ಬೆಂಗಳೂರು: ವೆಂಕಟೇಶ ನಾಟ್ಯ ಮಂದಿರದಿಂದ ಜ.16 ರಿಂದ ಮೂರು ದಿನಗಳ ವೈಭವದ ಅವಳಿ ಸಹೋದರಿಯರ ಭರತ ನಾಟ್ಯ ರಸ ಸಂಜೆ ಉತ್ಸವ ನಡೆಯಲಿದ್ದು, ಮೊದಲ ದಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ.
ಜ.17 ಮತ್ತು 18 ರಂದು ಎಡಿಎ ರಂಗ ಮಂದಿರದಲ್ಲಿ ಉಳಿದ ಎರಡು ದಿನಗಳ ಕಾಲ ಕಲಾವಿದರು ರಸದೌತನ ಉಣಬಡಿಸಲಿದ್ದಾರೆ. ಹನ್ನೊಂದು ಕಲಾವಿದರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಅವಳಿ ಸಹೋದರಿಯರಾದ ಅರ್ಚನಾ-ಚೇತನಾ, ನಿವೇದಿತಾ ಭಾರದ್ವಾಜ್, ಡಾ.ಸಂಜಯ್, ಶಾಂತಾರಾಂ ಅವರ ಶಿವಪ್ರಿಯ ನೃತ್ಯಶಾಲೆ, ಚೆನ್ನೈನಿಂದ ಬರುತ್ತಿರುವ ಷಣ್ಮುಗಂ ಸುಂದರ್, ಅನೌಷ್ಕಾ ಪ್ರಭು (ಕಥಕ್), ಪೃಥ್ವಿ ಪಾರ್ಥಸಾರಥಿ, ಅವಿಜಿತ್ ಕುಂದು, ಅರ್ಚನಾ ಹೆಚ್.ಆರ್., ಶುಭಾ ಧನಂಜಯ್, ಮುದ್ರಾ ಧನಂಜಯ್, ದೀಪ್ತಿ, ಸತ್ಯಪ್ರಕಾಶ್, ವಂದ್ಯಾ ಶ್ರೀನಾಥ್ ಅವರ ಶಿಷ್ಯರ ಸಮೂಹ ಪ್ರದರ್ಶನ ಆಯೋಜನೆಗೊಂಡಿವೆ.
ಹಿರಿಯ ಭರತನಾಟ್ಯ ಗುರು ರಾಧಾ ಶ್ರೀಧರ್ ಅವರು 1969ರಲ್ಲಿ ಸ್ಥಾಪನೆ ಮಾಡಿದ ವೆಂಕಟೇಶ ನಾಟ್ಯ ಮಂದಿರ 56ವರ್ಷಗಳಿಂದ ನಿರಂತರ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಶಾಂತಲಾ ನಾಟ್ಯ ಪ್ರಶಸ್ತಿಗೆ ಭಾಜನ ವಾಗಿರುವ ರಾಧಾ ಶ್ರೀಧರ್ ಅವರಿಗೆ 87ರ ಹರೆಯದಲ್ಲೂ ಜೀವನೋತ್ಸಾಹ ಕುಂದಿಲ್ಲ.
ಇದನ್ನೂ ಓದಿ: Bangalore News: 21ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಐಐಎಚ್‌ಎಮ್‌ಆರ್ ಮಾಜಿ ವಿದ್ಯಾರ್ಥಿಗಳ ಸಭೆ
ವಿಸ್ತಾರವಾಗಿ ಬೆಳೆಯುತ್ತಿರುವ ಶಾಸ್ತ್ರೀಯ ನೃತ್ಯ ಕ್ಷೇತ್ರದ ಕಲಾವಿದರಿಗೆ ಒಂದು ಪ್ರತಿಷ್ಟೆಯ ವೇದಿಕೆ ಒದಗಿಸು ವುದು ಅವರ ಆಶಯವಾಗಿದೆ. ಪ್ರತಿವರ್ಷ ಜನವರಿ ತಿಂಗಳಲ್ಲಿ ಮೂರು ದಿನಗಳ ಕಾಲ ಈ ಉತ್ಸವ ವನ್ನು ಆಯೋಜಿಸಿ, ಹಲವು ಕಲಾವಿದರನ್ನು ಪ್ರದರ್ಶನಕ್ಕೆ ಆಹ್ವಾನಿಸುತ್ತಾರೆ. ನೃತ್ಯ ಕ್ಷೇತ್ರದಲ್ಲಿ 'ರಸ ಸಂಜೆ' ಉತ್ಸವ ಒಂದು ಘನತೆಯ ಸ್ಥಾನವನ್ನು ರೂಪಿಸಿಕೊಂಡಿದೆ.