ಬೆಂಗಳೂರು: ಎಲ್‌ಪಿಜಿ, ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೇ ವಾಹನ ಸವಾರರಿಗೆ ಮತ್ತೊಂದು ಕಹಿ ಸುದ್ದಿ ಹೊರಬಿದ್ದಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಕರ್ನಾಟಕದ 9 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನು ಪರಿಷ್ಕರಿಸಿದ್ದು, ಏಪ್ರಿಲ್ 1ರಿಂದ ಹೊಸ ದರಗಳು ಜಾರಿಗೆ ಬರಲಿವೆ. ವಿಶೇಷವಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವವರಿಗೆ ಹೆಚ್ಚಿನ ಹೊರೆಯಾಗಲಿದೆ.
ಹೊಸ ಹಣಕಾಸು ವರ್ಷ (2026-27) ಆರಂಭವಾಗುತ್ತಿದ್ದಂತೆ ಬೆಲೆ ಏರಿಕೆಯ ಬಿಸಿ ತಟ್ಟಲಿದ್ದು, 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇ. 3 ರಿಂದ ಶೇ. 5ರಷ್ಟು ಟೋಲ್ ದರ ಹೆಚ್ಚಳವಾಗಲಿದೆ. ಈಗಾಗಲೇ ಎನ್‌ಎಚ್‌ಐಎ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಫಾಸ್ಟ್‌ಟ್ಯಾಗ್ ಪಾಸ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದೀಗ ರಾಜ್ಯದ ಎಲ್ಲಾ ಹೆದ್ದಾರಿಗಳಲ್ಲಿ ಟೋಲ್ ದರ ಹೆಚ್ಚಾಗಿರುವುದು ವಾಹನ ಸವಾರರಿಗೆ ಹೊರೆಯಾಗಲಿದೆ.
ಯಾವ ಯಾವ ಹೆದ್ದಾರಿಗಳಲ್ಲಿ ಟೋಲ್ ದರ ಹೆಚ್ಚಲಿದೆ?
- ಎನ್‌ಎಚ್-48: ಬೆಂಗಳೂರು - ತುಮಕೂರು - ಹಾವೇರಿ - ಬೆಳಗಾವಿ (ಮುಂಬೈ ಮಾರ್ಗ)
- ಎನ್‌ಎಚ್-275: ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ
- ಎನ್‌ಎಚ್-44: ಬೆಂಗಳೂರು - ಹೈದರಾಬಾದ್
- ಎನ್‌ಎಚ್-75 (ಪಶ್ಚಿಮ): ಬೆಂಗಳೂರು - ಹಾಸನ - ಮಂಗಳೂರು
- ಎನ್‌ಎಚ್-75 (ಪೂರ್ವ): ಬೆಂಗಳೂರು - ಹೊಸಕೋಟೆ - ಕೋಲಾರ
- ಎನ್‌ಎಚ್-66: ಮಂಗಳೂರು - ಉಡುಪಿ - ಕುಂದಾಪುರ
- ಎನ್‌ಎಚ್-50 / 52 ವಿಜಯಪುರ - ಹೊಸಪೇಟೆ - ಚಿತ್ರದುರ್ಗ
- ಎನ್‌ಎಚ್-150A: ಹಿರಿಯೂರು - ಬಳ್ಳಾರಿ - ಜೇವರ್ಗಿ
- ಎನ್‌ಎಚ್-766: ಮೈಸೂರು - ಗುಂಡ್ಲುಪೇಟೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ 4ನೇ ಬಾರಿ ಸುಂಕ ಹೆಚ್ಚಳ!
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ವಾಹನ ಸಂಚಾರಕ್ಕೆ ಮುಕ್ತವಾದಾಗಿನಿಂದ ಇದು 4ನೇ ಬಾರಿ ಸುಂಕ ಏರಿಕೆಯಾಗಿದೆ. 2023ರ ಏಪ್ರಿಲ್ 01 ರಿಂದ ಎಕ್ಸ್‌ಪ್ರೆಸ್ ವೇ ಸಂಚಾರಕ್ಕೆ ಎನ್‌ಎಚ್‌ಎಐ ಟೋಲ್ ದರ ನಿಗದಿ ಮಾಡಿತ್ತು. ನಂತರ ಎರಡು ತಿಂಗಳ ಅವಧಿಯಲ್ಲೇ ಏಕಾಏಕಿ ಶೇ.22ರಷ್ಟು ದರ ಹೆಚ್ಚಿಸಲಾಗಿತ್ತು. ಸಾರ್ವಜನಿಕ ಆಕ್ರೋಶದ ಹಿನ್ನೆಲೆ ದರ ಹೆಚ್ಚಳ ನಿರ್ಧಾರ ವಾಪಸ್ ಪಡೆದಿತ್ತು. ನಂತರ ಏ. 1ರಿಂದ ವಾರ್ಷಿಕ ಶೇ.5ರಷ್ಟು ಟೋಲ್ ದರ ಹೆಚ್ಚಳ ಮಾಡುವ ನಿರ್ಧಾರ ಪ್ರಕಟಿಸಿತ್ತು. ಇದೀಗ ಮತ್ತೆ ಟೋಲ್ ದರ ಪರಿಷ್ಕರಣೆಯಾಗಿದೆ.