ಬೆಂಗಳೂರು, ಡಿ.29: ಭಾರತೀಯ ಜ್ಞಾನ ಪರಂಪರೆಯನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ವಿಶಿಷ್ಟ ಪ್ರಯತ್ನವೊಂದಕ್ಕೆ ಉದ್ಯಾನನಗರಿ ಬೆಂಗಳೂರು ಸಾಕ್ಷಿಯಾಗುತ್ತಿದೆ. ಪರಮ್ ಫೌಂಡೇಶನ್ ಮತ್ತು ವೇದಾಂತ ಭಾರತಿ ಜಂಟಿಯಾಗಿ ವಿದ್ಯಾರ್ಥಿಗಳಿಗಾಗಿ ' ವೇದಾಂತ ಮೇಕಥಾನ್' (Vedanta Makeathon) ಎಂಬ ಎರಡು ತಿಂಗಳ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.
ಪರಮ್ ಫೌಂಡೇಶನ್ ಮತ್ತು ವೇದಾಂತ ಭಾರತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ 'ವೇದಾಂತ ಮೇಕಥಾನ್', ಭಾರತೀಯ ಜ್ಞಾನ ಪರಂಪರೆ (Indian Knowledge Systems) ಮತ್ತು ಆಧುನಿಕ ವಿಜ್ಞಾನವನ್ನು ಬೆಸೆಯುವ ಒಂದು ಅಪೂರ್ವ ಪ್ರಯೋಗವಾಗಿದೆ. ಎರಡು ತಿಂಗಳ ಕಾಲ ನಡೆಯುವ ಈ ನವೀನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇದಾಂತದ 'ಮಾಯೆ', 'ಚೈತನ್ಯ' ದಂತಹ ದಾರ್ಶನಿಕ ವಿಚಾರಗಳನ್ನು ದೃಷ್ಟಿ ಭ್ರಮೆ (Illusions) ಅಥವಾ ನರವಿಜ್ಞಾನದಂತಹ ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಿ, ಸಂವಾದಾತ್ಮಕ ಪ್ರದರ್ಶಿಕೆಗಳನ್ನು (Interactive Exhibits) ಸಿದ್ಧಪಡಿಸಲಿದ್ದಾರೆ.
ತಜ್ಞರ ಮಾರ್ಗದರ್ಶನದಲ್ಲಿ ಮೂಡಿಬರುವ ಈ ಸೃಜನಶೀಲ ಮಾದರಿಗಳು ಅಂತಿಮವಾಗಿ ಜನವರಿ 29 ರಿಂದ ಫೆಬ್ರುವರಿ 1ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯಲಿರುವ 'ದಕ್ಷಿಣಾಸ್ಯ ದರ್ಶಿನಿ' ಸಾರ್ವಜನಿಕ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿವೆ. ಇದು ಕೇವಲ ಕಲಿಕೆಯಲ್ಲ, ಪ್ರಾಚೀನ ಜ್ಞಾನವನ್ನು ಪ್ರಾಯೋಗಿಕವಾಗಿ ಅನುಭವಿಸುವ ಒಂದು ಅಪೂರ್ವ ಅವಕಾಶವಾಗಿದೆ.
ಕಾರ್ಯಕ್ರಮದ ವಿಶೇಷತೆ
ಯಾರಿಗೆಲ್ಲ ಅವಕಾಶ?: ವಿಜ್ಞಾನ, ಎಂಜಿನಿಯರಿಂಗ್ ಮಾತ್ರವಲ್ಲದೆ ವಿನ್ಯಾಸ (Design), ಮನೋವಿಜ್ಞಾನ ಮತ್ತು ಮಾನವಿಕ ವಿಭಾಗದ ವಿದ್ಯಾರ್ಥಿಗಳೂ ಭಾಗವಹಿಸಬಹುದು.
ತರಬೇತಿ-ಮಾರ್ಗದರ್ಶನ: ಆಯ್ಕೆಯಾದ ತಂಡಗಳಿಗೆ ವಿಜ್ಞಾನಿಗಳು, ಕಲಾಕಾರರು ಮತ್ತು ವಿದ್ವಾಂಸರಿಂದ ಎರಡು ತಿಂಗಳ ಕಾಲ ಮಾರ್ಗದರ್ಶನ ನೀಡಲಾಗುತ್ತದೆ.
ಕಲಿಕೆ: ತತ್ವಶಾಸ್ತ್ರದ ವಿಚಾರಗಳನ್ನು ಸೆನ್ಸಾರ್‌ಗಳು, ಎಐ (AI) ಮತ್ತು ಎಂಜಿನಿಯರಿಂಗ್ ಬಳಸಿ ಪ್ರದರ್ಶಿಕೆಗಳಾಗಿ ಮಾಡುವ ಕಲೆ ಇಲ್ಲಿ ಸಿದ್ಧಿಸುತ್ತದೆ.
- ನೋಂದಣಿ ಅವಧಿ: ನೋಂದಣಿ ಈಗಾಗಲೇ ಆರಂಭವಾಗಿದ್ದು, ಜನವರಿ 15 ರವರೆಗೆ ಇರಲಿದೆ.
- ತಂಡದ ಮಿತಿ: ಪ್ರತಿ ತಂಡದಲ್ಲಿ ಗರಿಷ್ಠ 5 ಸದಸ್ಯರಿರಬಹುದು.
- ಸ್ಥಳ: ಪರಮ್ ಮೇಕರ್ ಸ್ಪೇಸ್, ಜಯನಗರ, ಬೆಂಗಳೂರು.
- ಓರಿಯಂಟೇಶನ್: ಜನವರಿ 15ರಂದು ನಡೆಯಲಿರುವ ಕಾರ್ಯಾಗಾರ.
ಅಂತಿಮ ಪ್ರದರ್ಶನ
ಈ ಮೇಕಥಾನ್‌ನಲ್ಲಿ ತಯಾರಾದ ಅತ್ಯುತ್ತಮ ಮಾದರಿಗಳನ್ನು ಜನವರಿ 29ರಿಂದ ಫೆಬ್ರುವರಿ 1 ರವರೆಗೆ ಬೆಂಗಳೂರಿನ ಅರಮನೆ ಮೈದಾನದ (ತ್ರಿಪುರ ವಾಸಿನಿ) ಬೃಹತ್ ವೇದಿಕೆಯಲ್ಲಿ ನಡೆಯುವ 'ದಕ್ಷಿಣಾಸ್ಯ ದರ್ಶಿನಿ' ಎಂಬ ಸಾರ್ವಜನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ: vedanta-makeathon@paraminnovation.org ಗೆ ಸಂಪರ್ಕಿಸಬಹುದಾಗಿದೆ.
ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನ ಫಲಿತಾಂಶ ಪ್ರಕಟ; 5100 ಯುಜಿ–ಪಿಜಿ ವಿದ್ಯಾರ್ಥಿಗಳ ಆಯ್ಕೆ
![]()
ಯುವಜನತೆಯಲ್ಲಿ ಹೊಸ ಆಲೋಚನೆ ಮತ್ತು ಆತ್ಮವಿಶ್ವಾಸ ಮೂಡಿಸಲು 'ದಕ್ಷಿಣಾಸ್ಯ ದರ್ಶಿನಿ' ಒಂದು ಉತ್ತಮ ವೇದಿಕೆ. ವೇದಾಂತದ ಸಾರವನ್ನು ವಿಜ್ಞಾನದ ಪ್ರಯೋಗಗಳ ಮೂಲಕ ಇಲ್ಲಿ ವಿವರಿಸಲಾಗುತ್ತದೆ. ಇಂದಿನ ವೇಗದ ಬದುಕಿನಲ್ಲಿ ಯುವಕರಿಗೆ ತಮ್ಮನ್ನು ತಾವು ಅರಿತುಕೊಳ್ಳುವ ಅನಿವಾರ್ಯತೆ ಇದೆ. ಈ ಪ್ರದರ್ಶನದಿಂದ ಸಿಗುವ ತಿಳಿವಳಿಕೆಯು ಜೀವನದ ಸವಾಲುಗಳನ್ನು ಗೆದ್ದು, ಸುಖ-ಶಾಂತಿಯಿಂದ ಬದುಕಲು ಅವರಿಗೆ ಸಹಾಯ ಮಾಡುತ್ತದೆ.
| ಲಕ್ಷ್ಮೀಶ ಸಿಂಹ, ಧರ್ಮದರ್ಶಿಗಳು, ವೇದಾಂತ ಭಾರತಿ