ಬೇನಾಮಿ ಕಂಪನಿಗೆ ರಾಜ್ಯ ಸರ್ಕಾರದಿಂದ 133 ಕೋಟಿ ರೂಪಾಯಿ ಟೆಂಡರ್: ಬಿಜೆಪಿ ನಾಯಕ ಆರ್. ಅಶೋಕ್ ಗಂಭೀರ ಆರೋಪ
R Ashok: ಕಾಂಗ್ರೆಸ್ ಸರ್ಕಾರ ಕಸದಿಂದ ಕಾಸು ಮಾಡಿಕೊಳ್ಳುತ್ತಿದೆ. ಖಾಲಿ ನಿವೇಶನಗಳನ್ನೂ ಬಿಡದೆ ಅಲ್ಲಿನ ಕಸಕ್ಕೂ ದಂಡ ವಿಧಿಸಲಾಗುತ್ತಿದೆ. ಕೃಷ್ಣ ಬೈರೇಗೌಡರು ಹೊಸದಾಗಿ ಸಚಿವರಾದಾಗ ಫ್ರೀಡಂ ಫ್ರಂ ವೇಸ್ಟ್ ಅಭಿಯಾನ ಮಾಡಿದ್ದರು. ಆದರೆ ಅದರ ಬದಲು ಮನಿ ಫ್ರಂ ವೇಸ್ಟ್ ಸ್ಕೀಮ್ ಮಾಡಲಾಗಿದೆ. 133 ಕೋಟಿ ರೂ. ಮೊತ್ತದ ಟೆಂಡರ್ ಅನ್ನು ಮುನಿಯಪ್ಪ ಎಂಟರ್‌ಪ್ರೈಸಸ್‌ಗೆ ನೀಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ (ಸಂಗ್ರಹ ಚಿತ್ರ) -
ಬೆಂಗಳೂರು, ಅ. 24: ಬೆಂಗಳೂರಿನಲ್ಲಿ ಕಸದಿಂದ ಕಾಸು ಮಾಡುವ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಕಸದ ಟೆಂಡರ್‌ನಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅನರ್ಹ ಕಂಪನಿಗೆ ಟೆಂಡರ್ ನೀಡಿ ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ (R Ashok) ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಬಿಎ ವತಿಯಿಂದ ಕಸ ಹಾಗೂ ತ್ಯಾಜ್ಯ ವರ್ಗಾವಣೆ ಸ್ಟೇಷನ್‌ಗಳ ಟೆಂಡರ್‌ಗಳಲ್ಲಿ ನಡೆದಿರುವ ಹಗರಣದ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಕಾಂಗ್ರೆಸ್ ಸರ್ಕಾರ ಕಸದಿಂದ ಕಾಸು ಮಾಡಿಕೊಳ್ಳುತ್ತಿದೆ. ಖಾಲಿ ನಿವೇಶನಗಳನ್ನೂ ಬಿಡದೆ ಅಲ್ಲಿನ ಕಸಕ್ಕೂ ದಂಡ ವಿಧಿಸಲಾಗುತ್ತಿದೆ. ಕೃಷ್ಣ ಬೈರೇಗೌಡರು ಹೊಸದಾಗಿ ಸಚಿವರಾದಾಗ ಫ್ರೀಡಂ ಫ್ರಂ ವೇಸ್ಟ್ ಅಭಿಯಾನ ಮಾಡಿದ್ದರು. ಆದರೆ ಅದರ ಬದಲು ಮನಿ ಫ್ರಂ ವೇಸ್ಟ್ ಸ್ಕೀಮ್ ಮಾಡಲಾಗಿದೆ. 133 ಕೋಟಿ ರೂ. ಮೊತ್ತದ ಟೆಂಡರ್‌ನ್ನು ಮುನಿಯಪ್ಪ ಎಂಟರ್‌ಪ್ರೈಸಸ್‌ಗೆ ನೀಡಲಾಗಿದೆ. ಜಿಎಸ್‌ಟಿ ಸಂಖ್ಯೆ ಇಲ್ಲದ ಈ ಕಂಪನಿ ಬೇನಾಮಿಯಾಗಿದೆ. ಇಂತಹ ಟೆಂಡರ್ ಪಡೆಯಬೇಕೆಂದರೆ 10 ಕೋಟಿ ರೂ. ವಹಿವಾಟು ಮಾಡಿರಬೇಕೆಂಬ ನಿಯಮವನ್ನು 2018 ರಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಿತ್ತು. ಈ ಕಂಪನಿ 2023-24 ರಲ್ಲಿ 3.34 ಕೋಟಿ ರೂ. ಮಾತ್ರ ವಹಿವಾಟು ನಡೆಸಿದೆ. ಅದಕ್ಕೂ ಮೊದಲು 1-2 ಕೋಟಿ ರೂ. ಮಾತ್ರ ವಾರ್ಷಿಕ ವಹಿವಾಟು ನಡೆದಿದೆ. ಅರ್ಹತಾ ಷರತ್ತು ಉಲ್ಲಂಘಿಸಿ 40% ಕಮಿಷನ್ ಪಡೆಯಲು ಹೀಗೆ ಮಾಡಲಾಗಿದೆ ಎಂದು ದೂರಿದರು.
ಇಲ್ಲಿ ಹೆಚ್ಚುವರಿ ಭದ್ರತಾ ಠೇವಣಿಯನ್ನು ಪಡೆದಿಲ್ಲ. ನಂತರ ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿದ್ದರೂ 22/05/2026 ರಂದು ಎಲ್‌ಒಎ ನೀಡಲಾಗಿದೆ. ಈ ಟೆಂಡರ್‌ಗಳ ಪ್ಯಾಕೇಜ್‌ಗಳಲ್ಲಿ ಹೆಚ್ಚುವರಿ ಭದ್ರತಾ ಠೇವಣಿ ಪಡೆಯದೆ ಬಿಎಸ್‌ಡಬ್ಲ್ಯುಎಂಎಲ್‌ನಿಂದ ಕಾರ್ಯಾದೇಶ ನೀಡಲಾಗಿದೆ. ಈ ಕಂಪನಿ ಸರ್ಕಾರದ ಅಳಿಯನಾ? ಪ್ಯಾಕೇಜ್ 2ರಲ್ಲಿ 55.04 ಕೋಟಿ ರೂ. ಅಂದಾಜು ವೆಚ್ಚವಾಗಿದ್ದು, ಹೆಚ್ಚುವರಿ ಠೇವಣಿ 6.79 ಕೋಟಿ ರೂ. ಕೊಡಬೇಕಾಗಿತ್ತು. ಆದರೆ ಅದನ್ನು ಮನ್ನಾ ಮಾಡಲಾಗಿದೆ. ಪ್ಯಾಕೇಜ್ 5 ರಲ್ಲಿ 5.99 ಕೋಟಿ ರೂ. ಹೆಚ್ಚುವರಿ ಭದ್ರತಾ ಠೇವಣಿ ಕಟ್ಟಿಲ್ಲ. ಒಟ್ಟಾಗಿ 12.99 ಕೋಟಿ ರೂ. ಭದ್ರತಾ ಠೇವಣಿ ಪಡೆದಿಲ್ಲ. ಅಂದರೆ ಆರ್ಥಿಕ ಇಲಾಖೆ ಸೂಚನೆ ನೀಡಿದ್ದರೂ, ಅದನ್ನು ಗಾಳಿಗೆ ತೂರಿ ಮುನಿಯಪ್ಪ ಕಂಪನಿಯಿಂದ ಕಿಕ್‌ಬ್ಯಾಕ್ ಪಡೆದು ಅನುಕೂಲ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.
ಈ ಕಂಪನಿಗಿಂತ ಅರ್ಹ ಕಂಪನಿಗಳು ಬೇರೆ ಇದ್ದರೂ ಅವರನ್ನು ಕರೆದು ಮಾತುಕತೆ ನಡೆಸಿಲ್ಲ. ಪಾಲಿಕೆ ಆಯುಕ್ತರು ಅಥವಾ ನಗರಾಭಿವೃದ್ಧಿ ಇಲಾಖೆ ಆಯುಕ್ತರು ಕರೆದು ಮಾತಾಡಿ ದರವನ್ನು ಕಡಿಮೆ ಮಾಡಿಕೊಳ್ಳಬೇಕು. ಲೂಟಿ ಹೊಡೆಯಲು ನಿಯಮಗಳನ್ನು ಮೀರಲಾಗಿದೆ. ಕಸವನ್ನು ಕೊಂಡೊಯ್ಯಲು ಆಟೋಗಳು 8-10 ಕಿ.ಮೀ. ದೂರ ಹೋಗಬೇಕು. ಹೀಗಾದರೆ ಎರಡು ಟ್ರಿಪ್ ಕೂಡ ಮಾಡಲು ಆಗುವುದಿಲ್ಲ ಎಂದರು.
ಕಸದ ವರ್ಗಾವಣೆ ಸ್ಟೇಷನ್‌ಗಳು
ಕಸದ ಸ್ಟೇಷನ್‌ಗಳಿಗೆ ಮೊದಲು ಜಾಗ ಹುಡುಕಬೇಕಿತ್ತು. ಜಾಗ ಗುರುತಿಸದೆ ಒಟ್ಟು 21 ಪ್ಯಾಕೇಜ್‌ಗಳ ಟೆಂಡರ್ ಮಾಡಲಾಗಿದೆ. ಆದಷ್ಟು ಬೇಗ ಕಮಿಷನ್ ಹೊಡೆಯಲು ತರಾತುರಿಯಲ್ಲಿ ಟೆಂಡರ್ ರೂಪಿಸಲಾಗಿದೆ. ಯಾರಾದರೂ ಕಾಸು ಕೇಳಿದರೆ ನನಗೆ ಕರೆ ಮಾಡಿ ಎಂದು ರಿಯಲ್ ಎಸ್ಟೇಟ್ ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರೂ, ಈವರೆಗೆ ಫೋನ್ ನಂಬರ್ ನೀಡಿಲ್ಲ. ಆದ್ದರಿಂದ ಇದನ್ನು ಉನ್ನತ ಮಟ್ಟದ ತನಿಖೆಗೆ ಅಥವಾ ಲೋಕಾಯುಕ್ತಕ್ಕೆ ನೀಡಿ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಈ ಟೆಂಡರ್‌ನ ಪ್ಯಾಕೇಜ್ 2 ಮತ್ತು 5 ಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ಕೂಡಲೇ ಸೀಜ್ ಮಾಡಬೇಕು. ಟೆಂಡರ್ ಪಡೆದ ಕಂಪನಿಗೆ ಯಾವ ಅರ್ಹತೆ ಇದೆ ಎಂದು ಸ್ಪಷ್ಟಪಡಿಸಬೇಕು. ಸ್ಟೇಷನ್‌ಗಳನ್ನು ನಿರ್ಮಿಸಲು ಎಲ್ಲಿ ಜಾಗ ಗುರುತಿಸಲಾಗಿದೆ? ಎಂದು ತಿಳಿಸಬೇಕು. ಇದರಲ್ಲಿ ಒಬ್ಬ ಸಚಿವರ ಪಾತ್ರವಿದ್ದು, ಅವರಿಗಾಗಿ ಆ ಕಂಪನಿಗೆ ಟೆಂಡರ್ ನೀಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಯೋಜನೆಯಡಿ ಇದಕ್ಕೆ ಹಣ ನೀಡುತ್ತದೆ. ಕೇಂದ್ರ ಸರ್ಕಾರ ಹಣ ನೀಡಿಲ್ಲವೆಂದು ಮುಖ್ಯಮಂತ್ರಿ ಹೇಳುತ್ತಲೇ ಇರುತ್ತಾರೆ. ಹಣ ಕೊಟ್ಟರೆ ಹೀಗೆ ಕಮಿಷನ್ ಹೊಡೆಯುತ್ತಾರೆ. ಫ್ಲ್ಯಾಟ್ ನಿವಾಸಿಗಳು ಮೊದಲು ಕಸ ಶುಲ್ಕವಾಗಿ 40 ರೂ. ಕೊಡುತ್ತಿದ್ದು, ಈಗ 400 ರೂ. ಕೊಡುತ್ತಿದ್ದಾರೆ. ಈ ಹಣ ನೀಡದೆ ಇದ್ದಲ್ಲಿ ಪ್ರತಿ ದಿನ ಕಸ ವಿಲೇವಾರಿ ಮಾಡುವುದಿಲ್ಲ ಎಂದು ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಟೀಕಿಸಿದರು.
ಈ ಕುರಿತು ನಾನು ಮುಖ್ಯಮಂತ್ರಿಗೆ ಪತ್ರ ಬರೆದು ಟೆಂಡರ್ ರದ್ದು ಮಾಡಲು ಆಗ್ರಹಿಸುತ್ತೇನೆ. ರದ್ದು ಮಾಡದಿದ್ದರೆ ಇದರಲ್ಲಿ ಮುಖ್ಯಮಂತ್ರಿಗೂ ಪಾಲಿಗೆ ಎಂಬುದು ದೃಢವಾಗುತ್ತದೆ. ಈ ಹಿಂದೆ ಮುಖ್ಯಮಂತ್ರಿ ಕೂಡ ಇದು ಬೋಗಸ್ ಎಂದು ಹೇಳಿದ್ದಾರೆ. ಆದರೂ ಟೆಂಡರ್ ನೀಡಲಾಗಿದೆ ಎಂದರು. ಲೋಕಾಯುಕ್ತದಲ್ಲಿ ಅಧಿಕಾರಿಗಳ ವಿರುದ್ಧ ತನಿಖೆ ಮಾಡಬೇಕಿದೆ. ಆದರೆ ಸಿಎಂ ಡಿ.ಕೆ.ಶಿವಕುಮಾರ್ ಯಾವುದಕ್ಕೂ ಅನುಮತಿ ನೀಡುತ್ತಿಲ್ಲ ಎಂದರು.
ಬರಗಾಲಕ್ಕೆ ಪರಿಹಾರವಿಲ್ಲ
ವಿಶೇಷ ಅಧಿವೇಶನ ನಡೆಸಿದ ಸಿಎಂ ಡಿ.ಕೆ.ಶಿವಕುಮಾರ್ ಸಾಲ ಮನ್ನಾ ಮಾಡುತ್ತಾರೆ ಎಂದುಕೊಂಡಿದ್ದೆ. ನಂತರ 2,500 ರೂ. ಘೋಷಣೆ ಮಾಡಿದರು. ಅದರಲ್ಲಿ ಬಿಡಿಗಾಸನ್ನೂ ರೈತರಿಗೆ ನೀಡಿಲ್ಲ. ಇಷ್ಟು ಕೊಡಲು ಯೋಗ್ಯತೆ ಇಲ್ಲವೆಂದ ಮೇಲೆ ಖಜಾನೆಗೆ ಬೀಗ ಹಾಕಬೇಕು. ಸರ್ಕಾರ ಪಾಪರ್ ಆಗಿದೆ ಎಂಬುದಕ್ಕೆ ಇದೇ ಶ್ವೇತಪತ್ರ. ಗೃಹಲಕ್ಷ್ಮಿಯ ನಾಲ್ಕು ತಿಂಗಳ ಹಣ ಬಾಕಿ ಇದೆ. ವಿಕಲಚೇತನರ ಪಿಂಚಣಿ ಕೂಡ ಬಾಕಿ ಇದೆ. ಜನರಿಗೆ ಮದ್ಯ ಕುಡಿಸಿ ಅದರಿಂದ 45,000 ಕೋಟಿ ರೂ. ಆದಾಯ ಸಂಗ್ರಹಿಸಲಾಗುತ್ತಿದೆ. ಮಹಾತ್ಮ ಗಾಂಧೀಜಿಯ ಬಗ್ಗೆ ಮಾತನಾಡುವ ಇವರು ಕುಡಿಯುವವನೇ ನಮ್ಮ ಮನೆ ದೇವರು ಎನ್ನುತ್ತಿದ್ದಾರೆ. ಬೆಳೆ ವಿಮೆ ಯೋಜನೆಯಲ್ಲಿ ಕೇಂದ್ರ ಸರ್ಕಾರ ತನ್ನ ಪಾಲು ನೀಡಿದೆ, ಆದರೆ ರಾಜ್ಯ ಸರ್ಕಾರ ತನ್ನ ಪಾಲು ನೀಡಿಲ್ಲ. ಇಂತಹ ಸಮಸ್ಯೆ ಮರೆಮಾಚಲು ಸಿದ್ದರಾಮಯ್ಯ ಅವರ ಮಾನ ತೆಗೆಯಲು ಮುಂದಾಗಿದ್ದಾರೆ. ಇದನ್ನು ಕಾಂಗ್ರೆಸ್‌ನವರೇ ಮಾಡಿದ್ದಾರೆ ಎಂದು ಯತೀಂದ್ರ ಹಾಗೂ ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ಕ್ರಮ ಕೈಗೊಳ್ಳಲಿ: ಆರ್. ಅಶೋಕ್ ಆಗ್ರಹ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇನೆ. ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದ್ದಾರೆ. ಅದರಂತೆ ಅವರಿಗೆ ಮಾಹಿತಿ ನೀಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿದರು.