ಬೆಂಗಳೂರು, ಅ. 19: "ಬೆಂಗಳೂರಿನ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮ ಆರಂಭಿಸಿ ದೊಡ್ಡ ಮಟ್ಟಕ್ಕೆ ಬೆಳೆದವರು, ಈಗ ಬೆಂಗಳೂರಿನ ಬಗ್ಗೆ ಟೀಕೆ ಮಾಡಿ ಟ್ವೀಟ್ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಬೆಂಗಳೂರಿನ ಘನತೆಗೆ ಚ್ಯುತಿ ತರುತ್ತಿರುವವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಬೆಂಗಳೂರಿನ ಕೋರಮಂಗಲದ ವೀರ ಯೋಧ ಉದ್ಯಾನವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ "ಬೆಂಗಳೂರು ನಡಿಗೆ" ಅಭಿಯಾನದ ಅಂಗವಾಗಿ "ನಾಗರಿಕರೊಂದಿಗೆ ಸಂವಾದ" ನಡೆಸಿ, ಅವರ ಅಹವಾಲುಗಳನ್ನು ಆಲಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದರು.
"ಬೆಂಗಳೂರಿಗೆ ಬಂದು ಬೆಳೆದಿರುವವರು ಹಿಂದೆ ಹೇಗಿದ್ದೆವು, ಪ್ರಸ್ತುತ ಹೇಗಿದ್ದೇವೆ ಎಂಬುದನ್ನು ಮರೆತು ಟ್ವೀಟ್ ಮಾಡುತ್ತಿದ್ದಾರೆ. ನಾವು ನಮ್ಮ ಮೂಲವನ್ನು ಮರೆಯಬಾರದು, ಮೂಲವನ್ನು ಮರೆತರೆ ಯಶಸ್ಸು ಸಾಧಿಸುವುದಿಲ್ಲ ಎಂದು ನಾನು ನಂಬಿದ್ದೇನೆ" ಎಂದು ತಿಳಿಸಿದರು.
"ನಗರದಾದ್ಯಂತ ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ಎಂಬುದನ್ನು ಸಾರ್ವಜನಿಕರೇ ಫೋಟೊ ತೆಗೆದು ಅದನ್ನು ಮೊಬೈಲ್ ಆ್ಯಪ್ ಮೂಲಕ ಸರ್ಕಾರದ ಗಮನಕ್ಕೆ ತರುವ ವ್ಯವಸ್ಥೆಯನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನಾವು ರೂಪಿಸಿದ್ದೇವೆ. ಮಾಧ್ಯಮಗಳೂ ಸಹ ಸುದ್ದಿ ಮಾಡುತ್ತಿವೆ. ನಾನು ಟೀಕೆ ಹಾಗೂ ವಿಮರ್ಶೆಗಳನ್ನು ಸ್ವಾಗತಿಸುತ್ತೇನೆ. ಟೀಕೆಗಳು ಇದ್ದಾಗಲೇ ಪ್ರಜಾಪ್ರಭುತ್ವಕ್ಕೆ ಹೆಚ್ಚು ಮೌಲ್ಯ ಇರುತ್ತದೆ. ಆದರೆ ಕೆಲವರು ವಿಕೋಪಕ್ಕೆ ಹೋಗಿ ಟೀಕೆ ಮಾಡುತ್ತಿದ್ದಾರೆ. ಅಂತಹವರ ಟೀಕೆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಜನ ನಮಗೆ ಅವಕಾಶ ನೀಡಿದ್ದು, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ" ಎಂದರು.
"ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಯಿತು. ಇತಿಹಾಸ ಗಮನಿಸಿದರೆ ನಾವು ಮಾಡಿದಷ್ಟು ತೀರ್ಮಾನಗಳನ್ನು ಯಾರೂ ಸಹ ಮಾಡಿಲ್ಲ. ನಾವು ಮಾಡಿದ ಕೆಲಸಗಳ ಬಗ್ಗೆ ಸಾರ್ವಜನಿಕರಿಗೆ, ವಿರೋಧ ಪಕ್ಷದವರಿಗೆ ಎಲ್ಲರಿಗೂ ತಿಳಿದಿದೆ. ಇಡೀ ದೇಶದಲ್ಲಿ ಸಮಸ್ಯೆಯಿದೆ. ಅವರೆಲ್ಲಾ ಮಾಧ್ಯಮಗಳನ್ನು ನಿಯಂತ್ರಣ ಮಾಡುತ್ತಿದ್ದಾರೆ. ನಾವು ಮುಕ್ತವಾಗಿ ಬಿಟ್ಟಿದ್ದೇವೆ. ದೆಹಲಿ, ಮುಂಬೈ ಸೇರಿದಂತೆ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಿ ರಸ್ತೆಗಳ ಸಮಸ್ಯೆಗಳನ್ನು ನಾವು ತೋರಿಸುವೆ" ಎಂದರು.
"ಜಿಬಿಎ ಮಾಡುವಾಗ ವಿರೋಧ ಪಕ್ಷದವರೂ ಸಹಕಾರ ನೀಡಿದರು. ಈ ಮೊದಲು 198 ವಾರ್ಡ್‌ಗಳಿದ್ದವು ಈಗ ಐದು ಪಾಲಿಕೆಗಳಿಂದ 369 ವಾರ್ಡ್ ಗಳಾಗಿವೆ. ಇಷ್ಟು ಬೇಗ ಪಾಲಿಕೆ ವಿಭಜನೆಯಿಂದ ಹಿಡಿದು ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವೇ ಎಂದು ದೇಶದಾದ್ಯಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ" ಎಂದು ಹೇಳಿದರು.
"ಜನರ ಬಳಿಗೆ ಸರ್ಕಾರ ಹೋಗಬೇಕು ಎಂದು ಐದು ಪಾಲಿಕೆಗಳನ್ನು ಮಾಡಲಾಗಿದೆ. ಬಿ ಖಾತಾದಿಂದ ಎ ಖಾತೆಗೆ ಬದಲಾವಣೆ ಮಾಡಿಕೊಳ್ಳಲು ಸರ್ಕಾರ ಅತ್ಯುತ್ತಮ ಅವಕಾಶ ನೀಡಿದೆ. ಸಿಎ ನಿವೇಶನಗಳ ಬಗ್ಗೆಯೂ ಪ್ರತ್ಯೇಕ ನೀತಿ ತರಲಾಗುತ್ತಿದೆ. ಗೊಂದಲ ಉಂಟಾಗುವುದು ಬೇಡವೆಂದು ನಗರ ಯೋಜನೆ ಕೆಲಸವನ್ನು ಬಿಡಿಎಯಿಂದ ಜಿಬಿಎಗೆ ನೀಡಲಾಗಿದೆ. ದೊಡ್ಡ ಯೋಜನೆಗಳನ್ನು ಸರ್ಕಾರ ಮಾಡಿದರೆ. ಚಿಕ್ಕ ಕೆಲಸಗಳನ್ನು ಪಾಲಿಕೆಗಳು ಮಾಡುತ್ತವೆ" ಎಂದರು.
"ನಗರದಲ್ಲಿ ನಿತ್ಯ ಮೂರು ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ಜನಸಂಖ್ಯೆ 1.40 ಕೋಟಿ ಮುಟ್ಟಿದೆ. 70 ಲಕ್ಷ ಮಂದಿ ಪ್ರತಿದಿನ ಹೊರಗಿನಿಂದ ಬಂದು ಹೋಗುತ್ತಿದ್ದಾರೆ. ಉದ್ಯೋಗ, ಶಿಕ್ಷಣ, ವಹಿವಾಟು, ಉದ್ದಿಮೆ ಹೀಗೆ ಅನೇಕ ಕೆಲಸಗಳಿಗಾಗಿ ಬೆಂಗಳೂರನ್ನು ಅವಲಂಭಿಸಿದ್ದಾರೆ" ಎಂದರು.
"ಜಿಬಿಎ ಮೂಲಕ ಐದು ಪಾಲಿಕೆಗಳ ರಚನೆ ಬಳಿಕ, ಪಾಲಿಕೆ ಆಯುಕ್ತರ ವೆಚ್ಚ ಮಿತಿಯನ್ನು 1ರಿಂದ 3 ಕೋಟಿಗೆ, ಸ್ಥಾಯಿ ಸಮಿತಿ ವೆಚ್ಚ ಮಿತಿಯನ್ನು 3ರಿಂದ 5 ಕೋಟಿಗೆ, ಪಾಲಿಕೆ ಮೇಯರ್ ವೆಚ್ಚ ಮಿತಿಯನ್ನು 5ರಿಂದ 10 ಕೋಟಿಗೆ ಏರಿಸಲಾಗಿದೆ. ಆಮೂಲಕ ಪಾಲಿಕೆಗಳಿಗೆ ಆರ್ಥಿಕ ಉತ್ತೇಜನ ನೀಡಲಾಗಿದೆ. ನಮ್ಮ ಈ ನಿರ್ಧಾರದಿಂದ ಬಿಜೆಪಿ ನಾಯಕರು ಸಂತೋಷಗೊಂಡಿದ್ದು, ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿಲ್ಲ. ನೀವು ನಮಗೆ ಸಹಕಾರ ನೀಡಿ" ಎಂದರು.
"ಇಂದು ಸುಮಾರು 180 ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ. ಶಾಂತಿನಗರ ಹೌಸಿಂಗ್ ಸೊಸೈಟಿ, ಸ್ಯಾನಿಟರಿ ಲೈನ್, ಮಳೆ ನೀರು ಪ್ರವಾಹದಿಂದ ತೊಂದರೆಗೆ ಒಳಗಾದ ಪ್ರದೇಶಗಳ ಸಮಸ್ಯೆಗಳು, ಕೋರಮಂಗಲ ಮೆಟ್ರೋ ಮಾರ್ಗ, ಏರ್ ಪೋರ್ಟ್ ಗೆ ನೇರ ಬಸ್ ವ್ಯವಸ್ಥೆ, ಎಸ್ ಟಿಪಿ ಅಳವಡಿಕೆ, ಬೆಳ್ಳಂದೂರು ಕೆರೆ ಸಮಸ್ಯೆ, ಪಾದಚಾರಿ ಮಾರ್ಗ, ಸಿಎ ನಿವೇಶನ, ಸಸಿ ನೆಡುವಿಕೆ ಹೀಗೆ ಹಲವಾರು ವಿಚಾರಗಳ ಬಗ್ಗೆ ನಾಗರಿಕರು ಗಮನ ಸೆಳೆದಿದ್ದಾರೆ" ಎಂದರು.
"ಜನರು ಸರ್ಕಾರದೊಂದಿಗೆ ಕೈ ಜೋಡಿಸಿದರೆ ಮಾತ್ರ ಯಾವುದೇ ಕೆಲಸವನ್ನು ಸರ್ಕಾರ ಪರಿಣಾಮವಾಗಿ ಮಾಡಲು ಸಾಧ್ಯ. ಬೆಂಗಳೂರನ್ನು ನಾನು ಹಾಗೂ ರಾಮಲಿಂಗಾ ರೆಡ್ಡಿ ಅವರು ಮಾತ್ರ ಬದಲಾಯಿಸಲು ಆಗುವುದಿಲ್ಲ. ಸಾರ್ವಜನಿಕರು ನಮಗೆ ಸಹಕಾರ ನೀಡಬೇಕು. ಕಸ ವಿಲೇವಾರಿಯಿಂದ ಹಿಡಿದು ಎಲ್ಲಾ ವಿಚಾರದಲ್ಲೂ ಸರ್ಕಾರದ ಜೊತೆ ಕೈ ಜೋಡಿಸಬೇಕು" ಎಂದರು.
ಬೆಂಗಳೂರಿನ ಅಭಿವೃದ್ಧಿಗೆ 1.04 ಲಕ್ಷ ಕೋಟಿ ಮೊತ್ತದ ಯೋಜನೆಗಳು
"ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಟನಲ್ ರಸ್ತೆ, ಎಲಿವೆಟೆಡ್ ಕಾರಿಡಾರ್, ಡಬಲ್ ಡೆಕ್ಕರ್, ಬಫರ್ ರಸ್ತೆ, ನಗರ ಸೌಂದರ್ಯ ಹೆಚ್ಚಿಸಲು ದೀಪಾಲಂಕಾರ, ಬೀದಿ ದೀಪಗಳಿಗೆ ಎಲ್ ಇಡಿ ಬಲ್ಬ್ ಅಳವಡಿಕೆ ಸೇರಿದಂತೆ, ಮುಂದಿನ ನಾಲ್ಕೈದು ವರ್ಷಗಳಲ್ಲಿ 1.04 ಲಕ್ಷ ಕೋಟಿಯಷ್ಟು ಅಭಿವೃದ್ಧಿ ಯೋಜನೆ ರೂಪಿಸಿದ್ದೇವೆ" ಎಂದರು.
"ಜನರ ಬಳಿಗೆ ಸರ್ಕಾರವನ್ನು ಕರೆದೋಯ್ಯಬೇಕು ಎಂಬ ಕಾರಣಕ್ಕೆ ನಾವು ನಗರದಲ್ಲಿ ಐದು ಪಾಲಿಕೆ ರಚಿಸಿದ್ದೇವೆ. ನೀವು ಇಂದು ಕೊಟ್ಟಿರುವ ಅಹವಾಲು ಹಾಗೂ ಸಲಹೆಗಳನ್ನು ನಮ್ಮ ಅಧಿಕಾರಿಗಳು ದಾಖಲಿಸಿಕೊಂಡಿದ್ದು ಅವರು ನಿಮ್ಮನ್ನು ಸಂಪರ್ಕಿಸಲಿದ್ದಾರೆ. ನಿಮ್ಮ ಅಹವಾಲು ಏನೇ ಇದ್ದರು 1533 ಸಹಾಯವಾಣಿಗೆ ಕರೆ ಮಾಡಿ" ಎಂದು ತಿಳಿಸಿದರು.
ಖಾತೆ ಮಾಡಿಸಿಕೊಳ್ಳುವ ಅವಕಾಶ ಕಳೆದುಕೊಳ್ಳಬೇಡಿ:
"ನಿಮ್ಮ ಆಸ್ತಿ ದಾಖಲೆ ಸರಿ ಮಾಡಿಸಿಕೊಳ್ಳಲು ಸರ್ಕಾರ ಉತ್ತಮ ಅವಕಾಶ ಕಲ್ಪಿಸಿದ್ದು, ಎಲ್ಲರೂ ಇ ಖಾತಾ ಮಾಡಿಸಿಕೊಳ್ಳಿ. ಸರ್ಕಾರ ಬಿ ಖಾತೆಯಿಂದ ಎ ಖಾತಾಗೆ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಿದ್ದು ಈ ಅವಕಾಶವನ್ನು ಯಾರೂ ಕಳೆದುಕೊಳ್ಳಬೇಡಿ" ಎಂದರು.
"ಸಿಎ ನಿವೇಶನದ ಬಗ್ಗೆ ಸಾರ್ವಜನಿಕರು ಪ್ರಸ್ತಾಪ ಮಾಡಿದ್ದು, ಸರ್ಕಾರ ಈ ವಿಚಾರದಲ್ಲಿ ಪ್ರತ್ಯೇಕ ನೀತಿ ರೂಪಿಸುತ್ತಿದೆ. ಈ ಹಿಂದೆ ಬಿಡಿಎ ನಿಭಾಯಿಸುತ್ತಿದ್ದ ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನು ಜಿಬಿಎಗೆ ವರ್ಗಾವಣೆ ಮಾಡಿದ್ದೇನೆ. ಬೆಂಗಳೂರಿನಲ್ಲಿ ದೊಡ್ಡ ಯೋಜನೆಗಳನ್ನು ಜಿಬಿಎ ನಿಭಾಯಿಸಲಿದ್ದು, ಉಳಿದ ಸಣ್ಣ ಯೋಜನೆಗಳನ್ನು ಪಾಲಿಕೆಗಳು ಮಾಡಲಿವೆ" ಎಂದರು.
ಜನರ ಕಲ್ಯಾಣಕ್ಕೆ ಪ್ರತಿ ವರ್ಷ 1 ಲಕ್ಷ ಕೋಟಿ ವೆಚ್ಚ:
"ಜನರ ಹೊಟ್ಟೆ ತುಂಬಿಸಬೇಕು. ಬೆಲೆ ಏರಿಕೆ ಸಮಸ್ಯೆಯಿಂದ ಜನರನ್ನು ರಕ್ಷಿಸಬೇಕು ಎಂದು ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಪ್ರತಿ ವರ್ಷ ಇದಕ್ಕೆ 52 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಇದರ ಜೊತೆಗೆ ರೈತರಿಗೆ ಉಚಿತ ವಿದ್ಯುತ್ ನೀಡಲು ನಾವು ಪ್ರತಿ ವರ್ಷ 20 ಸಾವಿರ ಕೋಟಿ ನೀಡುತ್ತಿದ್ದೇವೆ. ಹೀಗೆ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ 1 ಲಕ್ಷ ಕೋಟಿಯಷ್ಟು ಮೀಸಲಿಡುತ್ತಿದ್ದೇವೆ" ಎಂದರು.
"ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ನೀವೆಲ್ಲರೂ ಅದರಲ್ಲಿ ಭಾಗವಹಿಸಬೇಕು. ಇದು ಎಲ್ಲ ಸಮಾಜದ ಭವಿಷ್ಯಕ್ಕಾಗಿ ಮಾಡುತ್ತಿದ್ದೇವೆ. ನೀವು ಅಗತ್ಯವಾದ ಮಾಹಿತಿ ನೀಡಿ, ಅನಗತ್ಯ ಎನಿಸಿದ ಪ್ರಶ್ನೆಗಳನ್ನು ನಿರ್ಲಕ್ಷಿಸಿ" ಎಂದು ಹೇಳಿದರು.
"ರಾಮಲಿಂಗಾ ರೆಡ್ಡಿ ಅವರ ಬಗ್ಗೆ ನೀವು ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದೀರಿ. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅವರು ಹೆಚ್ಚು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ಹಿರಿಯ ನಾಯಕರನ್ನು ಹೊಂದಿರುವುದು ನಿಮ್ಮ ಭಾಗ್ಯ. ನೀವು 8 ಬಾರಿ ಅವರನ್ನು ಆಯ್ಕೆ ಮಾಡಿದ್ದು, ಬೆಂಗಳೂರನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಮಗೆ ಮಾರ್ಗದರ್ಶನ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ" ಎಂದು ತಿಳಿಸಿದರು.
ಪ್ರಶ್ನೋತ್ತರ:
ಬೆಂಗಳೂರು ನಡಿಗೆ ಕಾರ್ಯಕ್ರಮದ ಬಗ್ಗೆ ಕೇಳಿದಾಗ, "ಜನರ ಅಭಿಪ್ರಾಯ, ಸಲಹೆ, ಅಹವಾಲು ಕೇಳಬೇಕು, ಉತ್ತಮ ಆಡಳಿತ ನೀಡಬೇಕು ಎಂದು ನಾನೇ ಜನರ ಬಳಿಗೆ ತಲುಪುತ್ತಿದ್ದೇನೆ. ಜನರಿಂದಲೂ ಉತ್ತಮ ಸಹಕಾರ ನೀಡುತ್ತಿದ್ದು, ನನಗೂ ಇದು ಹೊಸ ಅನುಭವ ನೀಡಿದೆ. ಜನರ ಅಹವಾಲನ್ನು ಅಧಿಕಾರಿಗಳು ಬಗೆಹರಿಸಲಿದ್ದಾರೆ" ಎಂದರು.
ಈಜಿಪುರ ಮೇಲ್ಸೇತುವೆ ಯಾವಾಗ ಮುಗಿಯಲಿದೆ ಎಂದು ಕೇಳಿದಾಗ, "ಅದು ಆದಷ್ಟು ಬೇಗ ಮುಕ್ತಾಯವಾಗುತ್ತದೆ" ಎಂದರು.
ಐಟಿ ಬಿಟಿ ಕಂಪನಿಗಳ ಸಿಇಓಗಳ ಸಭೆ ಯಾವಾಗ ಮಾಡುತ್ತೀರಿ ಎಂದು ಕೇಳಿದಾಗ, "ನಾನು ಅವರೊಂದಿಗೆ ಪ್ರತ್ಯೇಕ ಸಭೆ ಮಾಡುವೆ. ಸಚಿವರಾದ ಪ್ರಿಯಾಕ್ ಖರ್ಗೆ, ಎಂ.ಬಿ ಪಾಟೀಲ್ ಅವರ ಜೊತೆಗೂಡಿ ಚರ್ಚೆ ಮಾಡುತ್ತೇವೆ" ಎಂದರು.
ಖಾತಾ ಪರಿವರ್ತನೆಗೆ 5% ಹಣ ಪಾವತಿ ಬಗ್ಗೆ ಕೇಳಿದಾಗ, "ಜನರು ತಮ್ಮ ಆಸ್ತಿ ದಾಖಲೆ ಸರಿ ಮಾಡಿಕೊಳ್ಳಲು ಇದು ದೊಡ್ಡ ಮೊತ್ತವಲ್ಲ. ಖಾತಾ ಪರಿವರ್ತನೆಯಿಂದ ಅವರ ಆಸ್ತಿ ಮೌಲ್ಯ ದುಪ್ಪಟ್ಟಾಗಲಿದೆ. ಅನೇಕರು ಕಂದಾಯ ನಿವೇಶನ ಖರೀದಿ ಮಾಡಿದ್ದು, ನಾವು ಎಲ್ಲರಿಗೂ ಸಮನಾದ ಸೇವೆ ನೀಡಬೇಕು. ಹೀಗಾಗಿ ಅವರ ಸಹಕಾರ ಬೇಕಾಗಿದೆ. ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದ್ದು, ಯಾರೂ ಲಂಚ ನೀಡುವ ಅಗತ್ಯವಿಲ್ಲ" ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | RSS procession: ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ RSS ಪಥ ಸಂಚಲನಕ್ಕೆ ಬ್ರೇಕ್; ಮಹತ್ವದ ಆದೇಶ
ಆರ್‌ಎಸ್ಎಸ್ ನಿರ್ಬಂಧ ವಿಚಾರವಾಗಿ ಕೇಳಿದಾಗ, "ಆರ್‌ಎಸ್ಎಸ್ ವಿಚಾರದಲ್ಲಿ ನಾವು ಹೊಸ ನಿಯಮ ರೂಪಿಸಿಲ್ಲ. ಬಿಜೆಪಿ ಸರ್ಕಾರದ ಆದೇಶವನ್ನೇ ಹೊರಡಿಸಿದ್ದೇವೆ. 2013ರಲ್ಲಿ ಜಗದೀಶ್ ಶೆಟ್ಟರ್ ಅವರ ಸರ್ಕಾರದ ಆದೇಶವನ್ನು ಮತ್ತೇ ಜಾರಿಗೊಳಿಸುತ್ತಿದ್ದೇವೆ" ಎಂದರು.