ಬೆಂಗಳೂರು: ಲೇಖಕ, ಅಂಕಣಕಾರ, ಅನಿವಾಸಿ ಭಾರತೀಯ ರವಿ ಹಂಜ್ ಅವರು ಬರೆದಿ 'ಬಸವ ಮಂಟಪ; ವೀರಶೈವ ಲಿಂಗಾಯತ ಸತ್ಯದರ್ಶನ' ಪುಸ್ತಕ ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ಬಿಡುಗಡೆಗೊಳಿಸಲಾಯಿತು. ವಿಶ್ವವಾಣಿ ಪುಸ್ತಕ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವು ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಷ. ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಬೆಂಗಳೂರಿನ ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದ ಪೂಜ್ಯ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ದೇವರು ಮತ್ತು ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದ ಪೂಜ್ಯ ಶ್ರೀ ಷ. ಬ್ರ. ಡಾ. ಮಲಯಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಐಪಿಎಸ್ ಶಂಕರ ಮಹಾದೇವ ಬಿದರಿ, ವಿಶ್ವವಾಣಿ ಸಮೂಹ ಸಂಸ್ಥೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.
ವಿಶ್ರಾಂತ ಪೊಲೀಸ್ ಮಹಾನಿರ್ದೇಶಕ ಶಂಕರ ಮಹಾದೇವ ಬಿದರಿ ಅವರು ಮಾತನಾಡಿ, ವೀರಶೈವ ಮತ್ತು ಲಿಂಗಾಯತರು ಒಂದೇ ಎಂಬುದು ನಮ್ಮ ದೃಢವಾದ ನಿಲುವು. ಇಷ್ಟಲಿಂಗ ಪೂಜೆ, ಅಷ್ಟಾವರಣ ಹಾಗೂ ಲಿಂಗೈಕ್ಯರಾದ ಬಳಿಕ ದಫನ ಮಾಡುವ ಸಂಪ್ರದಾಯವನ್ನು ಪಾಲಿಸುವ ಎಲ್ಲರೂ ನಮ್ಮವರೇ ಎಂದು ಮಹಾಸಭೆ ತೀರ್ಮಾನಿಸಿದೆ. ಈ ಎರಡೂ ಪರಂಪರೆಗಳ ನಡುವೆ ಪ್ರತ್ಯೇಕತೆಯ ಭಾವನೆ ಇರಬಾರದು ಎಂಬುದು ತಮ್ಮ ನಿಲುವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜ ಅವರು ವಿವಿಧ ದಾಖಲೆಗಳು, ಗ್ರಂಥಗಳು, ಶಾಸ್ತ್ರಗಳು ಹಾಗೂ ಆಧಾರ ಗ್ರಂಥಗಳನ್ನು ಪರಿಶೀಲಿಸಿ, ತರ್ಕಬದ್ಧವಾಗಿ ತಮ್ಮ ಲೇಖನಗಳ ಮೂಲಕ ಉತ್ತರ ನೀಡಿದ್ದಾರೆ. ಅವರ ಪರಿಶ್ರಮದಿಂದ ಮಹತ್ವದ ಕೃತಿ ರೂಪುಗೊಂಡಿದ್ದು, ಸಮಾಜಕ್ಕೆ ಅಗತ್ಯವಾದ ಸಾಕ್ಷ್ಯಾಧಾರಗಳು ದೊರೆತಿವೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಕೃತಿ ಪ್ರಕಟಣೆಗೆ ಕಾರಣಕರ್ತರಾದ ರವಿ ಹಂಜ ಅವರಿಗೆ ವೈಯಕ್ತಿಕವಾಗಿ ಹಾಗೂ ಮಹಾಸಭೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ ಅವರು, ಸಮಾಜದ ಏಕತೆಗಾಗಿ ಅವರು ಮಾಡಿರುವ ಕಾರ್ಯ ಶ್ಲಾಘನೀಯ. ಸಮಾಜವು ಅವರ ಕೊಡುಗೆಯನ್ನು ಸದಾ ಸ್ಮರಿಸಲಿದೆ ಎಂದರು.
ಕನ್ನಡ ಸಾರಸ್ವತ ಲೋಕದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿದ ಅವರು, ತಮಗೆ ಸರಿ ಎನಿಸಿದ ವಿಚಾರವನ್ನು ಯಾವುದೇ ಒತ್ತಡ ಅಥವಾ ವಿರೋಧಗಳಿಗೆ ಮಣಿಯದೆ ಪ್ರಕಟಿಸುವ ಧೈರ್ಯ ಅವರಲ್ಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವರ ವಿರೋಧ ವ್ಯಕ್ತವಾದರೂ, ದೃಢ ನಿಲುವು ತಳೆದು ಲೇಖನಗಳನ್ನು ಪ್ರಕಟಿಸುವ ಮೂಲಕ ಸಮಾಜಕ್ಕೆ ವಿಷಯ ತಲುಪಿಸುವ ಕೆಲಸ ಮಾಡಿದ್ದಾರೆ. ಅವರ ವಿಶಾಲ ಮನೋಭಾವ ಮತ್ತು ಪ್ರೋತ್ಸಾಹದ ಗುಣ ಮೆಚ್ಚುವಂತಹದ್ದು. ವೀರಶೈವ–ಲಿಂಗಾಯತ ಸಮಾಜವು ಅವರ ಸೇವೆಯನ್ನು ಸದಾ ಕೃತಜ್ಞತೆಯಿಂದ ಸ್ಮರಿಸಲಿದೆ ಎಂದು ಹೇಳಿದರು.
Interview with Historian Ravi Hunj: ಬಸವಣ್ಣ ಸನಾತನ ಧರ್ಮ ವಿರೋಧಿ ಅಲ್ಲವೇ ಅಲ್ಲ! ʼಲಿಂಗಾಯತ ವೀರಶೈವʼ ಬೇರೆಯಲ್ಲ
ವೀರಶೈವ ಮತ್ತು ಲಿಂಗಾಯತ ಪರಂಪರೆಗಳ ನಡುವೆ ಇರುವ ಪ್ರಮುಖ ಸಾಮ್ಯತೆಗಳನ್ನು ವಿವರಿಸಿದ ಅವರು, ಇಷ್ಟಲಿಂಗ ಪೂಜೆ, ಪಂಚಾಚಾರ, ಅಷ್ಟಾವರಣ ಹಾಗೂ ಲಿಂಗೈಕ್ಯರಾದ ಬಳಿಕ ದಫನ ಮಾಡುವ ಸಂಪ್ರದಾಯ ಈ ಎರಡೂ ಪರಂಪರೆಗಳ ಪ್ರಮುಖ ಗುರುತುಗಳಾಗಿವೆ. ಈ ತತ್ವಗಳನ್ನು ಒಪ್ಪಿಕೊಂಡು ಆಚರಿಸುವ ಎಲ್ಲರೂ ಸಮಾಜದ ಅವಿಭಾಜ್ಯ ಅಂಗಗಳಾಗಿದ್ದಾರೆ ಎಂದರು.
ಬಸವಣ್ಣನವರನ್ನು ಕೆಲವರು ಮಹಾನ್ ಸಮಾಜ ಸುಧಾರಕರೆಂದು ಪರಿಗಣಿಸಿದರೆ, ಇನ್ನು ಕೆಲವರು ಧರ್ಮ ಸಂಸ್ಥಾಪಕರೆಂದು ಗೌರವಿಸುತ್ತಾರೆ. ಇದನ್ನು ಹೊರತುಪಡಿಸಿದರೆ ಎರಡೂ ಪರಂಪರೆಗಳ ನಡುವೆ ದೊಡ್ಡ ವ್ಯತ್ಯಾಸವಿಲ್ಲ ಎಂಬುದು ತಮ್ಮ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.