ಬೆಂಗಳೂರು : ಜ.10: ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಕಡ್ಡಾಯ (Malayalam Language Bill) ಮಾಡಲು ಮುಂದಾಗಿರುವ ಕೇರಳ ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟ ಮಾಡುತ್ತೇವೆ. ಮಲಯಾಳಂನ್ನು ಮೊದಲ ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಕೇರಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಹೋರಾಟವನ್ನೇ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ಇಂದು ನಗರದ ರೇಸ್ ಕೋರ್ಸ್ ರಸ್ತೆಯ KEB ಎಂಜಿನಿಯರ್ಸ್ ಅಸೋಸಿಯೇಷನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿಯವರು ರಾಜ್ಯಕ್ಕೆ ಎಷ್ಟೇ ಅನ್ಯಾಯವಾದರೂ ಕೇಂದ್ರ ಸರ್ಕಾರ ಮಾಡಿದ್ದನ್ನೆಲ್ಲಾ ಸಮರ್ಥಿಸಿಕೊಳ್ಳುವುದು ಮಹಾ ತಪ್ಪು. ರಾಜ್ಯಕ್ಕೆ ಅನ್ಯಾಯವಾದದ್ದನೆಲ್ಲ ನ್ಯಾಯ ಎನ್ನುವುದು ಮಹಾ ಅಪರಾಧ ಎಂದು ಟೀಕಿಸಿದರು.
ಮನರೇಗಾ ಬಗ್ಗೆ ಚರ್ಚೆಗೆ ನಾವೂ ಸಿದ್ಧ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ ಕುರಿತಂತೆ ಚರ್ಚೆಗೆ ಆಹ್ವಾನಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಚರ್ಚೆಗೆ ನಾವು ಸಿದ್ಧವಾಗಿದ್ದು, ದೊಡ್ಡ ಆಂದೋಲನವನ್ನೇ ಮಾಡುತ್ತೇವೆ. ಬಿಜೆಪಿ-ಜೆಡಿಎಸ್‌ನವರು ಕೇವಲ ಸುಳ್ಳು ಹೇಳುತ್ತಾರೆ ಎಂದರು.
Hate Speech Bill: 19 ವಿಧೇಯಕಗಳಿಗೆ ರಾಜ್ಯಪಾಲರ ಸಹಿ, ದ್ವೇಷ ಭಾಷಣ ಬಿಲ್‌ಗೆ ಅಂಕಿತವಿಲ್ಲ
ದ್ವೇಷ ಭಾಷಣ ಮಸೂದೆ: ರಾಜ್ಯಪಾಲರಿಗೆ ವಿವರಣೆ ನೀಡಲಾಗುವುದು
ದ್ವೇಷ ಭಾಷಣಕ್ಕೆ ಸಂಬಂಧಿಸಿದ ಬಿಲ್ ರಾಜ್ಯಪಾಲರ ಬಳಿಯೇ ಉಳಿದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಈ ಬಗ್ಗೆ ರಾಜ್ಯಪಾಲರನ್ನು ಒಮ್ಮೆ ಭೇಟಿಯಾಗಿ ವಿವರಣೆ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಬಾಂಗ್ಲಾ ವಲಸಿಗರು ಹೆಚ್ಚಾಗಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಹೆಸರುಗಳನ್ನು ನೀಡುವಂತೆ ಮುಖ್ಯಮಂತ್ರಿಗಳು ಹೇಳಿದರು.
ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ
ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆ ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆ-2025 ವಿರೋಧಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಪತ್ರ ಬರೆದಿದ್ದರು. ಈ ಮಸೂದೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿಗಳು, ಕೇರಳ ಸರ್ಕಾರವು ಕಾಯ್ದೆ ಜಾರಿಗೆ ಮುನ್ನ ಭಾಷಾ ಅಲ್ಪಸಂಖ್ಯಾತ ಸಮುದಾಯಗಳು, ಶಿಕ್ಷಣ ತಜ್ಞರು ಮತ್ತು ನೆರೆಯ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು ಹಾಗೂ ಮಸೂದೆಯನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು.
ನಮ್ಮ ದೇಶದಲ್ಲಿ ಭಾಷೆಗಳು ಕಡ್ಡಾಯತೆಯ ಬದಲಿಗೆ ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮೂಲಕ ವಿಕಸನಗೊಂಡಿವೆ. ಕಾಸರಗೋಡಿನಂತಹ ಗಡಿ ಪ್ರದೇಶಗಳು ಈ ತತ್ವದ ಜೀವಂತ ಉದಾಹರಣೆಗಳಾಗಿವೆ. ಅಲ್ಲಿ ಮಲಯಾಳಂ, ಕನ್ನಡ, ತುಳು, ಬ್ಯಾರಿ ಮತ್ತು ಇತರ ಭಾಷೆಗಳನ್ನಾಡುವ ಜನರು ತಲೆಮಾರುಗಳಿಂದ ಸಾಮರಸ್ಯದಿಂದ ಜೀವನ, ಶಿಕ್ಷಣ ಮತ್ತು ಗುರುತನ್ನು ರೂಪಿಸಿಕೊಂಡಿದ್ದಾರೆ.
ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾಷೆಯು ಕೇವಲ ಶೈಕ್ಷಣಿಕ ಆಯ್ಕೆಯಲ್ಲ; ಅದು ಅವರ ಅಸ್ಮಿತೆ, ಘನತೆ ಮತ್ತು ಅವಕಾಶಗಳಿಗೆ ದಾರಿಯಾಗಿದೆ. ಒಂದೇ ಭಾಷಾ ಮಾರ್ಗವನ್ನು ಕಡ್ಡಾಯಗೊಳಿಸುವ ಯಾವುದೇ ನೀತಿಯು ಮಕ್ಕಳ ಮೇಲೆ ಅನಗತ್ಯ ಹೊರೆಯನ್ನು ಹಾಕುವ ಸಾಧ್ಯತೆಯನ್ನು ಹೊಂದಿದೆ, ಭಾಷಾ ಅಲ್ಪಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಈ ಸಮುದಾಯಗಳಿಗೆ ನಂಬಿಕೆ ಜೊತೆಗೆ ಅವಿರತ ಸೇವೆ ಸಲ್ಲಿಸುತ್ತಿರುವ ದೀರ್ಘಕಾಲೀನ ಶೈಕ್ಷಣಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸುತ್ತದೆ.
ಕೇರಳದ ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ; ಮಸೂದೆ ಹಿಂಪಡೆಯಲು ಸಿಎಂ ಸಿದ್ದರಾಮಯ್ಯ ಆಗ್ರಹ
ಕಾಸರಗೋಡಿನಲ್ಲಿ, ವಿಶೇಷವಾಗಿ ಗಡಿ ಭಾಗದಲ್ಲಿ ಬಹುಸಂಖ್ಯಾತರಾಗಿರುವ ಜನರು ಕನ್ನಡದಲ್ಲಿ ಶಿಕ್ಷಣವನ್ನು ಅವಲಂಬಿಸಿದ್ದಾರೆ, ಇವರು ಕನ್ನಡ ಭಾಷಾ ಶಿಕ್ಷಣವನ್ನು ಕಲಿಯಲು ಬಯಸುತ್ತಾರೆ ಎಂಬುದು ವಾಸ್ತವಾಂಶ. ಆದ್ದರಿಂದ, ಪ್ರಸ್ತಾಪಿತ ಮಸೂದೆಯನ್ನು ಪುನರ್ ಪರಿಶೀಲನೆಗೆ ಒಡ್ಡಬೇಕೆಂದು ಕೋರುತ್ತೇನೆ ಎಂದು ಕೇರಳ ಸಿಎಂಗೆ ಸಿದ್ದರಾಮಯ್ಯ ಮನವಿ ಮಾಡಿದ್ದರು.