ʼವಂದೇ ಮಾತರಂʼ ಗೀತೆಗೆ ಅಗೌರವ; ಸಿಡಿದೆದ್ದ ಬಿಜೆಪಿ ಯುವ ಮೋರ್ಚಾ: ಸೋನಿಯಾ, ರಾಹುಲ್ ಗಾಂಧಿ ಕ್ಷಮೆಯಾಚನೆಗೆ ಪಟ್ಟು
Vande Mataram Row: ʼವಂದೇ ಮಾತರಂʼ ಗೀತೆಗೆ ಅಗೌರವ ತೋರಿದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಭಾನುವಾರ (ಆಗಸ್ಟ್ 16) ಸಂಜೆ ಬೆಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು.
ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. -
ಬೆಂಗಳೂರು, ಆ. 16: ʼʼವಂದೇ ಮಾತರಂʼ ಗೀತೆಗೆ ಅಗೌರವ ತೋರಿದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಯಾಚಿಸಬೇಕು. ಅಲ್ಲಿನವರೆಗೆ ನಮ್ಮ ಹೋರಾಟ ಮುಂದುವರಿಯಲಿದೆʼʼ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಎಚ್ಚರಿಸಿದರು (Vande Mataram Row). ʼವಂದೇ ಮಾತರಂʼ ಗೀತೆಗೆ ಅಗೌರವ ತೋರಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಭಾನುವಾರ (ಆಗಸ್ಟ್ 16) ಸಂಜೆ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
''ಇವತ್ತು ಸಾಂಕೇತಿಕವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. 2-3 ದಿನಗಳ ಕಾಲಾವಕಾಶ ನೀಡುತ್ತೇವೆ. ಅವರು ಕ್ಷಮೆ ಕೇಳದೇ ಇದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು'' ಎಂದು ಎಚ್ಚರಿಸಿದರು. ರಾಹುಲ್ ಗಾಂಧಿ ತಮ್ಮ ವಿಪಕ್ಷ ನಾಯಕನ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಬೇಕು ಎಂದು ಧೀರಜ್ ಮುನಿರಾಜು ಆಗ್ರಹಿಸಿದರು.
ಕಾಂಗ್ರೆಸ್ ನಾಯಕರ ವಿರುದ್ಧ ದೂರು ನೀಡಿದ ಬಿಜೆಪಿ:
ರಾಷ್ಟ್ರ ವಿಭಜನೆಗೆ ಕಾರಣವಾದ ಕಾಂಗ್ರೆಸ್ ವಿರುದ್ಧ ರಾಜ್ಯದ ಗೃಹ ಸಚಿವರ ಕ್ರಮ ಏನು ಎಂದು ಪ್ರಶ್ನಿಸಿದರು. ʼʼಸೋನಿಯಾ ಗಾಂಧಿ 2-3 ದಿನಗಳಲ್ಲಿ ಕ್ಷಮೆ ಕೇಳದೇ ಇದ್ದರೆ ರಾಜ್ಯದ ಎಲ್ಲ ಜಿಲ್ಲಾ ಕಾಂಗ್ರೆಸ್ ಕಚೇರಿಗಳು, ಕೆಪಿಸಿಸಿ ಕಚೇರಿಗೆ ಯುವ ಮೋರ್ಚಾದಿಂದ ಮುತ್ತಿಗೆ ಹಾಕಲಿದ್ದೇವೆʼʼ ಎಂದು ತಿಳಿಸಿದರು.
ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಗೀತೆಗೆ ಸೋನಿಯಾ ಗಾಂಧಿ ಆಕ್ಷೇಪ? ಬಿಜೆಪಿ ಆರೋಪ, ಕಾಂಗ್ರೆಸ್ ಸ್ಪಷ್ಟನೆ
ʼವಂದೇ ಮಾತರಂʼ ಗೀತೆಗೆ ಅಪಮಾನ ಮಾಡಿದ ಕಾಂಗ್ರೆಸ್ ಮುಖಂಡರ ವಿರುದ್ಧ ದೂರು ದಾಖಲಿಸಲಿದ್ದೇವೆ ಎಂದು ಹೇಳಿದರು. ʼʼನಮ್ಮದು ಅತ್ಯಂತ ಸ್ವಾಭಿಮಾನ- ಆತ್ಮಗೌರವ ಇರುವ ದೇಶ. ಭಾರತೀಯ ಸಂಸ್ಕೃತಿ, ರೀತಿ ನೀತಿಗೆ ಅಪಮಾನವಾದರೆ ಅದನ್ನು ಸಹಿಸಲು ಸಾಧ್ಯವಿಲ್ಲʼʼ ಎಂದರು.
ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ, ಯುವ ಮೋರ್ಚಾ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಯತಿನ್ ವೆಂಕಟೇಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಗದೀಶ್ ಆರ್. ಚಂದ್ರ, ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ತಿಳಿಸಿದರು.

ಏನಿದು ವಿವಾದ?
ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವಿವಾದದ ಕಿಡಿ ಹೊತ್ತಿಸಿದೆ. ʼವಂದೇ ಮಾತರಂʼ ಗಾಯನ ವೇಳೆ ನಾಯಕಿ ಸೋನಿಯಾ ಗಾಂಧಿ ರಾಷ್ಟ್ರೀಯ ಗೀತೆಯನ್ನು ಅರ್ಧಕ್ಕೆ ನಿಲ್ಲಿಸುವಂತೆ ಸೂಚನೆ ನೀಡಿದರು ಎನ್ನುವುದು ಬಿಜೆಪಿಯ ಆರೋಪ. ಆ ಮೂಲಕ ರಾಷ್ಟ್ರೀಯ ಗೀತೆಯ ಪೂರ್ಣ ಆವೃತ್ತಿಯನ್ನು ಹಾಡಲು ಸೋನಿಯಾ ಗಾಂಧಿ ವಿರೋಧ ವ್ಯಕ್ತಪಡಿಸಿದರು ಎಂದು ದೂರಿದೆ.
ಈ ಕುರಿತ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ 'ವಂದೇ ಮಾತರಂʼ ಗಾಯನ ವೇಳೆ ಸೋನಿಯಾ ಗಾಂಧಿ ಮುಂದುಗಡೆ ಕೈ ಮಾಡಿ ಏನೋ ಹೇಳಿದ್ದು, ನಂತರ ಅಲ್ಲೇ ನಿಂತಿದ್ದ ರಾಹುಲ್ ಗಾಂಧಿ ಅವರ ಕಡೆಗೆ ತಿರುಗೆ ಮತ್ತೇನೋ ಕೈ ಸನ್ನೆ ಮಾಡಿದ್ದು ಕಂಡು ಬಂದಿದೆ. ಇದನ್ನು ಉಲ್ಲೇಖಿಸಿರುವ ಬಿಜೆಪಿ, ಸಂಪೂರ್ಣ ರಾಷ್ಟ್ರೀಯ ಗೀತೆ (ಎಲ್ಲ 6 ಚರಣ) ಹಾಡಲು ಕಾಂಗ್ರೆಸ್ ನಾಯಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಹಾಗೂ ರಾಹುಲ್ ಗಾಂಧಿ ಕೂಡ ಅದೇ ರೀತಿಯ ವರ್ತನೆಯನ್ನು ತೋರಿದ್ದಾರೆ ಎಂದು ಆರೋಪಿಸಿದೆ. ಇನ್ನು ಗೀತೆ ಹಾಡುತ್ತಿದ್ದಾಗ ಸೋನಿಯಾ ಗಾಂಧಿ, ರಾಹಿಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಪರಸ್ಪರ ಮಾತನಾಡುತ್ತ, ಅಗೌರವ ತೋರುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದಿದೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.