ಬೆಂಗಳೂರು, ಅ. 28: ಕರ್ನಾಟಕ ವಿಧಾನ ಪರಿಷತ್ಗೆ ನಡೆದ ನಾಲ್ಕೂ ಕ್ಷೇತ್ರಗಳ ಚುನಾವಣೆಯಲ್ಲಿ (MLC Election Results) ಎನ್ಡಿಎ ಅಭ್ಯರ್ಥಿಗಳು ಪ್ರಚಂಡ ಜಯಭೇರಿ ಸಾಧಿಸಿರುವುದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಗೆಲುವಿನ ಸ್ಪಷ್ಟ ಸಂದೇಶ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ (R. Ashoka) ಹೇಳಿದರು. ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಹೋದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 160ಕ್ಕೂ ಹೆಚ್ಚು ಸ್ಥಾನಗಳು ಸಿಗಲಿದೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎ.ಪಿ. ರಂಗನಾಥ್ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರ ಹೆಸರು ಘೋಷಣೆ ಮಾಡಿದಾಗಿನಿಂದ ಎರಡೂ ಪಕ್ಷದ ಜಿಲ್ಲಾಧ್ಯಕ್ಷರು ಸಮನ್ವಯದಿಂದ ಅಪಸ್ವರ ಎತ್ತದೆ ಕೆಲಸ ಮಾಡಿದರು. ಎಲ್ಲರ ಸಹಕಾರದಿಂದ ಗೆಲುವು ಸುಲಭವಾಯಿತು. ಪಾಲಿಕೆ ಮಾಜಿ ಸದಸ್ಯರೂ ಕೈ ಜೋಡಿಸಿದರು. ಇದೆಲ್ಲದರಿಂದ ಸೋಲನ್ನೇ ಕಾಣದ ಕಾಂಗ್ರೆಸ್ನ ಪುಟ್ಟಣ್ಣ ಮುಖಭಂಗ ಅನುಭವಿಸಿದ್ದಾರೆ ಎಂದರು. ನಮ್ಮ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಜೀ ಅವರ ಮಾರ್ಗದರ್ಶನದಲ್ಲಿ ಈ ಗೆಲುವು ಸಾಧ್ಯವಾಗಿದೆ ಎಂದು ವಿವರಿಸಿದರು.
ವಿಧಾನ ಪರಿಷತ್ ಚುನಾವಣೆ ಬಗ್ಗೆ ಆರ್.ಅಶೋಕ್ ಅವರ ಹೇಳಿಕೆ:
ಪುಟ್ಟಣ್ಣ ಸೋಲಲ್ಲ; ಡಿಕೆಶಿ ಸೋಲು
ಪುಟ್ಟಣ್ಣ ಅವರನ್ನು ಡಿಕೆಶಿ ಅವರ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಈಗ ಅವರು ಸೋತಿದ್ದಾರೆ. ಆದ್ದರಿಂದ ಈ ಸೋಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೋಲು. ಡಿಕೆಶಿ ಅವರಿಗೆ ಮೊದಲ ಆಘಾತವನ್ನು ಬಿಜೆಪಿ ಮತ್ತು ಜೆಡಿಎಸ್ ನೀಡಿವೆ ಎಂದು ವ್ಯಂಗ್ಯವಾಡಿದರು.
ಸರ್ಕಾರ ಬಹಳ ದಿನ ಉಳಿಯಲ್ಲ
ರಾಜ್ಯ ಸರ್ಕಾರ ಬ್ರಷ್ಟಚಾರದಲ್ಲಿ ಮುಳುಗಿದೆ. ಅದರ ನಡುವೆ ಸಿಡಿ ಹಗರಣ ಬಂದಿದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಜನರಿಗೆ ಅನಿಸಿದೆ. ಕಾಂಗ್ರೆಸ್ ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಸ್ಟಿಂಗ್ ಆಪರೇಷನ್ ಬಗ್ಗೆ ಸಿದ್ದರಾಮಯ್ಯ ಈಗಾಗಲೇ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ. ನಮ್ಮನ್ನು ಸ್ಟಿಂಗ್ ಮಾಡಿ ಕಾಂಗ್ರೆಸ್ನವರೇ ಸಿಲುಕಿಸಿದವರು ಎಂದು ಸಚಿವ ಯತೀಂದ್ರ ಹೇಳಿದ್ದಾರೆ. ಸಿಕ್ಕಿಕೊಂಡ ನಾಯಕಿ ಸಹ ಕಾಂಗ್ರೆಸ್ನವರೇ ಎಂದು ಹೇಳಿದರು.
ಇವಿಎಂ ಬೇಡ ಎಂದಿದ್ದರು
ಕಾಂಗ್ರೆಸ್ ಸೋತಾಗೆಲ್ಲ ನಾಯಕರು ಇವಿಎಂ ಬೇಡ ಅನ್ನುತಿದ್ದರು. ಈ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗಿದೆ. ಆದರೂ ಕಾಂಗ್ರೆಸ್ ಸೋತಿದೆ. ಇವಿಎಂ ನಲ್ಲಿ ಚುನಾವಣೆ ಮಾಡಿದರೂ, ಎನ್ಡಿಎ ಗೆದ್ದಿದೆ. ಇನ್ನಾದರೂ ಕಾಂಗ್ರೆಸ್ ಇವಿಎಂ ಮೇಲೆ ದೂರುವುದನ್ನು ಬಿಡಲಿ. ಕಾಂಗ್ರೆಸ್ ನವರಿಗೆ ಕಪಾಳಮೋಕ್ಷ ಆಗಿದೆ. 224 ಕ್ಷೇತ್ರಗಳಿಗೆ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆದರೆ 224 ಸ್ಥಾನಗಳನ್ನೂ ಎನ್ಡಿಎ ಗೆಲ್ಲಲಿದೆ. ಕಾಂಗ್ರೆಸ್ ಕಥೆ ಗೋವಿಂದ. ಬ್ಯಾಲೆಟ್ ಪೇಪರ್ನಲ್ಲೂ ಕಾಂಗ್ರೆಸ್ನವರ ಬೇಳೆ ಬೇಯಲಿಲ್ಲ ಎಂದು ಹೇಳಿದರು.
ಜಿಲ್ಲಾಧ್ಯಕ್ಷರು, ಕಾರ್ಯಕರ್ತರು, ಮುಖಂಡರು, ಎರಡೂ ಪಕ್ಷದ ನಾಯಕರು ಸಮನ್ವಯದಿಂದ ಕೆಲಸ ಮಾಡಿದ್ದಾರೆ. ಒಗ್ಗಟ್ಟು ತೋರಿದ್ದಾರೆ. ಈ ಒಗ್ಗಟ್ಟು ಮುಂದಿನ ವಿಧಾನಸಭಾ ಚುನಾವಣೆಗೂ ಮುಂದುವರಿಯಲಿದೆ. ರಾಜ್ಯಕ್ಕೆ ಸುಭದ್ರ ಎನ್ಡಿಎ ಸರ್ಕಾರ ತರಲಿದ್ದೇವೆ. ನಮ್ಮ ಕಾರ್ಯಕರ್ತರಿಗೆ ಶಕ್ತಿ ನೀಡಿದೆ ಎಂದು ವಿವರಿಸಿದರು.
ಎಸ್ಐಆರ್ ಸಂಬಂಧ ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗುವುದನ್ನು ರದ್ದು ಮಾಡುವುದು ಒಳ್ಳೆಯದು. ನಾಲ್ಕೂ ಕಡೆ ಸೋತಿರುವುದರಿಂದ ಕಾಂಗ್ರೆಸ್ ನಾಯಕರು ಯಾವುದಾದರೂ ರೆಸಾರ್ಟ್ಗೆ ಹೋಗಿ ಸೋಲಿನ ಚಿಂತನ ಮಂಥನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು. ಟನಲ್ ರಸ್ತೆ ಮಾಡಲು ಮುಂದಾದ ಡಿ.ಕೆ. ಶಿವಕುಮಾರ್ ಅವರನ್ನು ಮತದಾರರು ಟನಲ್ ಒಳಗೇ ಕಳಿಸಿದ್ದಾರೆ ಎಂದರು.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.