ಬೆಂಗಳೂರು: ರಾಜಧಾನಿಯ (Bengaluru news) ಜಾಲಹಳ್ಳಿ ಕ್ರಾಸ್‌ನಲ್ಲಿ ವಿಲಕ್ಷಣ ದೃಶ್ಯವೊಂದು ಇತ್ತೀಚೆಗೆ ಕಂಡುಬಂದಿದ್ದು, ಯಾರದೋ ವಿಡಿಯೋದಲ್ಲಿ ದಾಖಲಾಗಿ ವೈರಲ್ (viral news) ಆಗಿದೆ. ಜಾಲಹಳ್ಳಿಯಲ್ಲಿ ಹಾದುಹೋಗಿರುವ ತುಮಕೂರು ರಸ್ತೆಯ ದೊಡ್ಡ ಫ್ಲೈಓವರ್‌ನ (Flyover) ಕಂಬ ಹಾಗೂ ಮೇಲಿನ ರಸ್ತೆಯ ನಡುವಿನ ಕಿರಿದಾದ ಜಾಗದಲ್ಲಿ ವ್ಯಕ್ತಿಯೊಬ್ಬ ಆರಾಮಾಗಿ ಮಲಗಿದ್ದುದು, ಎದ್ದು ಕುಳಿತು ಜನಗಳನ್ನು ನೋಡುತ್ತಿರುವುದು ಕಂಡುಬಂದಿದೆ.
ಈ ವಿಲಕ್ಷಣ ದೃಶ್ಯ ತಕ್ಷಣವೇ ದೊಡ್ಡ ಜನಸಮೂಹವನ್ನು ಸೆಳೆದಿದೆ. ಜನ ಇದನ್ನು ನಂಬಲಾಗದವರಂತೆ ಸುತ್ತಲೂ ಜಮಾಯಿಸಿ ವೀಕ್ಷಿಸಿದ್ದಾರೆ. ಆ ವ್ಯಕ್ತಿ ಅಷ್ಟೊಂದು ಎತ್ತರದ ಜಾಗಕ್ಕೆ ಯಾವುದೇ ಏಣಿಯಂಥ ಆಧಾರವಲ್ಲದೆ ಹೇಗೆ ಹತ್ತಿದ, ಅಲ್ಲಿ ಹೇಗೆ ಇದ್ದಾನೆ ಎಂಬುದು ಆಶ್ಚರ್ಯಕರವಾಗಿದೆ. ತನ್ನ ಸುತ್ತಮುತ್ತ ನಡೆಯುತ್ತಿರುವ ಯಾವುದೇ ಗದ್ದಲ ಆತನನ್ನು ಚಿಂತೆಗೀಡು ಮಾಡಿಲ್ಲ.
Xನಲ್ಲಿ ಹಂಚಿಕೊಳ್ಳಲಾದ ಒಂದು ವೀಡಿಯೊದಲ್ಲಿ, ತನ್ನ ಸುತ್ತಲಿನ ಗದ್ದಲದ ಬಗ್ಗೆ ಯಾವುದೇ ರೀತಿಯಲ್ಲಿ ತಲೆಕೆಡಿಸಿಕಳ್ಳದ ಆ ವ್ಯಕ್ತಿ ಆ ಇಕ್ಕಟ್ಟಾದ ಜಾಗದೊಳಗೆ ಮಲಗಿರುವುದು ಕಂಡುಬಂದಿದೆ. ಸೇತುವೆಯ ಸ್ಲ್ಯಾಬ್ ಮತ್ತು ಕಂಬದ ನಡುವೆ ಇರುವ ಈ ಸ್ಥಳದಲ್ಲಿ ಬಗ್ಗಿ ಹರಿದಾಡುವುದು ಬಿಟ್ಟರೆ ಇನ್ನೇನೂ ಮಾಡಲು ಸಾಧ್ಯವಿಲ್ಲ. ಪಾರಿವಾಳಗಳು ಮಾತ್ರ ಇರಬಹುದಾದ ಜಾಗದಲ್ಲಿ ಈತ ಹೇಗೆ ಬಂದ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Viral Video: ಚೀನಾದಲ್ಲಿ ಹೊಸದಾಗಿ ನಿರ್ಮಿಸಿದ ಹಾಂಗ್ಕಿ ಸೇತುವೆ ಕುಸಿತ; ಇಲ್ಲಿದೆ ಎದೆ ನಡುಗಿಸುವ ವಿಡಿಯೊ
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ವ್ಯಕ್ತಿ ಜನರ ಗಮನಕ್ಕೆ ಬರುವ ಮೊದಲಿನ ಸ್ವಲ್ಪ ಸಮಯದಿಂದಲೇ ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದಂತೆ ಕಂಡುಬಂದಿದೆ. ಯಾರೋ ಫ್ಲೈಓವರ್ ಕಂಬವನ್ನು ವಿಶ್ರಾಂತಿ ಸ್ಥಳವಾಗಿ ಬಳಸುತ್ತಿರುವುದನ್ನು ನೋಡಿ ಜನ ದಿಗ್ಭ್ರಮೆಗೊಂಡಿರುವುದಂತೂ ನಿಜ. ಫ್ಲೈಓವರ್ ಪಿಲ್ಲರ್ ಆಶ್ರಯ ತಾಣವಾಗಬಾರದು. ಅಲ್ಲಿ ಇರುವುದು ಜೀವಕ್ಕೆ ಅಪಾಯಕಾರಿ ಎಂದೂ ಜನ ಆಕ್ಷೇಪಿಸಿದ್ದಾರೆ.
"ಇದು ಹತಾಶೆಯೋ ನಿರ್ಲಕ್ಷ್ಯವೋ? ಜಾಲಹಳ್ಳಿ ಕ್ರಾಸ್‌ನಲ್ಲಿ ಫ್ಲೈಓವರ್ ಪಿಲ್ಲರ್ ಒಳಗೆ ಮಲಗಿದ್ದ ವ್ಯಕ್ತಿ ಕಂಡುಬಂದಿರುವುದು ನಗರ ಬಡತನದ ಕಠೋರ ವಾಸ್ತವವನ್ನು ಎತ್ತಿ ತೋರಿಸುತ್ತದೆ" ಎಂಬ ಕ್ಯಾಪ್ಷನ್ ಹಾಕಿ ಒಬ್ಬರು ಈ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊ ನಗರದ ಬಡತನ, ಬೆಂಗಳೂರಿನಂತಹ ನಗರಗಳಲ್ಲಿ ಬಡವರಿಗೆ ಸರಿಯಾದ ಆಶ್ರಯ ತಾಣದ ಕೊರತೆ, ಪ್ರಮುಖ ಸಾರ್ವಜನಿಕ ಮೂಲಸೌಕರ್ಯಗಳ ಸುತ್ತಲಿನ ಕಣ್ಗಾವಲಿನ ಬಗ್ಗೆ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
ಇದು ಅಪಾಯಕಾರಿ ಎಂದು ಕೆಲವರು ಹೇಳಿದ್ದಾರೆ. "ಆತ ಕಾನೂನುಬಾಹಿರ ಚಟುವಟಿಕೆ ನಡೆಸಲು ಯೋಜಿಸುತ್ತಿದ್ದರೆ? 2 ದಿನಗಳ ಹಿಂದೆ ದೆಹಲಿಯಲ್ಲಿ ಆದಂತೆ!" ಎಂದೊಬ್ಬರು ಕಾಮೆಂಟ್ ಮಾಡಿದ್ದಾರೆ. "ಅವನು ಎತ್ತರದ ಕಂಬದ ತುದಿ ಹೇಗೆ ತಲುಪಲು ಸಾಧ್ಯ?" ಎಂಬುದು ಇನ್ನೊಬ್ಬರ ಕುತೂಹಲ. "ಇದನ್ನು ಗಂಭೀರವಾಗಿ ತನಿಖೆ ಮಾಡಬೇಕು. ಆ ವ್ಯಕ್ತಿಗೆ ಸಹಾಯ ಬೇಕಾದರೆ ನಾವು ಅವನಿಗೆ ಸಹಾಯ ಮಾಡಬೇಕು. ಇದು ಕೇವಲ ಒಂದು ಸಾಹಸವಾಗಿದ್ದರೆ ಅವನಿಗೆ ಪಾಠ ಕಲಿಸಬೇಕಾಗಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇಂತಹ ಘಟನೆಗಳನ್ನು ಇಲ್ಲಿಯೇ ತಡೆಯಬೇಕು. ಫ್ಲೈಓವರ್‌ನ ಹಾಳುಗೆಡಹುವಿಕೆಯ ಸಾಧ್ಯತೆ ಇದೆ" ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
ಇದನ್ನೂ ಓದಿ: Viral Video: RJD ಬಿಟ್ಟು ಬಿಜೆಪಿಗೆ ಮತ ಹಾಕಿದ್ದಕ್ಕೆ ಪತ್ನಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಪತಿರಾಯ; ವಿಡಿಯೋ ವೈರಲ್