ಬೆಂಗಳೂರು: ದೇಶದ ಶೈಕ್ಷಣಿಕ ವ್ಯವಸ್ಥೆಗೆ ಹೊಸ ಸ್ವರೂಪ ನೀಡುವ, ಕೃತಕ ಬುದ್ದಿಮತ್ತೆ ಒಳಗೊಂಡಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಸಂಬಂಧ ಕೆಂಗೇರಿಯ ಮೈಸೂರು ರಸ್ತೆಯ ಐಎಫ್‌ಎಚ್‌ಇ ನಲ್ಲಿ ನಡೆದ ರಾಷ್ಟ್ರಮಟ್ಟದ ಉಪಕುಲಪತಿಗಳ ಸಮ್ಮೇಳನದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಮ್ಮೇಳನ ಸಂಚಾಲಕ ಮತ್ತು ಶೈಕ್ಷಣಿಕ ಡೀನ್ ಡಾ.ವಿನಯ್ ಜೋಶಿ, ಎರಡು ದಿನಗಳ ಅಧಿವೇಶನದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಮುಖ ಬದಲಾವಣೆಗಳ ಕುರಿತು ಚರ್ಚೆ ನಡೆಸಲಾಗಿದೆ. ತಂತ್ರಜ್ಞಾನದ ಒಳನೋಟಗಳನ್ನು ಪರಿಣಿತರು ಅನಾವರಣಗೊಳಿಸಿದ್ದು, ಮುಂದಿನ ಪೀಳಿಗೆಯ ಪಠ್ಯ ಕ್ರಮ ರೂಪಿಸಲು ಸಹಕಾರಿಯಾಗಲಿದೆ ಎಂದರು.
ಇದನ್ನೂ ಓದಿ: Bangalore News: ಸಾಹಸಮಯ ಥಂಡರ್ಬೋಲ್ಟ್ ಬೈಕ್ ಬಿಡುಗಡೆ ಮಾಡಿದ ಕ್ಲಾಸಿಕ್ ಲೆಜೆಂಡ್ ಸಹಭಾಗಿತ್ವದ ಬಿಎಸ್‌ಎ
ಎಐಎಂಎ ನಿರ್ದೇಶಕ ಡಾ. ರೋಹಿತ್ ಸಿಂಗ್ ಮಾತನಾಡಿ, ಅತ್ಯುತ್ತಮ ಶಿಕ್ಷಣ ನೀಡುವುದು ಸಮ್ಮೇಳನದ ಗುರಿಯಾಗಿದೆ. ಭವಿಷ್ಯದ ಶಿಕ್ಷಣ ವ್ಯವಸ್ಥೆಗೆ ಈ ಸಮ್ಮೇಳನ ಬುನಾದಿಯಾಗಿದೆ. ಭಾರತೀಯ ಜ್ಞಾನ ವ್ಯವಸ್ಥೆಯ ಚೌಕಟ್ಟನ್ನು ಮುನ್ನಡೆಸುವಲ್ಲಿ ನಿರಂತರ ಸಹಯೋಗದ ಅಗತ್ಯವಿದೆ ಎಂದರು.
ಐಎಫ್‌ಎಚ್‌ಇ ಹೈದರಾಬಾದ್‌ನ ಉಪಕುಲಪತಿ ಡಾ. ಕೋಟಿ ರೆಡ್ಡಿ ಮತ್ತು ಐಎಫ್‌ಎಚ್‌ಇ ಹೈದರಾಬಾದ್‌ನ ರಿಜಿಸ್ಟ್ರಾರ್ ಡಾ. ಎಸ್. ವಿಜಯಲಕ್ಷ್ಮಿ ಅವರು ಸಮ್ಮೇಳನವನ್ನು ಯಶಸ್ವಿ ಯಾಗಿ ಆಯೋಜಿಸಿದ್ದಕ್ಕಾಗಿ ಐಎಫ್‌ಎಚ್‌ಇ ಬೆಂಗಳೂರಿನ ಪ್ರಯತ್ನಗಳನ್ನು ಶ್ಲಾಘಿಸಿದರು.
ಐಎಫ್‌ಎಚ್‌ಇ ಬೆಂಗಳೂರಿನ ಪ್ರೊ ವೈಸ್ ಚಾನ್ಸೆಲರ್ ಡಾ.ಮುದ್ದು ವಿನಯ್, ಉಪ ಕುಲಪತಿಗಳ ಸಮಾವೇಶದ ಉಪನಿರ್ದೇಶಕರಾದ ಸೌಮ್ಯ ಸಿಂಗ್ ಮತ್ತು ಐಎಫ್‌ಎಚ್‌ಇ ಬೆಂಗಳೂರಿನ ಕಾರ್ಪೊರೇಟ್ ಸಂಬಂಧಗಳ ಉಪನಿರ್ದೇಶಕರಾದ ಡಾ. ಮನೀಷಾ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.