪ್ರಜಾಪ್ರಭುತ್ವ ವ್ಯವಸ್ಥೆ ಯ ಬಲವರ್ಧನೆ ಹಾಗೂ ಜನರ ಜೀವನಮಟ್ಟದಲ್ಲಿ ಕಂಡುಬಂದ ಸುಧಾರಣೆಗಳು ದೇಶದ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟವು.
ಆರೋಗ್ಯ, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನರಿಗೆ ಹೊಸ ಅವಕಾಶ ಗಳು ದೊರಕತೊಡಗಿದವು. ಕೈಗಾರಿಕೆಗಳ ಸ್ಥಾಪನೆ, ನೀರಾವರಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ದೇಶದಲ್ಲಿ ಪ್ರಗತಿ ಕಂಡುಬಂದಿತು ಎಂದರು.
ಈ ಹಿನ್ನೆಲೆಯಲ್ಲಿಯೇ ಇತಿಹಾಸದ ಈ ಬದಲಾವಣೆಗಳನ್ನು ಮರೆತಿರುವ ಚಾರಿತ್ರಿಕ ವಿಸ್ಮೃತಿಯೇ ಇಂದಿನ ಸಮಾಜದಲ್ಲಿ ರಾಜಕೀಯ ಹಾಗೂ ಕೋಮು ಸಂಘರ್ಷಗಳಿಗೆ ಕಾರಣವಾಗುತ್ತಿದೆ ಎಂಬ ಅಂಶವನ್ನು ಕಾದಂಬರಿ ಬಲವಾಗಿ ವ್ಯಕ್ತಪಡಿಸುತ್ತದೆ.
ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ನಂತರದ ಸಾಮಾಜಿಕ ನ್ಯಾಯ ಚಳುವಳಿ ಗಳವರೆಗೆ ನಡೆದ ಬೆಳವಣಿಗೆಗಳನ್ನುಅರಿತುಕೊಳ್ಳುವುದು ಸಮಾಜದ ಮುಂದಿನ ಪಥವನ್ನು ನಿರ್ಧರಿಸಲು ಈ ಕಾದಂಬರಿ ಅತ್ಯಂತ ಮುಖ್ಯವಾಗಿದೆ ಎಂದರು.
ಕೃಷಿ ಕಾರ್ಮಿಕರ ಬದುಕಿನ ಬದಲಾವಣೆಯ ಚಿತ್ರಣ
ಶಶಿಧರ ಹಾಲಾಡಿ ಅವರು ಮಾತನಾಡಿ, ನದಿ ದಾಟಿ ಬಂದವರು ಕಾದಂಬರಿಯು 1930ರ ದಶಕದಿಂದ 1975ರ ದಶಕದವರೆಗೆ ಕರ್ನಾಟಕದ ಕರಾವಳಿ ಭಾಗದ ಹಳ್ಳಿಗಳ ಸಾಮಾಜಿಕ ಹಾಗೂ ಕೃಷಿ ಕ್ಷೇತ್ರದ ಸ್ಥಿತ್ಯಂತರಗಳನ್ನು ಚಿತ್ರಿಸುತ್ತದೆ. ಕಾದಂಬರಿಯ ನಾಯಕ ವೆಂಕಟ ಯ್ಯ ದೇಶಕ್ಕೆ ಸ್ವಾತಂತ್ರ್ಯ ಬಂದರೆ ಬಡಜನರು ಮತ್ತು ಕೃಷಿ ಕಾರ್ಮಿಕರ ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂದು ನಂಬಿದ್ದನು. ಮಹಾತ್ಮ ಗಾಂಧೀಜಿಯವರ ಆಲೋಚನೆ ಗಳಿಂದ ಪ್ರಭಾವಿತರಾದ ಅವನ ಕನಸುಗಳು ನಂತರ 1970ರ ದಶಕದಲ್ಲಿ ಜಾರಿಗೆ ಬಂದ ಭೂಸುಧಾರಣೆ ಕಾಯ್ದೆಯಿಂದ ಸಾಕಾರವಾದವು. ಈ ಮೂಲಕ ಕೃಷಿ ಕಾರ್ಮಿಕರಿಗೆ ಜಮೀನು ದೊರೆತು ಅವರ ಬದುಕಿನಲ್ಲಿ ಮಹತ್ವದ ಬದಲಾವಣೆ ಕಂಡುಬಂದದ್ದು ಕಾದಂಬರಿಯಲ್ಲಿ ಚಿತ್ರಿಸಲಾಗಿದೆ ಎಂದರು.