Bus fare hike: ಡೀಸೆಲ್ ಬೆಲೆ ಏರಿಕೆ ಹಿನ್ನೆಲೆ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳವಾಗುತ್ತಾ?; ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?
ಇಸ್ರೇಲ್-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ತೈಲ ದರ ಭಾರಿ ಏರಿಕೆಯಾಗಿದೆ. ಇದರಿಂದ ದೇಶದಲ್ಲಿ ಪ್ರೀಮಿಯಂ ಪೆಟ್ರೋಲ್ ಮತ್ತು ಬಲ್ಕ್ ಡೀಸೆಲ್ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಹೀಗಾಗಿ ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ಏರಿಕೆಯಾಗುತ್ತಾ? ಎಂಬ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಏನು ಹೇಳಿದರು ಎಂಬ ಮಾಹಿತಿ ಇಲ್ಲಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ. -
ಬೆಂಗಳೂರು, ಮಾರ್ಚ್ 21: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಟಿಕೆಟ್ ದರ (Bus fare hike) ಹೆಚ್ಚಳವಾಗುತ್ತಾ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು. ರಾಜ್ಯದಲ್ಲಿ ಬಸ್ ಟಿಕೆಟ್ ದರವನ್ನು ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಇಂಧನ ಬೆಲೆ ಏರಿಕೆಗೆ ಜಾಗತಿಕ ಯುದ್ಧದ ಪರಿಸ್ಥಿತಿಯೇ ಕಾರಣ ಎಂದಿರುವ ಅವರು, ಯುದ್ಧ ನಿಂತರೆ ಬೆಲೆಗಳು ತಾನಾಗಿಯೇ ಕಡಿಮೆಯಾಗುತ್ತವೆ. ಹೀಗಾಗಿ ಸದ್ಯಕ್ಕೆ ಟಿಕೆಟ್ ದರ ಏರಿಸುವ ಯೋಚನೆ ಇಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವರು, ಈ ಹಿಂದೆ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದಾಗಲೂ ಕೇಂದ್ರ ಸರ್ಕಾರ ಜನರಿಗೆ ಯಾವುದೇ ಪ್ರಯೋಜನವನ್ನು ತಲುಪಿಸಲಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 100-130 ಡಾಲರ್ ಇದ್ದ ಕಚ್ಚಾ ತೈಲಕ್ಕೆ ಸಬ್ಸಿಡಿ ನೀಡಲಾಗಿತ್ತು. ಆದರೆ, ಆ ನಂತರದ 10-12 ವರ್ಷಗಳ ಕಾಲ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದಾಗಲೂ ಕೇಂದ್ರ ಸರ್ಕಾರ ಲಾಭ ಮಾಡಿಕೊಂಡಿತೇ ಹೊರತು ಜನರಿಗೆ ಇದರ ಲಾಭ ಸಿಗಲಿಲ್ಲ ಎಂದು ಹೇಳಿದರು.
ಬೆಂಗಳೂರಿನ ರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕಿಲ್ಲ ಅವಕಾಶ, ರೋಡ್ ಸೈಡ್ ಹಳೆ ವಾಹನ ನಿಲ್ಲಿಸಿದ್ರೆ ಡಂಪ್: ಡಿಕೆಶಿ
ಪಶು ವೈದ್ಯಾಧಿಕಾರಿ ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಸಂತಾಪ
ಶಿವಮೊಗ್ಗ: ಶಿವಮೊಗ್ಗದ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಪಶು ವೈದ್ಯಾಧಿಕಾರಿ ಡಾ. ಸಮೀಕ್ಷಾ ರೆಡ್ಡಿ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಂತಾಪ ಸೂಚಿಸಿದ್ದಾರೆ. ಮೂಕಪ್ರಾಣಿಗಳ ನೋವಿಗೆ ಸ್ಪಂದಿಸಲೆಂದೇ ಪಶುವೈದ್ಯಕೀಯ ವೃತ್ತಿ ಆಯ್ದುಕೊಂಡಿದ್ದ ಆನೇಕಲ್‌ನ ಹೆಮ್ಮೆಯ ಪುತ್ರಿ ಡಾ. ಸಮೀಕ್ಷಾ ರೆಡ್ಡಿ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು. ಗರ್ಭಿಣಿ ನೀರಾನೆಯ ಜೀವ ಉಳಿಸಲು ಹೋದಾಗ ಸಂಭವಿಸಿದ ದುರಂತ ನಿಜಕ್ಕೂ ವಿಧಿಯ ಕ್ರೂರ ಆಟ.
ತನ್ನ 27ನೇ ವಯಸ್ಸಿನಲ್ಲೇ ಸಮಾಜಕ್ಕೆ ಮಾದರಿಯಾಗಿದ್ದ ಈ ಚೇತನ ಅಕಾಲಿಕವಾಗಿ ಮೃತಪಟ್ಟಿರುವುದು ಸಕಲವಾರ ಗ್ರಾಮಕ್ಕೆ ಮತ್ತು ಇಡೀ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟ. ಡಾ ಸಮೀಕ್ಷಾ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.